ಸಮಗ್ರ ಸುದ್ದಿ

ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಜಪಾನ್ ಪ್ರವಾಸ |ಲಿಯೋ ಎಲೆಕ್ಟ್ರಾನಿಕ್ಸ್ ನಿಂದ ರಾಜ್ಯದಲ್ಲಿ ₹500 ಕೋಟಿ ಹೂಡಿಕೆ

Share

ಬೆಂಗಳೂರು: ಜಪಾನಿನ ಪ್ರಮುಖ ಎಲೆಕ್ಟ್ರಾನಿಕ್ಸ್ ತಯಾರಿಕಾ ಕಂಪನಿ ಲಿಯೋ ಎಲೆಕ್ಟ್ರಾನಿಕ್ಸ್ ರಾಜ್ಯದಲ್ಲಿ 500 ಕೋಟಿ ರೂಪಾಯಿ ಬಂಡವಾಳ ತೊಡಗಿಸಲಿದೆ. ಇದರಿಂದ ರಾಜ್ಯದ ತಯಾರಿಕಾ ವಲಯದ ಬಲವರ್ಧನೆ ಆಗಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

ರಾಜ್ಯಕ್ಕೆ ಜಪಾನಿ ಕಂಪನಿಗಳಿಂದ ಹೆಚ್ಚಿನ ಬಂಡವಾಳ ಆಕರ್ಷಿಸಲೆಂದು ಜಪಾನ್ ಪ್ರವಾಸದಲ್ಲಿರುವ ಅವರು, ತಾವು ಲಿಯೋ ಎಲೆಕ್ಟ್ರಾನಿಕ್ಸ್ ಕಂಪನಿಯ ಉನ್ನತ ಮಟ್ಟದ ಪ್ರತಿನಿಧಿಗಳ ಜತೆ ಮಾತುಕತೆ ನಡೆಸಿದ್ದಾಗಿ ಹೇಳಿದ್ದಾರೆ.

ಕಂಪನಿಯು ಒಟ್ಟು ಮೂರು ಹಂತಗಳಲ್ಲಿ, 10 ವರ್ಷಗಳಲ್ಲಿ ಈ ಬಂಡವಾಳ ಹೂಡಲಿದೆ. ಇದರಿಂದ 800 ಉದ್ಯೋಗಗಳು ಸೃಷ್ಟಿ ಆಗಲಿವೆ. ಕಂಪನಿಯು 10 ಎಕರೆ ಭೂಮಿ ಕೇಳಿದ್ದು, ಇದನ್ನು ಒದಗಿಸಲಾಗುವುದು. ಈ ಸಂಬಂಧ ಲಿಯೋ ಎಲೆಕ್ಟ್ರಾನಿಕ್ಸ್ ರಾಜ್ಯ ಸರಕಾರದ ಜತೆ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಅವರು ತಿಳಿಸಿದ್ದಾರೆ.

ಈ ಬಂಡವಾಳ ಹೂಡಿಕೆಯಿಂದ ಪ್ರಿಸಿಷನ್ ತಯಾರಿಕಾ ಕ್ಷೇತ್ರಕ್ಕೆ ಲಾಭವಾಗಲಿದೆ. 2027ರ ಏಪ್ರಿಲ್ ತಿಂಗಳಲ್ಲಿ ನಡೆಯಲು ನಿಗದಿಯಾಗಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸುವಂತೆಯೂ ಕಂಪನಿಗೆ ಆಹ್ವಾನ ನೀಡಲಾಗಿದೆ ಎಂದು ಪಾಟೀಲ ಹೇಳಿದ್ದಾರೆ.

ಮಾತುಕತೆಯಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ಆಯುಕ್ತೆ ಖುಷ್ಬೂ ಗೋಯಲ್ ಇದ್ದರು.


Share

You cannot copy content of this page