ಸಮಗ್ರ ಸುದ್ದಿ

ಅರ್ಹ ರೈತರಿಗೆ ಪಾರದರ್ಶಕವಾಗಿ ನೆರವು ತಲುಪಿಸುವುದು ಸರ್ಕಾರದ ಮೊದಲ ಆದ್ಯತೆ: ಡಿಸಿಎಂ ಡಾ. ಜಿ. ಪರಮೇಶ್ವರ

Share

ಬೆಂಗಳೂರು : ಬರದಿಂದ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಮಧ್ಯಂತರ ಪರಿಹಾರ ವಿತರಿಸಲು ರೂಪಿಸಿರುವ ಮಾರ್ಗಸೂಚಿಗಳ ಕುರಿತು ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಅವರು ಮಾಡಿರುವ ಆರೋಪಗಳನ್ನು ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ. ಜಿ. ಪರಮೇಶ್ವರ ಅವರು ತೀವ್ರವಾಗಿ ಖಂಡಿಸಿದ್ದಾರೆ. ಅರ್ಹ ರೈತರಿಗೆ ಯಾವುದೇ ಅನಗತ್ಯ ತೊಂದರೆಯಾಗದಂತೆ ಪರಿಹಾರ ತಲುಪಿಸುವುದೇ ರಾಜ್ಯ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

“ಬರದಿಂದಾಗಿ ಕರ್ನಾಟಕದ ಲಕ್ಷಾಂತರ ರೈತ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ತಮ್ಮ ಜೀವನೋಪಾಯವನ್ನು ಉಳಿಸಿಕೊಳ್ಳಲು ರೈತರು ಹೋರಾಡುತ್ತಿರುವ ಇಂತಹ ಸಂದರ್ಭದಲ್ಲಿ ಅವರ ಬೆಂಬಲಕ್ಕೆ ನಿಲ್ಲುವುದು, ಅವರಲ್ಲಿ ಆತ್ಮವಿಶ್ವಾಸ ತುಂಬುವುದು ಹಾಗೂ ಸಾಧ್ಯವಿರುವ ಎಲ್ಲ ನೆರವು ಒದಗಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ರೈತರ ಸಂಕಷ್ಟಕ್ಕೆ ಬೇಕಿರುವುದು ಪರಿಹಾರವೇ ಹೊರತು ರಾಜಕೀಯ ವಿವಾದಗಳಲ್ಲ” ಎಂದು ಡಾ. ಪರಮೇಶ್ವರ ಅವರು ತಿಳಿಸಿದ್ದಾರೆ.

“ವಿರೋಧ ಪಕ್ಷದ ನಾಯಕರು ಸರ್ಕಾರಿ ಆದೇಶದಲ್ಲಿರುವ 17 ಅಂಶಗಳನ್ನು ರೈತರಿಗೆ ವಿಧಿಸಿರುವ 17 ತೊಡಕುಗಳಂತೆ ಬಿಂಬಿಸುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಈ ಅಂಶಗಳು ಫಲಾನುಭವಿಗಳ ಅರ್ಹತೆ, ದಾಖಲೆಗಳ ಪರಿಶೀಲನೆ ಹಾಗೂ ಆಡಳಿತ ವ್ಯವಸ್ಥೆಯ ಜವಾಬ್ದಾರಿಗಳಿಗೆ ಸಂಬಂಧಿಸಿವೆ. ನೈಜ ಫಲಾನುಭವಿಗಳಿಗೆ ಪರಿಹಾರ ತಲುಪಿಸುವುದು, ಒಂದೇ ಪ್ರಕರಣಕ್ಕೆ ಎರಡೆರಡು ಬಾರಿ ಹಣ ಪಾವತಿಯಾಗುವುದನ್ನು ತಡೆಯುವುದು ಹಾಗೂ ಸಾರ್ವಜನಿಕ ಹಣದ ಸದ್ಬಳಕೆಯನ್ನು ಖಚಿತಪಡಿಸಿಕೊಳ್ಳುವುದು ಇವುಗಳ ಉದ್ದೇಶವಾಗಿದೆ. ಈ 17 ಅಂಶಗಳನ್ನೂ ಪ್ರತಿಯೊಬ್ಬ ರೈತ ಕಡ್ಡಾಯವಾಗಿ ಪೂರೈಸಬೇಕಾದ ಪ್ರತ್ಯೇಕ ಷರತ್ತುಗಳೆಂಬಂತೆ ಬಿಂಬಿಸುವುದು ತಪ್ಪುದಾರಿಗೆಳೆಯುವ ಪ್ರಯತ್ನವಾಗಿದೆ” ಎಂದು ಅವರು ಹೇಳಿದ್ದಾರೆ.

