ಸಮಗ್ರ ಸುದ್ದಿ

ಕನ್ನಡ ಬಾವುಟಕ್ಕೆ ಅಧಿಕೃತ ನಾಡಧ್ವಜದ ಸ್ಥಾನಮಾನ ನೀಡಲು ಚಿಂತನೆ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

Share

ಬೆಂಗಳೂರು:ಕನ್ನಡ ಬಾವುಟಕ್ಕೆ ಅಧಿಕೃತ ನಾಡಧ್ವಜ ಸ್ಥಾನಮಾನ ನೀಡಲು ಸರ್ಕಾರ ಚಿಂತನೆ ನಡೆಸಿದ್ದು, ಈ ವಿಚಾರವಾಗಿ ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಇಂದು ಕರ್ನಾಟಕ ಸರ್ಕಾರ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿಂದು ಆಯೋಜಿಸಿದ್ದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಮುಂದಿನ ಒಂದು ವರ್ಷದ ಅವಧಿಯಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಕನ್ನಡದ ಹಿರಿಮೆ ಸಾರಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಎಲ್ಲ ಸರ್ಕಾರಿ ಕಚೇರಿಗಳ ಮೇಲೆ ಕನ್ನಡ ಧ್ವಜ ಹಾರಿಸುವುದರ ಜತೆಗೆ, ಸರ್ಕಾರದ ಬೆಂಬಲ ಹೊಂದಿರುವ ಸಂಸ್ಥೆಗಳಲ್ಲೂ ಕನ್ನಡ ಬಾವುಟ ಹಾರಿಸುವುದನ್ನು ಕಡ್ಡಾಯಗೊಳಿಸುವ ಚಿಂತನೆ ಇದೆ. ಖಾಸಗಿ ಸಂಸ್ಥೆಗಳೂ ಕನ್ನಡ ಧ್ವಜ ಹಾರಿಸುವಂತೆ ಈ ತಿಂಗಳಲ್ಲೇ ಸರ್ಕಾರದ ಆದೇಶ ಹೊರಡಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಭಾಷೆ, ಸಂಸ್ಕøತಿ, ಜ್ಞಾನದ ಪ್ರತಿಬಿಂಬ:

ನಮ್ಮ ಉಸಿರು, ಹೆಸರು, ಕಸುಬು ಕನ್ನಡ. ನಮ್ಮ ನುಡಿ ಬಹಳ ಚೆಂದ, ಅದರಲ್ಲಿ ಏನೇ ಗೀಚಿದರೂ ಆಗುವುದು ಶ್ರೀಗಂಧ. ತನು ಕನ್ನಡ, ಮನ ಕನ್ನಡ, ನುಡಿ ಕನ್ನಡ, ನಡೆ ಕನ್ನಡ. ಅದನ್ನು ಆಚರಿಸಲು ನಾವು ಸೇರಿದ್ದೇವೆ. ಜಗದ ಏಳಿಗೆಗೆ ದಾ.ರಾ. ಬೇಂದ್ರೆ ಅವರು ಕನ್ನಡ ಕರ್ನಾಟಕದ ದಿಕ್ಸೂಚಿ, ಕರ್ನಾಟಕ ಭಾರತದ ಭವಿಷ್ಯ. ಮಾತೃಭಾಷೆ ಮೂಲಕ ಜ್ಞಾನದ ಸಂಸ್ಕøತಿ ಹರಿಯುತ್ತಿದೆ ಎಂದು ಪ್ರತಿಪಾದಿಸಿದ್ದಾರೆ. ಭಾಷೆ, ಸಂಸ್ಕøತಿ, ಜ್ಞಾನದ ಪ್ರತಿಬಿಂಬ, ಹೆತ್ತ ತಾಯಿ, ಹುಟ್ಟಿದ ನಾಡು ಸ್ವರ್ಗಕ್ಕಿಂತ ಮಿಗಿಲು ಎಂದು ನಮಗೆ ಮಾರ್ಗದರ್ಶನ ನೀಡಿದ್ದಾರೆ. ನಾವು ಬೇರೆಯವರ ಮನಸ್ಸನ್ನು ಕನ್ನಡದಿಂದಲೇ ಗೆಲ್ಲಬೇಕು. ನಾವು ಯಾವುದೇ ದೇಶದಲ್ಲಿದ್ದರೂ ನಮ್ಮ ಉಸಿರು ಕನ್ನಡವಾಗಿರಬೇಕು ಎಂದು ಕರೆ ನೀಡಿದರು.

ಮಾತೃಭಾಷೆಯಲ್ಲಿ ಕಲಿಯುವ ಜ್ಞಾನ ಗಟ್ಟಿಯಾಗಿರುತ್ತದೆ:

ಈ ದೇಶದಿಂದ ಹೊರಗಿರುವ ಕನ್ನಡಿಗರು ಕನ್ನಡ ಸಂಘಟನೆ ಕಟ್ಟಿಕೊಂಡು ಮಾತೃಭಾಷೆ ಉಳಿಸಲು ಶ್ರಮಿಸುತ್ತಿದ್ದಾರೆ. ನುಡಿ ಉಳಿದರೆ ನಾಡು ಉಳಿಯುತ್ತದೆ. ನಾಡು ಉಳಿದರೆ ನುಡಿ ಉಳಿಯುತ್ತದೆ. ನಾವು ಇಲ್ಲಿ ರಾಜ್ಯೋತ್ಸವ ಮಾತ್ರ ಆಚರಿಸುತ್ತಿಲ್ಲ. ಕನ್ನಡ ತಾಯಿ ಭುವನೇಶ್ವರಿ ಸೇವೆ. ಇದು ಮಾತೃಭಾಷೆಯ ಪೂಜೆ. ತಾಯಿ ನುಡಿ ಸೇವೆಗಿಂತ ದೊಡ್ಡ ಧರ್ಮ ಮತ್ತೊಂದಿಲ್ಲ. ಮಗು ಹುಟ್ಟಿದಾಗ ತಾಯಿ ಮಗುವನ್ನು ಪ್ರೀತಿಸಿದಂತೆ ನಾವು ನಮ್ಮ ತಾಯಿ ಭಾಷೆಯನ್ನು ಪ್ರೀತಿಸಬೇಕು. ಕನ್ನಡವನ್ನು ಪ್ರೀತಿಸುವುದು, ತಾಯಿಯನ್ನು ಪ್ರೀತಿಸಿದಂತೆ. ಮಾತೃಭಾಷೆಯಲ್ಲಿ ಕಲಿಯುವ ಜ್ಞಾನ ಗಟ್ಟಿಯಗಾರುತ್ತದೆ. ಕನ್ನಡಕಕ್ಕೆ ಕಿರುಬೆರಳು ಎತ್ತಿದರೂ ಸಾಕು, ಅದು ಗೋವರ್ಧನಗಿರಿಯಾಗುತ್ತದೆ ಎಂದು ಕುವೆಂಪು ಅವರು ಹೇಳಿದ್ದಾರೆ. ಕುವೆಂಪು ಅವರು ಕನ್ನಡದಲ್ಲಿ ವಿಶ್ವಮಾನವ ಸಂದೇಶ ಸಾರಿದ್ದಾರೆ. ಕನ್ನಡ ಭಾಷೆಗೆ 2 ಸಾವಿರ ವರ್ಷಗಳ ಇತಿಹಾಸವಿದ್ದು, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದೆ. ನಮ್ಮ ಭಾಷೆಗೆ 8 ಜ್ಞಾನಪೀಠ ಪ್ರಶಸ್ತಿ ಸಂದಿದೆ ಎಂದು ತಿಳಿಸಿದರು.

ಪಂಪ, ರನ್ನ, ಜನ್ನ, ಕುಮಾರವ್ಯಾಸ, ಕನಕದಾಸರು, ಪುರಂದರ ದಾಸರು, ಸರ್ವಜ್ಞ, ಬಸವಣ್ಣ ಹುಟ್ಟಿದ ನಾಡು. ಕುವೆಂಪು, ಬೇಂದ್ರೆ, ಶಿವರಾಮ ಕಾರಂತ, ಗೋಕಾಕ್, ಅನಂತಮೂರ್ತಿ, ಪೂರ್ಣಚಂದ್ರ ತೇಜಸ್ವಿ, ಸಿದ್ದಲಿಂಗಯ್ಯ, ನಿಸಾರ್ ಅಹ್ಮದ್ ರಂತಹ ದಿಗ್ಗಜರು ಮಾಡಿರುವ ಸೇವೆ, ನಮ್ಮ ಶ್ರೀಮಂತ ಭಾಷೆಗೆ ಕೊಟ್ಟಿರುವ ಗೌರವವನ್ನು ನಾವು ಸ್ಮರಿಸಬೇಕು. ಭಾರತ ಜನನಿಯ ತನುಜಾತೆ ಕನ್ನಡಮ್ಮನ ನಾಡಗೀತೆ ಕನ್ನಡಿಗನ ಸ್ವಾಭಿಮಾನ ಗೀತೆಯನ್ನು ಪ್ರತಿ ಕಾರ್ಯಕ್ರಮದಲ್ಲಿ ಹಾಡುತ್ತೇವೆ ಎಂದರು.

ವಿಶ್ವಕ್ಕೆ ಪ್ರಜಾಪ್ರಭುತ್ವದ ಪರಿಕಲ್ಪನೆ ಕೊಟ್ಟಿದ್ದು ಕನ್ನಡ ನಾಡು. ಈ ನಾಡು ನುಡಿಯನ್ನು ಪ್ರೀತಿಸುವಂತೆ ನಾವು ಮಕ್ಕಳಿಗೆ ಕಲಿಸಬೇಕಿದೆ. ನಾವು ಭಾಷೆ ಪ್ರೀತಿಸಿದರೆ ಭಾಷೆ ನಮ್ಮನ್ನು ಕಾಪಾಡುತ್ತದೆ. ಭಾಷೆಗೆ ಗಡಿಯಿಲ್ಲ. ಡಿಜಿಟಲ್ ಯುಗದಲ್ಲಿ ಮೊಬೈಲ್ ನಲ್ಲಿ ನಾವು ಎಲ್ಲಾ ಭಾಷೆ ಬಳಸಬಹುದು. ಕಲಿಕೆ ಬಹಳ ವಿಸ್ತಾರವಾಗಿದೆ. ಭಾಷೆಗಳ ಸ್ಪರ್ಧೆಗಳ ಮಧ್ಯೆ ಕನ್ನಡ ಬೆಳೆಯಬೇಕು. ಅದಕ್ಕಾಗಿ ನಮ್ಮ ಮಕ್ಕಳು ಮೊದಲು ಕನ್ನಡ ಕಲಿಯಬೇಕು. ಕಲಿತರಷ್ಟೇ ಸಾಲದು, ದಿನನಿತ್ಯ ಕನ್ನಡ ಭಾಷೆ ಬಳಸಬೇಕು ಎಂದು ಸಂದೇಶ ನೀಡಿದರು.

ಕನ್ನಡ ಕೇವಲ ಸರ್ಕಾರಿ ಭಾಷೆ ಮಾತ್ರವಲ್ಲ, ಹೃದಯದ ಭಾಷೆಯಾಗಬೇಕು:

ನಮ್ಮ ಸರ್ಕಾರಿ ಶಾಲೆಗಳ ಜತೆ ಖಾಸಗಿ ಶಾಲೆ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದಕ್ಕೆ ಆ ಶಾಲೆ ಶಿಕ್ಷಕರು ಹಾಗೂ ಸಂಸ್ಥೆಯವರಿಗೆ ಅಭಿನಂದಿಸುತ್ತೇನೆ. ಕನ್ನಡ ಕೇವಲ ಸರ್ಕಾರಿ ಭಾಷೆ ಮಾತ್ರವಲ್ಲ, ಹೃದಯದ ಭಾಷೆಯಾಗಬೇಕು. ಭಾಷೆ ಎಂಬುದು ಬದುಕು. ಭಾಷೆ ಇಲ್ಲದ ಬದುಕು ಮೂಕಿಚಿತ್ರದಂತಾಗುತ್ತದೆ. ಕನ್ನಡದ ಬೇರು ಕರ್ನಾಟಕದಲ್ಲಿದ್ದರೂ ಅದರ ರೆಂಬೆ ಕೊಂಬೆ, ರುಚಿ ಇಡೀ ಪ್ರಪಂಚಕ್ಕೆ ವಿಸ್ತರಿಸಿದೆ. ಸಾವಿರಾರು ಕನ್ನಡಿಗರು ವಿಶ್ವದ ನಾನಾ ಕಡೆ ನೆಲೆಸಿ ಕನ್ನಡದ ಕಂಪನ್ನು ಹರಡುತ್ತಿದ್ದಾರೆ. ಕಲೆ ಕ್ರೀಡೆ, ವಿಜ್ಞಾನ ಐಟಿ ಬಿಟಿ ಸೇರಿದಂತೆ ಯಾವುದೇ ಕ್ಷೇತ್ರದಲ್ಲಾದರೂ ಕನ್ನಡದ ಸಾರ್ವಭೌಮತೆ ಬೆಳಎಯಬೇಕು. ಕನ್ನಡ ಎನ್ನುವುದು ಆಭರಣ ಇದ್ದಂತೆ. ಈ ಆಭರಣ ಕಳೆಯದಂತೆ ಕಾಪಾಡುವ ಹೊಣೆಗಾರಿಕೆ ನಿಮ್ಮ ಮೇಲಿದೆ ಎಂದರು.

ನಮ್ಮ ಸರ್ಕಾರ ಕನ್ನಡ, ನೆಲ, ಜಲ, ಸಂಸ್ಕøತಿ ರಕ್ಷಣೆಗೆ ಬದ್ಧವಾಗಿದೆ. ಮಕ್ಕಳ ಜಾಗತಿಕ ಸ್ಪರ್ಧೆಗೆ ಎಲ್ಲಾ ರೀತಿ ಸಿದ್ಧರಾಗಿ. ಇದಕ್ಕಾಗಿ ಕನ್ನಡದ ಬೇರು ಗಟ್ಟಿಯಾಗಬೇಕು. ಇದಕ್ಕಾಗಿ ನಮ್ಮ ಜವಾಬ್ದಾರಿ ಅರಿಯಬೇಕು. ಸರ್ಕಾರಿ ಶಾಲೆಗಳ ಮಕ್ಕಳು ನಮ್ಮ ರಾಜ್ಯಕ್ಕೆ ಹೆಮ್ಮೆತರುತ್ತಿದ್ದಾರೆ. ನಮ್ಮ ಕನ್ನಡದ ಬೇರುಗಳು ಇರುವುದು ನಮ್ಮ ಕನ್ನಡ ಸರ್ಕಾರಿ ಶಾಲೆಗಳಲ್ಲಿ. ಎಸ್.ಎಸ್.ಎಲ್.ಸಿ ಪಿಯುಸಿ ಪರೀಕ್ಷೆಯಲ್ಲಿ ಸರ್ಕಾರಿ ಶಾಲೆ ಮಕ್ಕಳು ಉತ್ತಮ ಫಲಿತಾಂಶ ಪಡೆಯುತ್ತಿದ್ದಾರೆ. ಇದಕ್ಕಾಗಿ ನಿಮಗೆ ಅಭಿನಂದನೆ ಸಲ್ಲಿಸುವೆ. ಕನ್ನಡದ ಅಳಿವು, ಉಳಿವು ಈ ವಿದ್ಯಾರ್ಥಿಗಳ ಕೈಯಲ್ಲಿದೆ. 6ನೇ ತರಗತಿಯಿಂದ ಎಐ ತರಬೇತಿ ನೀಡಲು ನಾವು ಮುಂದಾಗಿದ್ದೇವೆ. 12ನೇ ತರಗತಿವರೆಗೂ ಮುಂದುವರಿಸುತ್ತೇವೆ. ನಮ್ಮ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಿಎಸ್.ಆರ್. ನಿಧಿ ಬಳಸಲಾಗುತ್ತಿದೆ. ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಹೊಸ ರೂಪ ನೀಡಲಾಗುತ್ತಿದೆ ಎಂದು ವಿವರಿಸಿದರು.

ಗ್ರಾಮೀಣ ಸರ್ಕಾರಿ ಶಾಲೆ ಮಕ್ಕಳಿಗೆ ವೃತ್ತಿಪರ ಶಿಕ್ಷಣದಲ್ಲಿ ಶೇ.7ರಷ್ಟು ಮೀಸಲಾತಿ:

ಪಂಚಾಯ್ತಿ ಮಟ್ಟದ ಸರ್ಕಾರಿ ಶಾಲೆಗಳನ್ನು ನಗರ ಪ್ರದೇಶದ ಶಾಲೆಗಳಂತೆ ರೂಪಿಸಲಾಗುತ್ತಿದೆ. ಈಗಾಗಲೇ 15 ಸಾವಿರ ಶಾಲಾ ಶಿಕ್ಷಕರ ನೇಮಕಾತಿಗೆ ಆದೇಶ ನೀಡಲಾಗಿದೆ. ಕರ್ನಾಟಕ ರಾಜ್ಯದಲ್ಲಿ 25,498 ದ್ವಿಭಾಷಾ ಶಾಲೆಗಳು ಆರಂಭವಾಗಿದೆ. 250 ಸರ್ಕಾರಿ ಶಾಲೆಗಳನ್ನು ವಿಜ್ಞಾನ ಪ್ರಯೋಗಾಲಯ ಸ್ಥಾಪನೆ ಮಾಡಲಾಗಿದೆ. 6ನೇ ತರಗತಿಯಿಂದ ಕೌಶಲ್ಯ ಆಧಆರಿತ ಶಿಕ್ಷಣ ಆರಂಭಿಸಿದ್ದೇವೆ. ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ 1-10ನೇ ತರಗತಿ, ಪಿಯು ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣದಲ್ಲಿ ವ್ಯಾಸಂಗಕ್ಕೆ ಶೇ.7ರಷ್ಟು ಮೀಸಲಾತಿ ನೀಡಲಾಗಿದೆ. ಈ ಮೀಸಲಾತಿ ಉದ್ದೇಶ ಗ್ರಾಮೀಣ ಸರ್ಕಾರಿ ಶಾಲಾ ಮಕ್ಕಳಿಗೆ ಇಂಜಿನಿಯರ್, ವೈದ್ಯ ಶಿಕ್ಷಣದಲ್ಲಿ ಹೆಚ್ಚಿನ ಅವಕಾಶ ಸಿಗುವಂತೆ ಮಾಡುವುದಾಗಿದೆ ಎಂದು ತಿಳಿಸಿದರು.

