ಸಮಗ್ರ ಸುದ್ದಿ

ಜಿಬಿಎ ನಗರ ಪಾಲಿಕೆಗಳಲ್ಲಿ 650ಕ್ಕೂ ಹೆಚ್ಚು ನಾಮ ನಿರ್ದೇಶಿತ ಸದಸ್ಯರ ನೇಮಕಾತಿ ಆಪಾದನೆ ಆಧಾರ ರಹಿತ: ನಗರಾಭಿವೃದ್ಧಿ ಇಲಾಖೆಯಿಂದ ಸ್ಪಷ್ಟನೆ

Share

ಬೆಂಗಳೂರು : ಡಿಸೆಂಬರ್ 11 ರಂದು ಕರ್ನಾಟಕ ವಿಧಾನಸಭೆಯಲ್ಲಿ ಮಂಡಿಸಲಾಗಿರುವ ಗ್ರೇಟರ್ ಬೆಂಗಳೂರು ಆಡಳಿತ (ಎರಡನೇ ತಿದ್ದುಪಡಿ) ವಿಧೇಯಕ, 2025 ರಲ್ಲಿ ಪ್ರಕರಣ 30ಕ್ಕೆ ಪ್ರಸ್ತಾಪಿಸಲಾಗಿರುವ ತಿದ್ದುಪಡಿಯಿಂದ ಗ್ರೇಟರ್ ಬೆಂಗಳೂರು ಪ್ರದೇಶದಲ್ಲಿನ 05 ನಗರ ಪಾಲಿಕೆಗಳಿಗೆ 700ಕ್ಕೂ ಹೆಚ್ಚು ನಾಮ ನಿರ್ದೇಶಿತ ಸದಸ್ಯರನ್ನು ನೇಮಕ ಮಾಡಲು ಸಂವಿಧಾನಕ್ಕೆ ವಿರುದ್ಧವಾಗಿ ಸರ್ಕಾರವು ಮುಂದಾಗಿದೆ ಹಾಗೂ ಈ ಪ್ರಕ್ರಿಯೆಯಿಂದ ಸದರಿ ನಗರ ಪಾಲಿಕೆಗಳಿಗೆ ಚುನಾವಣೆ ಸದ್ಯಕ್ಕೆ ನಡೆಯುವುದಿಲ್ಲ ಎಂಬ ಸಂಶಯ ಮೂಡಿದೆ ಎಂದು ವ್ಯಕ್ತಪಡಿಸಲಾಗಿರುವ ಅಭಿಪ್ರಾಯವು ಆಧಾರ ರಹಿತವಾಗಿದೆ.

ಇದು ತಿದ್ದುಪಡಿಯ ಉದ್ದೇಶವನ್ನು ಅರ್ಥ ಮಾಡಿಕೊಳ್ಳದೇ ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯವನ್ನು ಮೂಡಿಸುವ ದುರುದ್ದೇಶದಿಂದ ಕೂಡಿರುತ್ತದೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತದೆ.

ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ, 2024ರ ಅನುಸಾರ ಕಾಲಕಾಲಕ್ಕೆ ಗ್ರೇಟರ್ ಬೆಂಗಳೂರು ಪ್ರದೇಶದ ಭೂ ಪ್ರದೇಶದ ಮಿತಿಗಳನ್ನು ಮಾರ್ಪಾಡು ಮಾಡಲು ಅವಕಾಶವನ್ನು ಕಲ್ಪಿಸಲಾಗಿದ್ದು, ನಿಯಮಾನುಸಾರ ಕ್ರಮವಹಿಸಿ ಸ್ಥಳೀಯ ಪ್ರಾಧಿಕಾರಗಳನ್ನು ಗ್ರೇಟರ್ ಬೆಂಗಳೂರು ಪ್ರದೇಶದ ವ್ಯಾಪ್ತಿಗೆ ಸೇರ್ಪಡಿಸಿ ಕೊಳ್ಳಬಹುದಾಗಿದೆ. ಈ ರೀತಿ ಸೇರ್ಪಡಿಸಿಕೊಳ್ಳಲಾದ ಪ್ರದೇಶವನ್ನು ಪುನ‌ರ್ ವಿಂಗಡಿಸಿ ಚುನಾವಣೆ ನಡೆಸುವವರೆವಿಗೂ ಸದರಿ ನೂತನ ಪ್ರದೇಶಕ್ಕೆ ಯಾವುದೇ ಜನಪ್ರತಿನಿಧಿ ಇಲ್ಲದಂತಾಗುತ್ತದೆ. ಸದರಿ ಪ್ರದೇಶವನ್ನು ಆ ವ್ಯಾಪ್ತಿಯ ನಗರ ಪಾಲಿಕೆಯಲ್ಲಿ ಪ್ರತಿನಿಧಿಸುವವರು ಯಾರು ಇಲ್ಲದಂತಾಗಿ ಸದರಿ ಪ್ರದೇಶದ ಆಡಳಿತ ನಿರ್ವಹಣೆ ಮತ್ತು ಬೆಳವಣಿಗೆಗೆ ಆಡಚಣೆ ಉಂಟಾಗುವ ಸಾಧ್ಯತೆ ಇದೆ.

