ಕೆಎಸ್ಸಾರ್ಟಿಸಿ, ಕೆಕೆಆರ್ಟಿಸಿ ಹಾಗೂ ಎನ್ ಡಬ್ಲುಕೆಆರ್ಟಿಸಿ ಬಸ್ ಗಳ ಪ್ರಯಾಣ ದರದಲ್ಲಿ ಶೇ.23, ಬಿಎಂಟಿಸಿ ರಿಂದ 35 ರಷ್ಟು ದರ ಹೆಚ್ಚಳ
ಬೆಂಗಳೂರು: ಕೇಂದ್ರ ಸರ್ಕಾರ ಈ ವರ್ಷದ ಮೇ ತಿಂಗಳಿಂದ ಇಲ್ಲಿವರೆಗೆ ಏಳು ಬಾರಿ ಡೀಸೆಲ್ ಬೆಲೆ ಹೆಚ್ಚಳ ಮಾಡಿರುವುದು, ವಾಹನಗಳ ಬಿಡಿಭಾಗಗಳ ಬೆಲೆಗಳಲ್ಲಿ ಏರಿಕೆ ಉಂಟಾಗಿರುವ ಹಿನ್ನೆಲೆಯಲ್ಲಿ ತೀವ್ರ ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯ ಸರ್ಕಾರಿ ಸ್ವಾಮ್ಯದ ನಾಲ್ಕು ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನು ಹೆಚ್ಚಳ ಮಾಡಲಾಗಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.
ಬೆಂಗಳೂರಿನ ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿಯಲ್ಲಿ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ದರ ಪರಿಷ್ಕರಣೆ ಮಾಹಿತಿ ನೀಡಿದ ಸಚಿವರು, ಬಿಎಂಟಿಸಿ ಬಸ್ ಪ್ರಯಾಣ ದರದಲ್ಲಿ 4 ರೂಪಾಯಿಗಳಿಂದ 12 ರೂಪಾಯಿಗಳವರೆಗೆ ಮತ್ತು ಕೆಎಸ್ಸಾರ್ಟಿಸಿ, ಕೆಕೆಆರ್ಟಿಸಿ ಹಾಗೂ ಎನ್ ಡಬ್ಲುಕೆಆರ್ಟಿಸಿ ಬಸ್ ಗಳ ಪ್ರಯಾಣ ದರವನ್ನು 9 ರೂಪಾಯಿಗಳಿಂದ 18 ರೂಪಾಯಿಗಳವರೆಗೆ ಹಂತಗಳಿಗೆ (STAGE) ಅನುಗುಣವಾಗಿ ಹೆಚ್ಚಳ ಮಾಡಲಾಗಿದೆ ಎಂದು ತಿಳಿಸಿದರು.
ಒಟ್ಟಾರೆ, ಕೆಎಸ್ಸಾರ್ಟಿಸಿ, ಕೆಕೆಆರ್ಟಿಸಿ ಹಾಗೂ ಎನ್ ಡಬ್ಲುಕೆಆರ್ಟಿಸಿ ಬಸ್ ಗಳ ಪ್ರಯಾಣ ದರದಲ್ಲಿ ಶೇ.23 ಮತ್ತು ಬಿಎಂಟಿಸಿ ಬಸ್ ಗಳ ಪ್ರಯಾಣ ದರದಲ್ಲಿ ಶೇ.33 ರಿಂದ 35 ರಷ್ಟು ದರ ಹೆಚ್ಚಳ ಮಾಡಲಾಗಿದ್ದು, ಬುಧವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ ಎಂದು ಹೇಳಿದರು.
