ಹಿರಿಯೂರು: ನಾನು ಹಾಗೂ ನಮ್ಮ ಸಚಿವರು ಹಿರಿಯೂರು ಕ್ಷೇತ್ರಕ್ಕೆ ಬರಿಗೈನಲ್ಲಿ ಬಂದಿಲ್ಲ. ಕ್ಷೇತ್ರಕ್ಕೆ ಅಭಿವೃದ್ಧಿಯ ಲಕ್ಷಿಯನ್ನು ಕರೆತಂದಿದ್ದೇವೆ ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ಚಿತ್ರದುರ್ಗ ಜಿಲ್ಲೆ ಹಿರಿಯೂರಿನ ಧರ್ಮಪುರದಲ್ಲಿ ನೂತನ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ ಕಾಮಗಾರಿಗೆ ಸಿಎಂ ಡಿ ಕೆ ಶಿವಕುಮಾರ್ ಅವರು ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಕ್ಷೇತ್ರದ ಅಭಿವೃದ್ಧಿಗೆ ವಿವಿಧ ಇಲಾಖೆಗಳಿಂದ 2,200 ಕೋಟಿ ಮೊತ್ತದ ಯೋಜನೆಗಳ ಮಂಜೂರು
“2200 ಕೋಟಿಯಷ್ಟು ಮೊತ್ತದ ಕಾಮಗಾರಿಗಳನ್ನು ವಿವಿಧ ಇಲಾಖೆಗಳ ಮೂಲಕ ಆದೇಶ ಹೊರಡಿಸಿದ್ದೇವೆ. ಪಂಚಾಯತ್ ರಾಜ್ ಇಲಾಖೆ ಸಚಿವರಾದ ಈಶ್ವರ್ ಖಂಡ್ರೆ ಅವರು ಈ ಕ್ಷೇತ್ರದಲ್ಲಿ ಯೋಜನೆಗಳ ಜಾರಿಗೆ ಮುಂದಾಗಿದ್ದಾರೆ. ಪ್ರತಿ ಊರಿನಲ್ಲಿ, ಹಳ್ಳಿಗಳ ರಸ್ತೆ ಏನಾಗಬೇಕು ಎಂದು ಪಟ್ಟಿ ತಯಾರು ಮಾಡಿದ್ದೇವೆ. ಮಾಜಿ ಶಾಸಕರಾದ ಪೂರ್ಣಿಮಾ ಅವರು ಅವರ ಪತಿ ಶ್ರೀನಿವಾಸ್ ಅವರು ನಿಮ್ಮ ಮುಂದೆ ಕೂತಿದ್ದಾರೆ. ನಾನು ಅವರ ತಂದೆ ಒಟ್ಟಾಗಿ ಕೆಲಸ ಮಾಡಿದವರು. ಹಿರಿಯೂರಿನಲ್ಲಿ ಜನರ ವಿಶ್ವಾಸ ಗಳಿಸಿ ಕೆಲಸ ಮಾಡಿದ್ದಾರೆ. ಅವರು ಈ ಹಿಂದೆ ಬೇರೆ ಪಕ್ಷದಿಂದ ಸ್ಪರ್ಧಿಸಿದ್ದರೂ ಈ ರಾಜ್ಯಕ್ಕೆ ಭವಿಷ್ಯ ಇರುವುದು ಕಾಂಗ್ರೆಸ್ ನಿಂದ ಮಾತ್ರ ಎಂದು ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಿ ನಿಮ್ಮ ಸೇವೆ ಮಾಡುತ್ತಿದ್ದಾರೆ” ಎಂದು ತಿಳಿಸಿದರು.