ಈ ಹಿನ್ನೆಲೆಯಲ್ಲಿ, ಪ್ರಕರಣ 30ಕ್ಕೆ ತಿದ್ದುಪಡಿಯನ್ನು ಪ್ರಸ್ತಾಪಿಸಲಾಗಿದ್ದು, ಗ್ರೇಟರ್ ಬೆಂಗಳೂರು ಪ್ರದೇಶಕ್ಕೆ ಸೇರ್ಪಡಿಸಲಾಗುವ ಸ್ಥಳಿಯ ಪ್ರದೇಶದ ಸಾಮಾನ್ಯ ನಿವಾಸಿಯನ್ನು ಪ್ರತಿ 20 ಸಾವಿರ ಜನ ಸಂಖ್ಯೆಗೆ ಕನಿಷ್ಟ ಒಬ್ಬ ವ್ಯಕ್ತಿಯಂತೆ ಆ ನಿರ್ದಿಷ್ಟ ನಗರ ಪಾಲಿಕೆಗೆ ಹೆಚ್ಚುವರಿ ಸದಸ್ಯನಾಗಿ ನಾಮ ನಿರ್ದೇಶನ ಮಾಡಲು ಅವಕಾಶವನ್ನು ಕಲ್ಪಿಸಲಾಗಿದೆ.

ಅಂತಹ ನಾಮ ನಿರ್ದೇಶಿತ ವ್ಯಕ್ತಿಯು ಚುನಾಯಿತ ಪ್ರತಿನಿಧಿಯಾಗಿಲ್ಲದ ಕಾರಣ ಆ ನಗರ ಪಾಲಿಕೆಯಲ್ಲಿ ಮತದಾನ ಮಾಡುವ ಅಧಿಕಾರವನ್ನು ಹೊಂದಿರುವುದಿಲ್ಲ ಹಾಗೂ ಆ ಸ್ಥಳೀಯ ಪ್ರದೇಶಕ್ಕೆ ಚುನಾವಣೆ ನಡೆಸುವವರೆಗೆ ಮಾತ್ರ ನಾಮ ನಿರ್ದೇಶಿತ ಸದಸ್ಯನಾಗಿ ಮುಂದುವರೆಯಲು ಅವಕಾಶವಿರುತ್ತದೆ.

ಯಾವುದಾದರೂ ಪಂಚಾಯಿತಿ ಪ್ರದೇಶದ ಭಾಗವನ್ನು ಚಿಕ್ಕ ನಗರ ಪ್ರದೇಶದಲ್ಲಿ ವಿಲೀನಗೊಳಿಸಿದ ಸಂದರ್ಭದಲ್ಲಿ, ಮುನಿಸಿಪಲ್ ಕೌನ್ಸಿಲ್ ಅನ್ನು ಪುನ‌ರ್ ರಚಿಸುವವರೆಗೆ ಅಂತಹ ಪ್ರದೇಶದ ಸಾಮಾನ್ಯ ನಿವಾಸಿಯಾಗಿರುವ ವ್ಯಕ್ತಿಯನ್ನು ಹೆಚ್ಚುವರಿ ಕೌನ್ಸಿಲರ್ ಆಗಿ ಸರ್ಕಾರವು ನಾಮ ನಿರ್ದೇಶನಗೊಳಿಸುವ ಬಗ್ಗೆ ಕರ್ನಾಟಕ ಮುನಿಸಿಪಾಲಿಟಿ ಅಧಿನಿಯಮ, 1964ರ ಪ್ರಕರಣ 360 (ಡಿ) ರಲ್ಲಿಯೂ ಸಹ ಅವಕಾಶವನ್ನು ಕಲ್ಪಿಸಲಾಗಿದೆ.

