ಬೆಳಗಾವಿ : ಕರ್ನಾಟಕ ಸರ್ಕಾರದ ಸಹಭಾಗಿತ್ವದಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (FKCCI) ರಾಜ್ಯದ ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸ್ನಾತಕ, ಸ್ನಾತಕೋತ್ತರ, ಡಿಪ್ಲೊಮಾ ಹಾಗೂ ವೃತ್ತಿಶಿಕ್ಷಣ ವಿದ್ಯಾರ್ಥಿಗಳಲ್ಲಿ ನವೋದ್ಯಮ, ನಾವೀನ್ಯತೆ ಹಾಗೂ ಸ್ಟಾರ್ಟ್‌ಅಪ್ ಸಂಸ್ಕೃತಿಯನ್ನು ಉತ್ತೇಜಿಸುವ ಉದ್ದೇಶದಿಂದ ʼFKCCI INNO-ಮಂಥನ್ʼ ಹೆಸರಿನ ವ್ಯಾಪಾರ ಯೋಜನಾ ಪ್ರಸ್ತುತಿ ಸ್ಪರ್ಧಾ ಕಾರ್ಯಕ್ರಮವನ್ನು 2025–26ನೇ ಸಾಲಿನಲ್ಲಿ ಆರಂಭಿಸುವ ಬಗ್ಗೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಈ ಕಾರ್ಯಕ್ರಮದ ಪ್ರಮುಖ ಧ್ಯೇಯ ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳು ಸ್ವಾವಲಂಬಿ ಜೀವನಕ್ಕಾಗಿ ನವೋದ್ಯಮದ ಪಥವನ್ನು ಅನುಸರಿಸುವಂತೆ ಸಬಲೀಕರಣ ಗೊಳಿಸುವುದಾಗಿದ್ದು, ಈ ಯೋಜನೆಯ ಅನುಷ್ಠಾನಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರವು ರೂ.73.20 ಲಕ್ಷ ಅನುದಾನವನ್ನು ಒದಗಿಸುತ್ತಿದೆ.
ಈ ಹಿನ್ನೆಲೆಯಲ್ಲಿ ಇಂದು ಬೆಳಗಾವಿಯ ಸುವರ್ಣಸೌಧದಲ್ಲಿ FKCCI ಮತ್ತು ಕರ್ನಾಟಕ ರಾಜ್ಯ ಸರ್ಕಾರದ ನಡುವೆ ಒಡಂಬಡಿಕೆ ಪತ್ರಕ್ಕೆ (MoU) ಸಹಿ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಎಂ. ಸಿ. ಸುಧಾಕರ್ ಅವರ ಸಮ್ಮುಖದಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರು ಹಾಗೂ FKCCI ಅಧ್ಯಕ್ಷರಾದ ಉಮಾ ರೆಡ್ಡಿ ಒಪ್ಪಂದಕ್ಕೆ ಸಹಿ ಹಾಕಿದರು.
ಉನ್ನತ ಶಿಕ್ಷಣ ಸಚಿವ ರಾದ ಡಾ. ಎಂ. ಸಿ ಸುಧಾಕರ್ ಮಾತನಾಡಿ, FKCCI ಸಂಸ್ಥೆಯು 2009ರಲ್ಲಿ ಪದವಿ, ಸ್ನಾತಕೋತ್ತರ, ಡಿಪ್ಲೊಮಾ ಹಾಗೂ ವೃತ್ತಿಶಿಕ್ಷಣದ ವಿದ್ಯಾರ್ಥಿಗಳಿಗಾಗಿ ‘ಮಂಥನ್’ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದು, ವಿದ್ಯಾರ್ಥಿ ನವೋದ್ಯಮಿಗಳಿಗೆ ತಮ್ಮ ವ್ಯವಹಾರ ಕಲ್ಪನೆಗಳನ್ನು ಪ್ರಸ್ತುತಪಡಿಸಲು ಹಾಗೂ ಉದ್ಯಮ ಮುಖಂಡರು, ಹೂಡಿಕೆದಾರರು, ಶಿಕ್ಷಣ ತಜ್ಞರು ಮತ್ತು ಮಾರ್ಗದರ್ಶಕರೊಂದಿಗೆ ಸಂಪರ್ಕ ಸಾಧಿಸಲು ಉತ್ತಮ ವೇದಿಕೆಯನ್ನು ಒದಗಿಸಿರುವುದಾಗಿ ತಿಳಿಸಿದರು.
