ಬೆಳಗಾವಿ: ರಾಜ್ಯದಲ್ಲಿ ಕಾವೇರಿ-2 ಮತ್ತು ಇ-ಸ್ವತ್ತು ಡಿಜಿಟಲ್ ಡೇಟಾ ಪರಸ್ಪರ ಲಿಂಕ್ ಮಾಡುವಲ್ಲಿ ಉಂಟಾಗಿರುವ ತಾಂತ್ರಿಕ ತೊಂದರೆ ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡುವುದಾಗಿ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಹೇಳಿದರು.
ವಿಧಾನಪರಿಷತ್ತಿನಲ್ಲಿ ಸದಸ್ಯರಾದ ಡಿ.ಎಸ್.ಅರುಣ್ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಕಾವೇರಿ 2.0 ತಂತ್ರಾಂಶದಲ್ಲಿ ವಿಭಾಗಪತ್ರ ಹಾಗೂ ದಾನಪತ್ರಗಳ ನೋಂದಣಿ ಸ್ಥಗಿತವಾಗಿರುವುದಿಲ್ಲ. ಆರ್ ಟಿಸಿ, ಮೋಜಿಣಿ ನಕ್ಷೆ, ಇ ಸ್ವತ್ತು ಖಾತಾ, ಇ-ಆಸ್ತಿ ಖಾತಾ ಹಾಗೂ ಯುಎಲ್ ಎಮ್ ಎಸ್ ಖಾತಾ ಹೊಂದಿರುವ ಸ್ವತ್ತುಗಳ ವಿಭಾಗಪತ್ರ ಹಾಗೂ ದಾನಪತ್ರಗಳು ಎಂದಿನಂತೆ ನೋಂದಣಿ ಆಗುತ್ತಿವೆ.
ಕಾವೇರಿ 2.0 ತಂತ್ರಾಂಶದಲ್ಲಿ 2024-25ನೇ ಸಾಲಿನಲ್ಲಿ 1,15,068 ವಿಭಾಗ ಪತ್ರಗಳು ಮತ್ತು 1,39,134 ದಾನಪತ್ರಗಳು ಅದೇ ರೀತಿ 2025-26ನೇ ಸಾಲಿನಲ್ಲಿ 79,515 ವಿಭಾಗ ಪತ್ರಗಳು ಹಾಗೂ 92,618 ದಾನಪತ್ರಗಳು ನೋಂದಣಿ ಆಗಿವೆ ಎಂದು ಸಚಿವರು ಮಾಹಿತಿ ನೀಡಿದರು.