ನಾಮ ನಿರ್ದೇಶಿತ ವ್ಯಕ್ತಿಯು ಅನಿರ್ದಿಷ್ಟ ಅವಧಿಗೆ ಆ ನಗರ ಪಾಲಿಕೆಯ ಸದಸ್ಯರಾಗಿ ಮುಂದುವರೆಯುವುದು ಸೂಕ್ತವಲ್ಲ ಎಂಬ ಉದ್ದೇಶದಿಂದ ಪ್ರಕರಣ 29ಕ್ಕೆ ಸಹ ತಿದ್ದುಪಡಿಯನ್ನು ಪ್ರಸ್ತಾಪಿಸಿದ್ದು, ಹೊಸದಾಗಿ ಸೇರಿಸಲಾದ ಸ್ಥಳೀಯ ಪ್ರದೇಶಕ್ಕಾಗಿ ಪುನ‌ರ್ ವಿಂಗಡನೆಯನ್ನು 03 ತಿಂಗಳುಗಳ ಅವಧಿಯೊಳಗೆ ಮಾಡತಕ್ಕದ್ದು ಎಂದು ನಿರ್ದಿಷ್ಟ ಪಡಿಸಲು ಪ್ರಸ್ತಾಪಿಸಲಾಗಿದೆ.

ಮುಂದುವರೆದು, ಪ್ರಕರಣ 33ಕ್ಕೆ ತಿದ್ದುಪಡಿಯನ್ನು ಪ್ರಸ್ತಾಪಿಸಿ, ಹೊಸದಾಗಿ ಸೇರಿಸಲಾದ ಸ್ಥಳೀಯ ಪ್ರದೇಶಕ್ಕಾಗಿ ಪುನ‌ರ್ ವಿಂಗಡನೆಯ ತರುವಾಯ ಆ ಪ್ರದೇಶದ ಸೇರ್ಪಡೆಯ ದಿನಾಂಕದಿಂದ 06 ತಿಂಗಳುಗಳಿಗಿಂತ ತಡವಾಗದಂತೆ ಚುನಾವಣೆಯನ್ನು ನಡೆಸತಕ್ಕದ್ದು ಎಂದು ಸೇರ್ಪಡಿಸಲು ಪ್ರಸ್ತಾಪಿಸಲಾಗಿದೆ. ಅಂದರೆ, ಪ್ರಸ್ತಾಪಿತ ನಾಮ ನಿರ್ದೇಶಿತ ವ್ಯಕ್ತಿಯು ಆ ನಗರ ಪಾಲಿಕೆಯ ಹೆಚ್ಚುವರಿ ಸದಸ್ಯರಾಗಿ ಮುಂದುವರೆಯಲು ಕಾಲಮಿತಿಯನ್ನು ಕಲ್ಪಿಸಲಾಗಿದೆ. ಚುನಾವಣೆಯಲ್ಲಿ ಹೊಸದಾಗಿ ಆಯ್ಕೆಯಾದ ಸದಸ್ಯರು ಆ ನಗರ ಪಾಲಿಕೆಯ ಉಳಿದ ಅವಧಿಯವರೆಗೆ ಮಾತ್ರ ಸದಸ್ಯತ್ವವನ್ನು ಹೊಂದಿರುತ್ತಾರೆ.

ಎಲ್ಲಾ ಅಂಶಗಳನ್ನು ಪ್ರಸ್ತಾಪಿತ ತಿದ್ದುಪಡಿ ವಿಧೇಯಕದಲ್ಲಿ ಗಮನಿಸಬಹುದಾಗಿದ್ದು, ಅವುಗಳನ್ನು ಸಂಪೂರ್ಣವಾಗಿ ಗಮನಿಸದೇ ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡಿಸಲು ಪ್ರಯತ್ನಿಸಿರುವುದು ಸೂಕ್ತವಾದ ಕ್ರಮವಲ್ಲ.

ನೂತನವಾಗಿ ರಚಿಸಲಾದ ನಗರ ಪಾಲಿಕೆಗಳ ವಾರ್ಡ್‌ಗಳ ಚುನಾವಣೆ ನಡೆಸಲು ರಾಜ್ಯ ಸರ್ಕಾರವು ಬದ್ದವಾಗಿದೆ. ಅದಕ್ಕೆ ಪೂರಕವಾಗಿ ಈಗಾಗಲೇ ದಿನಾಂಕ: 02-09-2025ರ ಪ್ರತ್ಯೇಕ ಅಧಿಸೂಚನೆಗಳಲ್ಲಿ ಗ್ರೇಟ‌ರ್ ಬೆಂಗಳೂರು ಪ್ರದೇಶದ 05 ನಗರ ಪಾಲಿಕೆಗಳ ಗಡಿ ಪ್ರದೇಶಗಳನ್ನು ನಿರ್ದಿಷ್ಟಪಡಿಸಿ ನಗರ ಪಾಲಿಕೆಗಳನ್ನು ಸ್ಥಾಪಿಸಿ ಆದೇಶಿಸಲಾಗಿದೆ.

