ಸಮಗ್ರ ಸುದ್ದಿ

ಉಡುಪಿ ಜಿಲ್ಲೆಯಲ್ಲಿ ಭೂ ಮಂಜೂರಾತಿ, ಸರಕಾರಿ ಜಾಗದಲ್ಲಿ ಕಟ್ಟಿದ ಮನೆಗಳ ಸಕ್ರಮಾತಿಗೆ ಇರುವ ಅಡೆತಡೆ ನಿವಾರಣೆಗೆ ಸಚಿವ ರಿಜ್ವಾನ್ ಅರ್ಷದ್ ಸೂಚನೆ

Share

ಬೆಂಗಳೂರು: ಉಡುಪಿ ಜಿಲ್ಲೆಯಲ್ಲಿ ಅರಣ್ಯ ಹಾಗೂ ಕಂದಾಯ ಇಲಾಖೆಗಳಿಗೆ ಸಂಬಂಧಿಸಿದಂತೆ ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಆಹಾರ, ನಾಗರೀಕ ಪೂರೈಕೆ‌ ಹಾಗೂ ಗ್ರಾಹಕ ವ್ಯವಹಾರಗಳ ಸಚಿವರು ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ರಿಜ್ವಾನ್ ಅರ್ಷದ್ ಅವರು ಅರಣ್ಯ ಸಚಿವರಾದ ರಾಮಲಿಂಗಾರೆಡ್ಡಿ ಜೊತೆಗೂಡಿ ಉಡುಪಿ ಜಿಲ್ಲೆಯ ಶಾಸಕರು ಹಾಗೂ ಅಧಿಕಾರಿಗಳ ಜೊತೆ ಸುದೀರ್ಘ ಸಭೆ ನಡೆಸಿದರು.

ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಪ್ರಮುಖವಾಗಿ ಸರಕಾರಿ ಭೂಮಿಯಲ್ಲಿ ಕಟ್ಟಲಾಗಿರುವ ಮನೆಗಳ ಸಕ್ರಮೀಕರಣ, ಬಗರ್ ಹುಕುಂ ಜಮೀನುಗಳ ವಿತರಣೆಯಲ್ಲಾಗುತ್ತಿರುವ ವಿಳಂಬ, ಗೋಡಂಬಿ ಪ್ಲಾಂಟೇಶನ್ ಗಳ ಲೀಸ್ ಅವಧಿ ವಿಸ್ತರಣೆ ಹಾಗೂ ಡೀಮ್ಡ್ ಫಾರೆಸ್ಟ್ ಸರ್ವೆಯಲ್ಲಿನ ಅಡೆತಡೆಗಳ ಕುರಿತಂತೆ ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾಯಿತು.

ಶಾಸಕ ಸುನೀಲಕುಮಾರ್ ಮಾತನಾಡಿ ಜಿಲ್ಲೆಯಲ್ಲಿ 94 ಸಿ ಅಡಿಯಲ್ಲಿ ಸರಕಾರಿ ಜಾಗದಲ್ಲಿ ಕಟ್ಟಲಾಗಿರುವ ಮನೆಗಳ ಸಕ್ರಮಕ್ಕೆ ಸಲ್ಲಿಸಲಾದ ಅರ್ಜಿಗಳನ್ನು ಅಧಿಕಾರಿಗಳ ಹಲವು ಕಾರಣ ನೀಡಿ ತಿರಸ್ಕರಿಸುತ್ತಿದ್ದಾರೆ. ಸರಕಾರಿ ಜಾಗಗಳಲ್ಲಿ ಮನೆ ನಿರ್ಮಿಸಿಕೊಂಡವರೆಲ್ಲ ಬಡವರು. ಒಮ್ಮೆ ಅರ್ಜಿ ತಿರಸ್ಕರಿದರೆ ಜನರು ಮತ್ತೆ ಅರ್ಜಿ ಸಲ್ಲಿಸುವಂತಿಲ್ಲ.‌

ಅದೇ ರೀತಿ ಶಾಸಕರ ನೇತೃತ್ವದ ಸಮಿತಿಗಳು ವಿಲೇ‌ ಮಾಡಿದ ಬಗರ್ ಜಮೀನುಗಳ ಸರ್ವೇ ಕಾರ್ಯದಲ್ಲಿ ವಿಳಂಬವಾಗುತ್ತಿದೆ ಎಂದರು.

ಇದಕ್ಕೆ ಉತ್ತರಿಸಿದ ಕಂದಾಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಫಾರಂ 94ಸಿ ಅಡಿಯಲ್ಲಿ ಮನೆಗಳ ಸಕ್ರಮಕ್ಕೆ ಆಗುತ್ತಿರುವ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಬಗೆಹರಿಸಲಾಗುವುದು ಎಂದರು.