ಸ್ನೇಹಿತ ಸುಧಾಕರ್ ಬದುಕಿದ್ದರೆ ನನ್ನನ್ನು ಸಿಎಂ ಸ್ಥಾನದಲ್ಲಿ ನೋಡಿ ಬಹಳ ಖುಷಿಪಡುತ್ತಿದ್ದ
“ನಾನು ಈ ಕಾರ್ಯಕ್ರಮಕ್ಕೆ ಬಹಳ ದುಖಃದಿಂದ ಬಂದಿರುವೆ. ನಾನು ಸಿಎಂ ಆಗಿರುವಾಗ ಸುಧಾಕರ್ ಇದ್ದಿದ್ದರೆ ಆತ ಎಷ್ಟು ಸಂತೋಷ ಪಡುತ್ತಿದ್ದ ಎಂಬುದಕ್ಕೆ ನಮ್ಮ ಸಹೋದ್ಯೋಗಿಗಳೇ ಸಾಕ್ಷಿ. ಆತ ಸಾಯುವ 2 ತಿಂಗಳ ಮುನ್ನ. ನಾನು ಮಂತ್ರಿಯಾಗಿ ಇಲ್ಲದಿದ್ದರೂ ಚಿಂತೆ ಇಲ್ಲ. ನನ್ನ ಸ್ನೇಹಿತ ಡಿ ಕೆ ಶಿವಕುಮಾರ್ ಸಿಎಂ ಆಗಬೇಕು ಎಂದು ಹೇಳಿದ್ದ ಸ್ನೇಹಿತ. ಆತನ ಕನಸು, ಈ ಜನರ ಮೇಲೆ ಇಟ್ಟಿದ್ದ ಪ್ರೀತಿ ಅಪಾರ. ಆತನಿಗೆ ಜಾತಿ ಧರ್ಮ ಇರಲಿಲ್ಲ. ಎಲ್ಲರನ್ನು ಒಟ್ಟಾಗಿ ಕರೆದುಕೊಂಡು ಹೋಗುತ್ತಿದ್ದ. ನಾನು ಪ್ರಜಾಸೇವಕನಾಗಿ ನಿಮ್ಮ ಮುಂದೆ ನಿಂತಿರುವೆ” ಎಂದರು.
“ಸಮಾಜಕಲ್ಯಾಣ ಇಲಾಖೆಯಿಂದ ಎಲ್ಲಾ ಜಾತಿ, ಸಮುದಾಯಗಳಿಗೆ ಸಂಬಂಧಿಸಿದ ಸಮುದಾಯ ಭವನಗಳನ್ನು ನಿರ್ಮಿಸಲು ಆದೇಶ ನೀಡಲಾಗಿದೆ. ಬಾಲಕೃಷ್ಣ ಅವರು ನಿಮ್ಮ ಸಮಸ್ಯೆ ಹೇಳಿದ್ದಾರೆ. ಒಕ್ಕಲಿಗರ ಸಮುದಾಯ ಭವನ ಬೇಕು ಎಂದರು ಅದಕ್ಕೆ 5 ಕೋಟಿ ರೂ. ಅನುದಾನ ಮಂಜೂರಾತಿ ನೀಡಿದ್ದೇನೆ. ಗೊಲ್ಲರ ಸಮುದಾಯ ಭವನ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು, ಕನಕ ಭವನಕ್ಕೂ ಅನುದಾನ ನೀಡಲಾಗುವುದು. ಈ ಸರ್ಕಾರಕ್ಕೆ ನೀವು ಶಕ್ತಿ ತುಂಬಬೇಕು” ಎಂದು ಕರೆ ನೀಡಿದರು.
“ಜಮೀರ್ ಅಹ್ಮದ್ ಹಾಗೂ ಪರಮೇಶ್ವರ್ ಅವರು ಈ ವರ್ಷ ರಾಜ್ಯದಲ್ಲಿ ನಿವೇಶನರಹಿತರಿಗೆ 5 ಲಕ್ಷ ನಿವೇಶನಗಳನ್ನು ಹಂಚಿಕೆ ಮಾಡಲು ಮುಂದಾಗಿದ್ದಾರೆ. ಸರ್ಕಾರಿ ಜಾಗದಲ್ಲಿ ಅದು ಇಲ್ಲವಾದರೆ ಖಾಸಗಿ ಜಮೀನು ಖರೀದಿಸಿ ನಿವೇಶನ ನೀಡಲಾಗುವುದು. ಈ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು ಸರ್ಕಾರಿ ಜಮೀನಿನ ಪಟ್ಟಿ ನೀಡಿದ್ದಾರೆ. ಪ್ರಜಾಸೇವೆ ಮೂಲಕ ನಿವೇಶಕ್ಕೆ ಬರುವ ಅರ್ಜಿಗಳಿಗೆ ಸ್ಪಂದಿಸಲಾಗುವುದು. ಪ್ರಜಾಸೇವೆ ಅಭಿಯಾನದಲ್ಲಿ ನೀವು ನಿಮ್ಮ ಮನವಿಯನ್ನು ಸರ್ಕಾರ ಕೊಡುವ ಅರ್ಜಿಯಲ್ಲಿ ನಮೂದಿಸಿ ಕೊಟ್ಟರೆ ನಿಮ್ಮ ಸಮಸ್ಯೆಗೆ ಪರಿಹಾರ ನೀಡುವ ಪ್ರಯತ್ನ ಮಾಡಲಾಗುವುದು. ಇನ್ನು ಭೂಮಿ ಗ್ಯಾರಂಟಿ ಮೂಲಕ ಎಲ್ಲರ ಆಸ್ತಿ ದಾಖಲೆಗಳನ್ನು ಸರಿಪಡಿಸಿಕೊಡಲು ಸರ್ಕಾರ ಮುಂದಾಗಿದೆ. ಸಣ್ಣ ನಿವೇಶನವಿದ್ದರೂ ಅವರ ದಾಖಲೆಗೆ ಅವರ ಫೋಟೋಗಳನ್ನು ಹಾಕಿ, ಪೋಡಿ ಮಾಡಿ ದಾಖಲೆ ನೀಡಲಾಗುವುದು. ಇದಕ್ಕಾಗಿ ಆಂದೋಲನ ಮಾಡುತ್ತಿದ್ದೇವೆ. ವಿಜಯನಗರದಲ್ಲಿ 1.11 ಲಕ್ಷ ಬುಡಕಟ್ಟು ಜನರಿಗೆ ಅವರ ಜಮೀನಿನ ದಾಖಲೆ ಪತ್ರಗಳನ್ನು ಉಚಿತವಾಗಿ ಹಂಚಿಕೆ ಮಾಡಲಾಗಿದೆ. ಇಂತಹ ಕೆಲಸ ಬಿಜೆಪಿ ಹಾಗೂ ದಳದವರು ಯಾಕೆ ಮಾಡಲಿಲ್ಲ?” ಎಂದು ಪ್ರಶ್ನಿಸಿದರು.
ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ಗಾಗಿ ಈ ವರ್ಷ 30 ಸಾವಿರ ಕೋಟಿ
“ನಮ್ಮ ಸರ್ಕಾರದ 10 ಸಚಿವರುಗಳು ತಮ್ಮ ಇಲಾಖೆಯಿಂದ ಈ ಕ್ಷೇತ್ರದಲ್ಲಿ ಆಗಬೇಕಿರುವ ಕೆಲಸಗಳನ್ನು ಮಾಡಿಸುತ್ತಿದ್ದಾರೆ. ಆಮೂಲಕ ಸುಧಾಕರ್ ಅವರನ್ನು ಆಯ್ಕೆ ಮಾಡಿ ರಾಜ್ಯದಲ್ಲಿ 136 ಸೀಟುಗಳನ್ನು ಕೊಟ್ಟ ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತಿದ್ದೇವೆ. ನಮ್ಮ ಸರ್ಕಾರ ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡುತ್ತಿದ್ದು, ಅದಕ್ಕಾಗಿ ವಾರ್ಷಿಕ 22 ಸಾವಿರ ಕೋಟಿ ಹಣ ನೀಡುತ್ತಿದೆ. ಈ ವರ್ಷ ಬರ ಹಿನ್ನೆಲೆಯಲ್ಲಿ ಹೆಚ್ಚಿನ ವಿದ್ಯುತ್ ಬಳಸಿರುವ ಪರಿಣಾಮ ಈ ವರ್ಷ 30 ಸಾವಿರ ಕೋಟಿ ಹಣ ವೆಚ್ಚ ಮಾಡಬೇಕಾಗಿದೆ. ನಾವು 200ಕ್ಕೂ ಹೆಚ್ಚು ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ನಿಮ್ಮ ಸಮಸ್ಯೆ ನಮಗೆ ಅರ್ಥವಾಗುತ್ತದೆ. ನಿಮ್ಮ ಜಮೀನಿಗೆ ನೀರು ಒದಗಿಸಬೇಕು ಎಂದು ಸುಧಾಕರ್ ಅವರು ಮಾತು ಕೊಟ್ಟಿದ್ದರು. ಜಯಚಂದ್ರ ಅವರು ನಿಮ್ಮ ಬಗ್ಗೆ ಅಪಾರ ವಿಶ್ವಾಸ ಇಟ್ಟುಕೊಂಡು ಈ ತಾಲ್ಲೂಕಿನ ನೀರಾವರಿ ಬಗ್ಗೆ ಆಲೋಚನೆ ಮಾಡುತ್ತಿದ್ದಾರೆ. ಆಂಜನೇಯ ಅವರು ಈ ಜಿಲ್ಲೆಯ ಜನರ ಬದುಕಿಗಾಗಿ ಶ್ರಮಿಸುತ್ತಿದ್ದಾರೆ” ಎಂದರು.
