ಕಲಬುರಗಿ: ಕಲ್ಯಾಣ ಕರ್ನಾಟಕದ ಯುವ ಉದ್ಯಮಿಗಳು ಹೊಸ ಆಲೋಚನೆಗಳೊಂದಿಗೆ ನವೋದ್ಯಮಗಳನ್ನು ಆರಂಭಿಸಲು ಮುಂದಾಗಬೇಕು. ಉದ್ಯಮ ಆರಂಭಿಸಿದವರು ಆರಂಭದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಿ ಸೋಲನುಭವಿಸಬಹುದು. ಆದರೆ ನಿರಂತರ ಪ್ರಯತ್ನ ಮತ್ತು ಆತ್ಮವಿಶ್ವಾಸದಿಂದ ಯಶಸ್ಸು ಸಾಧಿಸಲು ಸಾಧ್ಯ. ನವೋದ್ಯಮಿಗಳಿಗೆ ಅಗತ್ಯವಾದ ಹೂಡಿಕೆ, ಮಾರ್ಗದರ್ಶನ ಮತ್ತು ಮಾರುಕಟ್ಟೆ ಸಂಪರ್ಕ ಕಲ್ಪಿಸಲು ರಾಜ್ಯ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ರಾಜ್ಯದ ಗೃಹ, ಐಟಿಬಿಟಿ, ಇ-ಆಡಳಿತ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ನಗರದಲ್ಲಿ ಶನಿವಾರ ನಡೆದ ‘ಕಲ್ಯಾಣ ಕರ್ನಾಟಕ ಸ್ಟಾರ್ಟ್ಅಪ್ ಡೈಲಾಗ್-2026’ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರದ ವಿವಿಧ ನೀತಿ ಮತ್ತು ಯೋಜನೆಗಳ ಮೂಲಕ ಈಗಾಗಲೇ ನವೋದ್ಯಮಿಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಸರ್ಕಾರದ ಯೋಜನೆಗಳನ್ನು ಯುವ ಉದ್ಯಮಿಗಳು ಸಮಗ್ರವಾಗಿ ಅಧ್ಯಯನ ಮಾಡಬೇಕು. ತಮ್ಮ ಉದ್ಯಮಕ್ಕೆ ಅಗತ್ಯವಿರುವ ನೆರವು ಯಾವ ಯೋಜನೆಯಡಿ ದೊರೆಯುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು. ಒಂದು ವೇಳೆ ನಿರ್ದಿಷ್ಟ ಅಗತ್ಯಕ್ಕೆ ಪೂರಕವಾದ ನೀತಿ ಅಥವಾ ಯೋಜನೆ ಇಲ್ಲದಿದ್ದರೆ ಸರ್ಕಾರದ ಗಮನಕ್ಕೆ ತರಬೇಕು. ಅದಕ್ಕೆ ತಕ್ಕಂತೆ ಹೊಸ ಯೋಜನೆ ರೂಪಿಸಲು ಸರ್ಕಾರ ಸಿದ್ಧವಿದೆ. ಸರ್ಕಾರ ಯುವ ಉದ್ಯಮಿಗಳ ಪರವಾಗಿ ನಿಲ್ಲಲಿದೆ ಎಂದರು.
ಬೆಂಗಳೂರು ರಾಜ್ಯದ ಜಿಡಿಪಿಗೆ ಶೇ.41ರಷ್ಟು ಕೊಡುಗೆ ನೀಡುತ್ತಿದೆ. ಆದರೆ ಕಲಬುರಗಿಯ ಜಿಡಿಪಿ ಪ್ರಮಾಣ ಶೇ.1.9ರಷ್ಟಿದ್ದು, ಅದನ್ನು ಶೇ.3ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಶಿಕ್ಷಣ, ಕೃಷಿ, ಉತ್ಪಾದನಾ ವಲಯ ಸೇರಿದಂತೆ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಒಟ್ಟಾಗಿ ಶ್ರಮಿಸಬೇಕಿದೆ. ಕಲ್ಯಾಣ ಕರ್ನಾಟಕದ ಆರ್ಥಿಕ ಪ್ರಗತಿಗೆ ನವೋದ್ಯಮಗಳು ಪ್ರಮುಖ ಪಾತ್ರ ವಹಿಸಲಿವೆ ಎಂದು ಹೇಳಿದರು.
