ನವದೆಹಲಿ : ದೇಶಧ ಆರ್ಥಿಕ ಬೆಳವಣಿಗೆಗೆ ಕರ್ನಾಟಕ ಪ್ರಮುಖ ಕೊಡುಗೆ ನೀಡುತ್ತಿದೆ, ಆದರೆ GST ತೆರಿಗೆ ಪರಿಷ್ಕರಣೆ, ಹೆಚ್ಚುತ್ತಿರುವ ಸಾಮಾಜಿಕ ಬದ್ಧತೆಗಳು, ಹವಾಮಾನ ವೈಪರಿತ್ಯ ಮತ್ತು ನಗರೀಕರಣದ ಹೆಚ್ಚಳದಿಂದಾಗಿ ರಾಜ್ಯದ ವಿತ್ತೀಯ ಅವಕಾಶಗಳು ಕುಗ್ಗುತ್ತಿದೆ.
ರಾಜ್ಯ ಸರ್ಕಾರದ ವೆಚ್ಚದ ಬದ್ಧತೆಗಳು ಹೆಚ್ಚುತ್ತಿದ್ದು, ರಾಜಸ್ವ ಸಂಗ್ರಹಣೆಯ ಬೆಳವಣಿಗೆಗಿಂತ ವೇಗವಾಗಿ ಹೆಚ್ಚಳವಾಗುತ್ತಿದೆ. ಈ ಸಂದರ್ಭದಲ್ಲಿ, ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಹಿಂದಿನ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ಪ್ರಸ್ತಾಪಿಸಿದ ವಿಷಯಗಳ ಪುನರುಚ್ಚರಿಸುವಿಕೆಯೊಂದಿಗೆ ಕೆಲವು ಹೊಸ ವಿಷಯಗಳನ್ನು 2026–27ರ ಕೇಂದ್ರ ಸರ್ಕಾರದ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ಪ್ರಸ್ತಾಪಿಸಲು ನಾನು ಬಯಸುತ್ತೇನೆ.
GST ದರ ತರ್ಕಬದ್ಧಗೊಳಿಸುವಿಕೆ – ನಷ್ಟ ಪರಿಹಾರ:
GST ದರ ತರ್ಕಬದ್ಧಗೊಳಿಸುವಿಕೆಯ ನಂತರ, ಕರ್ನಾಟಕದ GST ಬೆಳವಣಿಗೆಯು 12% ರಿಂದ 5% ಕ್ಕೆ ಇಳಿದಿದೆ, ಇದರ ಪರಿಣಾಮವಾಗಿ ಪ್ರಸಕ್ತ ವರ್ಷ ₹ 5,000 ಕೋಟಿ ಮತ್ತು ವಾರ್ಷಿಕ ₹ 9,000 ಕೋಟಿ ಕೊರತೆಯಾಗಲಿದೆ.
GST ದರ ತರ್ಕಬದ್ಧಗೊಳಿಸುವಿಕೆಯಿಂದ ಉಂಟಾಗುವ ರಾಜಸ್ವ ನಷ್ಟವನ್ನು ಸರಿದೂಗಿಸಲು ಕೇಂದ್ರ ಸರ್ಕಾರವು ಪಾನ್ ಮಸಾಲಾ ಮೇಲಿನ ಸೆಸ್ ಮತ್ತು ತಂಬಾಕಿನ ಮೇಲಿನ ಅಬಕಾರಿ ಸುಂಕ ವಿಧಿಸಿದೆ. ಆದರೆ ರಾಜ್ಯಗಳಿಗೆ ಈ ರಾಜಸ್ವ ನಷ್ಟವನ್ನು ಸರಿದೂಗಿಸಲು ಯಾವುದೇ ಅವಕಾಶ ಇರುವುದಿಲ್ಲ.
ರಾಜ್ಯಗಳಿಗೆ ರಾಜಸ್ವ ನಷ್ಟವನ್ನು ಸರಿದೂಗಿಸಲು GST ಪರಿಹಾರ ಸೆಸ್‌ನ ಮಾದರಿಯಲ್ಲೇ ಪರ್ಯಾಯ ವ್ಯವಸ್ಥೆಯನ್ನು ರೂಪಿಸುವಂತೆ ಕೋರುತ್ತೇನೆ.
