ಸಮಗ್ರ ಸುದ್ದಿ

ಕಾಲೇಜುಗಳಲ್ಲಿ ಚುನಾವಣೆ ನಡೆಸುವ ಉದ್ದೇಶ ಇದೆ: ಡಾ. ಶರಣಪ್ರಕಾಶ್‌ ಪಾಟೀಲ್‌

Share

ಬೆಂಗಳೂರು : ನಾಯಕತ್ವ ಎನ್ನುವುದು ವಿದ್ಯಾರ್ಥಿ ದಿಸೆಯಿಂದಲೇ ಆರಂಭವಾಗುತ್ತದೆ. ಅನೇಕ ನಾಯಕರು ಕಾಲೇಜು ಹಂತದಿಂದಲೇ ಬೆಳದು ಬಂದಿದ್ದಾರೆ. ಈ ನಿಟ್ಟಿನಲ್ಲಿ ಕಾಲೇಜು ಹಂತದಲ್ಲಿ ಚುನಾವಣೆ ಮಾಡುವ ಇಚ್ಛೆ ಇದೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರು ಡಾ. ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಮಿತಿಯ ಸಂಚಾಲಕರೂ ಆಗಿರುವ ಸಚಿವರು, ಜನವರಿ 13ಕ್ಕೆ ಈ ಸಮಿತಿಯ ಮೊದಲ ಸಭೆ ಮಾಡಲಿದ್ದೇವೆ. ಕಾಲೇಜುಗಳಲ್ಲಿ ಚುನಾವಣೆ ನಡೆಸುವ ಸಂಬಂಧ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್‌ ಇತ್ತೀಚೆಗೆ ಸಮಿತಿ ರಚಿಸಿ, ತನ್ನನ್ನು ಸಂಚಾಲಕರನ್ನಾಗಿ ನೇಮಿಸಿದ್ದಾರೆ. ಚುನಾವಣೆ ರೂಪುರೇಷೆ ಕುರಿತು ಸಭೆಯಲ್ಲಿ ಚರ್ಚಿಸುತ್ತೇವೆ. ಸಮಿತಿ ಸಭೆಯಲ್ಲಿ ನಿರ್ಧರಿಸಿದ ವಿಷಯಗಳ ಕುರಿತು ವರದಿ ಮಾಡಿ ಕೆಪಿಸಿಸಿ ಅಧ್ಯಕ್ಷರಿಗೆ ಸಲ್ಲಿಸುತ್ತೇವೆ ಎಂದು ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷರು ನೇಮಿಸಿರುವ ಸಮಿತಿಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್‌, ಮುಖ್ಯ ಸಚೇತಕ ಸಲೀಂ ಅಹಮದ್‌, ಶಾಸಕರಾದ ರಿಜ್ವಾನ್‌ ಅರ್ಷದ್‌, ಬಿ. ಶಿವಣ್ಣ, ವಿಧಾನ ಪರಿಷತ್‌ ಸದಸ್ಯರಾದ ಪುಟ್ಟಣ್ಣ, ಬಸವನಗೌಡ ಬಾದರ್ಲಿ ಹಾಗೂ ಎಚ್‌.ಎಸ್. ಮಂಜುನಾಥ್‌ ಗೌಡ, ಕೀರ್ತಿ ಗಣೇಶ್‌ ಈ ಸಮಿತಿಯಲ್ಲಿ ಇದ್ದಾರೆ.

ಕಾಲೇಜುಗಳಲ್ಲಿ ಋತುಚಕ್ರ ರಜೆ-ಸಿಎಂ ಆದೇಶ ಅಂತಿಮ:

ಕಾಲೇಜು ವಿದ್ಯಾರ್ಥಿನಿಯಯರು, ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರಿಗೆ ಋತುಚಕ್ರ ರಜೆ ಕೊಡುವ ಬಗ್ಗೆ ಮುಖ್ಯಮಂತ್ರಿಯವರು ಸೂಚನೆ ಕೊಟ್ಟರೆ ಮಾಡುತ್ತೇವೆ. ಸಿಎಂ ಆದೇಶವೇ ಅಂತಿಮ ಎಂದು ಡಾ. ಶರಣಪ್ರಕಾಶ್‌ ಪಾಟೀಲ್‌ ತಿಳಿಸಿದರು.

ಎಂಜಿನಿಯರ್ ಮತ್ತು ಮೆಡಿಕಲ್ ಸೀಟು ಶುಲ್ಕ ಹೆಚ್ಚಳ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.


Share

You cannot copy content of this page