ಬೆಳಗಾವಿ: 2025ನೇ ಸಾಲಿನ ಗ್ರೇಟರ್ ಬೆಂಗಳೂರು ಆಡಳಿತ (ಎರಡನೇ ತಿದ್ದುಪಡಿ) ವಿಧೇಯಕವನ್ನು ಪರ್ಯಾಲೋಚಿಸಿ ಅಂಗೀಕರಿಸಬೇಕೆಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿನ್ನೆ ವಿಧಾನಸಭೆಯಲ್ಲಿ ಕೋರಿದರು.
ವಿಧೇಯಕದ ಕುರಿತು ವಿಧಾನಸಭೆಯಲ್ಲಿ ಚರ್ಚಿಸಿ ಕೆಲವೊಂದು ತಿದ್ದುಪಡಿಗಳನ್ನು ಅಳವಡಿಸುವುದು ಸೂಕ್ತವೆಂದು ಅಭಿಪ್ರಾಯ ಪಡಲಾಯಿತು. ತಿದ್ದುಪಡಿಯೊಂದಿಗೆ ವಿಧೇಯಕವನ್ನು ಅಂಗೀಕರಿಸಬೇಕೆಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೋರಿದರು.
ವಿಧೇಯಕವು ಅಂಗೀಕಾರವಾಯಿತು.2025ನೇ ಸಾಲಿನ ಕರ್ನಾಟಕ ಬಾಡಿಗೆ (ತಿದ್ದುಪಡಿ) ವಿಧೇಯಕ ಹಾಗೂ 2025ನೇ ಸಾಲಿನ ಕರ್ನಾಟಕ ಭೂ ಕಂದಾಯ (ಎರಡನೇ ತಿದ್ದುಪಡಿ) ವಿಧೇಯಕಗಳ ಅಂಗೀಕಾರ2025ನೇ ಸಾಲಿನ ಕರ್ನಾಟಕ ಬಾಡಿಗೆ (ತಿದ್ದುಪಡಿ)ವಿಧೇಯಕ ಹಾಗೂ 2025ನೇ ಸಾಲಿನ ಕರ್ನಾಟಕ ಭೂ ಕಂದಾಯ (ಎರಡನೇ ತಿದ್ದುಪಡಿ) ವಿಧೇಯಕವನ್ನು ಕರ್ನಾಟಕ ವಿಧಾನಸಭೆಯ ಪರಿಶೀಲನಾ ಸಮಿತಿಯ ಶಿಫಾರಸ್ಸಿನಂತೆ ಪರ್ಯಾಲೋಚಿಸಿ ಅಂಗೀಕರಿಸಬೇಕೆಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ವಿಧಾನಸಭೆಯಲ್ಲಿ ಕೋರಿದರು.
2025ನೇ ಸಾಲಿನ ಕರ್ನಾಟಕ ಭೂ ಕಂದಾಯ (ಎರಡನೇ ತಿದ್ದುಪಡಿ) ವಿಧೇಯಕವನ್ನು ವಿಧಾನ ಸಭೆಯ ಪರಿಶೀಲನಾ ಸಮಿತಿಗೆ ನೀಡಲಾಗಿತ್ತು. ಪರಿಶೀಲನಾ ಸಮಿತಿಯ ವರದಿಯ ಆಧಾರದ ಮೇಲೆ ಹಾಗೂ ಕೊಡಗು ಜಿಲ್ಲೆಯಲ್ಲಿಯೂ ಸಹ ವಿಧೇಯಕದ ಕುರಿತು ಅದಾಲತ್ ಗಳನ್ನು ನಡೆಸಿ ಜನಾಭಿಪ್ರಾಯ ಸಂಗ್ರಹಿಸಿ, ಸಾರ್ವಜನಿಕರಿಗೆ ಪರಿಹಾರ ನೀಡಲು ಈ ವಿಧೇಯಕವನ್ನು ತರಲಾಗಿದೆ ಎಂದು ಕಂದಾಯ ಸಚಿವರು ಸಭೆಯಲ್ಲಿ ವಿವರಿಸಿದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಈ ವಿಧೇಯಕವು ಸ್ವಾಗತಾರ್ಹವಾಗಿದ್ದು, ಸಮಿತಿ ಸಭೆಯಲ್ಲಿಯೂ ಸಹ 5-6 ಬಾರಿ ಈ ವಿಧೇಯಕದ ಕುರಿತು ಚರ್ಚಿಸಿ ವರದಿ ನೀಡಲಾಗಿದೆ. ಸದರಿ ವಿಧೇಯಕವನ್ನು ಅಂಗೀಕಾರ ನೀಡಲು ಎಲ್ಲಾ ಶಾಸಕರು ಒಪ್ಪಿದ್ದಾರೆ. ಸದರಿ ವಿಧೇಯಕವನ್ನು ಜಾರಿಗೆ ತರುವ ಸಂದರ್ಭದಲ್ಲಿ ರೂಪುರೇಷೆಗಳನ್ನು ಸಿದ್ಧಪಡಿಸಬೇಕೆಂದು ಅಭಿಪ್ರಾಯಪಟ್ಟರು.
