ಬೆಳಗಾವಿ: ರಬ್ಬರ್ ಮಂಡಳಿಯ ವತಿಯಿಂದ ರಬ್ಬರ್ ಬೆಳೆಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ಸದರಿ ಮಂಡಳಿಯು ಕೇಂದ್ರ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖಾ ವ್ಯಾಪ್ತಿಗೆ ಒಳಪಟ್ಟಿರುತ್ತದೆ. ರಬ್ಬರ್ ತೋಟಗಾರಿಕೆ ಬೆಳೆಯಾಗಿರುತ್ತದೆ, ಆದರೆ ತೋಟಗಾರಿಕೆ ಇಲಾಖೆಯ ವತಿಯಿಂದ ರಬ್ಬರ್ ಬೆಳೆಗೆ ಸಂಬಂಧಿಸಿದಂತೆ ಯಾವುದೇ ಪ್ರತ್ಯೇಕ ಕಾರ್ಯಕ್ರಮ ಇರುವುದಿಲ್ಲ. ಈ ಬೆಳೆಯನ್ನು ತೋಟಗಾರಿಕೆ ಇಲಾಖೆ ವ್ಯಾಪ್ತಿಗೆ ಒಳಪಡಿಸುವ ಪ್ರಸ್ತಾವನೆ ಇಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಸಚಿವರ ಪರವಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದರು.
ವಿಧಾನ ಪರಿಷತ್ ನಲ್ಲಿ ಸದಸ್ಯರುಗಳಾದ ಪ್ರತಾಪ್ ಸಿಂಹ ನಾಯಕ್ ಕೆ, ಡಾ. ತಳವಾರ್ ಸಾಬಣ್ಣ, ಶಾಂತರಾಮ್ ಬುಡ್ನ ಸಿದ್ದಿ ಮತ್ತು ಡಾ. ಧನಂಜಯ ಸರ್ಜಿ ಅವರ ಗಮನ ಸೆಳೆಯುವ ಸೂಚನೆಗೆ ಲಿಖಿತ ಉತ್ತರದಲ್ಲಿ ಸಚಿವರು ತಿಳಿಸಿದರು.
ರಾಜ್ಯದಲ್ಲಿ ರಬ್ಬರ್ ಬೆಳೆಯನ್ನು ಅಂದಾಜು 50,800 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು ಉತ್ಪಾದನೆಯು 5.27 ಲಕ್ಷ ಮೆಟ್ರಿಕ್ ಟನ್ ಗಳಾಗಿರುತ್ತದೆ. ರಬ್ಬರ್ ಬೆಳೆಯನ್ನು ಪ್ರಮುಖವಾಗಿ ದಕ್ಷಿಣ ಕನ್ನಡ, ಕೊಡಗು, ಉಡುಪಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತಿದೆ.
ಈ ಬೆಳೆಗೆ ಸಂಬಂಧಿಸಿದ ಯೋಜನೆಗಳನ್ನು ಪ್ರತ್ಯೇಕವಾಗಿ ಕೇಂದ್ರ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಮಂತ್ರಾಲಯದ ಅಧೀನದಲ್ಲಿ ಬರುವ ರಬ್ಬರ್ ಮಂಡಳಿ ವತಿಯಿಂದ ಅನುಷ್ಠಾನಗೊಳಿಸಲಾಗುತ್ತಿದೆ. ಸದರಿ ಮಂಡಳಿಯನ್ನು 1947 ರಲ್ಲಿ ಸ್ಥಾಪಿಸಲಾಗಿದ್ದು, ಪ್ರಧಾನ ಕಛೇರಿಯು ಕೇರಳದ ಕೊಟ್ಟಾಯಮ್ ಜಿಲ್ಲೆಯಲ್ಲಿರುತ್ತದೆ.
ರಾಜ್ಯದಲ್ಲಿ ಪ್ರಮುಖವಾಗಿ ರಬ್ಬರ್ ಬೆಳೆಯನ್ನು ಬೆಳೆಯುವ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಸದರಿ ಮಂಡಳಿಯ ಪ್ರಾದೇಶಿಕ ಕಛೇರಿಗಳು ಕಾರ್ಯನಿರ್ವಹಿಸುತ್ತಿವೆ.ರಬ್ಬರ್ ಬೆಳೆಯ ಸಮಗ್ರ ಅಭಿವೃದ್ಧಿ ಕಾರ್ಯಕ್ರಮಗಳನ್ನು ರಬ್ಬರ್ ಮಂಡಳಿ ವತಿಯಿಂದ ಅನುಷ್ಠಾನಗೊಳಿಸಲಾಗುತ್ತಿದೆ.
ಕೇಂದ್ರ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಅಧೀನದ ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗವು ಪ್ರತಿ ವರ್ಷ ಪ್ರಮುಖವಾದ 22 ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ನಿಗಧಿಪಡಿಸುತ್ತದೆ. ಸದರಿ ಉತ್ಪನ್ನಗಳ ಪಟ್ಟಿಯಲ್ಲಿ ರಬ್ಬರ್ ಬೆಳೆಯು ಸೇರ್ಪಡೆಗೊಂಡಿರುವುದಿಲ್ಲ.
ಹವಾಮಾನ ಆಧಾರಿತ ವಿಮೆ ಸೌಲಭ್ಯ ಯೋಜನೆಯಡಿ ರಬ್ಬರ್ ಬೆಳೆಯನ್ನು ಸೇರ್ಪಡೆಗೊಂಡಿರುವುದಿಲ್ಲ.
ರಬ್ಬರ್ ಬೆಳೆಯ ಆಮದು ಸುಂಕ ಹೆಚ್ಚಿಸುವ ಕುರಿತು ಕೇಂದ್ರ ಸರ್ಕಾರಕ್ಕೆ ಸೂಕ್ತ ಪ್ರಸ್ತಾವನೆಯನ್ನು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಮೂಲಕ ಸಲ್ಲಿಸಬೇಕಾಗಿದ್ದು, ಈ ಬಗ್ಗೆ ಪರಿಶೀಲಿಸಿ ಕ್ರಮವಹಿಸಲಾಗುವುದು ಎಂದು ತಿಳಿಸಿದ್ದಾರೆ.