ಇದರ ಮುಂದುವರಿದ ಭಾಗವಾಗಿ ಇದೀಗ ಅನುಷ್ಠಾನಗೊಳ್ಳುತ್ತಿರುವ ʼINNO-ಮಂಥನ್ʼ ಕಾರ್ಯಕ್ರಮವು ರಾಜ್ಯದ ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳನ್ನು ಭವಿಷ್ಯದ ಉದ್ಯಮ ಸೃಷ್ಟಿಕರ್ತರು ಹಾಗೂ ವ್ಯಾಪಾರ ನಾಯಕರಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಡಿ ರಾಜ್ಯದ ಎಲ್ಲಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ತಲಾ ಒಂದು ದಿನದಂತೆ ಮೂರು ದಿನ ಜ್ಞಾನ ಕಾರ್ಯಾಗಾರಗಳನ್ನು ನಡೆಸಲು ನಿರ್ಧರಿಸಲಾಗಿದೆ.
ಈ ಕಾರ್ಯಾಗಾರಗಳಲ್ಲಿ ವ್ಯಾಪಾರ ಯೋಜನೆಗಳ ಅಭಿವೃದ್ಧಿ ಹಾಗೂ ಪ್ರಸ್ತುತಿಕರಣ ಕುರಿತಂತೆ ಕೈಗಾರಿಕಾ ಮುಖಂಡರಿಂದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಗುವುದು.
ತರಬೇತಿ ಪಡೆದ ವಿದ್ಯಾರ್ಥಿಗಳು ತಲಾ ನಾಲ್ಕು ಮಂದಿ ಸದಸ್ಯರನ್ನೊಳಗೊಂಡ ತಂಡಗಳನ್ನು ರಚಿಸಿಕೊಂಡು, ಕಾಲೇಜಿನ ಗುರುತಿನ ಚೀಟಿಗಳೊಂದಿಗೆ ತಮ್ಮ ವ್ಯಾಪಾರ ಯೋಜನೆಗಳನ್ನು ಒಳಗೊಂಡ ಎಂಟ್ರಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರತಿ ವಿದ್ಯಾರ್ಥಿ ತಂಡಕ್ಕೆ ಒಂದಕ್ಕಿಂತ ಹೆಚ್ಚು ಎಂಟ್ರಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ .
ಸ್ವೀಕೃತವಾದ ವ್ಯಾಪಾರ ಯೋಜನೆಗಳ ಪೈಕಿ ಅಂತಿಮವಾಗಿ ಆಯ್ಕೆಯಾಗುವ ಯೋಜನೆಗಳನ್ನು ಸಲ್ಲಿಸಿದ ವಿದ್ಯಾರ್ಥಿ ತಂಡಗಳ ಪಟ್ಟಿಯನ್ನು ಜುಲೈ 2026ರಲ್ಲಿ ಪ್ರಕಟಿಸಲಾಗುವುದು. ಅಂತಿಮವಾಗಿ ಆಯ್ಕೆಯಾದ ತಂಡಗಳಿಗೆ ಪ್ರಸಿದ್ಧ ತೀರ್ಪುಗಾರರು ಹಾಗೂ ಹಿರಿಯ ಕೈಗಾರಿಕೋದ್ಯಮಿಗಳ ಸಮ್ಮುಖದಲ್ಲಿ ತಮ್ಮ ವ್ಯಾಪಾರ ಯೋಜನೆಗಳನ್ನು ಪ್ರಸ್ತುತಪಡಿಸುವ ಅವಕಾಶ ನೀಡಲಾಗುವುದು. ಪ್ರಶಸ್ತಿ ವಿಜೇತ ತಂಡಗಳಿಗೆ ನಗದು ಬಹುಮಾನ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದೆಂದು ಸಚಿವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಖುಷ್ಬೂ ಗೋಯಲ್ ಚೌಧರಿ, ಆಯುಕ್ತರಾದ
ಮಂಜುಶ್ರೀ ಮತ್ತು FKCCI ಪದಾಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.