ತಂಬಾಕಿನ ಮೇಲೆ ಅಬಕಾರಿ ಸುಂಕ ಮತ್ತು ಪಾನ್ ಮಸಾಲ ಮೇಲೆ ವಿಧಿಸಿರುವ ಸೆಸ್‌ನ ಹಂಚಿಕೆ:
ತಂಬಾಕು ಮತ್ತು ಪಾನ್ ಮಸಾಲಗೆ ಸಂಬಂಧಿಸಿದಂತೆ ರಾಜ್ಯಗಳು ಸಾರ್ವಜನಿಕ ಆರೋಗ್ಯ, ಜಾರಿ ಮತ್ತು ನಿಯಂತ್ರಕ ವೆಚ್ಚಗಳನ್ನು ಭರಿಸುತ್ತವೆ, ಆದರೆ ಇವುಗಳ ಮೇಲೆ ವಿಧಿಸುವ ಸೆಸ್ ಆದಾಯವನ್ನು ರಾಜ್ಯಗಳಿಗೆ ಹಂಚಿಕೆ ಮಾಡುವ ತೆರಿಗೆ ಪಾಲಿನಿಂದ ಹೊರಗೆ ಇಡಲಾಗಿದೆ.
ತಂಬಾಕಿನ ಮೇಲಿನ ಅಬಕಾರಿ ಸುಂಕ ಮತ್ತು ಪಾನ್ ಮಸಾಲಾ ಮೇಲಿನ ಸೆಸ್ ಅನ್ನು 50:50 ಅನುಪಾತದಲ್ಲಿ ಕೇಂದ್ರ ಹಾಗೂ ರಾಜ್ಯಗಳ ನಡುವೆ ಹಂಚಿಕೆಯಾಗಬೇಕು ಎಂದು ನಾನು ಪ್ರಸ್ತಾಪಿಸುತ್ತೇನೆ. ಇದರಿಂದ ಕೇಂದ್ರ ಹಾಗೂ ರಾಜ್ಯಗಳ ನಡುವಿನ ಸಂಬಂಧವ ಸಧೃಡವಾಗಲಿದೆ.
ಜಲ ಜೀವನ್ ಮಿಷನ್ – ಬಾಕಿ ಇರುವ ಕೇಂದ್ರ ಪಾಲು:
ಜಲ ಜೀವನ್ ಮಿಷನ್ ಯೋಜನೆಗೆ ಕೇಂದ್ರ ಸರ್ಕಾರವು ಈವರೆಗೂ ₹11,786 ಕೋಟಿ ಬಿಡುಗಡೆ ಮಾಡಿರುತ್ತದೆ. ಇದಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರ ಈವರೆಗೂ ₹24,598 ಕೋಟಿ ಬಿಡುಗಡೆ ಮಾಡಿದೆ. ಜಲ ಜೀವನ್ ಮಿಷನ್ ಯೋಜನೆಯ ಕೆಲಸಗಳಿಗೆ ತೊಡಕಾಗಬಾರದೆಂದು ರಾಜ್ಯ ಸರ್ಕಾರವು ತನ್ನ ನಿಗದಿತ ಪಾಲಿಗಿಂತ ಹೆಚ್ಚುವರಿಯಾಗಿ ₹13,004 ಕೋಟಿಗಳನ್ನು ಮುಂಗಡವಾಗಿ ಬಿಡುಗಡೆ ಮಾಡಿದೆ.
ಹಣಕಾಸಿನ ಒತ್ತಡವನ್ನು ಕಡಿಮೆ ಮಾಡಲು ಮತ್ತು ಸಕಾಲಿಕವಾಗಿ ಯೋಜನೆಗಳನ್ನು ಪೂರ್ಣಗೊಳಿಸಲು ರಾಜ್ಯ ಸರ್ಕಾರ ಮಾಡಿರುವ ಮುಂಗಡ ಪಾವತಿಯನ್ನು ಸೇರಿದಂತೆ ಬಾಕಿ ಇರುವ ಕೇಂದ್ರ ಪಾಲನ್ನು ತುರ್ತಾಗಿ ಬಿಡುಗಡೆ ಮಾಡಲು ನಾನು ಕೋರುತ್ತೇನೆ.
MGNREGA ಬದಲಿಗೆ G-RAM-G – ರಾಜ್ಯದ ಹಣಕಾಸಿನ ಮೇಲೆ ಮತ್ತು ಉದ್ಯೋಗದ ಮೇಲಿನ ಪರಿಣಾಮ:
ಬೇಡಿಕೆ ಆಧಾರಿತ MGNREGA ಯಿಂದ ಅನುದಾನ ಹಂಚಿಕೆ-ಆಧಾರಿತ G-RAM-G ಗೆ ಬದಲಾಯಿಸುವುದರಿಂದ ಪರಿಣಾಮಕಾರಿ ಉದ್ಯೋಗ ದಿನಗಳು ಕಡಿಮೆಯಾಗಿವೆ.