ಐಟಿಬಿಟಿ ಇಲಾಖೆಯು ಕಲ್ಯಾಣ ಕರ್ನಾಟಕ ಭಾಗದ ನವೋದ್ಯಮಿಗಳಿಗೆ ಅಗತ್ಯ ಮಾರ್ಗದರ್ಶನ, ತಾಂತ್ರಿಕ ನೆರವು ಹಾಗೂ ಉದ್ಯಮಗಳೊಂದಿಗೆ ಸಂಪರ್ಕ ಕಲ್ಪಿಸುವ ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ. ಕೃಷಿಕಲ್ಪ ಫೌಂಡೇಶನ್ ಮತ್ತು ಕಲ್ಯಾಣ ಕರ್ನಾಟಕ ಆರ್ಥಿಕ ಅಭಿವೃದ್ಧಿ ಮಿಷನ್ ಮೂಲಕ ಈ ಭಾಗದ ಯುವ ಉದ್ಯಮಿಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲಾಗುತ್ತಿದೆ. ರಾಯಚೂರಿನ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ)ಯಲ್ಲಿಯೂ ನವೋದ್ಯಮಗಳ ಬೆಳವಣಿಗೆಗೆ ಪೂರಕವಾದ ಯೋಜನೆ ರೂಪಿಸಲಾಗುತ್ತಿದೆ ಎಂದರು.
ರಾಜ್ಯ ಸರ್ಕಾರದ ‘ಎಲಿವೇಟ್’ ಕಾರ್ಯಕ್ರಮದಡಿ ಕಳೆದ ಹತ್ತು ವರ್ಷಗಳಲ್ಲಿ ಸುಮಾರು 1,500 ನವೋದ್ಯಮಗಳ ಸ್ಥಾಪನೆಗೆ ಉತ್ತೇಜನ ನೀಡಲಾಗಿದೆ. ಆಯ್ದ ನವೋದ್ಯಮಗಳಿಗೆ ಗರಿಷ್ಠ 50 ಲಕ್ಷದವರೆಗೆ ಸಹಾಯಧನ ಒದಗಿಸಲಾಗುತ್ತಿದೆ. ಬೆಂಗಳೂರಿನಾಚೆ ಇರುವ ನವೋದ್ಯಮಗಳ ಪ್ರಮಾಣ ಪ್ರಸ್ತುತ ಶೇ.28ರಷ್ಟಿದೆ. ಈ ಪ್ರಮಾಣವನ್ನು ಹೆಚ್ಚಿಸಿ, ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದ ಎಲ್ಲ ಭಾಗಗಳಲ್ಲೂ ನವೋದ್ಯಮಗಳ ಬೆಳವಣಿಗೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಡೀಪ್ ಟೆಕ್ ಕ್ಷೇತ್ರದಲ್ಲಿ ನವೋದ್ಯಮಗಳನ್ನು ಸ್ಥಾಪಿಸುವ ಆಯ್ದ ಉದ್ಯಮಿಗಳಿಗೆ ಮುಂದಿನ ಹತ್ತು ವರ್ಷಗಳ ಅವಧಿಯಲ್ಲಿ ₹1 ಕೋಟಿವರೆಗೆ ಸಹಾಯಧನ ನೀಡುವ ಯೋಜನೆ ರೂಪಿಸಲಾಗುತ್ತಿದೆ. ನವೋದ್ಯಮಗಳು ಕೇವಲ ಬೆಂಗಳೂರಿಗೆ ಸೀಮಿತವಾಗದೆ ದ್ವಿತೀಯ ಮತ್ತು ತೃತೀಯ ಹಂತದ ನಗರಗಳಿಗೂ ವಿಸ್ತರಿಸಬೇಕು. ಸ್ಥಳೀಯ ಆರ್ಥಿಕತೆಯನ್ನು ಬಲಪಡಿಸಿ, ಯುವಕರನ್ನು ಉದ್ಯೋಗಾಕಾಂಕ್ಷಿಗಳ ಬದಲಿಗೆ ಉದ್ಯೋಗದಾತರನ್ನಾಗಿ ರೂಪಿಸುವ ಉದ್ದೇಶದಿಂದ ‘ಲೀಪ್’ (ಲೋಕಲ್ ಎಕನಾಮಿಕ್ ಆಕ್ಸಿಲರೇಟರ್ ಪ್ರೋಗ್ರಾಂ) ಯೋಜನೆ ಜಾರಿಗೊಳಿಸಲಾಗಿದೆ ಎಂದರು.
