ಸಮಗ್ರ ಸುದ್ದಿ

ಎಸ್.ಐ.ಆರ್.ನಿಂದ ದೇಶದ ಆಡಳಿತ ವ್ಯವಸ್ಥೆಯೇ ಹಾಳು: ಈಶ್ವರ ಖಂಡ್ರೆ

Share

ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್.ಐ.ಆರ್.) ನಿಂದ ದೇಶದ ಆಡಳಿತ ವ್ಯವಸ್ಥೆಯೇ ಸಂಪೂರ್ಣ ಹಾಳಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರು ತಿಂಗಳುಗಳ ಕಾಲ ಶಾಲಾ ಶಿಕ್ಷಕರನ್ನು, ಸರ್ಕಾರಿ ನೌಕರರನ್ನು ಎಸ್.ಐ.ಆರ್. ಕೆಲಸಕ್ಕೆ ಬಳಸಿಕೊಳ್ಳುತ್ತಿರುವ ಕಾರಣ, ಸರ್ಕಾರಿ ಶಾಲೆಗಳಲ್ಲಿ ಸಮರ್ಪಕವಾಗಿ ಪಾಠ ಪ್ರವಚನ ನಡೆದಿಲ್ಲ, ಸರ್ಕಾರಿ ಕಚೇರಿಗಳಲ್ಲಿ ಕಡತಗಳು ವಿಲೇವಾರಿ ಆಗುತ್ತಿಲ್ಲ ಎಂದರು.

ಮಿಗಿಲಾಗಿ ಲಕ್ಷಾಂತರ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಹಿಂದೆಲ್ಲಾ ಮತದಾರರ ಪಟ್ಟಿ ಪರಿಷ್ಕರಣೆ ಮಾಡಿದ ರೀತಿಯಲ್ಲಿ ಮೃತಪಟ್ಟವರ, ವಿಳಾಸ ಬದಲಾದವರ, ಎರಡು ಕಡೆ ಹೆಸರಿದ್ದ ಮತದಾರರ ಪರಿಷ್ಕರಣೆ ಮಾಡಿದ್ದರೆ ಸಾಕಿತ್ತು. ಆದರೆ ತಾರ್ಕಿಕ ಅಸಂಗತತೆ (logical discrepancy) ಹೆಸರಿನಲ್ಲಿ ಒಂದು ಕುಟುಂಬದಲ್ಲಿ 6 ಮಕ್ಕಳಿದ್ದರೆ ಅವರ ಹೆಸರು 2002ರ ಮತದಾರರ ಪಟ್ಟಿಯಲ್ಲಿ ಇಲ್ಲ ಎಂದು ಅನಗತ್ಯವಾಗಿ ತೊಂದರೆ ನೀಡಲಾಗುತ್ತಿದೆ. ಎಂದರು.

ಎಸ್.ಐ.ಆರ್. ಪ್ರಕ್ರಿಯೆಯಿಂದ ಅರ್ಹ ಮತದಾರರಿಗೂ ಘೋರ ಅನ್ಯಾಯವಾಗುತ್ತಿದೆ. ಇದರ ವಿರುದ್ಧ ನಮ್ಮ ಪಕ್ಷದ ನಾಯಕರು ಹೋರಾಟ ಮಾಡುತ್ತಿದ್ದಾರೆ. ಸರ್ವೋಚ್ಚ ನ್ಯಾಯಾಲಯದಲ್ಲೂ ವಿಚಾರಣೆ ನಡೆಯುತ್ತಿದೆ ಎಂದರು.
ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಳಂಬ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಎಸ್.ಐ.ಆರ್.ನಿಂದಾಗಿ ಅಂತಿಮ ಮತದಾರರ ಪಟ್ಟಿ ಲಭ್ಯವಾಗದ ಕಾರಣ ಸ್ಥಳೀಯ ಸಂಸ್ಥೆಗಳ ಚುನಾವಣೆಗಳೂ ವಿಳಂಬವಾಗುತ್ತಿವೆ ಎಂದು ಅಭಿಪ್ರಾಯಪಟ್ಟರು.

ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ನಮ್ಮ ಮತ ನಮ್ಮ ಹಕ್ಕು ಇರುತ್ತದೆ. ಆದರೆ ಮತದಾರರು ತಮ್ಮ ಹಕ್ಕು ಕೇಳುತ್ತಿದ್ದಾರೆ. ಅವರನ್ನು ಕೈಬಿಟ್ಟು ಚುನಾವಣೆ ನಡೆಸಲು ಸಾಧ್ಯವೇ ಎಂದು ಈಶ್ವರ ಖಂಡ್ರೆ ಪ್ರಶ್ನಿಸಿದರು.
ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧೀ ಅವರು ಸತ್ಯಕ್ಕಾಗಿ ಹೋರಾಡುತ್ತಿದ್ದಾರೆ. ಅವರು ತಮ್ಮ ಫೋನ್ ಕದ್ದಾಲಿಕೆ ಆಗುತ್ತಿದೆ ಎಂದು ಆರೋಪಿಸಿದ್ದಾರೆ. ಅದರಲ್ಲಿ ಸತ್ಯ ಇಲ್ಲದೆ ಅವರು ಆರೋಪ ಮಾಡಲ್ಲ. ಹಿಂದೆ ಫೆಗಾಸಿಸ್ ಸ್ಪೈವೇರ್ ವಿಚಾರದಲ್ಲೂ ಅವರು ಧ್ವನಿ ಎತ್ತಿದ್ದರು. ಆದರೆ ಕೇಂದ್ರ ಸರ್ಕಾರ ದಮನಕಾರಿ ಪ್ರವೃತ್ತಿ ಅನುಸರಿಸಿತು ಎಂದರು.


Share

You cannot copy content of this page