ಹುಬ್ಬಳ್ಳಿ: ಯುಪಿಎಸ್ ಸಿ ನಡೆಸಿದ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (NDA) ಪರೀಕ್ಷೆ ಮಹಿಳಾ ವಿಭಾಗದಲ್ಲಿ ದೇಶಕ್ಕೆ ಪ್ರಥಮ ರ್ಯಾಂಕ್ ಪಡೆದ ಭದ್ರಾವತಿಯ ಶ್ರೇಯಾ ಎನ್.ಗೌಡ ಅವರಿಗೆ ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ ಜೋಶಿ ಅವರು ದೀಪಾವಳಿ ಹಬ್ಬದಂದು ಖುದ್ದು ಕರೆ ಮಾಡಿ ಅಭಿನಂದನೆ ಸಲ್ಲಿಸಿದರು.
ಈ ಕಠಿಣ ಪರೀಕ್ಷೆಯಲ್ಲಿ ಮಹಿಳಾ ವಿಭಾಗದಲ್ಲಿ ಶ್ರೇಯಾ ಅವರು ಮೊದಲನೇ ರ್ಯಾಂಕ್ ಪಡೆದು ಕರುನಾಡಿನ ಹಿರಿಮೆ ಹೆಚ್ಚಿಸಿದ್ದಾರೆ ಎಂದು ಸಚಿವರು ಶ್ಲಾಘಿಸಿದರು.
ಶ್ರೇಯಾ ಎನ್.ಗೌಡ ಅವರು NDA ಪರೀಕ್ಷೆಯಲ್ಲಿ ಐತಿಹಾಸಿಕ ಸಾಧನೆ ತೋರಿರುವುದು ಕರುನಾಡು ಮತ್ತು ದೇಶದ ಇಡೀ ಮಹಿಳಾ ಸಮುದಾಯಕ್ಕೆ ಹೆಮ್ಮೆಯ ಸಂಗತಿ ಎಂದು ಹೇಳಿದ್ದಾರೆ.
*ದೂರವಾಣಿ ಕರೆ ಮಾಡಿ ಶುಭ ಹಾರೈಕೆ:# “UPSC NDA ಪರೀಕ್ಷೆ ಮಹಿಳಾ ವಿಭಾಗದಲ್ಲಿ ಕರ್ನಾಟಕದ ಅಭ್ಯರ್ಥಿಯಾಗಿ ದೇಶಕ್ಕೇ ಮೊದಲನೇ ರ್ಯಾಂಕ್ ಪಡೆದಿದ್ದೀರಿ. ತಮಗೆ ಅಭಿನಂದನೆಗಳು ಎನ್ನುತ್ತಾ ದೀಪಾವಳಿ ಹಬ್ಬಕ್ಕೆ ಶುಭ ಹಾರೈಸಿದರು.
ಪ್ರಧಾನಿಗೆ ತಿಳಿಸುವೆ:
ಭದ್ರಾವತಿ ಸಮೀಪದ ತಿಮಲಾಪುರದ ಶ್ರೇಯಾ ಅವರು ರಾಷ್ಟ್ರೀಯ ರಕ್ಷಣಾ ಅಕಾಡೆಮಿ (NDA) ಪರೀಕ್ಷೆಯಲ್ಲಿ ತಮ್ಮ ಮೊದಲ ಪ್ರಯತ್ನದಲ್ಲೇ ಅಭೂತಪೂರ್ವ ಯಶಸ್ಸು ಸಾಧಿಸಿರುವುದು ನಿಜಕ್ಕೂ ಕರುನಾಡಿಗೆ ಮಾತ್ರವಲ ಮಹಿಳಾ ಸಮಾಜಕ್ಕೇ ಹೆಮ್ಮೆಯ ವಿಷಯ ಎಂದು ಸಂತಸ ವ್ಯಕ್ತಪಪಡಿಸಿದ ಸಚಿವರು, ತಮ್ಮ ಸಾಧನೆ ಬಗ್ಗೆ ನಾಳೆ ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೂ ತರುವುದಾಗಿ ಹೇಳಿದರು.
ಶ್ರೇಯಾ ಅವರು ರಕ್ಷಣಾ ವಿಭಾಗದ ಈ ಕಠಿಣ ಪರೀಕ್ಷೆಯಲ್ಲಿ ಮೊದಲ ರ್ಯಾಂಕ್ ಪಡೆದು ಕೋಟ್ಯಂತರ ಯುವತಿಯರಿಗೆ ಪ್ರೇರಣೆಯಾಗಿದ್ದಾರೆ. ರಕ್ಷಣಾ ವಿಭಾಗದಲ್ಲಿ ದೇಶ ಸೇವೆ ಗೈಯ್ಯುವ ಶ್ರೇಯಾ ಅವರ ಕನಸು ನನಸಾಗಿದ್ದು, ಅವರ ಭವಿಷ್ಯ ಉಜ್ವಲವಾಗಿರಲಿ ಎಂದು ಖುದ್ದು ಶುಭ ಹಾರೈಸಿದರು.
