ಸಮಗ್ರ ಸುದ್ದಿ

ಬೆಳಗಾವಿ ಸದನದ ಅವಧಿ ಒಂದು ವಾರ ವಿಸ್ತರಿಸಲು ಛಲವಾದಿ ನಾರಾಯಣಸ್ವಾಮಿ ಒತ್ತಾಯ

Share

ಬೆಳಗಾವಿ: ಇಷ್ಟು ದಿನಗಳಾದರೂ ಉತ್ತರ ಕರ್ನಾಟಕದ ವಿಚಾರಗಳು ಸರಿಯಾಗಿ ಚರ್ಚೆಗೆ ಬಂದಿಲ್ಲ. ಆದ್ದರಿಂದ ಇಲ್ಲಿ ನಡೆಯುತ್ತಿರುವ ಸದನದ ಅವಧಿಯನ್ನು ಒಂದು ವಾರ ವಿಸ್ತರಿಸಬೇಕೆಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಒತ್ತಾಯಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕುಂದಾ ತಿಂದು ಹೋಗಲು ಬಂದಿದ್ದೀರಾ ಎಂದು ನಾಳೆ ಜನರು ಕೇಳುವಂತಾಗಲಿದೆ. ಒಂದು ವಾರ ಸದನದ ಅವಧಿ ವಿಸ್ತರಿಸಿ; ಸಮಸ್ಯೆಗಳಿಗೆ ಪರಿಹಾರ ಕೊಡೋಣ ಎಂದು ತಿಳಿಸಿದರು.

ಇಲ್ಲಿ ಸಮಸ್ಯೆ ಹೆಚ್ಚಾಗಿದೆ. ನೂರಾರು ಸಂಘಟನೆಗಳು ಹೋರಾಟಕ್ಕೆ ಇಳಿದಿವೆ. ಸಮಸ್ಯೆ ಪರಿಹಾರ ಮಾಡಬೇಕು. ಪಿಕ್ನಿಕ್ ಬಂದೆವು; ಹೋದೆವು ಎಂದು ಹೇಳಿಸಿಕೊಳ್ಳಲು ನಾವು ಸಿದ್ಧರಿಲ್ಲ. ಸರಕಾರ ಇದಕ್ಕೆ ಒತ್ತು ಕೊಟ್ಟು ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಆಗ್ರಹಿಸಿದರು.

ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್ಸನ್ನು ಬರ್ಖಾಸ್ತು ಮಾಡುವಂತೆ ಮಹಾತ್ಮ ಗಾಂಧೀಜಿ ಸಲಹೆ ನೀಡಿದ್ದರು. ಹಾಗೆ ಮಾಡಿದ್ದೀರಾ ಎಂದು ಪ್ರಶ್ನಿಸಿದರು. ಗಾಂಧಿಯವರ ಕೊಲೆ ಆಮೇಲೆ ಆಗಿತ್ತು. ನೀವು ಅವರ ಮಾತಿನ ಕೊಲೆ ಮೊದಲೇ ಮಾಡಿದಿರಲ್ಲವೇ ಎಂದು ಕೇಳಿದರು.

ಗಾಂಧೀಜಿ, ಬಾಬಾಸಾಹೇಬ ಅಂಬೇಡ್ಕರರನ್ನು ನೀವು ಯಾವ ರೀತಿ ನಡೆಸಿಕೊಂಡಿದ್ದೀರೆಂದು ಹೇಳಬೇಕೇ ಎಂದು ಪ್ರಶ್ನೆ ಮಾಡಿದರು.

ಕಾಂಗ್ರೆಸ್ ಪಕ್ಷವು ಜನರನ್ನು ಕೆರಳಿಸಿ, ಮತಬ್ಯಾಂಕ್ ಮಾಡಿಕೊಂಡು ಆಡಳಿತ ನಡೆಸಿದೆ. ಭಾಷಣವೇ ಬೇರೆ, ನಡೆಯೇ ಬೇರೆ ಎಂಬುದು ಕಾಂಗ್ರೆಸ್ ನೀತಿ ಎಂದು ಪ್ರಶ್ನೆಗೆ ಉತ್ತರಿಸಿದರು. ಪರಿಶಿಷ್ಟ ಜಾತಿ, ವರ್ಗಗಳಿಗೆ 42 ಸಾವಿರ ಕೋಟಿ ಮೀಸಲಿಟ್ಟಿದ್ದಾಗಿ ಹೇಳಿದ್ದರು. ಇವತ್ತಿನವರೆಗೆ ಒಂದು ರೂಪಾಯಿಯೂ ಅವರನ್ನು ಸೇರಿಲ್ಲ ಎಂದು ಟೀಕಿಸಿದರು. ಮಮ್ರೇಗಾ ಹೆಸರು ಬದಲಾವಣೆ ಮಾತ್ರ; ಕೆಲಸ ಅದೇ ಇರುತ್ತದಲ್ಲವೇ? ಅವರೆಷ್ಟು ಹೆಸರುಗಳನ್ನು ಅವರು ಬದಲಿಸಿಲ್ಲವೇ ಎಂದು ಕೇಳಿದರು.


Share

You cannot copy content of this page