ಸಮಗ್ರ ಸುದ್ದಿ

ಸರ್ಕಾರದಿಂದ ಗಾಯಾಳುಗಳ ಚಿಕಿತ್ಸಾ ವೆಚ್ಚ: ಬೈರತಿ ಸುರೇಶ್| ಎಲೆಕ್ಟ್ರಿಕ್ ಬಸ್ ಕಾರ್ಯಾಚರಣೆ, ಕಾರ್ಯಕ್ಷಮತೆ ಬಗ್ಗೆ ಅಧ್ಯಯನಕ್ಕೆ ಆದೇಶ

Share

ಬೆಂಗಳೂರು: ಬೆಂಗಳೂರು ನಗರದ ಕೆಆರ್ ವೃತ್ತದಲ್ಲಿ ಶನಿವಾರ ಬೆಳಗ್ಗೆ ನಡೆದ ಅಪಘಾತದಲ್ಲಿ ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.

ಇದೇ ವೇಳೆ, ಎಲೆಕ್ಟ್ರಿಕ್ ಬಸ್ ಗಳ ಕಾರ್ಯಾಚರಣೆ ಮತ್ತು ಅವುಗಳ ಕಾರ್ಯಕ್ಷಮತೆ ಬಗ್ಗೆ ಆಳವಾದ ಅಧ್ಯಯನ ನಡೆಸಲು ಇಲಾಖೆ ಕಾರ್ಯದರ್ಶಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.

ಅಪಘಾತದಿಂದ ಗಾಯಗೊಂಡು ಸೇಂಟ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳುಗಳನ್ನು ಭೇಟಿ ಮಾಡಿದ ಸಚಿವರು, ಗಾಯಾಳುಗಳ ಯೋಗಕ್ಷೇಮವನ್ನು ವಿಚಾರಿಸಿ, ಘಟನೆಯ ಬಗ್ಗೆ ಮಾಹಿತಿ ಪಡೆದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಂಟಿಸಿಯ ಎರಡೂ ಬಸ್ ಗಳ ಮಧ್ಯೆ ಈ ಅಪಘಾತ ಸಂಭವಿಸಿದೆ. ಇದರಿಂದ ಒಟ್ಟು 14 ಜನರಿಗೆ ಗಾಯಗಳಾಗಿದ್ದು, ಕೆಲವರಿಗೆ ಪ್ರಾಥಮಿಕ ಚಿಕಿತ್ಸೆ ಕೊಟ್ಟು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಓರ್ವ ಚಾಲಕ ಮತ್ತು ಇಬ್ಬರು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು ಅವರಿಗೆ ಸೇಂಟ್ ಮಾರ್ಥಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರಿಗೆ ಎಂಆರ್ ಐ, ಸಿಟಿ ಸ್ಕ್ಯಾನ್ ಸೇರಿದಂತೆ ಇನ್ನಿತರೆ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಸರ್ಕಾರದಿಂದ ಚಿಕಿತ್ಸಾ ವೆಚ್ಚ:

ಬಸ್ ಗಳಿಗೆ ವಿಮೆ ಇರುವ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣದ ವಿಮೆಯನ್ನು ಕ್ಲೇಮ್ ಮಾಡಿ ಗಾಯಾಳುಗಳಿಗೆ ಕೊಡಿಸುವ ವ್ಯವಸ್ಥೆ ಮಾಡಲಾಗುತ್ತದೆ. ಗಾಯಗೊಂಡು ಆಸ್ಪತ್ರೆಗೆ ದಾಖಲಾಗುವ ವೇಳೆ ಪ್ರಯಾಣಿಕರೇ ಪಾವತಿ ಮಾಡಿರುವ ಹಣವನ್ನು ಬಿಎಂಟಿಸಿ ವಾಪಸ್ ಮಾಡಿದ್ದು, ಗಾಯಾಳುಗಳ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಹೇಳಿದರು.

ಎಲೆಕ್ಟ್ರಿಕ್ ಬಸ್ ಕಾರ್ಯಕ್ಷಮತೆ ಬಗ್ಗೆ ಅಧ್ಯಯನ

ಕೇಂದ್ರ ಸರ್ಕಾರದ ಅನುದಾನದಲ್ಲಿ ಗುತ್ತಿಗೆ ಆಧಾರದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ನೀಡಲಾಗುತ್ತಿದೆ. ರಾಜ್ಯ ಸರ್ಕಾರ ಪ್ರತಿ ಎಲೆಕ್ಟ್ರಿಕ್ ಬಸ್ ಗೆ ತಿಂಗಳಿಗೆ 3 ಲಕ್ಷ ರೂಪಾಯಿಯಂತೆ ವಾರ್ಷಿಕ 36 ಲಕ್ಷ ರೂಪಾಯಿಗೂ ಅಧಿಕ ಹಣವನ್ನು ಬಸ್ ಪೂರೈಕೆ ಕಂಪನಿಗೆ ನೀಡಬೇಕಾಗುತ್ತದೆ. ಇದರಿಂದ ಆಗಬಹುದಾದ ಆರ್ಥಿಕ ಹೊರೆ ಸೇರಿದಂತೆ ಇನ್ನಿತರ ಅಂಶಗಳ ಬಗ್ಗೆ ಚಿಂತನೆ ನಡೆಸಬೇಕಾಗಿದೆ ಎಂದು ಸಚಿವರು ತಿಳಿಸಿದರು.

ಇವಿ ಬಸ್ ಗಳ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿವೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಕಾರಣದಿಂದಲೇ ಎಲೆಕ್ಟ್ರಿಕ್ ಬಸ್ ಗಳ ಕಾರ್ಯಾಚರಣೆ ಮತ್ತು ಕಾರ್ಯಕ್ಷಮತೆ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡುವಂತೆ ಇಲಾಖೆ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಈ ಬಸ್ ಗಳ ಸ್ಥಿತಿಗತಿಯನ್ನು ಪರಿಶೀಲಿಸಿದ ನಂತರವೇ ನೂತನ ಎಲೆಕ್ಟ್ರಿಕ್ ಬಸ್ ಗಳ ಸಂಚಾರದ ಬಗ್ಗೆ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.


Share

You cannot copy content of this page