“ಈ ಬಸ್ ನಿಲ್ದಾಣಕ್ಕೆ 3.5 ಕೋಟಿ ರೂ ವೆಚ್ಚದ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ್ದೇವೆ. ನಿಮ್ಮ ತಾಲ್ಲೂಕಿನ ನೀರಾವರಿ ಯೋಜನೆ ಬಗ್ಗೆ ಇಟ್ಟ ಬೇಡಿಕೆಗೆ ನಾವು ಮಂಜೂರಾತಿ ನೀಡಿ, ಟೆಂಡರ್ ಕರೆದು, ಈಗಾಗಲೇ ಪರಿಕ್ಷಾರ್ಥ ನೀರು ಹರಿಸಲಾಗಿದೆ. ನಾನು ಖಾಲಿ ಮಾತು ಆಡುವವನಲ್ಲ. ಅಕ್ಬರ್ ಹಾಗೂ ಬೀರ್ಬಲ್ ನಡುವೆ ಸತ್ಯ ಹಾಗೂ ಸುಳ್ಳಿನ ನಡುವಣ ವ್ಯತ್ಯಾಸದ ಬಗ್ಗೆ ಚರ್ಚೆಯಾಗುವಾಗ ಬೀರ್ ಬಲ್ ಹೇಳುತ್ತಾನೆ ಇವರಡರ ಮಧ್ಯೆ ಇರುವುದು ನಾಲ್ಕು ಬೆರಳಿನ ವ್ಯತ್ಯಾಸ. ಅಂದರೆ ಕಣ್ಣಲ್ಲಿ ನೋಡುವುದು ಸತ್ಯ, ಕಿವಿಯಲ್ಲಿ ಕೇಳುವುದು ಸುಳ್ಳು, ಇವೆರಡರ ನಡುವೆ ಇರುವುದು ನಾಲ್ಕು ಬೆರಳಿನ ಅಂತರ ಎಂದು ವಿವರಿಸುತ್ತಾನೆ. ರಾಜ್ಯದ ಪ್ರಜಾಸೇವಕನಾಗಿ, ಸುಧಾಕರ್ ಆತ್ಮೀಯ ಸ್ನೇಹಿತನಾಗಿ ನಿಮ್ಮ ಮುಂದೆ ನಿಂತಿದ್ದೇವೆ” ಎಂದು ಹೇಳಿದರು.
ನುಡಿದಂತೆ ನಡೆದಿದ್ದೇವೆ
“ನಾವು ಐದು ಗ್ಯಾರಂಟಿ ಘೋಷಣೆ ಮಾಡಿದಾಗ ಕೆಲವರು ನಕ್ಕರು. ಉಚಿತ ಬಸ್ ಪ್ರಯಾಣದಿಂದ ಮಹಿಳೆಯರು ಹಾದಿ ತಪ್ಪಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು. ಪ್ರಧಾನಮಂತ್ರಿಗಳು ಈ ಯೋಜನೆಗಳ ಜಾರಿ ಅಸಾಧ್ಯ ಎಂದರು. ನಾವು ಐದೂ ಗ್ಯಾರಂಟಿ ಯೋಜನೆ ಜಾರಿಗೆ ತಂದು ಮನೆಗೆ 200 ಯೂನಿಟ್ ವರೆಗೂ ಉಚಿತ ವಿದ್ಯುತ್, ಮನೆ ಯಜಮಾನಿಯರಿಗೆ ಮಾಸಿಕ 2 ಸಾವಿರ, ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಅನ್ನಭಾಗ್ಯದಲ್ಲಿ 10 ಕೆ.ಜಿ, ನಿರುದ್ಯೋಗ ಯುವಕರಿಗೆ ಯುವನಿಧಿ ನೀಡುತ್ತಿದ್ದೇವೆ. ಇಂತಹ ಒಂದು ಕೆಲಸವನ್ನು ಬಿಜೆಪಿ ಹಾಗೂ ಜೆಡಿಎಸ್ ಸರ್ಕಾರ ನೀಡಿವೆಯೇ?” ಎಂದು ಪ್ರಶ್ನಿಸಿದರು.