ಸಚಿವ ರಿಜ್ವಾನ್ ಅರ್ಷದ್ ಸೂಚನೆ ಮೇರೆಗೆ ರಾಜೇಂದರ್ ಕುಮಾರ್ ಕಟಾರಿಯಾ ಅವರು ಸದ್ಯದಲ್ಲೇ ಕಂದಾಯ ಇಲಾಖೆಯ ತಾಂತ್ರಿಕ ಸಮಿತಿಯನ್ನು ಉಡುಪಿ ಜಿಲ್ಲೆಗೆ ಕಳುಹಿಸಿ ಭೂಮಿ ವಿತರಣೆ ಹಾಗೂ ಸರ್ವೇ ಸಂಬಂಧಿತ ಎಲ್ಲ ಸಮಸ್ಯೆಗಳ ಅಧ್ಯಯನ ಮಾಡಿ ಪರಿಹಾರ ಕಂಡುಹಿಡಿಯಲಾಗುವುದು ಎಂದರು.

ಬಗರ್ ಹುಕಂ ಭೂಮಿ ಮಂಜೂರಿಗೆ ಸಂಬಂಧಿಸಿದಂತೆ ರೀಜನಲ್ ಕಮೀಷನರ್ ನೇತೃತ್ವದಲ್ಲಿ ಒಂದು ಸಮಿತಿ ರಚಿಸಿದ್ದು ನೈಜ ಅರ್ಜಿಗಳನ್ನು ಪರಗಣಿಸಲಾಗುವುದು ಎಂದು ಕಟಾರಿಯಾ ತಿಳಿಸಿದರು.

ಶಾಸಕ ಕಿರಣಕುಮಾರ ಕೊಡ್ಗಿ ಜಿಲ್ಲೆಯಲ್ಲಿ ಗೋಡಂಬಿ ಪ್ಲಾಂಟೇಶನ್ ಗಳಿಗೆ ನೀಡಲಾಗಿರುವ ಜಮೀನುಗಳ ಲೀಸ್ ಅವಧಿ ಮುಕ್ತಾಯಗೊಂಡಿದ್ದು ಅವುಗಳ ನವೀಕರಣ ಮಾಡಬೇಕೆಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕಟಾರಿಯಾ ಅವರು ಸರಕಾರ ಗೋಡಂಬಿ ಪ್ಲಾಂಟೇಶನ್ ಗಳಿಗೆ ಕಡಿಮೆ‌ ದರದಲ್ಲಿ ಭೂಮಿ ಲೀಸ್ ನೀಡುವುದನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ನ್ಯಾಯಾಲಯವೂ ಇದೇ ಅಭಿಪ್ರಾಯವಾಗಿದೆ. ಗೋಡಂಬಿ ಪ್ಲಾಂಟೇಶನ್ ಗಾಗಿ ಲೀಸ್ ಮೇಲೆ ಭೂಮಿ ಪಡೆಯಲಿಚ್ಛಿಸುವವರು ವಾಣಿಜ್ಯ ದರ ಕೊಟ್ಟು ಪಡೆಯಬಹುದು ಎಂದರು.

ವರಾಹಿ ಯೋಜನೆಗೆ ಹೆಚ್ಚುವರಿಯಾಗಿ 17 ಎಕರೆ ಭೂಮಿ ನೀಡಲು ಅವಶ್ಯವಿರುವ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳಲು ಸಭೆ ನಿರ್ಣಯಿಸಿತು.

ಅರಣ್ಯ ಸಚಿವರಾದ ರಾಮಲಿಂಗಾರೆಡ್ಡಿ ಅವರು ಮಾತನಾಡಿ ರಾಜ್ಯಾದ್ಯಂತ ಡೀಮ್ಡ್ ಫಾರೆಸ್ಟ ಸರ್ವೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಭೂ ಮಂಜೂರಾತಿಗಾಗಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಆದ್ಯತೆ ಮೇರೆಗೆ ವಿಲೇವಾರಿ ಮಾಡಲು ಅನುಕೂಲ‌ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ‌ ನೀಡಿದರು.

ಸಭೆಯಲ್ಲಿ ಶಾಸಕರಾದ ಯಶಪಾಲ್ ಸುವರ್ಣ, ಗುರುರಾಜ್ ಘಂಟಿಹೊಳೆ, ಗುರ್ಮೆ ಸುರೇಶ್ , ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಉಡುಪಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಈಓ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.


Share

You cannot copy content of this page