ಶಾಸಕ ಅರವಿಂದ ಬೆಲ್ಲದ್ ಅವರು ವಿಧೇಯಕದ ಜಾರಿಗೆ ನಿಯಮಗಳನ್ನು ರೂಪಿಸುವಾಗ ನಿಯಮಗಳನ್ನು ಸಹ ಸಮಿತಿ ಸಭೆಯಲ್ಲಿ ಮಂಡಿಸಿ ಸಮಿತಿಯ ಅಭಿಪ್ರಾಯ ಪಡೆದು ನಿಯಮಗಳನ್ನು ರೂಪಿಸುವುದು ಒಳಿತು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಶಾಸಕ ಪೊನ್ನಣ್ಣ ಅವರು ಈ ವಿಧೇಯಕವನ್ನು ತಂದಿರುವುದು ಸ್ವಾಗತಾರ್ಹ, ಇದೊಂದು ಬಹಳ ವರ್ಷಗಳಿಂದ ಇದ್ದ ಜಟಿಲ ಸಮಸ್ಯೆಯಾಗಿತ್ತು. ಕಾರ್ಯಾಂಗದಲ್ಲೂ ಸಹ ತಿದ್ದುಪಡಿಗೆ ಬರಲಿಲ್ಲ. ಸಮಸ್ಯೆಗೆ ಪರಿಹಾರ ದೊರೆತಿರಲಿಲ್ಲ. ತಿದ್ದುಪಡಿಯಲ್ಲಿ ಹಲವು ಅಂಶಗಳನ್ನು ಸೇರಿಸಿದ್ದು, ಈ ವಿಧೇಯಕದಿಂದ ಕೊಡಗು ಜನತೆಗೆ ಅನುಕೂಲವಾಗಲಿದೆ. ಈ ವಿಧೇಯಕಕ್ಕೆ ನಿಯಮಾವಳಿಗಳನ್ನು ರೂಪಿಸುವಾಗ ಜಿಲ್ಲಾಧಿಕಾರಿಗಳಿಗೆ / ಕಂದಾಯ ಅಧಿಕಾರಿಗಳಿಗೆ ಈ ಬಗ್ಗೆ ಸಲಹೆ ಸೂಚನೆಗಳನ್ನು ನೀಡಬೇಕು ಎಂದರು.
ಸದರಿ ವಿಧೇಯಕದ ಕುರಿತು ದೀರ್ಘ ಅಧ್ಯಯನ ಮಾಡಿ ರೂಪುರೇಷೆಗಳನ್ನು ಜಾರಿಗೆ ತರಲಾಗುವುದು. ವಿಧೇಯಕವನ್ನು ಅಂಗೀಕರಿಸಬೇಕೆಂದು ಸಚಿವ ಕೃಷ್ಣಬೈರೇಗೌಡ ಅವರು ಕೋರಿದರು.
ಚರ್ಚೆಯ ಬಳಿಕ ಎರಡು ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರವಾಯಿತು.
2025ನೇ ಸಾಲಿನ ಶ್ರೀ ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ, 2025ನೇ ಸಾಲಿನ ಚಂದ್ರಗುತ್ತಿ ಶ್ರೀ ರೇಣುಕಾಂಬ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ, 2025ನೇ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮತ್ತು ಇತರ ಕೆಲವು ಕಾನೂನು (ತಿದ್ದುಪಡಿ) ವಿಧೇಯಕ, 2025ನೇ ಸಾಲಿನ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ (ತಿದ್ದುಪಡಿ) ವಿಧೇಯಕಗಳನ್ನು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅಂಗೀಕರಿಸಬೇಕೆಂದು ಕೋರಿದ ಹಿನ್ನೆಲೆಯಲ್ಲಿ ವಿಧೇಯಕಗಳು ಅಂಗೀಕಾರವಾಯಿತು.
2025ನೇ ಸಾಲಿನ ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ (ತಿದ್ದುಪಡಿ) ವಿಧೇಯಕ ಹಾಗೂ 2025ನೇ ಸಾಲಿನ ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) (ತಿದ್ದುಪಡಿ) ವಿಧೇಯಕಗಳನ್ನು ಅಂಗೀಕರಿಸುವಂತೆ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಕೋರಿದರು.ವಿಧೇಯಕಗಳು ಅಂಗೀಕಾರವಾಯಿತು.
2025ನೇ ಸಾಲಿನ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ (ಎರಡನೇ ತಿದ್ದುಪಡಿ) ವಿಧೇಯಕವನ್ನು ಅಂಗೀಕರಿಸಬೇಕೆಂದು ಉನ್ನತ ಶಿಕ್ಷಣ ಸಚಿವರ ಪರವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐ.ಟಿ.ಬಿ.ಟಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಕೋರಿದರು. ವಿಧೇಯಕವು ಅಂಗೀಕರಿಸಲ್ಪಟ್ಟಿತು.
2025ನೇ ಸಾಲಿನ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಲಿ (ತಿದ್ದುಪಡಿ) ವಿಧೇಯಕ, 2025ನೇ ಸಾಲಿನ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಲಿ (ತಿದ್ದುಪಡಿ) ವಿಧೇಯಕಗಳನ್ನು ಅಂಗೀಕರಿಸಬೇಕೆಂದು ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ ಅವರು ಅಂಗೀಕರಿಸಬೇಕೆಂದು ಕೋರಿದರು. ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರವಾಯಿತು
