ಸಮಗ್ರ ಸುದ್ದಿ

ಸೌರಶಕ್ತಿಯಿಂದ 30 ಲಕ್ಷ ರೈತರ ಸಬಲೀಕರಣ:ಸಚಿವ ಪ್ರಲ್ಹಾದ್ ಜೋಶಿ |ಆಫ್ರಿಕಾ, ನೈಜೀರಿಯಾಕ್ಕೂ ಸೌರ ಯೋಜನೆಗಳಿಗೆ ನೆರವು

Share

ನವದೆಹಲಿ: ಸತತ ಮೂರನೇ ಬಾರಿ ಅಂತರಾಷ್ಟ್ರೀಯ ಸೌರ ಒಕ್ಕೂಟದ (ISA) ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವ ಭಾರತ, ಜಾಗತಿಕ ಮಟ್ಟದಲ್ಲಿ ಸೌರಶಕ್ತಿ ಸಹಕಾರವನ್ನು ಬಲಪಡಿಸುವ ಹಾಗೂ ನವೀಕರಿಸಬಹುದಾದ ಇಂಧನ ವಲಯದ ಪ್ರಯೋಜನಗಳನ್ನು ಎಲ್ಲ ರಾಷ್ಟ್ರಗಳಿಗೂ ತಲುಪಿಸುವ ನಿಟ್ಟಿನಲ್ಲಿ ಭಾರತ ಬದ್ಧವಾಗಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

ನವದೆಹಲಿಯಲ್ಲಿ ನಡೆಯುತ್ತಿರುವ “ಭಾರತ್ ನವೀಕರಿಸಬಹುದಾದ ಇಂಧನ ಶೃಂಗಸಭೆ ಮತ್ತು ಎಕ್ಸ್‌ಪೋ–2026” ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ‘ಒಂದು ಸೂರ್ಯ, ಒಂದು ಜಗತ್ತು, ಒಂದು ಗ್ರಿಡ್’ ಪರಿಕಲ್ಪನೆಯಡಿ ಜಾಗತಿಕ ಸೌರ ಸಹಕಾರಕ್ಕೆ ಭಾರತ ಪ್ರಾಶಸ್ತ್ಯ ನೀಡುತ್ತಿದೆ ಎಂದರು.

2015ರಲ್ಲಿ ಭಾರತ ಮತ್ತು ಫ್ರಾನ್ಸ್ ಜಂಟಿಯಾಗಿ ಅಂತರಾಷ್ಟ್ರೀಯ ಸೌರ ಒಕ್ಕೂಟವನ್ನು ಸ್ಥಾಪಿಸಿದ್ದವು. ಪ್ರಸ್ತುತ 130ಕ್ಕೂ ಹೆಚ್ಚು ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿರುವ ಈ ಒಕ್ಕೂಟವು ವಿಶೇಷವಾಗಿ ಜಾಗತಿಕ ದಕ್ಷಿಣ ರಾಷ್ಟ್ರಗಳ ನಡುವೆ ಸೌರಶಕ್ತಿ ಸಹಕಾರಕ್ಕೆ ಪ್ರಮುಖ ವೇದಿಕೆಯಾಗಿ ಬೆಳೆದಿದೆ ಎಂದು ಹೇಳಿದರು.

ಆಫ್ರಿಕಾ ಸೋಲಾರ್ ಫೆಸಿಲಿಟಿಗೆ ₹225 ಕೋಟಿ: ಆಫ್ರಿಕಾ ರಾಷ್ಟ್ರಗಳಲ್ಲಿ ಸೌರಶಕ್ತಿ ಯೋಜನೆಗಳಿಗೆ ಉತ್ತೇಜನ ನೀಡಲು 200 ಮಿಲಿಯನ್ ಡಾಲರ್ ಮೊತ್ತದ ‘ಆಫ್ರಿಕಾ ಸೋಲಾರ್ ಫೆಸಿಲಿಟಿ’ ಸ್ಥಾಪಿಸಲಾಗುತ್ತಿದೆ. ಇದಕ್ಕೆ ಭಾರತ ಸುಮಾರು ₹225 ಕೋಟಿ (25 ಮಿಲಿಯನ್ ಡಾಲರ್) ಕೊಡುಗೆ ನೀಡಲು ಬದ್ಧವಾಗಿದೆ ಎಂದು ಘೋಷಿಸಿದರು.

ನೈಜೀರಿಯಕ್ಕೆ 300 ಮಿ. ಡಾಲರ್ ನಿಧಿ: ನೈಜೀರಿಯಾದಲ್ಲಿ 300 ಮಿಲಿಯನ್ ಡಾಲರ್ ಮೊತ್ತದ ವಿಕೇಂದ್ರೀಕೃತ ನವೀಕರಿಸಬಹುದಾದ ಇಂಧನ ನಿಧಿಯನ್ನೂ ರೂಪಿಸಲಾಗುತ್ತಿದೆ ಎಂದರು.

ಫಿಜಿ, ಮಡಗಾಸ್ಕರ್, ಕೊಮೊರೊಸ್ ಮತ್ತು ಸೆಶೆಲ್ಸ್ ರಾಷ್ಟ್ರಗಳಲ್ಲಿ ಸೌರಶಕ್ತಿ ಬಳಕೆ ಮೂಲಕ ಆಸ್ಪತ್ರೆ, ಶಾಲೆಗಳಿಗೆ ವಿದ್ಯುತ್ ಪೂರೈಕೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಕೃಷಿ ಉತ್ಪನ್ನಗಳ ಶೀತಲ ಸಂಗ್ರಹಣೆಗೆ ನೆರವು ನೀಡಲಾಗುತ್ತಿದೆ. ಸಣ್ಣ ದ್ವೀಪ ರಾಷ್ಟ್ರಗಳಲ್ಲಿಯೂ ಸೌರಶಕ್ತಿ ಮತ್ತು ಇಂಧನ ಸಂಗ್ರಹಣಾ ಯೋಜನೆಗಳನ್ನು ವಿಸ್ತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

30 ಲಕ್ಷ ರೈತರಿಗೆ ಸೌರಶಕ್ತಿ ಸೌಲಭ್ಯ: ಸೌರಶಕ್ತಿ ಮೂಲಕ 30 ಲಕ್ಷ ರೈತರನ್ನು ಸಬಲೀಕರಣಗೊಳಿಸುವುದು ಮತ್ತು ಕೃಷಿ ಕ್ಷೇತ್ರದಲ್ಲಿ ಅಗ್ರಿ-ಪಿವಿ (Agri-PV) ವ್ಯವಸ್ಥೆಯನ್ನು ವಿಸ್ತರಿಸುವುದು ಒಕ್ಕೂಟದ ಪ್ರಮುಖ ಗುರಿಯಾಗಿದೆ. ಭಾರತದ ಪಿಎಂ-ಕುಸುಮ್ ಯೋಜನೆಯು ಸೌರಶಕ್ತಿ ಆಧಾರಿತ ಕೃಷಿಯಿಂದ ನೀರಾವರಿ ವೆಚ್ಚ ಕಡಿಮೆ ಮಾಡುವುದರ ಜತೆಗೆ ರೈತರಿಗೆ ಹೆಚ್ಚುವರಿ ಆದಾಯ ಗಳಿಸುವ ಅವಕಾಶ ಕಲ್ಪಿಸಿದೆ. ಇದೇ ಮಾದರಿಯನ್ನು ಆಫ್ರಿಕಾ ಸೇರಿದಂತೆ ಸದಸ್ಯ ರಾಷ್ಟ್ರಗಳಲ್ಲಿಯೂ ಅಳವಡಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಪ್ರಲ್ಹಾದ್ ಜೋಶಿ ಹೇಳಿದರು.