ನಗರದ ಮಕ್ಕಳಿಗೆ ಗ್ರಾಮಾನುಭವ ಕಾರ್ಯಕ್ರಮ:

ನಗರದ ವಿದ್ಯಾರ್ಥಿಗಳಿಗೆ ಹಳ್ಳಿಗಳ ಬದುಕಿನ ಪರಿಚಯಕ್ಕೆ ಗ್ರಾಮಾನುಭವ ಎಂಬ ಕಾರ್ಯಕ್ರಮ ರೂಪಿಸಲಾಗಿದೆ. ಬೆಂಗಳೂರು ಹಾಗೂ 10 ಮಹಾನಗರ ಪಾಲಿಕೆ ವ್ಯಾಪ್ತಿಯ ಶಾಲಾ ಮಕ್ಕಳಿಗೆ 2-3 ದಿನಗಳ ಗ್ರಾಮವಾಸ್ತವ್ಯ ಪರಿಚಯಿಸಿ ಗ್ರಾಮದ ಬದುಕು ಏನು ಎಂದು ತಿಳಿಸುವುದಾಗಿದೆ. ಗ್ರಾಮಾನುಭವ ಯೋಜನೆ ಮೂಲಕ ವಿದ್ಯಾರ್ಥಿಗಳನ್ನು ಕೊಠಡಿಯಿಂದಾಚೆ ತಂದು ಹಳ್ಳಿಗಳಲ್ಲಿ ಕೃಷಿ, ತೋಟಗಾರಿಕೆ, ಗ್ರಾಮೀಣ ಸಂಸ್ಕøತಿ ಪರಿಚಯಿಸುವ ಉದ್ದೇಶವಿದೆ ಎಂದರು.

ನಮ್ಮ ಮಕ್ಕಳು ಏಷ್ಯನ್ ಗೇಮ್ಸ್ ನಲ್ಲಿ 8 ಪದಕ ಗೆದ್ದಿದ್ದಾರೆ. ನಮ್ಮ ಸರ್ಕಾರ ಚಿನ್ನದ ಪದಕ ವಿಜೇತರಿಗೆ 1 ಕೋಟಿ, ಬೆಳ್ಳಿ ಗೆದ್ದವರಿಗೆ 75 ಲಕ್ಷ, ಕಂಚು ಗೆದ್ದವರಿಗೆ 50 ಲಕ್ಷ ನಗದು ಬಹುಮಾನ ನೀಡಿ ಪ್ರೋತ್ಸಾಹ ನೀಡಿದೆ. ಏಷ್ಯನ್ ಗೇಮ್ಸ್ ನಲ್ಲಿ ಭಾಗವಹಿಸಿದ 20 ಕ್ರೀಡಾಪಟುಗಳಿಗೆ ತಲಾ 5 ಲಕ್ಷ ನೀಡಲಾಗಿದೆ. ಪ್ಯಾರಾಲಿಂಪಿಕ್ಸ್ ಗೆ ತಯಾರಾಗುತ್ತಿರುವ ಕ್ರೀಡಾಪಟುಗಳ ಸಿದ್ಧತೆಗೆ ತಲಾ 10 ಲಕ್ಷ ನೀಡಲಾಗುತ್ತಿದೆ. ಕ್ರೀಡಾಪಟುಗಳಿಗೆ ಸರ್ಕಾರಿ ಕೆಲಸಗಳಲ್ಲಿ ಶೇ.2ರಷ್ಟು, ಅರಣ್ಯ ಹಾಗೂ ಪೊಲೀಸ್ ಇಲಾಖೆಗಳಲ್ಲಿ ಶೇ.3ರಷ್ಟು ಮೀಸಲಾತಿ ನೀಡಿದ್ದೇವೆ. ಒಲಿಂಪಿಕ್ಸ್ ನಿಮ್ಮ ಗುರಿಯಾಗಿ ತಯಾರಾಗಬೇಕು. ಓದಿನ ಜತೆಗೆ ಕ್ರೀಡಾ, ಕಲೆ, ಸಾಹಿತ್ಯದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ನಿಮ್ಮ ಹಿಂದೆ ನಾವಿದ್ದೇವೆ. ನೀವು ಧೈರ್ಯವಾಗಿ ಹೊಸ ನಕ್ಷೆ ತಯಾರಿಸಿ ಸಿದ್ಧರಾಗಿ ಎಂದು ಕರೆ ನೀಡಿದರು.