ಇದರಿಂದಾಗಿ, ಒಂದೊಮ್ಮೆ 13 ಕೋಟಿ ವ್ಯಕ್ತಿ- ದಿನಗಳ ಜೀವನೋಪಾಯ ಭದ್ರತೆಯನ್ನು ಒದಗಿಸುವುದನ್ನು ಮುಂದುವರಿಸಲು, ಕರ್ನಾಟಕಕ್ಕೆ ಸುಮಾರು 2,000 ಕೋಟಿ ರೂ.ಗಳು ಬೇಕಾಗುತ್ತವೆ, ಇದನ್ನು ಒದಗಿಸಲು ವಿತ್ತೀಯ ಅವಕಾಶವಿರುವುದಿಲ್ಲ. ಅಲ್ಲದೆ G-RAM-G ಯೋಜನೆಯಲ್ಲಿ ರಾಜ್ಯಗಳು ಕೂಡಾ ಅನುದಾನ ಹಂಚಿಕೆ ಮಾಡಬೇಕಾಗಿದ್ದು, ರಾಜ್ಯದ ಹೊರೆಯನ್ನು ಇದು ಹೆಚ್ಚಿಸಿದೆ.
ಆದ್ದರಿಂದ ಯೋಜನಾ ವಿನ್ಯಾಸವನ್ನು ಮರುಪರಿಶೀಲಿಸಿ, ಬೇಡಿಕೆ ಆಧಾರಿತ ಉದ್ಯೋಗ ವ್ಯವಸ್ಥೆಯನ್ನು ಪುನಃ ಸ್ಥಾಪಿಸಿ, ಸಮರ್ಪಕ ಮತ್ತು ಮಿತಿರಹಿತ ಕೇಂದ್ರ ಅನುದಾನ ಒದಗಿಸುವಂತೆ ವಿನಂತಿಸುತ್ತೇನೆ.
PM-AASHA – ಬೆಲೆ ಕೊರತೆ ಪಾವತಿ ಯೋಜನೆ (PDPS):
ಅನೇಕ ಬೆಳೆಗಳಲ್ಲಿ ಕಡಿಮೆ ಖರೀದಿ ಮತ್ತು ಕೊಳೆಯುವಿಕೆಯಿಂದಾಗಿ ಕನಿಷ್ಠ ಬೆಂಬಲ ಬೆಲೆ (MSP) ಖರೀದಿ ಸಾಕಷ್ಟು ಪರಿಣಾಮಕಾರಿಯಾಗಿಲ್ಲ.
ಮೆಕ್ಕೆಜೋಳ, ಸೋಯಾಬೀನ್, ಮಾವು, ಮೆಣಸಿನಕಾಯಿ, ಈರುಳ್ಳಿ, ಟೊಮೇಟೊ, ಅರಿಶಿನ ಮತ್ತು ಶುಂಠಿ ಸೇರಿದಂತೆ 8 ಬೆಳೆಗಳಿಗೆ PDPS ಜಾರಿಗೆ ಕರ್ನಾಟಕವು ಪ್ರಸ್ತಾಪಿಸಿದ್ದು, 2026–27ರಲ್ಲಿ ಸಮಯೋಚಿತ ಅನುಷ್ಠಾನಕ್ಕಾಗಿ PM-AASHA ಅಡಿಯಲ್ಲಿ ₹796 ಕೋಟಿ ಹೆಚ್ಚುವರಿ ಅನುದಾನವನ್ನು ವಿನಂತಿಸುತ್ತೇನೆ.
ಸಮಾಜದ ಮುಂಚೂಣಿ ಕಾರ್ಯಕರ್ತರು (ಆಶಾ ಮತ್ತು ಅಂಗನವಾಡಿ) ಮತ್ತು ಸಾಮಾಜಿಕ ಭದ್ರತೆ:
ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಅಡುಗೆ ಸಿಬ್ಬಂದಿ ಮತ್ತು ಸಹಾಯಕಿಯರಿಗೆ ಕೇಂದ್ರ ಸರ್ಕಾರ ನೀಡುವ ಗೌರವಧನವು ಹಲವು ವರ್ಷಗಳಿಂದ ಹೆಚ್ಚಳವಾಗಿರುವುದಿಲ್ಲ.