ವಿದೇಶಗಳಲ್ಲಿ ಸೌರ ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸಲು 17 ಸೌರ ತಂತ್ರಜ್ಞಾನ ಅನ್ವಯಿಕ ಸಂಪನ್ಮೂಲ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಜತೆಗೆ ಶೈನ್ (SHINE) ಜಾಗತಿಕ ಸಾಮರ್ಥ್ಯ ಕೇಂದ್ರ ಮತ್ತು ಕೃತಕ ಬುದ್ಧಿಮತ್ತೆ ಆಧಾರಿತ ಐಎಸ್‌ಎ ಅಕಾಡೆಮಿಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಕೌಶಲ ಅಭಿವೃದ್ಧಿ, ತಾಂತ್ರಿಕ ಸಾಮರ್ಥ್ಯ ವೃದ್ಧಿ ಮತ್ತು ಹೊಸ ತಂತ್ರಜ್ಞಾನಗಳ ಬಳಕೆಗೆ ಆದ್ಯತೆ ನೀಡಲಾಗುತ್ತಿದೆ ಎಂದರು.

ಕೃತಕ ಬುದ್ಧಿಮತ್ತೆ ಬೆಳವಣಿಗೆಯೊಂದಿಗೆ ಭವಿಷ್ಯದಲ್ಲಿ ಕೈಗೆಟುಕುವ ದರದ, ವಿಶ್ವಾಸಾರ್ಹ ಹಾಗೂ ಸ್ವಚ್ಛ ವಿದ್ಯುತ್ ಪೂರೈಕೆಯ ಅಗತ್ಯ ಮತ್ತಷ್ಟು ಹೆಚ್ಚಲಿದೆ. ಸೌರಶಕ್ತಿಯ ಭವಿಷ್ಯವನ್ನು ರೂಪಿಸಲು ಎಲ್ಲ ರಾಷ್ಟ್ರಗಳ ಸಹಭಾಗಿತ್ವ, ನಿರಂತರ ಹೂಡಿಕೆ ಮತ್ತು ಸಾಮೂಹಿಕ ಪ್ರಯತ್ನ ಅಗತ್ಯ ಎಂದು ಅಭಿಪ್ರಾಯಪಟ್ಟರು.

ಸತತ ಮೂರನೇ ಬಾರಿಗೆ ಭಾರತಕ್ಕೆ ಅಧ್ಯಕ್ಷ ಸ್ಥಾನ ನೀಡಿದ ಎಲ್ಲ ಸದಸ್ಯ ರಾಷ್ಟ್ರಗಳಿಗೆ ಕೃತಜ್ಞತೆ ಸಲ್ಲಿಸಿದ ಸಚಿವ ಪ್ರಲ್ಹಾದ ಜೋಶಿ, ಐಎಸ್‌ಎ ಸಹ-ಅಧ್ಯಕ್ಷ ಸ್ಥಾನಕ್ಕೆ ಮರು ಆಯ್ಕೆಯಾದ ಫ್ರಾನ್ಸ್‌ಗೂ ಅಭಿನಂದನೆ ಸಲ್ಲಿಸಿದರು.

ಸುದ್ದಿಗೋಷ್ಠಿಯಲ್ಲಿ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಕಾರ್ಯದರ್ಶಿ ಸಂತೋಷ್ ಕುಮಾರ್ ಸಾರಂಗಿ, ಐಎಸ್‌ಎ ಮಹಾನಿರ್ದೇಶಕ ಆಶಿಷ್ ಖನ್ನಾ ಸೇರಿದಂತೆ ವಿವಿಧ ದೇಶಗಳ ಸಚಿವರು ಹಾಗೂ ಪ್ರತಿನಿಧಿಗಳು ಉಪಸ್ಥಿತರಿದ್ದರು.


Share

You cannot copy content of this page