ನನಗೆ ಕನಕಪುರದಷ್ಟೇ, ಹಿರಿಯೂರು ಮುಖ್ಯ
“ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಮಾತ್ರ ಚೆಂದ. ಈ ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದ ಕಾರಣ ಈ ಯೋಜನೆಗಳು ಜಾರಿಗೆ ಬಂದವು. ಜತೆಗೆ ಭೂ ಗ್ಯಾರಂಟಿ ಯೋಜನೆ ನೀಡಿದ್ದೇವೆ. ಧರ್ಮಾಪುರ ಹೊಬಳಿಗಳ ಕೆರೆ ತುಂಬಿಸಿ ಈ ಭಾಗದ ರೈತರ ಬದುಕು ಬದಲಿಸುವ ಐತಿಹಾಸಿಕ ತೀರ್ಮಾನ ಮಾಡಿರುವುದು ನಿಮ್ಮ ಸರ್ಕಾರ. ನಾವು ಕೊಟ್ಟ ಮಾತು ಉಳಿಸಿಕೊಳ್ಳುತ್ತೇವೆ. ನೀವು ಇಂದು ಕೊಟಿರುವ ಎಲ್ಲಾ ಅರ್ಜಿಗಳನ್ನು ಪರಿಶೀಲಿಸುವೆ. ನನಗೆ ಕನಕಪುರ ಕ್ಷೇತ್ರ ಎಷ್ಟು ಮುಖ್ಯವೋ, ಹಿರಿಯೂರು ಕ್ಷೇತ್ರವೂ ಅಷ್ಟೇ ಮುಖ್ಯ. ನಿಮ್ಮ ಸೇವೆಗೆ ನಾನು ಬದ್ಧನಾಗಿದ್ದೇನೆ” ಎಂದರು.
ಕೇಂದ್ರ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿದ ಅನುದಾನ ಕೊಟ್ಟಿಲ್ಲ
“ಮುಂಬರುವ ಉಪಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಒಟ್ಟಾಗಿ ಅಭ್ಯರ್ಥಿ ನಿಲ್ಲಿಸಲಿ, ನಮ್ಮ ಕುಟುಂಬದ ಸದಸ್ಯರಾದ ನಿಮ್ಮ ಭಾವನೆ, ಬದುಕಿನಲ್ಲಿ ಭಾಗವಾಗಿ ಈ ಸರ್ಕಾರ ನಿಮ್ಮ ಜತೆಗಿದೆ. 14 ಗ್ರಾಮಗಳಿಗೆ ಭವನಗಳು, 7 ಕೋಟಿ ಮೊತ್ತದ ಮೂಲಸೌಲಭ್ಯ ಯೋಜನೆ ನೀಡಿದೆ. ನಾನು ರಾಜಕೀಯದಲ್ಲಿ ಎಂದಿಗೂ ಕೊಟ್ಟ ಮಾತನ್ನು ತಪ್ಪಿಲ್ಲ. ಕೆಲವರಿಗೆ ಸುಳ್ಳೇ ಮನೆ ದೇವರು. ಯಡಿಯೂರಪ್ಪ ಅವರ ಸರ್ಕಾರದಲ್ಲಿ ನಿಮ್ಮ ಬದುಕಿನಲ್ಲಿ ಏನಾದರೂ ಸಣ್ಣ ಕೊಡುಗೆ ನೀಡಿದ್ದಾರಾ? ನಮ್ಮ ಬೆಂಬಲದಿಂದ ಕುಮಾರಸ್ವಾಮಿ ಅವರ ಕಾಲದಲ್ಲಿ ಸ್ವಲ್ಪ ಪ್ರಮಾಣದಲ್ಲಿ ರೈತರ ಸಾಲ ಮನ್ನಾ ಮಾಡಲಾಗಿತ್ತು. ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ಪ್ರಧಾನಿ ಮೋದಿ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5400 ಕೋಟಿ ಅನುದಾನ ಘೋಷಿಸಿದ್ದರು. ಇವತ್ತಿನವರೆಗೂ ಒಂದು ಬಿಡಿಗಾಸು ಕೊಟ್ಟಿಲ್ಲ. ಆದರೂ ಯಾವ ನೈತಿಕತೆ ಇಟ್ಟುಕೊಂಡು ಬಂದು ನಿಮ್ಮ ಬಳಿ ಮತ ಕೇಳುತ್ತಾರೆ?” ಎಂದು ಕಿಡಿಕಾರಿದರು.