ಅರ್ಹ ಫಲಾನುಭವಿಗಳನ್ನು ಗುರುತಿಸಿ, ಪರಿಹಾರವನ್ನು ಅವರ ಆಧಾರ್ ಜೋಡಣೆಯಾದ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾಯಿಸಲು FRUITS ದತ್ತಾಂಶ ವ್ಯವಸ್ಥೆ, ಡಿಜಿಟಲ್ ಬೆಳೆ ಸಮೀಕ್ಷೆ, ಪರಿಹಾರ (Parihara) ಪೋರ್ಟಲ್ ಹಾಗೂ ಈಗಾಗಲೇ ಲಭ್ಯವಿರುವ ಕಂದಾಯ ದಾಖಲೆಗಳನ್ನು ಸಂಯೋಜಿಸಿ ಸಂಪೂರ್ಣ ಡಿಜಿಟಲ್ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಅಳವಡಿಸಿಕೊಂಡಿದೆ ಎಂದು ಡಾ. ಪರಮೇಶ್ವರ ಅವರು ತಿಳಿಸಿದ್ದಾರೆ.

“ಈ ಪರಿಹಾರ ಪಡೆಯಲು ರೈತರು ಹೊಸದಾಗಿ ಅರ್ಜಿ ಸಲ್ಲಿಸುವ ಅಥವಾ ಒಂದು ಸರ್ಕಾರಿ ಕಚೇರಿಯಿಂದ ಮತ್ತೊಂದು ಕಚೇರಿಗೆ ಅಲೆಯುವ ಅಗತ್ಯವಿಲ್ಲ. ಅಗತ್ಯವಿರುವ ಮಾಹಿತಿಯು ಈಗಾಗಲೇ ಸರ್ಕಾರದ ಬಳಿ ಲಭ್ಯವಿದೆ. ಆ ಮಾಹಿತಿಯನ್ನು ಪರಿಶೀಲಿಸಿ ಪರಿಹಾರ ವಿತರಿಸುವ ಜವಾಬ್ದಾರಿ ಆಡಳಿತ ವ್ಯವಸ್ಥೆಯದ್ದಾಗಿದೆ. ಸರ್ಕಾರಿ ದಾಖಲೆಗಳಲ್ಲಿ ಯಾವುದೇ ವ್ಯತ್ಯಾಸಗಳಿದ್ದಲ್ಲಿ, ನಿಗದಿತ ಪರಿಶೀಲನಾ ಪ್ರಕ್ರಿಯೆಯ ಮೂಲಕ ಅವುಗಳನ್ನು ಸರಿಪಡಿಸುವ ಜವಾಬ್ದಾರಿಯೂ ಸಂಬಂಧಪಟ್ಟ ಸರ್ಕಾರಿ ಅಧಿಕಾರಿಗಳದ್ದೇ ಆಗಿರುತ್ತದೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

1.5 ಕೋಟಿಗೂ ಅಧಿಕ ದಾಖಲೆಗಳನ್ನು ಪ್ರತ್ಯೇಕವಾಗಿ ಪರಿಶೀಲಿಸಿ ಆ ಬಳಿಕ ಪರಿಹಾರ ವಿತರಿಸಲು ಮುಂದಾಗಿದ್ದರೆ ಕನಿಷ್ಠ ಮೂರು ತಿಂಗಳ ಕಾಲಾವಕಾಶ ಬೇಕಾಗುತ್ತಿತ್ತು. ಇದರಿಂದ ಮಾಹಿತಿ ದಾಖಲಿಸುವಲ್ಲಿ ದೋಷಗಳು ಉಂಟಾಗುವ ಹಾಗೂ ಅರ್ಹ ಫಲಾನುಭವಿಗಳು ಪರಿಹಾರದಿಂದ ಹೊರಗುಳಿಯುವ ಸಾಧ್ಯತೆಯೂ ಹೆಚ್ಚಾಗುತ್ತಿತ್ತು. ಆದರೆ 2023ರ ಬರ ಪರಿಸ್ಥಿತಿಯಲ್ಲಿ ಯಶಸ್ವಿಯಾಗಿ ಬಳಸಲಾದ ಡಿಜಿಟಲ್ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸಿ ಪ್ರಸ್ತುತ ಪರಿಹಾರ ವಿತರಣೆಗೆ ಬಳಸಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.

