ಸಮಗ್ರ ಸುದ್ದಿ

ನಕ್ಷೆ ಮಂಜೂರಾತಿ ಪಡೆಯದೇ ನಿರ್ಮಿಸಿದ್ದ ಅನಧಿಕೃತ ಕಟ್ಟಡ ತೆರವು ಕಾರ್ಯಾಚರಣೆ: ಡಿ.ಎಸ್.ರಮೇಶ್

Share

ಬೆಂಗಳೂರು: ಬೆಂಗಳೂರು ಪೂರ್ವ ನಗರ ಪಾಲಿಕೆಯ ವೈಟ್ ಫೀಲ್ಡ್ ಉಪವಿಭಾಗ ವ್ಯಾಪ್ತಿಯ ನಲ್ಲೂರಹಳ್ಳಿ, ವಿಕ್ಟೋರಿಯಾ ವ್ಯೂ ಬಡಾವಣೆಯಲ್ಲಿ ನಕ್ಷೆ ಮಂಜೂರಾತಿ ಪಡೆಯದೇ ಅನಧಿಕೃತವಾಗಿ ನಿರ್ಮಿಸಿದ್ದ ಕಟ್ಟಡವನ್ನು ಕಾರ್ಯಾಚರಣೆ ಮೂಲಕ ತೆರವುಗೊಳಿಸಲಾಯಿತು ಎಂದು ಆಯುಕ್ತರಾದ ಡಿ.ಎಸ್.ರಮೇಶ್ ಅವರು ತಿಳಿಸಿದರು.

ಮಹದೇವಪುರ ವಲಯದ ಜಂಟಿ ಆಯುಕ್ತರಾದ ಡಾ: ದಾಕ್ಷಾಯಿಣಿ ಕೆ. ಅವರ ನೇತೃತ್ವದಲ್ಲಿ ನಕ್ಷೆ ಮಂಜೂರಾತಿ ಪಡೆಯದೇ ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸಲಾಗಿದ್ದ ಆರು ಮಹಡಿ ಕಟ್ಟಡದ ತೆರವು ಕಾರ್ಯಾಚರಣೆಯನ್ನು ಇಂದು ನಡೆಸಲಾಯಿತು.

ತೆರವು ಕಾರ್ಯಾಚರಣೆ ನಡೆಸಲಾದ ಕಟ್ಟಡದ ವಿವರಗಳು

ಮಾಲೀಕರಾದ ಶ್ರೀಕಾಂತ್ ರೆಡ್ಡಿ ನಿವೇಶನದ ಸಂಖ್ಯೆ ಮತ್ತು ವಿಳಾಸ:02, ವಿಕ್ಟೋರಿಯಾ ವ್ಯೂ ಲೇಔಟ್‌, ನಲ್ಲೂರಹಳ್ಳಿ
ನಿವೇಶನದ ಅಳತೆ :1,600 ಚದರ ಅಡಿಗಳು, ತಳ ಮಹಡಿ ಸೇರಿದಂತೆ ಒಟ್ಟು 6 ಮಹಡಿಗಳ ಅನಧಿಕೃತ ಕಟ್ಟಡ ತೆರವು ಮಾಡಲಾಗಿದೆ.

ಕಾರ್ಯಾಚರಣೆಯ ವಿವರ:

ಈ ಕಟ್ಟಡವು ನಕ್ಷೆ ಮಂಜೂರಾತಿ ಪಡೆಯದೇ ಕಟ್ಟಡ ನಿಯಮಾವಳಿಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ ನಿರ್ಮಿಸಲ್ಪಟ್ಟಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ, ಮಾಲೀಕರಿಗೆ ಅಗತ್ಯ ನೋಟಿಸ್‌ಗಳನ್ನು ಜಾರಿಗೊಳಿಸಿದ ಬಳಿಕ ಸ್ವತ್ತಿನ ಮಾಲೀಕರಿಗೆ ನೈಸರ್ಗಿಕ ನ್ಯಾಯದಡಿಯಲ್ಲಿ ಸಾಕಷ್ಟು ಕಾಲಾವಕಾಶ ನೀಡಿದ್ದರೂ, ಮಾಲೀಕರು ಅನಧಿಕೃತ ಕಟ್ಟಡವನ್ನು ಸ್ವಯಂ ತೆರವುಗೊಳಿಸದೇ ಇರುವುದರಿಂದ ಪೂರ್ವ ನಗರ ಪಾಲಿಕೆ ವೈಟ್ ಫೀಲ್ಡ್ ಉಪವಿಭಾಗ ವ್ಯಾಪ್ತಿಯ ಇಂಜಿನಿಯರ್ ವಿಭಾಗದ ಅಧಿಕಾರಿಗಳು ತೆರವು ಕಾರ್ಯಚರಣೆಯನ್ನು ನಡೆಸಿದರು.

ಕಾರ್ಯಾಚರಣೆ ವೇಳೆ ಅಗತ್ಯ ಸುರಕ್ಷತಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು, ಬ್ರೇಕರ್ ಮತ್ತು ಕಂಪ್ರೆಸರ್ ಯಂತ್ರಗಳನ್ನು ಬಳಸಿಕೊಂಡು ತೆರವುಗೊಳಿಸಲು ಕ್ರಮ ವಹಿಸಲಾಯಿತು ಎಂದು ಆಯುಕ್ತರು ತಿಳಿಸಿದರು.

ನಗರ ಪಾಲಿಕೆಯ ಸ್ಪಷ್ಟ ನಿಲುವು:

ಅಕ್ರಮ ಕಟ್ಟಡಗಳು ಸಾರ್ವಜನಿಕ ಸುರಕ್ಷತೆ ಮತ್ತು ಯೋಜಿತ ನಗರ ಅಭಿವೃದ್ಧಿಗೆ ಗಂಭೀರ ಅಪಾಯವನ್ನುಂಟು ಮಾಡುತ್ತವೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಪೂರ್ವ oನಗರ ಪಾಲಿಕೆ, ಕಟ್ಟಡ ನಿಯಮ ಉಲ್ಲಂಘನೆಗಳ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿ ಅನುಸರಿಸುತ್ತಿದ್ದು, ಮುಂದೆಯೂ ಇಂತಹ ಅಕ್ರಮ ನಿರ್ಮಾಣಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಮುಂದುವರಿಯಲಿದೆ ಎಂದು ಆಯುಕ್ತರು ತಿಳಿಸಿದರು.

ಸಾರ್ವಜನಿಕರಲ್ಲಿ ಮನವಿ:

ಕಟ್ಟಡ ನಿರ್ಮಾಣಕ್ಕೆ ಮೊದಲು ಅಗತ್ಯ ಅನುಮೋದನೆಗಳನ್ನು ಪಡೆಯುವಂತೆ, ಅನುಮೋದಿತ ನಕ್ಷೆ ಮತ್ತು ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಗರ ಪಾಲಿಕೆಯು ನಾಗರಿಕರು, ಕಟ್ಟಡ ಮಾಲೀಕರು ಹಾಗೂ ಬಿಲ್ಡರ್ ಗಳಲ್ಲಿ ಈ ಮೂಲಕ ಮನವಿ ಮಾಡಿದೆ. ನಿಯಮ ಉಲ್ಲಂಘನೆಯು ಕಂಡುಬಂದಲ್ಲಿ ಕಾನೂನು ಕ್ರಮ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಕಾರ್ಯಾಚರಣೆಯಲ್ಲಿ ಉಪ ನಿರ್ದೇಶಕರು (ನಗರ ಯೋಜನೆ), ಸಹಾಯಕ ಕಾರ್ಯಪಾಲಕ ಅಭಿಯಂತರರು, ಸಹಾಯಕ ಅಭಿಯಂತರರು ಹಾಗೂ ಇತರೆ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.


Share

You cannot copy content of this page