ಬೆಂಗಳೂರು : ಕೇಂದ್ರ ಸರ್ಕಾರವು ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ವಿರುದ್ಧ ಮಾಡುತ್ತಿರುವ ದ್ವೇಷ ರಾಜಕಾರಣ ಖಂಡಿಸಿ ಕಾಂಗ್ರೆಸ್ ಪಕ್ಷ ನಾಳೆ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಸುವರ್ಣ ವಿಧಾನಸೌಧದಲ್ಲಿ ಸುದ್ದಿಗಾರೊಂದಿಗೆ ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಶಿವಕುಮಾರ್ ಅವರು ಮಾತನಾಡಿ, ನಾಳೆ ಬೆಳಗ್ಗೆ 9.30ಕ್ಕೆ ಬೆಳಗಾವಿ ಸುವರ್ಣ ವಿಧಾನಸೌಧದ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಧರಣಿ ಮಾಡಲಾಗುವುದು.
ಈ ಪ್ರತಿಭಟನೆಯಲ್ಲಿ ಸಿಎಂ, ನಾನು, ನಮ್ಮ ಸಚಿವರು ಭಾಗವಹಿಸಲಿದ್ದೇವೆ. ನಂತರ ಸದನದಲ್ಲೂ ನಾವು ಇದನ್ನು ಚರ್ಚೆ ಮಾಡುತ್ತೇವೆ. ಬೆಂಗಳೂರಿನ ವಿವಿಧ ಕಡೆಗಳಲ್ಲಿ ಪ್ರತಿಭಟನೆ ನಡೆಸಲಾಗುವುದು. ಶನಿವಾರ ಪ್ರತ್ಯೇಕ ಕಾರ್ಯಕ್ರಮ ರೂಪಿಸುತ್ತೇವೆ. ಪಕ್ಷದ ಎಲ್ಲಾ ಶಾಸಕರು, ಪರಿಷತ್ ಸದಸ್ಯರು ಹೋರಾಟದಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಬೆಂಗಳೂರು ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ನಾಳೆ ಪ್ರತಿಭಟನೆ ಮಾಡಲು ಕರೆ ನೀಡಲಾಗಿದೆ ಎಂದು ತಿಳಿಸಿದರು.
ದೇಶದಲ್ಲಿ ನ್ಯಾಯಾಲಯ ಜೀವಂತವಾಗಿದೆ ಎಂದು ಸಾಬೀತು:
ನ್ಯಾಷನಲ್ ಹೆರಾಲ್ಡ್ ಕಾಂಗ್ರೆಸ್ ಪಕ್ಷದ ಆಸ್ತಿ. ನೆಹರು ಅವರು 1937ರಲ್ಲಿ ನ್ಯಾಷನಲ್ ಹೆರಾಲ್ಡ್ ಸಂಸ್ಥೆ ಸ್ಥಾಪಿಸಿದರು. ಇದರ ಷೇರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಇಟ್ಟುಕೊಳ್ಳದೆ ಬೇರೆ ಯಾರು ಇಟ್ಟುಕೊಳ್ಳಲು ಸಾಧ್ಯ? ಅದನ್ನು ಮುಟ್ಟುಗೊಲು ಹಾಕಿಕೊಂಡು, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಕೊಡಬಾರದ ಕಿರುಕುಳ ನೀಡುತ್ತಿದ್ದಾರೆ. ನಾವು ಪಕ್ಷದ ಕಾರ್ಯಕರ್ತರಾಗಿ ಪಕ್ಷದ ಸಂಸ್ಥೆಗೆ ದೇಣಿಗೆ ನೀಡಿದ್ದೇವೆ ಎಂದು ಹೇಳಿದರು.
ಇಂದು ಮಾನ್ಯ ನ್ಯಾಯಾಲಯ ನೀವು ದಾಖಲಿಸಿರುವ ಪ್ರಕರಣ ಸರಿ ಇಲ್ಲ ಎಂದು ವಜಾಗೊಳಿಸಿದೆ. ದೇಶದಲ್ಲಿ ನ್ಯಾಯಾಲಯ ಜೀವಂತವಾಗಿದೆ ಎಂಬುದಕ್ಕೆ ಇದೇ ಸಾಕ್ಷಿ. ಅಧಿಕಾರ ದುರುಪಯೋಗ ಮಾಡಿಕೊಂಡು ಹೇಗೆ ಕಿರುಕುಳ ನೀಡುತ್ತಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ ಎಂದರು.
ನಿನ್ನೆ ತಾನು ಹಾಗೂ ತನ್ನ ಸಹೋದರ ಸುರೇಶ್ ಇಬ್ಬರೂ ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿದಂತೆ ದೆಹಲಿ ಪೊಲೀಸರ ನೋಟೀಸ್ ಗೆ ಉತ್ತರ ನೀಡಲು ತೆರಳಬೇಕಿತ್ತು. ಆದರೆ ನಾವು ಎಫ್ಐಆರ್ ಪ್ರತಿ ನೀಡಿ ಎಂದು ಕೇಳಿದೆವು. ಎಫ್ ಐಆರ್ ಇಲ್ಲದೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಇ.ಡಿ ಸಂಸ್ಥೆ ಚಾರ್ಜ್ ಶೀಟ್ ಸಲ್ಲಿಸಿದೆ” ಎಂದು ತಿಳಿಸಿದರು.
ಗಾಂಧೀಜಿ ಅಪಮಾನಿಸಲು ನರೇಗಾ ಹೆಸರು ಬದಲಾವಣೆ:
ನಮ್ಮ ಯುಪಿಎ ಸರ್ಕಾರ ಮಹಾತ್ಮ ಗಾಂಧಿ ಅವರ ಹೆಸರಿನಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ರೂಪಿಸಿತ್ತು. ಈಗ ಈ ಯೋಜನೆ ಹೆಸರನ್ನು ಬದಲಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಹೇಳಿದರು.
ದೆಹಲಿ ಸೇರಿದಂತೆ ದೇಶದೆಲ್ಲೆಡೆ ಪ್ರತಿಭಟನೆ ಮಾಡಿ ಜನರಿಗೆ ಅರಿವು ಮೂಡಿಸಲಾಗುವುದು. ಗಾಂಧೀಜಿ ಅವರಿಗೆ ಅಪಮಾನ ಮಾಡಲು, ನರೇಗಾ ಅನುದಾನ ಕಡಿಮೆ ಮಾಡಲು ಹಾಗೂ ನರೇಗಾ ಯೋಜನೆ ಶಮನ ಮಾಡಲು ಈ ರೀತಿ ಮಾಡುತ್ತಿದ್ದಾರೆ ಎಂದರು.