ಆದ್ದರಿಂದ ಕೇಂದ್ರ ಪಾಲನ್ನು ಈ ಕೆಳಗಿನಂತೆ ಪರಿಷ್ಕರಿಸುವಂತೆ ಕೋರಲಾಗಿದೆ:
- ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ತಿಂಗಳಿಗೆ ₹8,000
- ಅಡುಗೆ ಸಿಬ್ಬಂದಿ ಮತ್ತು ಸಹಾಯಕಿಯರಿಗೆ ತಿಂಗಳಿಗೆ ₹5,000
ರಾಷ್ಟ್ರೀಯ ಸಾಮಾಜಿಕ ಭದ್ರತಾ ಕಾರ್ಯಕ್ರಮದ (NSAP) ವ್ಯಾಪ್ತಿಯನ್ನು ಒಟ್ಟು ಅರ್ಹ ಫಲಾನುಭವಿಗಳ 50%ಕ್ಕೆ ವಿಸ್ತರಿಸಿ, ಪಿಂಚಣಿ ಮೊತ್ತವನ್ನು ಹೆಚ್ಚಿಸುವಂತೆ ವಿನಂತಿಸಲಾಗಿದೆ.
ಭದ್ರಾ ಮೇಲ್ದಂಡೆ ಯೋಜನೆ:
ರಾಷ್ಟ್ರೀಯ ಯೋಜನೆ ಎಂದು ಘೋಷಿಸಲು ಮತ್ತು 2023-24 ಕೇಂದ್ರ ಆಯವ್ಯಯದಲ್ಲಿ ಘೋಷಿಸಿದಂತೆ ₹5,300 ಕೋಟಿ ಕೇಂದ್ರ ಸಹಾಯವನ್ನು ಬಿಡುಗಡೆ ಮಾಡಲು ವಿನಂತಿಸಲಾಗಿದೆ.
ಹಣಕಾಸು ಆಯೋಗದ ಅನುದಾನಗಳು ಮತ್ತು ವಿಪತ್ತು ಪರಿಹಾರ:
15ನೇ ಹಣಕಾಸು ಆಯೋಗದ ಬಾಕಿ ಅನುದಾನ ಮತ್ತು ವಿಪತ್ತು ಪರಿಹಾರ ಮೊತ್ತಗಳನ್ನು ತ್ವರಿತವಾಗಿ ಬಿಡುಗಡೆ ಮಾಡುವಂತೆ ವಿನಂತಿಸಲಾಗಿದೆ:
- ವಿಶೇಷ ಅನುದಾನ – ₹5,495 ಕೋಟಿ
- ರಾಜ್ಯ ಕೇಂದ್ರಿತ ಅನುದಾನ – ₹6,000 ಕೋಟಿ
- 15ನೇ ಹಣಕಾಸು ಆಯೋಗದ ಅನುದಾನ ಕೊರತೆ – ₹4,044 ಕೋಟಿ
ಪ್ರಾದೇಶಿಕ ಸಮಾನತೆ:
ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶವು ಕಡಿಮೆ ಅಂಕ ಹೊಂದಿದ್ದು, ಇದನ್ನು ಉತ್ತಮಗೊಳಿಸಲು ವಾರ್ಷಿಕ ₹5,000 ಕೋಟಿ ಅನುದಾನವನ್ನು ಹೆಚ್ಚುವರಿಯಾಗಿ ಒದಗಿಸುವಂತೆ ಕೇಂದ್ರ ಸರ್ಕಾರವನ್ನು ಕೋರಲಾಗಿದೆ.
ವಿತ್ತೀಯ ಶಿಸ್ತು ಮತ್ತು ರಾಷ್ಟ್ರೀಯ ಬೆಳವಣಿಗೆಯತ್ತ ಕರ್ನಾಟಕದ ಬದ್ಧತೆಯನ್ನು ಪುನರುಚ್ಚರಿಸುತ್ತಾ,
2026–27ರ ಆಯವ್ಯಯದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಹಣಕಾಸಿನ ಸಮತೋಲನವನ್ನು ಮತ್ತು ವಿಶ್ವಾಸವನ್ನು ಪುನಃ ಸ್ಥಾಪಿಸುವಂತೆ ಮನವಿ ಮಾಡಲಾಗಿದೆ.