ಧರ್ಮಪುರ ಹೋಬಳಿಯಲ್ಲೇ 15 ಸಾವಿರ ಮತಗಳನ್ನು ನೀಡಬೇಕು
“ಎನ್ ಡಿಎ ಪರವಾಗಿ ಬೊಮ್ಮಾಯಿ, ಯಡಿಯೂರಪ್ಪ, ವಿಜಯೇಂದ್ರ, ಅಶೋಕ್, ಕಾರಜೋಳ, ಕುಮಾರಸ್ವಾಮಿ ಅವರು ಸೇರಿದಂತೆ ಯಾರೇ ಬಂದರೂ ನಿಮ್ಮದು ಖಾಲಿ ಡಬ್ಬಾ, ಖಾಲಿ ಮಾತು ಎಂದು ಕೇಳಬೇಕು. ಕ್ಷೇತ್ರಕ್ಕಾಗಿ ಕೆಲಸ ಮಾಡಿದ ನನ್ನ ಸ್ನೇಹಿತ ಸುಧಾಕರನಿಗಾಗಿ ಜನ ಉಪಕಾರಸ್ಮರಣೆ ಹೊಂದಿದ್ದಾರೆ. ಈ ಹೋಬಳಿ ಜನ ಆರು ಸಾವಿರ ಮತ ನೀಡಿ ಗೆಲ್ಲಿಸಿದ್ದೀರಿ. ಆತನ ಸ್ನೇಹಿತನಾಗಿ ನಾನು ಸಿಎಂ ಆಗಿದ್ದು, ಈ ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡಿದ್ದೇನೆ. ನೀವು ಈ ಉಪಚುನಾವಣೆಯಲ್ಲಿ ಈ ಹೊಬಳಿಯಿಂದ ಕನಿಷ್ಠ 15 ಸಾವಿರ ಮತಗಳನ್ನು ನೀವು ನೀಡಬೇಕು” ಎಂದು ಮನವಿ ಮಾಡಿದರು.
ಪ್ರತ್ಯೇಕ ತಾಲ್ಲೂಕು ರಚನೆ ಬೇಡಿಕೆ ಬಗ್ಗೆ ಪರಿಶೀಲನೆ
“ನೀವು ತಾಲ್ಲೂಕು ವಿಚಾರ ಕೇಳಿದ್ದೀರಿ. ನಿಮ್ಮ ಮನವಿ ಬಗ್ಗೆ ನಮಗೆ ಚಿಂತನೆ ಇದೆ. ಯಾವ ಹೊಬಳಿಗಳನ್ನು ಸೇರಿಸಿಕೊಂಡು ಎಷ್ಟು ಜನಸಂಖ್ಯೆಯೊಂದಿಗೆ ತಾಲ್ಲೂಕು ಮಾಡಬೇಕು ಎಂದು ನನಗೆ ಆಲೋಚನೆ ಇದೆ. ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆದಾಗ ಏಯಿತು? ಚನ್ನಪಟ್ಟಣದಲ್ಲಿ ಕುಮಾರಣ್ಣನ ಮಗನನ್ನು ಬಲವಂತವಾಗಿ ನಿಲ್ಲಿಸಿದರು. ನಮ್ಮ ಅಭ್ಯರ್ಥಿ ಯೋಗೇಶ್ವರ್ ಅವರು 25 ಸಾವಿರ ಅಂತರದಲ್ಲಿ ಗೆದ್ದರು. ಶಿಗ್ಗಾಂವಿಯಲ್ಲಿ ಬೊಮ್ಮಾಯಿ ಅವರ ಪುತ್ರನ ವಿರುದ್ಧ ಪೈಲ್ವಾನ್ ಪಠಾಣ್ ಅವರು ಗೆದ್ದರು. ಇಬ್ಬರು ಮಾಜಿ ಮುಖ್ಯಮಂತ್ರಿಗಳ ಮಕ್ಕಳನ್ನು ಜನ ಸೋಲಿಸಿದರು. ಇಲ್ಲೂ ಯಾರು ಬಂದು ನಿಲ್ಲುತ್ತಾರೋ ನಿಲ್ಲಲಿ. ಯಾವುದೇ ದೊಡ್ಡ ನಾಯಕರು