ಭಾರತ ಜೋಡೋ ಯುವ ಸಂಘಗಳ ಮೂಲಕ ಯುವಕರ ಪ್ರತಿಭೆಗಳಿಗೆ ಪ್ರೋತ್ಸಾಹ:

ಕರ್ನಾಟಕವನ್ನು ನಶೆಮುಕ್ತ ರಾಜ್ಯವನ್ನಾಗಿ ಮಾಡಬೇಕು. ಕರ್ನಾಟಕ ಪ್ರಾದೇಶಿಕ ಯೋಜನೆ ರೂಪಿಸಿ 2047ರ ವೇಳೆಗೆ ರಾಜ್ಯಕ್ಕೆ ಹೊಸ ರೂಪ ನೀಡಲು ಹೆಜ್ಜೆ ಹಾಕುತ್ತಿದ್ದೇವೆ. ಇದರಿಂದ ಮುಂದಿನ 20 ವರ್ಷಗಳಲ್ಲಿ 5 ಲಕ್ಷ ಕೋಟಿ ಹೂಡಿಕೆಗೆ ಕಾರ್ಯಕ್ರಮ ರೂಪಿಸಲಾಗಿದೆ. ನಮ್ಮ ಸರ್ಕಾರ ಭಾರತ ಜೋಡೋ ಯುವಕರ ಸಂಘ ಸ್ಥಾಪಿಸುತ್ತಿದೆ. ಪಂಚಾಯಿತಿ ಹಾಗೂ ವಾರ್ಡ್ ಮಟ್ಟದಲ್ಲಿ ಕ್ರೀಡೆ, ಕಲೆ, ಸಂಸ್ಕøತಿ ವಿಚಾರವಾಗಿ ಯುವಕರ ಪ್ರತಿಭೆಗೆ ಪ್ರೋತ್ಸಾಹ ನೀಡಿ ಅವರಲ್ಲಿ ನಾಯಕತ್ವದ ಗುಣ ಬೆಳೆಸಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ ರಾಜ್ಯದಲ್ಲಿ 10 ಸಾವಿರ ಭಾರತ ಜೋಡೋ ಸಂಘಗಳನ್ನು ಸ್ಥಾಪಿಸಿ 16-35 ವರ್ಷದೊಳಗಿನ ಯುವಕರನ್ನು ಸದಸ್ಯರನ್ನಾಗಿ ಮಾಡಲಾಗುವುದು. ಈ ಸಂಘಗಳಿಗೆ ವಾರ್ಷಿಕ 10 ಲಕ್ಷ ಅನುದಾನ ನೀಡಲಾಗುವುದು ಎಂದು ತಿಳಿಸಿದರು.

ಈಗಾಗಲೇ 72 ಸಾವಿರ ಸರ್ಕಾರಿ ಹುದ್ದೆಗಳ ಭರ್ತಿಗೆ ಆದೇಶ ಮಾಡಲಾಗಿದ್ದು, 66 ಸಾವಿರ ಉದ್ಯೋಗಗಳನ್ನು ಸೃಷ್ಟಿ ಮಾಡಲಾಗಿದೆ. ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ಯುವನಿಧಿ ಯೋಜನೆ ಜತೆಗೆ ಖಾಸಗಿ ಉದ್ಯೋಗ ವಿನಿಮಯಕ್ಕಾಗಿ ಉದ್ಯೋಗ ಸೇತು ವ್ಯವಸ್ಥೆ ರೂಪಿಸಿದೆ. ಇದಕ್ಕಾಗಿ 100 ಐಟಿಐ ಸಂಸ್ಥೆಗಳನ್ನು ಅತ್ಯುತಮ ಕೈಗಾರಿಕಾ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಡಲಾಗಿದೆ ಎಂದರು.

ರೈತರಿಗೆ ಶಕ್ತಿ ತುಂಬಲು ಹಾಲಿನ ದರ ಏರಿಕೆ:

ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದು ರೈತರು ಸಕಷ್ಟದಲ್ಲಿದ್ದಾರೆ. ಅವರಿಗೆ ಶಕ್ತಿ ತುಂಬಲು ಪ್ರತಿ ಲೀಟರ್ ಹಾಲಿನ ಬೆಲೆಯನ್ನು 8 ರೂ. ಹೆಚ್ಚಿಸಿದ್ದೇವೆ. ಇದರಲ್ಲಿ ರೈತರಿಗೆ 7 ಹಾಗೂ ಒಕ್ಕೂಟಗಳಿಗೆ ಸೊಸೈಟಿಗಳಿಗೆ ತಲುಪಲಿದೆ. ಇದರಿಂದ 11 ಲಕ್ಷ ರೈತ ಕುಟುಂಬಗಳಿಗೆ ನೆರವಾಗಲಿದೆ. ಮುಖ್ಯಮಂತ್ರಿ ರಸ್ತೆ ಸಂಪರ್ಕ ಯೋಜನೆಗೆ 10 ಸಾವಿರ ಕೋಟಿ ನೀಡಿದ್ದು, 20 ಸಾವಿರ ಕಿ.ಮೀ ಜಿಲ್ಲಾ ಹಾಗೂ ತಾಲೂಕು ಪಂಚಾಯ್ತಿ ರಸ್ತೆಗಳ ಅಭಿವೃದ್ಧಿಗೆ ಪ್ರತಿ ಪಂಚಾಯ್ತಿಗೆ 6 ಸಾವಿರ ಕೋಟಿ ಹಣ ನೀಡಲು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಸರ್ಕಾರಿ ಆಸ್ಪತ್ರೆ ದತ್ತು ಯೋಜನೆ ಪ್ರಾರಂಭಿಸಿದ್ದು, 11 ವೈದ್ಯಕೀಯ ಕಾಲೇಜುಗಳು ಇದಕ್ಕೆ ಸಹಿ ಮಾಡಿವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ 100 ಹೊಸ ಆಂಬುಲೆನ್ಸ್ ಗಳನ್ನು ಲೋಕಾರ್ಪಣೆಗೊಳಿಸಲಾಗುವುದು ಎಂದು ತಿಳಿಸಿದರು.

