ಬೆಂಗಳೂರು : ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯದ 2025 ರ ಜಾಗತಿಕ ಎಐ ವೈಬ್ರೆನ್ಸಿ ಸೂಚ್ಯಂಕದಲ್ಲಿ ಭಾರತವು ಕೇವಲ ಒಂದು ವರ್ಷದಲ್ಲಿ ನಾಲ್ಕು ಸ್ಥಾನಗಳನ್ನು ಜಿಗಿದು ಈಗ ಜಾಗತಿಕವಾಗಿ 3 ನೇ ಸ್ಥಾನದಲ್ಲಿದೆ. ಅಮೆರಿಕ ಮತ್ತು ಚೀನಾ ಮಾತ್ರ ಭಾರತಕ್ಕಿಂತ ಮುಂದಿವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈ ವೇಗಕ್ಕೆ ಕರ್ನಾಟಕವು ಬಹುದೊಡ್ಡ ಕೊಡುಗೆ ನೀಡಿದೆ, ಕರ್ನಾಟಕವು ಭಾರತವನ್ನು ಎಐ ನಾಯಕನ ಸ್ಥಾನದಲ್ಲಿ ಇರಿಸುತ್ತಿದೆ, ಸದೃಢ ಎಐ ಮತ್ತು ಡೀಪ್ ಟೆಕ್ ಲಕ್ಷ್ಯದೊಂದಿಗೆ 2025-30ರ ರಾಜ್ಯದ ಸ್ಟಾರ್ಟ್ಅಪ್ ನೀತಿ 25,000 ಸ್ಟಾರ್ಟ್ ಅಪ್ ಗಳನ್ನು ಬೆಂಬಲಿಸಲು 518 ಕೋಟಿ ರೂ. ಅನುದಾನ ಒದಗಿಸಲು ಬದ್ಧವಾಗಿದೆ ಎಂದು ತಿಳಿಸಿದ್ದಾರೆ.
ಈ ಜಾಗತಿಕ ಶ್ರೇಯಾಂಕವು ಆರ್ ಅಂಡ್ ಡಿ, ಪ್ರತಿಭೆ, ಜವಾಬ್ದಾರಿಯುತ ಎಐ ನೀತಿ ಮತ್ತು ಮೂಲಸೌಕರ್ಯ ಸೇರಿದಂತೆ ಹಲವು ಮಾನದಂಡಗಳನ್ನು ಆಧರಿಸಿದೆ. ಭಾರತದ ಶ್ರೇಯಾಂಕದ ಏರಿಕೆಗೆ ಪ್ರಬಲವಾದ ಸಂಶೋಧನಾ ಫಲಿತಾಂಶ, ಅಧಿಕ ಪೇಟೆಂಟ್, ಬೆಳೆಯುತ್ತಿರುವ ಎಐ ಉದ್ಯೋಗ ಮಾರುಕಟ್ಟೆ ಮತ್ತು ವಿಸ್ತರಿಸುತ್ತಿರುವ ಡಿಜಿಟಲ್ ಮೂಲಸೌಕರ್ಯ ಕಾರಣ. ಪ್ರತಿಭೆಯ ವಿಷಯದಲ್ಲಿ, ಭಾರತವು ಈಗಾಗಲೇ ಜಾಗತಿಕವಾಗಿ 2 ನೇ ಸ್ಥಾನದಲ್ಲಿದೆ. ಇದು ನಮ್ಮ AI ಕಾರ್ಯಪಡೆ ಮತ್ತು ಶಿಕ್ಷಣ ಇಕೋ ಸಿಸ್ಟಂನ ಸಾಮರ್ಥ್ಯ ಮತ್ತು ಆಳವನ್ನು ಪ್ರತಿಬಿಂಬಿಸುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಡೀಪ್ ಟೆಕ್ ಕ್ಷೇತ್ರದಲ್ಲಿನ ದಶಕದ 600 ಕೋಟಿ ರೂ. ನಿಧಿ, ಹೊಸ ಐಟಿ ನೀತಿ 2025-30 ಮತ್ತು ಐಐಎಸ್ ಸಿ ನಲ್ಲಿರುವ ಆರ್ಟ್ ಪಾರ್ಕ್ ನಂತಹ ಸಂಸ್ಥೆಗಳು, 9 ಎಕರೆ BRAINZ (ಬೆಂಗಳೂರು ರೊಬೊಟಿಕ್ಸ್ ಮತ್ತು ಎಐ ಇನ್ನೋವೇಶನ್ ವಲಯ) ಕ್ಯಾಂಪಸ್ ಹಾಗೂ ಟೈರ್-2 ಮತ್ತು ಟೈರ್ 3 ನಗರಗಳಲ್ಲಿನ ವೇಗವರ್ಧಕಗಳಿಂದ ಬೆಂಬಲಿತವಾದ 1,000 ಕೋಟಿ ರೂ. ಅನುದಾನದ ಎಐ ಹಾಗೂ ರೊಬೊಟಿಕ್ಸ್ ಸಾಮರ್ಥ್ಯ ಇವೆಲ್ಲವೂ ಒಟ್ಟಾಗಿ ಎಐ ಅನ್ನು ಆರ್ ಅಂಡ್ ಡಿ ಯಿಂದಾಗಿ ದೇಶದ ರಫ್ತು ವಲಯವನ್ನು ವೃದ್ಧಿಸಲು ಅಗತ್ಯವಾದ ಶಕ್ತಿಶಾಲಿ ನೀತಿ-ನಿಧಿ-ಸಿಒಇ ಸಮೂಹದ ಸಂಪನ್ಮೂಲವನ್ನು ಸೃಷ್ಟಿಸಿವೆ ಎಂದು ಸಚಿವರು ತಿಳಿಸಿದ್ದಾರೆ.