ಕೃಷಿಕಲ್ಪ ಕೇಂದ್ರವು ಕೃಷಿ ಆಧಾರಿತ ನವೋದ್ಯಮಗಳಷ್ಟೇ ಅಲ್ಲದೆ ಗ್ರಾಮೀಣ ನಾವೀನ್ಯತೆ, ಸಂಶೋಧನೆ ಮತ್ತು ತಂತ್ರಜ್ಞಾನ ಆಧಾರಿತ ಉದ್ಯಮಗಳ ಬೆಳವಣಿಗೆಗೂ ನೆರವಾಗಲಿದೆ. ಈ ಭಾಗದ ಯುವ ಉದ್ಯಮಿಗಳು ಕೇಂದ್ರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ನವೋದ್ಯಮಗಳಿಗೆ ದೊಡ್ಡ ಕಂಪನಿಗಳೊಂದಿಗೆ ನೇರ ಸಂಪರ್ಕ ಸಾಧಿಸುವುದು ಕಷ್ಟವಾಗುತ್ತದೆ. ಅಂತಹ ಸಂಪರ್ಕ ಕಲ್ಪಿಸುವ ಕೆಲಸವನ್ನು ಐಟಿಬಿಟಿ ಇಲಾಖೆ ಮಾಡಲಿದೆ. ಎಂಎಸ್ಎಂಇ, ಕೌಶಲ್ಯಾಭಿವೃದ್ಧಿ, ಐಟಿಬಿಟಿ ಸೇರಿದಂತೆ ವಿವಿಧ ಇಲಾಖೆಗಳು ನವೋದ್ಯಮಗಳಿಗೆ ಅಗತ್ಯ ಸಹಕಾರ ನೀಡಲಿವೆ ಎಂದು ಸಚಿವರು ಹೇಳಿದರು.
ಮಾರುಕಟ್ಟೆ ಎಂದರೇನು, ಉದ್ಯಮವನ್ನು ಹೇಗೆ ನಿರ್ವಹಿಸಬೇಕು, ಯಾವ ಉತ್ಪನ್ನಕ್ಕೆ ಬೇಡಿಕೆಯಿದೆ, ಗ್ರಾಹಕರನ್ನು ಹೇಗೆ ತಲುಪಬೇಕು ಎಂಬುದರ ಕುರಿತು ಯುವಕರು ತಿಳಿದುಕೊಳ್ಳಬೇಕು. ಕೇವಲ ಹೊಸ ಆಲೋಚನೆ ಇದ್ದರೆ ಸಾಲದು; ಅದನ್ನು ಯಶಸ್ವಿ ಉದ್ಯಮವನ್ನಾಗಿ ರೂಪಿಸುವ ಕೌಶಲ್ಯವೂ ಅಗತ್ಯ. ಈ ನಿಟ್ಟಿನಲ್ಲಿ ಉದ್ಯಮಿಗಳು, ಪರಿಣತರು ಮತ್ತು ನವೋದ್ಯಮಿಗಳ ನಡುವೆ ಸಂವಾದ ಹಾಗೂ ಮಾರ್ಗದರ್ಶನ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದ ಬೆಳವಣಿಗೆಗೂ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ನವೋದ್ಯಮಗಳಿಗಾಗಿ ಇನ್ಕ್ಯುಬೇಷನ್ ಕೇಂದ್ರಗಳನ್ನು ಸ್ಥಾಪಿಸಿ ಪ್ರೋತ್ಸಾಹ ನೀಡಲಾಗುತ್ತಿದೆ. ರಾಯಚೂರಿನ ಐಐಐಟಿ ಸೇರಿದಂತೆ ರಾಜ್ಯದ ಮೂರು ಕೃತಕ ಬುದ್ಧಿಮತ್ತೆ ಕೇಂದ್ರಗಳಲ್ಲಿ ಒಂದು ಈ ಭಾಗದಲ್ಲಿರುವುದು ಹೆಮ್ಮೆಯ ಸಂಗತಿ. ಮುಂದಿನ ದಿನಗಳಲ್ಲಿ ಈ ಕೇಂದ್ರವು ತಾಂತ್ರಿಕ ಸಂಶೋಧನೆ, ನಾವೀನ್ಯತೆ ಮತ್ತು ಉದ್ಯಮಶೀಲತೆಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಲಿದೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಡಿಜಿಟಲ್ ಎಕನಾಮಿಕ್ ಮಿಷನ್ ಘೋಷಿಸಲಾಗಿದ್ದು, ಈ ಭಾಗದಲ್ಲಿ ಡಿಜಿಟಲ್ ಆರ್ಥಿಕತೆಯ ಬೆಳವಣಿಗೆಗೆ ಇದು ಸಹಕಾರಿಯಾಗಲಿದೆ. ತಂತ್ರಜ್ಞಾನ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಸಿಎಸ್ಆರ್ ನಿಧಿಯನ್ನೂ ಬಳಸಿಕೊಳ್ಳಲಾಗುತ್ತಿದೆ. ಕಲಬುರಗಿ ನೆಕ್ಸ್ಟ್ ಫೌಂಡೇಶನ್ ಮೂಲಕ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಆರೋಗ್ಯ, ಕೃಷಿ ಮತ್ತು ಶುದ್ಧ ಕುಡಿಯುವ ನೀರಿನ ಸಮಸ್ಯೆಗಳಿಗೆ ತಂತ್ರಜ್ಞಾನ ಆಧಾರಿತ ಪರಿಹಾರ ಕಂಡುಕೊಳ್ಳಲು ನವೋದ್ಯಮಗಳಿಗೆ ಅವಕಾಶ ನೀಡಲಾಗುತ್ತಿದೆ. ತಾವು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ 16 ನವೋದ್ಯಮಗಳಿಗೆ ಕಾರ್ಯನಿರ್ವಹಿಸುವ ಅವಕಾಶ ಕಲ್ಪಿಸಲಾಗಿತ್ತು. ಇಂತಹ ಪ್ರಯತ್ನಗಳು ಸ್ಥಳೀಯ ಸಮಸ್ಯೆಗಳಿಗೆ ಸ್ಥಳೀಯ ಮಟ್ಟದಲ್ಲೇ ಪರಿಹಾರ ಕಂಡುಕೊಳ್ಳಲು ನೆರವಾಗುತ್ತವೆ ಎಂದು ಸಚಿವ ಖರ್ಗೆ ಅವರು ವಿವರಿಸಿದರು.