ದಿನಾಂಕ: 19-11-2025 ಮತ್ತು 01-12-2025 ರಂದು ಪ್ರತ್ಯೇಕವಾಗಿ ಹೊರಡಿಸಿರುವ ಅಧಿಸೂಚನೆಗಳ ಮೂಲಕ 05 ನಗರ ಪಾಲಿಕೆಗಳಲ್ಲಿ ಒಟ್ಟು 369 ವಾರ್ಡ್‌ಗಳ ಪುನರ್ ವಿಂಗಡಣೆಯನ್ನು ಮಾಡಲಾಗಿದೆ. ಈ ರೀತಿ 369 ವಾರ್ಡ್‌ಗಳ ಪುನರ್ ವಿಂಗಡಣೆ ಈಗಾಗಲೇ ಆಗಿರುವುದರಿಂದ, ಸದರಿ ವಾರ್ಡ್‌ಗಳಿಗೆ ನಾಮ ನಿರ್ದೇಶಿತ ಸದಸ್ಯರನ್ನು ನೇಮಕ ಮಾಡಲು ಅವಕಾಶವಿರುವುದಿಲ್ಲ. ಈ ವಾರ್ಡ್‌ ಗಳಿಗೆ ಚುನಾವಣೆ ನಡೆಸಿ, ಚುನಾಯಿತ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಚುನಾವಣೆಗಳನ್ನು ನಡೆಸಲು ರಾಜ್ಯ ಚುನಾವಣಾ ಆಯೋಗಕ್ಕೆ ಪೂರಕವಾಗಿ ದಿನಾಂಕ: 01-09-2025ರ ಅಧಿಸೂಚನೆಯ ಮೂಲಕ ಗ್ರೇಟರ್ ಬೆಂಗಳೂರು ಆಡಳಿತ (ಚುನಾವಣೆ) ನಿಯಮಗಳು, 2025 ಮತ್ತು ದಿನಾಂಕ: 15-09-2025ರ ಅಧಿಸೂಚನೆಯ ಮೂಲಕ ಗ್ರೇಟರ್ ಬೆಂಗಳೂರು ಆಡಳಿತ (ಮತದಾರರ ನೋಂದಣಿ) ನಿಯಮಗಳು, 2025 ಗಳನ್ನು ಅಂತಿಮಗೊಳಿಸಿ ಹೊರಡಿಸಲಾಗಿರುತ್ತದೆ. ರಾಜ್ಯ ಚುನಾವಣಾ ಆಯೋಗವು ಸಹ ಗ್ರೇಟರ್ ಬೆಂಗಳೂರು ಪ್ರದೇಶದ 05 ನಗರ ಪಾಲಿಕೆಗಳ ಸಾರ್ವತ್ರಿಕ ಚುನಾವಣೆಗೆ ವಾರ್ಡ್ ವಾರು ಮತದಾರರ ಪಟ್ಟಿಯನ್ನು ತಯಾರಿಸುವ ಬಗ್ಗೆ ಕಾರ್ಯಕ್ರಮ ಪಟ್ಟಿಯನ್ನು ನಿಗದಿಪಡಿಸಿ, ಆ ನಿಟ್ಟಿನಲ್ಲಿ ಕಾಲಮಿತಿಯಲ್ಲಿ ಕ್ರಮವಹಿಸುತ್ತಿದೆ.

ಹೀಗೆ ಗ್ರೇಟರ್ ಬೆಂಗಳೂರು ಪ್ರದೇಶದ 05 ನಗರ ಪಾಲಿಕೆಗಳ ಸಾರ್ವತ್ರಿಕ ಚುನಾವಣೆಗೆ ಸರ್ಕಾರವು ಎಲ್ಲಾ ಅಗತ್ಯ ಕ್ರಮವಹಿಸುತ್ತಿರುವ ಈ ಸಂದರ್ಭದಲ್ಲಿ ತಪ್ಪು ಮಾಹಿತಿಯನ್ನು ಸಾರ್ವಜನಿಕರಿಗೆ ನೀಡುವುದು ಸಮಂಜಸವಲ್ಲ ಎಂದು ನಗರಾಭಿವೃದ್ಧಿ ಇಲಾಖೆ ಸ್ಪಷ್ಟನೆ ನೀಡಿದೆ.


Share

You cannot copy content of this page