“ರೈತರು ಪರಿಹಾರಕ್ಕಾಗಿ ಅಲೆಯುವ ಪರಿಸ್ಥಿತಿ ಇರಬಾರದು. ಬದಲಾಗಿ ಸರ್ಕಾರದ ವ್ಯವಸ್ಥೆಗಳೇ ಜನರ ಬಳಿಗೆ ಹೋಗುವಂತಾಗಬೇಕು ಎಂಬುದು ನಮ್ಮ ನಿಲುವು. ತಂತ್ರಜ್ಞಾನ ಬಳಸುವುದರಿಂದ ರೈತರ ಕೆಲಸ ಸುಲಭವಾಗಬೇಕು. ಅನಗತ್ಯ ದಾಖಲೆಗಳ ತೊಂದರೆ ತಪ್ಪಬೇಕು. ಸರ್ಕಾರದ ಸೇವೆಗಳು ಜನರಿಗೆ ಸುಲಭವಾಗಿ ಸಿಗುವಂತಾಗಬೇಕು ಎಂಬುದು ನಮ್ಮ ಉದ್ದೇಶ ಎಂದು ಡಾ. ಪರಮೇಶ್ವರ ಅವರು ತಿಳಿಸಿದ್ದಾರೆ.

ಎರಡು ಹೆಕ್ಟೇರ್ ಮಿತಿಗೆ ಸಂಬಂಧಿಸಿದ ಆರೋಪಗಳಿಗೆ ಉತ್ತರಿಸಿರುವ ಅವರು, ಈ ಮಿತಿಯು ಕೇಂದ್ರ ಸರ್ಕಾರದ SDRF/NDRF ಪರಿಹಾರ ಮಾನದಂಡಗಳ ಭಾಗವಾಗಿದ್ದು, 2005ರಿಂದಲೇ ಜಾರಿಯಲ್ಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

“ಎರಡು ಹೆಕ್ಟೇರ್ ಮಿತಿಯು ಬೆಳೆಹಾನಿ ಪರಿಹಾರಕ್ಕೆ ಪರಿಗಣಿಸಬಹುದಾದ ಗರಿಷ್ಠ ವಿಸ್ತೀರ್ಣಕ್ಕೆ ಸಂಬಂಧಿಸಿದ್ದೇ ಹೊರತು, ಎರಡು ಹೆಕ್ಟೇರ್‌ಗಿಂತ ಹೆಚ್ಚು ಜಮೀನು ಹೊಂದಿರುವ ರೈತರು ಪರಿಹಾರಕ್ಕೆ ಅನರ್ಹರು ಎಂದರ್ಥವಲ್ಲ. ಇದು ಕರ್ನಾಟಕ ಸರ್ಕಾರ ಹೊಸದಾಗಿ ವಿಧಿಸಿರುವ ನಿರ್ಬಂಧವಲ್ಲ. ಕೇಂದ್ರ ಸರ್ಕಾರ ನಿಗದಿಪಡಿಸಿರುವ ನಿಯಮಗಳಿಗೂ, ಅವುಗಳನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಅಳವಡಿಸಿಕೊಂಡಿರುವ ಪ್ರಕ್ರಿಯೆಗಳಿಗೂ ಇರುವ ವ್ಯತ್ಯಾಸವನ್ನು ವಿರೋಧ ಪಕ್ಷದವರು ಅರ್ಥಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

ಒಟ್ಟು 226 ತಾಲ್ಲೂಕುಗಳನ್ನು ಬರಪೀಡಿತ:

ರಾಜ್ಯದಲ್ಲಿ ಉಂಟಾಗಿರುವ ತೀವ್ರ ಬರ ಪರಿಸ್ಥಿತಿಯನ್ನು ಉಲ್ಲೇಖಿಸಿರುವ ಡಾ. ಪರಮೇಶ್ವರ ಅವರು, ಒಟ್ಟು 226 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, 57.93 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿರುವುದು ಸಮೀಕ್ಷೆಯಿಂದ ದೃಢಪಟ್ಟಿದೆ. ಕೇಂದ್ರ ಸರ್ಕಾರದಿಂದ ಆರ್ಥಿಕ ನೆರವು ಬಿಡುಗಡೆಯಾಗುವುದನ್ನು ಕಾಯದೆ, ರಾಜ್ಯ ಸರ್ಕಾರವು ಬರದಿಂದ ಬೆಳೆ ನಷ್ಟ ಅನುಭವಿಸಿರುವ ಅರ್ಹ ರೈತರಿಗೆ ಗರಿಷ್ಠ ₹2,500 ಮಧ್ಯಂತರ ಪರಿಹಾರ ಘೋಷಿಸಿದೆ. ಇದಕ್ಕಾಗಿ ಅಂದಾಜು ₹1,250 ಕೋಟಿ ವೆಚ್ಚವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಸೋಮವಾರದ ನಂತರ ಪರಿಹಾರ ವಿತರಣೆ ಪ್ರಕ್ರಿಯೆ ಆರಂಭ

“ಸೋಮವಾರದ ನಂತರ ಪರಿಹಾರ ವಿತರಣೆ ಪ್ರಕ್ರಿಯೆ ಆರಂಭವಾಗಲಿದ್ದು, ಅರ್ಹ ರೈತರ ಖಾತೆಗಳಿಗೆ ಮಧ್ಯಂತರ ಪರಿಹಾರದ ಹಣ ಜಮಾ ಮಾಡಲು ನಿರ್ಧರಿಸಿದ್ದೇವೆ. ಇದು ಪರಿಹಾರದ ಮೊದಲ ಕಂತು ಮಾತ್ರವೇ ಹೊರತು ರೈತರಿಗೆ ಸಲ್ಲಬೇಕಾದ ಸಂಪೂರ್ಣ ಪರಿಹಾರವಲ್ಲ. ಕೇಂದ್ರ ಸರ್ಕಾರವು NDRF ಅನುದಾನ ಬಿಡುಗಡೆ ಮಾಡಿದ ಕೂಡಲೇ ಮುಂದಿನ ಕಂತಿನ ಪರಿಹಾರವನ್ನು ವಿತರಿಸಲಾಗುವುದು” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಪರಿಷ್ಕೃತ SDRF/NDRF ಮಾನದಂಡಗಳ ಪ್ರಕಾರ, ಮಳೆಯಾಶ್ರಿತ ಬೆಳೆಗಳಿಗೆ ಪ್ರತಿ ಹೆಕ್ಟೇರ್‌ಗೆ ₹11,000, ನೀರಾವರಿ ಬೆಳೆಗಳಿಗೆ ₹22,000 ಹಾಗೂ ಬಹುವಾರ್ಷಿಕ ಮತ್ತು ತೋಟಗಾರಿಕೆ ಬೆಳೆಗಳಿಗೆ ₹30,000 ಪರಿಹಾರ ನೀಡಲು ಅವಕಾಶವಿದೆ. ನಿಗದಿತ ಮಿತಿಗಳ ಅನ್ವಯ ಅರ್ಹ ರೈತರಿಗೆ ಸಲ್ಲಬೇಕಾದ ಉಳಿದ ಪರಿಹಾರವನ್ನು ಅಗತ್ಯ NDRF ಅನುದಾನ ಬಿಡುಗಡೆಯಾದ ಬಳಿಕ ವಿತರಿಸಲಾಗುವುದು ಎಂದು ಅವರು ವಿವರಿಸಿದ್ದಾರೆ.

ಕೇಂದ್ರದಿಂದ ತುರ್ತಾಗಿ ಪರಿಹಾರಧನ ಬಿಡುಗಡೆಗೆ ಆಗ್ರಹ

“ಕೇಂದ್ರದ ನೆರವಿಗಾಗಿ ಕಾಯದೆ ರೈತರ ನೆರವಿಗೆ ಧಾವಿಸುವ ತನ್ನ ಬದ್ಧತೆಯನ್ನು ರಾಜ್ಯ ಸರ್ಕಾರ ಈಗಾಗಲೇ ತೋರಿಸಿದೆ. ಈಗ ಕೇಂದ್ರ ಸರ್ಕಾರವೂ ಅಷ್ಟೇ ತುರ್ತಾಗಿ ಸ್ಪಂದಿಸಬೇಕಾಗಿದೆ. ಕರ್ನಾಟಕದ ರೈತರು ಯಾರಿಂದಲೂ ದಾನ ಕೇಳುತ್ತಿಲ್ಲ. ವಿಪತ್ತು ಪರಿಹಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಾರಿಯಲ್ಲಿರುವ ನಿಯಮಗಳ ಅಡಿಯಲ್ಲಿ ತಮಗೆ ನ್ಯಾಯಯುತವಾಗಿ ಸಲ್ಲಬೇಕಾದ ನೆರವನ್ನು ಸಕಾಲದಲ್ಲಿ ನೀಡುವಂತೆ ಕೇಳುತ್ತಿದ್ದಾರೆ” ಎಂದು ಡಾ. ಪರಮೇಶ್ವರ ಅವರು ತಿಳಿಸಿದ್ದಾರೆ.

ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರ ಪರಿಹಾರದ ಅನುದಾನವನ್ನು ಶೀಘ್ರವಾಗಿ ಬಿಡುಗಡೆ ಮಾಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದೊಂದಿಗೆ ಸಹಕರಿಸುವಂತೆ ವಿರೋಧ ಪಕ್ಷದವರಿಗೆ ಅವರು ಮನವಿ ಮಾಡಿದ್ದಾರೆ.

“ಪ್ರಜಾಪ್ರಭುತ್ವದಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳು ಸಹಜ. ಸರ್ಕಾರವನ್ನು ಪ್ರಶ್ನಿಸುವ ಎಲ್ಲ ಹಕ್ಕುಗಳೂ ವಿರೋಧ ಪಕ್ಷಕ್ಕಿವೆ. ಆದರೆ ಇಷ್ಟು ದೊಡ್ಡ ಪ್ರಮಾಣದ ಸಂಕಷ್ಟ ಎದುರಾಗಿರುವ ಸಂದರ್ಭದಲ್ಲಿ ನಮ್ಮ ಸಾರ್ವಜನಿಕ ಚರ್ಚೆಗಳು ವಾಸ್ತವಾಂಶಗಳನ್ನು ಆಧರಿಸಿರಬೇಕು. ಪರಿಹಾರ ವಿತರಣೆಯ ಅನುಷ್ಠಾನದಲ್ಲಿ ನಿಜವಾದ ಸಮಸ್ಯೆಗಳಿದ್ದರೆ ಅವುಗಳನ್ನು ನಮ್ಮ ಗಮನಕ್ಕೆ ತರಲಿ. ಅವುಗಳನ್ನು ಪರಿಹರಿಸಲು ನಾವು ಸಿದ್ಧರಿದ್ದೇವೆ. ಅದೇ ರೀತಿ, ಕರ್ನಾಟಕಕ್ಕೆ ನ್ಯಾಯಯುತವಾಗಿ ಸಲ್ಲಬೇಕಾದ ಕೇಂದ್ರದ ನೆರವನ್ನು ಪಡೆಯುವ ವಿಚಾರದಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಧ್ವನಿ ಎತ್ತೋಣ” ಎಂದು ಅವರು ಹೇಳಿದ್ದಾರೆ.

“ರಾಜ್ಯ ಸರ್ಕಾರದ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುವುದನ್ನು ಬಿಟ್ಟು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಿಂದ ಬರ ಪರಿಹಾರದ ಅನುದಾನವನ್ನು ತಕ್ಷಣ ಬಿಡುಗಡೆ ಮಾಡಿಸಲು ವಿರೋಧ ಪಕ್ಷದವರು ಮೊದಲು ತಮ್ಮ ಪ್ರಭಾವ ಬಳಸಲಿ ಎಂದು ನಾನು ಆಗ್ರಹಿಸುತ್ತೇನೆ. 2024ರಲ್ಲಿ ನಮ್ಮ ರೈತರಿಗೆ ಬರ ಪರಿಹಾರ ಪಡೆಯಲು ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಪ್ರತಿ ಬಾರಿ ಬರ ಬಂದಾಗಲೂ ಕರ್ನಾಟಕ ತನ್ನ ರೈತರ ಪರಿಹಾರಕ್ಕಾಗಿ ಸುಪ್ರೀಂ ಕೋರ್ಟ್ ಬಾಗಿಲು ತಟ್ಟಬೇಕೇ? ಎಂದು ಪ್ರಶ್ನಿಸಿದ್ದಾರೆ.