ಆರ್ಥಿಕ ಇಲಾಖೆಯೊಂದಿಗೆ ಚರ್ಚೆ ಮಾಡಿ 1995ರ ನಂತರ ಪ್ರಾರಂಭವಾದ ಸರ್ಕಾರಿ ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ನೀಡಲು ಕೆಲವು ದಿನಗಳಲ್ಲಿ ಅವರೊಂದಿಗೆ ಚರ್ಚೆ ಮಾಡಿ ಸಹಾಯ ಮಾಡಲಾಗುವುದು. ಇನ್ನು ಬಡ ರೈತರಿಗಾಗಿ ಸರ್ಕಾರ ನೇಗಿಲ ಯೋಗಿ ಯೋಜನೆ ರೂಪಿಸಿದ್ದು, 3 ಎಕರೆವರೆಗೂ ಹೊಲವನ್ನು ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಲು ಕಾರ್ಯಕ್ರಮ ರೂಪಿಸಲಾಗಿದೆ. ನಮ್ಮ ಸರ್ಕಾರ ಪ್ರಜಾಸೇವೆ ಇಲಾಖೆ ರೂಪಿಸಿದೆ. ಎಲ್ಲರ ಆಸ್ತಿ ದಾಖಲೆಗಳ ಮೂಲಕ ಮಾಲೀಕತ್ವ ಗಟ್ಟಿಗೊಳಿಸಲು ಭೂಗ್ಯಾರಂಟಿ ಜಾರಿಗೆ ತಂದಿದೆ. ರೈತರಿಗಾಗಿ ತೇಗದ ಸಿರಿ ಯೋಜನೆ ರೂಪಿಸಿದೆ. ಮಲೆನಾಡಿನ ಪ್ರದೇಶದ ರೈತರಿಗೆ ಅರಣ್ಯ ಇಲಾಖೆಯಿಂದ ಆಗುತ್ತಿದ್ದ ತೊಂದರೆ ಹಾಗೂ ರಸ್ತೂರಿ ರಂಗನ್ ವರದಿ ತಿರಸ್ಕರಿಸಲು ವಿಶೇಷ ಅಧಿವೇಶನ ನಡೆಸಿದ್ದೇವೆ. ಇನ್ನು ರಾಜ್ಯದಲ್ಲಿ 5 ಲಕ್ಷ ನಿವೇಶನಗಳನ್ನು ವಿತರಣೆ ಮಾಡಲು ಕಾರ್ಯಕ್ರಮ ನೀಡಲಾಗಿದೆ” ಎಂದು ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

3 ಕೋಟಿ 32 ಲಕ್ಷ ವೆಚ್ಚದಲ್ಲಿ 1,000 ಚದರ ಕಿಲೋಮೀಟರ್ ಬಿತ್ತನೆ ಪ್ರದೇಶದಲ್ಲಿ ಡ್ರೋನ್ ಮತ್ತು ಉಪಗ್ರಹ ಆಧಾರಿತ ಬೆಳೆ ಸಮೀಕ್ಷೆ ನಡೆಸಲಾಗುವುದು. 12 ಕೋಟಿ ವೆಚ್ಚದಲ್ಲಿ ಐದು ಜಿಲ್ಲೆಗಳ ಐದು ಹೋಬಳಿಗಳಲ್ಲಿ ಡಿಜಿಟಲ್ ಬೆಳೆ ಸಮೀಕ್ಷೆ ನಡೆಸಲಾಗುವುದು. ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ರಫ್ತು ಉತ್ತೇಜನ. ರಫ್ತುದಾರರಿಗೆ ತರಬೇತಿ ಕಾರ್ಯಕ್ರಮ ಜಾರಿ ಮಾಡಲಾಗುವುದು. ಕರ್ನಾಟಕ ಪ್ರೋಟೀನ್ ಮಿಷನ್, ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆ ಜಾರಿ ಮಾಡಲಾಗಿದೆ. ಸಾವಯವ ಪದ್ಧತಿ ಪ್ರೋತ್ಸಾಹಿಸಲು ವಸುಧಾಮೃತ ಕಾರ್ಯಕ್ರಮ ಪ್ರಾರಂಭಿಸಲಾಗುತ್ತಿದೆ. ರೈತರ ಆದಾಯ ಹೆಚ್ಚಿಸಲು ತೇಗ ಸಿರಿ ಯೋಜನೆ ಅನುμÁ್ಟನಕ್ಕೆ ಸರ್ಕಾರ ಮುಂದಾಗಿದೆ. 37 ಲಕ್ಷದ 32 ಸಾವಿರ ರೈತರನ್ನ ಬೆಳೆ ವಿಮೆ ವ್ಯಾಪ್ತಿಗೆ ಸೇರ್ಪಡೆ ಮಾಡಲಾಗಿದೆ. 38 ಲಕ್ಷ ರೈತರಿಗೆ 30,000 ಕೋಟಿ ಸಾಲ ವಿತರಣೆ ಮಾಡಲಾಗಿದೆ. 3 ಲಕ್ಷ 41 ಸಾವಿರ ಜನ ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ನೀಡಲಾಗಿದೆ. 32,138 ಕೃಷಿ ಹೊಂಡಗಳ ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕಾಗಿ 363 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. 2,825 ಕೋಟಿ ವೆಚ್ಚದಲ್ಲಿ ಹನಿ ನೀರಾವರಿ ಯೋಜನೆ ಅಳವಡಿಕೆ ಮಾಡಲು ಮುಂದಾಗಿದ್ದೇವೆ ಎಂದು ತಿಳಿಸಿದರು.

ಕನ್ನಡಿಗರ ಪಾಲಿಗೆ ನವೆಂಬರ್ 1 ಸ್ವಾಭಿಮಾನದ ಸಂಕೇತ: ಸಚಿವ ಎಸ್. ಮಧು ಬಂಗಾರಪ್ಪ

ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಕನ್ನಡಿಗರ ಪಾಲಿಗೆ ನವೆಂಬರ್ 1 ಕೇವಲ ಒಂದು ದಿನಾಂಕವಲ್ಲ. ಇದು ನಮ್ಮ ನಾಡಿನ ಇತಿಹಾಸ, ಭಾಷೆಯ ಅಸ್ತಿತ್ವ, ಸಂಸ್ಕøತಿಯ ವೈಭವ ಹಾಗೂ ಕನ್ನಡಿಗರ ಸ್ವಾಭಿಮಾನದ ಸಂಕೇತದ ದಿನ ಎಂದು ಹೇಳಿದರು.

“ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು” ಎಂದು ಕವಿ ಹುಯಿಲಗೋಳ ನಾರಾಯಣರಾಯರು ರಚಿಸಿದ ಕವಿತೆ ಕನ್ನಡ ನಾಡು-ನುಡಿಯ ಹೋರಾಟದ ಗೀತೆಯಾಗಿ ಉಳಿದಿದೆ. 1924ರಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದಲ್ಲಿ ಗಂಗೂಬಾಯಿ ಹಾನಗಲ್ ಅವರು ಈ ಗೀತೆಯನ್ನು ಹಾಡಿದ್ದರು. ಹರಿದು ಹಂಚಿಹೋಗಿದ್ದ ಕನ್ನಡ ಭಾಷಿಕ ಪ್ರದೇಶಗಳನ್ನು ಒಂದುಗೂಡಿಸುವ ಕರ್ನಾಟಕ ಏಕೀಕರಣ ಚಳವಳಿಗೆ ಈ ಗೀತೆ ಮಹತ್ವದ ಪ್ರೇರಣೆಯಾಯಿತು ಎಂದು ಸ್ಮರಿಸಿದರು.

ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಶ್ರೀಮಂತ ಇತಿಹಾಸವಿದೆ. ವಿಶ್ವಗುರು ಬಸವಣ್ಣ, ಆದಿಕವಿ ಪಂಪ, ರನ್ನ, ಕುಮಾರವ್ಯಾಸ ಸೇರಿದಂತೆ ಅನೇಕ ಮಹನೀಯರು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರೆತಿರುವುದು ಭಾಷೆಯ ಪ್ರಾಚೀನತೆ ಮತ್ತು ಸಾಹಿತ್ಯಿಕ ಶ್ರೀಮಂತಿಕೆಗೆ ಸಂದ ಗೌರವವಾಗಿದೆ ಎಂದರು.

1956ರ ನವೆಂಬರ್ 1ರಂದು ಕನ್ನಡ ಮಾತನಾಡುವ ಪ್ರದೇಶಗಳನ್ನು ಒಗ್ಗೂಡಿಸಿ ವಿಶಾಲ ಮೈಸೂರು ರಾಜ್ಯ ರಚಿಸಲಾಯಿತು. ನಂತರ 1973ರ ನವೆಂಬರ್ 1ರಂದು ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಿದರು ಎಂದು ತಿಳಿಸಿದರು.

1.16 ಕೋಟಿ ಮಕ್ಕಳ ಭವಿಷ್ಯ ರೂಪಿಸುವ ಜವಾಬ್ದಾರಿ:

ಶಾಲಾ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿರುವ 1.16 ಕೋಟಿ ಮಕ್ಕಳ ಭವಿಷ್ಯ ರೂಪಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ನಾಡು, ನುಡಿ, ನೆಲ, ಜಲ ಮತ್ತು ಸಂಸ್ಕøತಿಯ ಬಗ್ಗೆ ಗೌರವ ಮೂಡಿಸುವ ಕಾರ್ಯವನ್ನು ಪಠ್ಯಪುಸ್ತಕಗಳ ಮೂಲಕ ಪರಿಣಾಮಕಾರಿಯಾಗಿ ಮಾಡಲಾಗುತ್ತಿದೆ ಎಂದು ಹೇಳಿದರು.

ಶಿಕ್ಷಕರ ನೇಮಕಾತಿ, ಗ್ರಾಮೀಣ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸುವುದು ಹಾಗೂ ವಿದ್ಯಾರ್ಥಿಗಳ ಸವಾರ್ಂಗೀಣ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಿದೆ. ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ 17 ಸಾವಿರಕ್ಕೂ ಹೆಚ್ಚು ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿದೆ. ಈ ಪ್ರಕ್ರಿಯೆ ಪೂರ್ಣಗೊಂಡರೆ ಸರ್ಕಾರದ ಅವಧಿಯಲ್ಲಿ ಒಟ್ಟು ಸುಮಾರು 32 ಸಾವಿರ ಶಿಕ್ಷಕರ ನೇಮಕಾತಿ ಮಾಡಿದಂತಾಗಲಿದೆ ಎಂದು ತಿಳಿಸಿದರು.

ಗ್ರಾಮೀಣ ವಿದ್ಯಾರ್ಥಿಗಳಿಗೆ ‘ವಿದ್ಯಾರ್ಥಿ ಸಹಾಯಹಸ್ತ’:

ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಒಂದರಿಂದ ಹತ್ತನೇ ತರಗತಿವರೆಗೆ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್‍ಗಳ ಪ್ರವೇಶಾತಿಯಲ್ಲಿ ಶೇ.7.5ರಷ್ಟು ವಿಶೇಷ ಮೀಸಲಾತಿ ಕಲ್ಪಿಸುವ ‘ವಿದ್ಯಾರ್ಥಿ ಸಹಾಯಹಸ್ತ’ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಗ್ರಾಮೀಣ ಸರ್ಕಾರಿ ಶಾಲೆಗಳಲ್ಲಿ ಓದಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಅವಕಾಶಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ಇದು ಮಹತ್ವದ ಕ್ರಮವಾಗಿದೆ ಎಂದರು.

ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಕೃಷಿ ಪದ್ಧತಿ, ಗ್ರಾಮೀಣ ಸಂಸ್ಕøತಿ ಹಾಗೂ ಶ್ರಮಜೀವನದ ನೈಜ ಪರಿಚಯ ಮಾಡಿಕೊಡುವ ಉದ್ದೇಶದಿಂದ ‘ಗ್ರಾಮಾನುಭವ’ ಎಂಬ ವಿನೂತನ ಶೈಕ್ಷಣಿಕ ಕಾರ್ಯಕ್ರಮ ರೂಪಿಸಲಾಗಿದೆ. ಈ ಯೋಜನೆಯಡಿ 8, 9, 10 ಮತ್ತು 11ನೇ ತರಗತಿಯ ನಗರ ಪ್ರದೇಶದ ವಿದ್ಯಾರ್ಥಿಗಳು ಗ್ರಾಮಗಳಿಗೆ ಭೇಟಿ ನೀಡಿ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಕಲೆ ಮತ್ತು ಸಂಸ್ಕøತಿ ಸೇರಿದಂತೆ ಗ್ರಾಮೀಣ ಬದುಕಿನ ಅನುಭವ ಪಡೆಯಲಿದ್ದಾರೆ ಎಂದು ಹೇಳಿದರು.

1,200ಕ್ಕೂ ಹೆಚ್ಚು ಕೆಪಿಎಸ್ ಶಾಲೆಗಳ ಸ್ಥಾಪನೆ:

ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಡಿ 1,200ಕ್ಕೂ ಹೆಚ್ಚು ಕರ್ನಾಟಕ ಪಬ್ಲಿಕ್ ಶಾಲೆಗಳನ್ನು (ಕೆಪಿಎಸ್) ಸ್ಥಾಪಿಸಲಾಗುತ್ತಿದೆ. ಇದರೊಂದಿಗೆ ಸಿಎಸ್‍ಆರ್ ಅನುದಾನದ ನೆರವಿನಿಂದಲೂ ಕೆಪಿಎಸ್ ಶಾಲೆಗಳನ್ನು ಸ್ಥಾಪಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ತಿಳಿಸಿದರು.

ಶಿಕ್ಷಕರ ಅಮೂಲ್ಯ ಸೇವೆಯನ್ನು ಗೌರವಿಸುವ ಉದ್ದೇಶದಿಂದ 2026ರ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಶಿಕ್ಷಕರು ತಮ್ಮ ಹೆಸರಿನ ಹಿಂದೆ ಹೆಮ್ಮೆಯಿಂದ ‘ಖಿಡಿ.’ (ಖಿeಚಿಛಿheಡಿ) ಎಂದು ಬಳಸಲು ಸರ್ಕಾರ ಅನುಮತಿ ನೀಡಿ ಆದೇಶ ಹೊರಡಿಸಿದೆ ಎಂದರು.

ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ನೀಡಲು ಮನವಿ:

1995ರ ನಂತರ ಆರಂಭವಾದ ಕನ್ನಡ ಮಾಧ್ಯಮ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವಂತೆ ಮುಖ್ಯಮಂತ್ರಿಗಳಲ್ಲಿ ಸಚಿವರು ಮನವಿ ಮಾಡಿದರು.

ಕನ್ನಡ ಭಾಷೆ, ಕನ್ನಡ ಶಾಲೆಗಳು ಮತ್ತು ಕನ್ನಡಿಗರ ಉಳಿವಿಗಾಗಿ ಸರ್ಕಾರ ಶ್ರಮಿಸುತ್ತಿದೆ. ಕನ್ನಡದ ನೆಲದಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ಸಿಗಬೇಕು. ಕನ್ನಡ ಶಾಲೆಗಳು ಉಳಿಯಬೇಕು, ಕನ್ನಡಿಗರಿಗೆ ಉದ್ಯೋಗಾವಕಾಶಗಳು ಹೆಚ್ಚಾಗಬೇಕು ಹಾಗೂ ಆಡಳಿತದ ಪ್ರತಿಯೊಂದು ಹಂತದಲ್ಲೂ ಕನ್ನಡಕ್ಕೆ ಗೌರವ ದೊರೆಯಬೇಕು ಎಂದು ಆಶಯ ವ್ಯಕ್ತಪಡಿಸಿದರು.

ನಾವು ಕನ್ನಡಿಗರು ಎಂಬುದು ಕೇವಲ ನಮ್ಮ ಗುರುತಾಗಬಾರದು; ಅದೊಂದು ಹೆಮ್ಮೆಯ ಬದುಕಾಗಬೇಕು. ಕನ್ನಡ ನಮ್ಮ ಉಸಿರಾಗಲಿ, ಕನ್ನಡ ನಮ್ಮ ಬದುಕಾಗಲಿ, ಕನ್ನಡ ನಮ್ಮ ಮುಂದಿನ ಪೀಳಿಗೆಯ ಭವಿಷ್ಯವಾಗಲಿ ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಸರ್ಕಾರದ ವಿನೂತನ ಕಾರ್ಯಕ್ರಮಗಳಾದ “ಮುಖ್ಯಮಂತ್ರಿ ವಿದ್ಯಾರ್ಥಿ ಸಹಾಯಹಸ್ತ”- ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಆನ್ ಲೈನ್ ತರಬೇತಿಗೆ ಚಾಲನೆ ಹಾಗೂ “ಸರ್ಕಾರಿ ಆಸ್ಪತ್ರೆಗಳ ದತ್ತು ಯೋಜನೆಯ ಒಡಂಬಡಿಕೆ” ಹಸ್ತಾಂತರ ಮಾಡಿಕೊಳ್ಳಲಾಯಿತು.

ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆದವು.

ಕಾರ್ಯಕ್ರಮದಲ್ಲಿ ಶಾಸಕರಾದ ಗಣೇಶ್ ಹುಕ್ಕೇರಿ, ವಿಧಾನ ಪರಿಷತ್ ಸದಸ್ಯರಾದ ಡಾ. ಕೆ. ಗೋವಿಂದರಾಜ್, ಎ.ಪಿ. ರಂಗನಾಥ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ವಿ. ರಶ್ಮಿ ಮಹೇಶ್, ಶಾಲಾ ಶಿಕ್ಷಣ ಇಲಾಖೆಯ ಆಯುಕ್ತೆ ವಿದ್ಯಾಕುಮಾರಿ ಸೇರಿದಂತೆ ಇಲಾಖೆಯ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.


Share

You cannot copy content of this page