ಶಕ್ತಿಯೋಜನೆಯಿಂದ ನಷ್ಟವಿಲ್ಲ
ನಾಲ್ಕೂ ರಸ್ತೆ ಸಾರಿಗೆ ನಿಗಮಗಳ ಬಸ್ ಗಳಲ್ಲಿ ಪ್ರತಿನಿತ್ಯ 124.79 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಶಕ್ತಿ ಯೋಜನೆಯ ಅನುಷ್ಠಾನದ ನಂತರ ಸುಮಾರು 74.40 ಲಕ್ಷ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಉಚಿತವಾಗಿ ಮಹಿಳೆಯರು ಪ್ರಯಾಣ ಮಾಡುತ್ತಿರುವುದಕ್ಕೆ ಅದಕ್ಕೆ ತಗಲುತ್ತಿರುವ ವೆಚ್ಚವನ್ನು ಸರ್ಕಾರ ಸಾರಿಗೆ ನಿಗಮಗಳಿಗೆ ಕಾಲಕಾಲಕ್ಕೆ ಬಿಡುಗಡೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಶಕ್ತಿ ಯೋಜನೆಯಿಂದ ನಿಗಮಗಳಿಗೆ ಯಾವುದೇ ನಷ್ಟವಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಕೇಂದ್ರ ಸರ್ಕಾರದ ಬೆಲೆ ಹೆಚ್ಚಳದಿಂದಲೇ ಅಧಿಕ ನಷ್ಟ
ಕೇಂದ್ರ ಸರ್ಕಾರ ಈ ವರ್ಷದ ಮೇ ತಿಂಗಳಿಂದ ಇಲ್ಲಿವರೆಗೆ 7 ಬಾರಿ ಡೀಸೆಲ್ ಬೆಲೆಯನ್ನು ಹೆಚ್ಚಳ ಮಾಡಿದೆ. ಹೀಗೆ ಪ್ರತಿ ಲೀಟರ್ ಗೆ ಒಟ್ಟು 10.47 ರೂಪಾಯಿ ಹೆಚ್ಚಳವಾಗಿದೆ. ನಾಲ್ಕೂ ಸಾರಿಗೆ ಸಂಸ್ಥೆಗಳು ತಮ್ಮ ಆದಾಯದಲ್ಲಿ ಶೇ.80 ರಷ್ಟು ಹಣವನ್ನು ಡೀಸೆಲ್ ಮತ್ತು ಸಿಬ್ಬಂದಿ ವೆಚ್ಚಕ್ಕೆ ಭರಿಸುತ್ತಿವೆ. ಪ್ರತಿ ದಿನ 15.60 ಕೋಟಿ ರೂಪಾಯಿಯಂತೆ ಡೀಸೆಲ್ ಗೆ ವಾರ್ಷಿಕ 5694 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗುತ್ತಿದೆ. ಆದರೆ, ಕೇಂದ್ರ ಸರ್ಕಾರ ಆಗಿಂದಾಗ್ಗೆ ಡೀಸೆಲ್ ಬೆಲೆಯನ್ನು ಹೆಚ್ಚಳ ಮಾಡುತ್ತಿರುವುದರಿಂದ ಸಂಸ್ಥೆಗಳಿಗೆ ಭಾರೀ ಪ್ರಮಾಣದಲ್ಲಿ ನಷ್ಟ ಉಂಟಾಗುತ್ತಿದೆ ಎಂದು ಸಚಿವರು ತಿಳಿಸಿದರು.
10,200 ಕೋಟಿ ರೂ. ನಷ್ಟ: ದರ ಹೆಚ್ಚಳ ಅನಿವಾರ್ಯ
ಡೀಸೆಲ್ ಬೆಲೆಯಲ್ಲಿ ಹೆಚ್ಚಳ, ಸಿಬ್ಬಂದಿ ವೇತನ ಪರಿಷ್ಕರಣೆ, ಬಿಡಿಭಾಗಗಳ ಬೆಲೆಯಲ್ಲಿ ಏರಿಕೆ ಮತ್ತು ಕಾಲ ಕಾಲಕ್ಕೆ ಬಸ್ ಪ್ರಯಾಣ ದರ ಪರಿಷ್ಕರಣೆ ಮಾಡದೇ ಇರುವುದರಿಂದ ನಾಲ್ಕೂ ಸಾರಿಗೆ ನಿಗಮಗಳು ಒಟ್ಟಾರೆ ಸುಮಾರು 10,200 ಕೋಟಿ ರೂಪಾಯಿಗಳ ನಷ್ಟವನ್ನು ಅನುಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಪ್ರಯಾಣ ದರವನ್ನು ಹೆಚ್ಚಳ ಮಾಡಲೇಬೇಕಾದ ಪರಿಸ್ಥಿತಿ ಬಂದಿದೆ ಎಂದು ಬೈರತಿ ಸುರೇಶ್ ಹೇಳಿದರು.