ಈ ಭಾಗದಲ್ಲಿ ಸ್ಟಾರ್ಟ್ಅಪ್ಗಳ ಬೆಳವಣಿಗೆಗೆ ಇಂದಿನ ಸಂವಾದ ಮಹತ್ವದ ವೇದಿಕೆಯಾಗಲಿದೆ. ಬೆಂಗಳೂರಿನಿಂದ ಆಗಮಿಸಿರುವ ಉದ್ಯಮಿಗಳು ಮತ್ತು ತಜ್ಞರು ಇಲ್ಲಿನ ಯುವ ಉದ್ಯಮಿಗಳಿಗೆ ತಮ್ಮ ಅನುಭವ, ಸಲಹೆ ಹಾಗೂ ಮಾರ್ಗದರ್ಶನ ನೀಡುತ್ತಿರುವುದು ಸಂತಸದ ಸಂಗತಿ. ಇಂತಹ ಕಾರ್ಯಕ್ರಮಗಳು ಕಲ್ಯಾಣ ಕರ್ನಾಟಕದ ಉದ್ಯಮಶೀಲತೆಯ ಬೆಳವಣಿಗೆಗೆ ದೊಡ್ಡ ಬದಲಾವಣೆ ತರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಂವಾದ ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಸತ್ವಾ ಕಂಪನಿಯ ಸಿಇಒ ಶ್ರೀಕೃಷ್ಣ ಶ್ರೀಧರ್ ಹಾಗೂ ಎಸ್ಸೆಲ್ ಅಧ್ಯಕ್ಷ, ಉದ್ಯಮಿ ಪ್ರಶಾಂತ್ ಪ್ರಕಾಶ್ ತಮ್ಮ ಅಭಿಪ್ರಾಯ ಮತ್ತು ಅನುಭವಗಳನ್ನು ಹಂಚಿಕೊಂಡರು. ಕೃಷಿಕಲ್ಪ ಫೌಂಡೇಶನ್ ಸಿಇಒ ಸಿ.ಎಂ. ಪಾಟೀಲ್ ಸಂವಾದ ನಿರ್ವಹಿಸಿದರು.
ಇದಕ್ಕೂ ಮುನ್ನ ಯುಕೆ ಅಂಡ್ ಕೋ. ಸಂಸ್ಥೆಯ ಸಂಸ್ಥಾಪಕ ಹಾಗೂ ಉದ್ಯಮಿ ಕೆ. ಉಲ್ಲಾಸ್ ಕಾಮತ್ ಅವರು ಸ್ಥಳೀಯ ಉದ್ಯಮಶೀಲತೆಯ ಬೆಳವಣಿಗೆ ಮತ್ತು ಅಗತ್ಯ ಕೌಶಲ್ಯಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಅಲ್ಲಮಪ್ರಭು ಪಾಟೀಲ್, ಖನಿಜ್ ಫಾತಿಮಾ, ಎಂ.ವೈ. ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಜಗದೇವ ಗುತ್ತೇದಾರ್, ತಿಪ್ಪಣ್ಣಪ್ಪ ಕಮಕನೂರ, ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಸೇರಿದಂತೆ ವಿವಿಧ ಕಂಪನಿಗಳ ಮುಖ್ಯಸ್ಥರು, ನವೋದ್ಯಮಿಗಳು ಹಾಗೂ ಉದ್ಯಮ ಕ್ಷೇತ್ರದ ಪ್ರತಿನಿಧಿಗಳು ಭಾಗವಹಿಸಿದ್ದರು.