ವಿರೋಧ ಪಕ್ಷದವರು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮೀರಿ ಕರ್ನಾಟಕದ ರೈತರ ಪರವಾಗಿ ನಿಲ್ಲಬೇಕು. ರಾಜ್ಯ ಸರ್ಕಾರ ಮತ್ತೊಂದು ಕಾನೂನು ಹೋರಾಟಕ್ಕೆ ಮುಂದಾಗುವ ಪರಿಸ್ಥಿತಿ ನಿರ್ಮಾಣವಾಗದಂತೆ ಕೇಂದ್ರ ಸರ್ಕಾರ ತನ್ನ ಜವಾಬ್ದಾರಿಯನ್ನು ನಿರ್ವಹಿಸುವುದನ್ನು ಖಚಿತಪಡಿಸಬೇಕು. ಇದು ಪಕ್ಷ ರಾಜಕಾರಣದ ವಿಚಾರವಲ್ಲ. ಇದು ಕರ್ನಾಟಕದ ಹಕ್ಕು ಮತ್ತು ನಮ್ಮ ರೈತರ ಘನತೆಯ ಪ್ರಶ್ನೆಯಾಗಿದೆ ಎಂದು ಡಾ. ಪರಮೇಶ್ವರ ಅವರು ತಿಳಿಸಿದ್ದಾರೆ.

ರೈತ ಸಮುದಾಯದ ಹಿತಾಸಕ್ತಿಯನ್ನು ಕಾಪಾಡುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿರುವ ಅವರು, “ನಮ್ಮ ರೈತರ ಜೀವನೋಪಾಯವನ್ನು ರಕ್ಷಿಸಲು ಕೇವಲ ತಾತ್ಕಾಲಿಕ ಪರಿಹಾರಗಳ ಮೂಲಕವಷ್ಟೇ ಅಲ್ಲ, ರೈತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಆಡಳಿತ ವ್ಯವಸ್ಥೆ ಇರಬೇಕು. ಬರದಂತಹ ಪರಿಸ್ಥಿತಿಗಳನ್ನು ಎದುರಿಸುವ ಸಾಮರ್ಥ್ಯವನ್ನು ಕೃಷಿ ಕ್ಷೇತ್ರದಲ್ಲಿ ಬೆಳೆಸಬೇಕು. ರೈತರು ಸಂಕಷ್ಟಕ್ಕೆ ಸಿಲುಕಿದಾಗ ಅವರಿಗೆ ಸರ್ಕಾರದ ನೆರವು ಸಿಗುತ್ತದೆ ಎಂಬ ವಿಶ್ವಾಸ ಇರಬೇಕು. ಅಂತಹ ವ್ಯವಸ್ಥೆಯನ್ನು ಕರ್ನಾಟಕದಲ್ಲಿ ನಿರ್ಮಿಸುವುದು ನಮ್ಮ ಗುರಿಯಾಗಿದೆ. ಬರ ಎಂಬುದು ನೈಸರ್ಗಿಕ ವಿಕೋಪವಾಗಿರಬಹುದು. ಆದರೆ ಅದರ ನಂತರ ಉಂಟಾಗುವ ರೈತರ ಸಂಕಷ್ಟವು ಆಡಳಿತದ ನಿರ್ಲಕ್ಷ್ಯದಿಂದ ಮತ್ತಷ್ಟು ಹೆಚ್ಚಾಗಲು ಎಂದಿಗೂ ಅವಕಾಶ ನೀಡಬಾರದು.”

“ಪರಿಹಾರ ಘೋಷಿಸಿದ ಮಾತ್ರಕ್ಕೆ ಸರ್ಕಾರದ ಜವಾಬ್ದಾರಿ ಮುಗಿಯುವುದಿಲ್ಲ. ಆ ಪರಿಹಾರ ರೈತರ ಕೈ ಸೇರಿದಾಗಲೇ ನಮ್ಮ ಜವಾಬ್ದಾರಿ ಪೂರ್ಣಗೊಳ್ಳುತ್ತದೆ. ನಮ್ಮ ಸರ್ಕಾರದ ಕಾರ್ಯವೈಖರಿಯನ್ನು ಅಳೆಯಬೇಕಾದ ಮಾನದಂಡವೂ ಇದೇ ಆಗಿರಬೇಕು. ಆ ಬದ್ಧತೆಯನ್ನು ನಾವು ಖಂಡಿತವಾಗಿ ಉಳಿಸಿಕೊಳ್ಳುತ್ತೇವೆ” ಎಂದು ಡಾ. ಜಿ. ಪರಮೇಶ್ವರ ಅವರು ತಿಳಿಸಿದ್ದಾರೆ.


Share

You cannot copy content of this page