ಸಂಸ್ಥೆಗಳಿಗೆ ಚೇತರಿಕೆ ಅಗತ್ಯ
ಕಳೆದ ಹತ್ತು ವರ್ಷಗಳಲ್ಲಿ ಒಂದು ಬಾರಿ ಮಾತ್ರ ಪ್ರಯಾಣ ದರವನ್ನು ಹೆಚ್ಚಳ ಮಾಡಲಾಗಿತ್ತು. 05-01-2025 ರಂದು ಶೇ.15 ರಷ್ಟು ಹೆಚ್ಚಳ ಮಾಡಲಾಗಿತ್ತು. ಆದರೆ, ನಿರಂತರವಾಗಿ ಡೀಸೆಲ್ ಬೆಲೆ ಹೆಚ್ಚಳವಾಗುತ್ತಿರುವುದರಿಂದ ನಷ್ಟದ ಹೊರೆ ಕಡಿಮೆ ಆಗಲಿಲ್ಲ. ಈಗ ಸಂಸ್ಥೆಗಳು ಇನ್ನಷ್ಟು ಸಂಕಷ್ಟಕ್ಕೆ ಸಿಲುಕುವುದನ್ನು ತಪ್ಪಿಸಲು ದರ ಹೆಚ್ಚಳ ಮಾಡಲಾಗಿದೆ. ಹೀಗಿದ್ದಾಗ್ಯೂ, ಸಂಸ್ಥೆಗಳ ನಷ್ಟ ದ ಹೊರೆ ಸ್ವಲ್ಪ ಮಟ್ಟಿಗೆ ಮಾತ್ರ ಕಡಿಮೆಯಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಶಿಫಾರಸಿಗಿಂತ ಕಡಿಮೆ ಹೆಚ್ಚಳ
ನಿವೃತ್ತ ಐಎಎಸ್ ಅಧಿಕಾರಿ ಅತುಲ್ ಕುಮಾರ್ ತಿವಾರಿ ನೇತೃತ್ವದ ಸಾರ್ವಜನಿಕ ಪ್ರಯಾಣ ದರ ನಿಯಂತ್ರಣ ಸಮಿತಿ ಸಾರಿಗೆ ಸಂಸ್ಥೆಗಳ ಆರ್ಥಿಕ ಪರಿಸ್ಥಿತಿಯನ್ನು ಸಂಪೂರ್ಣ ಅಧ್ಯಯನ ಮಾಡಿ ವರದಿ ನೀಡಿತ್ತು. ಆದರೆ, ಸಮಿತಿಯು ಅತ್ಯಂತ ಹೆಚ್ಚು ಪ್ರಮಾಣದಲ್ಲಿ ದರ ಹೆಚ್ಚಳ ಮಾಡುವಂತೆ ಶಿಫಾರಸು ಮಾಡಿತ್ತು. ಆದರೆ, ನಾಗರಿಕರ ಹಿತದೃಷ್ಟಿಯನ್ನು ಗಮನದಲ್ಲಿರಿಸಿಕೊಂಡು ವೈಜ್ಞಾನಿಕವಾಗಿ ದರ ಪರಿಷ್ಕರಣೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ವಿವಿಧ ಹಂತಗಳಲ್ಲಿ ದರ ಪರಿಷ್ಕರಣೆ
ಕೆಎಸ್ಸಾರ್ಟಿಸಿ, ಕೆಕೆಆರ್ಟಿಸಿ ಮತ್ತು ಎನ್ ಡಬ್ಲ್ಯುಕೆಆರ್ಟಿಸಿ ಸಾಮಾನ್ಯ ಬಸ್ ಗಳ ಪ್ರಯಾಣ ದರವನ್ನು ಅತಿ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿರುವ ಮೊದಲ ಐದು ಹಂತಗಳಿಗೆ ಗರಿಷ್ಟ 9 ರೂಪಾಯಿ ಮತ್ತು ವೇಗದೂತ ಸಾರಿಗೆಗಳಲ್ಲಿ ಗರಿಷ್ಟ 18 ರೂಪಾಯಿ ಹೆಚ್ಚಳ ಮಾಡಲಾಗಿದೆ.
ಅದೇರೀತಿ, ಬಿಎಂಟಿಸಿ ಬಸ್ ಗಳಲ್ಲಿನ 2 ಕಿಲೋಮೀಟರ್ ವರೆಗಿನ ಪ್ರಯಾಣ ದರವನ್ನು 4 ರೂಪಾಯಿ ಹೆಚ್ಚಳ, 2 ರಿಂದ 4 ಕಿಲೋಮೀಟರ್ ದರವನ್ನು 6 ರೂಪಾಯಿಯಷ್ಟು ಹೆಚ್ಚಳ ಮಾಡಿದ್ದು, ಒಟ್ಟಾರೆ ಗರಿಷ್ಟ 12 ರೂಪಾಯಿ ಹೆಚ್ಚಳ ಮಾಡಲಾಗಿದೆ ಎಂದು ಸಾರಿಗೆ ಸಚಿವರು ವಿವರಿಸಿದರು.