ಬೇಕಾದರೂ ಬಂದು ನಿಲ್ಲಲಿ. ಆದರೆ ನಿಮ್ಮ ಋಣ ತೀರಿಸಲು ನಾನು, ನಮ್ಮ ಸರ್ಕಾರ ನಿಮ್ಮ ಜತೆ ಇದೆ. ಇಲ್ಲಿರುವ ಎಲ್ಲಾ ಪಕ್ಷಗಳ ನಾಯಕರಿಗೆ ಒಂದು ಮಾತು ಹೇಳುತ್ತೇನೆ. ಆ ಪಕ್ಷ ಈಗ ಏನು ಆಗುವುದಿಲ್ಲ. ಈ ರಾಜ್ಯದಲ್ಲಿ 2028ರಲ್ಲೂ ನಿಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಅವರಿಗೆ ಅಧಿಕಾರ ಇದ್ದಾಗಲೇ ಏನೂ ಮಾಡಲಿಲ್ಲ, ಅಧಿಕಾರ ಇಲ್ಲದಿದ್ದಾಗ ಏನು ಮಾಡಲು ಸಾಧ್ಯ? ಎಂದು ಹಳ್ಳಿಗಳಲ್ಲಿ ಎಲ್ಲರಿಗೂ ಹೇಳಿ ನಮ್ಮ ಪಕ್ಷಕ್ಕೆ ಕೆರೆದುಕೊಂಡು ಬನ್ನಿ” ಎಂದು ಕರೆ ನೀಡಿದರು.
ಅಭ್ಯರ್ಥಿ ಯಾರಾಗಬೇಕು ಎಂದು ಸರ್ವೇ ಮಾಡಿಸಿರುವೆ
“ನಾನು ಇಲ್ಲಿಗೆ ಬಂದು ಹಾಗೇ ಹೋಗುವುವವನಲ್ಲ. ನಿಮ್ಮ ಸೇವೆಗೆ ಸಂಕಲ್ಪ ಮಾಡಿದ್ದೇನೆ. ನಾವು ಕೊಟ್ಟ ಮಾತು ಉಳಿಸಿಕೊಳ್ಳುತ್ತೇವೆ. ಬರಗಾಲ ವಿಚಾರದಲ್ಲಿ ಕೇಂದ್ರ ಸರ್ಕಾರ ಇದುವರೆಗೂ ಒಂದು ರೂ. ನೀಡಿಲ್ಲ. ನಾನು ಕೆರೆಗಳಿಗೆ ನೀರು ತುಂಬಿಸಲು ಆದೇಶ ಮಾಡಿದ್ದೇನೆ. ರೈತರು ನೀಡಿರುವ ಪಟ್ಟಿಯಲ್ಲಿನ ಸಮಸ್ಯೆ ಬಗೆಹರಿಸಲಾಗುವುದು. ನಾನು ಚುನಾವಣೆ ಸಮಯದಲ್ಲಿ ಮಾತ್ರ ಬಂದು ಹೋಗುವವರಲ್ಲ. ನಿಮ್ಮ ಜತೆ ಇದ್ದು ನಿಮ್ಮ ಸೇವೆ ಮಾಡುವವರು. ನಾನು ಈಗ ಕಾಂಗ್ರೆಸ್ ಪಕ್ಷದ ಅಧ್ಯಕ್ಷನಲ್ಲ. ಆದರೂ ಉಪಚುನಾವಣೆಯಲ್ಲಿ ಯಾರನ್ನು ಕಣಕ್ಕೆ ಇಳಿಸಬೇಕು ಎಂದು ನಾಲ್ಕು ಸರ್ವೇ ಮಾಡಿಸಿದ್ದೇನೆ. ನಿಮ್ಮ ಅಭ್ಯರ್ಥಿಯಾಗಿ ನಾನೇ ಇದ್ದೇನೆ. ಈ ಡಿ ಕೆ ಶಿವಕುಮಾರ್ ನಿಮ್ಮ ಅಭ್ಯರ್ಥಿ. ಧರ್ಮಪುರದ ಜನ ಧರ್ಮವನ್ನು ಕಾಪಾಡುವವರು, ಧರ್ಮದಿಂದ ಮತಹಾಕಿ, ನಿಮ್ಮ ಸೇವೆ ಮಾಡುವ ಪಕ್ಷವನ್ನು ಗೆಲ್ಲಿಸಬೇಕು” ಎಂದು ತಿಳಿಸಿದರು.
