ಬೆಂಗಳೂರು: ಬೆಂಗಳೂರು ಪೂರ್ವ ನಗರ ಪಾಲಿಕೆಯ ಕೃಷ್ಣರಾಜಪುರ ವಲಯ ವ್ಯಾಪ್ತಿಯ ಹಳೆ ಮದ್ರಾಸ್ ಮುಖ್ಯರಸ್ತೆಯ ರಸ್ತೆಯ ಎರಡು ಬದಿಗಳಲ್ಲಿನ ವಾಣಿಜ್ಯ ಮಳಿಗೆಗಳ ಮುಂಭಾಗದಲ್ಲಿ ಅಳವಡಿಸಲಾಗಿರುವ ಅನಧಿಕೃತ ಜಾಹೀರಾತು ಹೋರ್ಡಿಂಗ್ ಗಳು ಹಾಗೂ ಎಲ್.ಇ.ಡಿ ಜಾಹೀರಾತು ಫಲಕಗಳನ್ನು ನಗರ ಪಾಲಿಕೆಯ ಇಂಜಿನಿಯರಿಂಗ್, ಕಂದಾಯ, ವಿದ್ಯುತ್ ಮತ್ತು ಆರೋಗ್ಯ ಇಲಾಖೆಯ ತಂಡವು ವಿಶೇಷ ಜಂಟಿ ಕಾರ್ಯಾಚರಣೆ ಮೂಲಕ ತೆರವುಗೊಳಿಸಲಾಯಿತು ಎಂದು ಪೂರ್ವ ನಗರ ಪಾಲಿಕೆ ಆಯುಕ್ತರಾದ ಡಿ.ಎಸ್. ರಮೇಶ್ ಅವರು ತಿಳಿಸಿದರು.
ಕೃಷ್ಣರಾಜಪುರ ವಲಯದ ಜಂಟಿ ಆಯುಕ್ತರಾದ ಡಾ: ಸುಧಾ ರವರ ನೇತೃತ್ವದಲ್ಲಿ ಈ ವಿಶೇಷ ಕಾರ್ಯಾಚರಣೆಯನ್ನು ನಡೆಸಲಾಗಿದ್ದು, ಮುಖ್ಯರಸ್ತೆಯ ಎಡ ಮತ್ತು ಬಲ ಭಾಗಗಳಲ್ಲಿ
ವಾಣಿಜ್ಯ ಮಳಿಗೆಗಳ ಮುಂಭಾಗಗಳಲ್ಲಿ ಅಳವಡಿಸಿಕೊಂಡಿದ್ದ 17ಕ್ಕೂ ಹೆಚ್ಚಿನ ಸಂಖ್ಯೆ ಅನಧಿಕೃತ ಜಾಹೀರಾತು ಹೋರ್ಡೀಂಗ್ಸ್ ಮತ್ತು ಎಲ್.ಇ.ಡಿ ಬೋರ್ಡ್ ಗಳನ್ನು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗದಂತೆ ಹಾಗೂ ಸಾರ್ವಜನಿಕ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ರಾತ್ರಿ 10.00 ಗಂಟೆಯಿಂದ ಬೆಳಗಿನ ಜಾವ 4.00 ಗಂಟೆಯ ಸಮಯದಲ್ಲಿ ವಿಶೇಷ ಕಾರ್ಯಾಚರಣೆ ಮೂಲಕ ತೆರವುಗೊಳಿಸಲಾಯಿತು ಎಂದು ಆಯುಕ್ತರು ತಿಳಿಸಿದರು.
ಯಂತ್ರೋಪಕರಣ ಮತ್ತು ಸಿಬ್ಬಂದಿಗಳ ನಿಯೋಜನೆ:
ವಿಶೇಷ ಕಾರ್ಯಾಚರಣೆಯಲ್ಲಿ 1-ಕ್ರೇನ್, 2-ಗ್ಯಾಸ್ ಕಟ್ಟರ್ ಮೇಷಿನ್, 5-ಟ್ರ್ಯಾಕ್ಟರ್, 120 ಹೆಚ್ಚಿನ ಸಂಖ್ಯೆಯ ಸಿಬ್ಬಂದಿ ಹಾಗೂ ಇನ್ನಿತರೆ ಯಂತ್ರೋಪಕರಗಳನ್ನು ಬಳಸಿಕೊಂಡು ಜಂಟಿ ಕಾರ್ಯಾಚರಣೆಯನ್ನು ಕೈಗೊಳ್ಳಲಾಯಿತು ಎಂದು ತಿಳಿಸಿದರು.
ಎಚ್ಚರಿಕೆ ಸಂದೇಶ:
ನಗರದ ಸೌಂದರ್ಯ, ಸಾರ್ವಜನಿಕ ಸುರಕ್ಷತೆ ಹಾಗೂ ಸಂಚಾರ ವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಇಂತಹ ಅನಧಿಕೃತ ಜಾಹೀರಾತುಗಳ ವಿರುದ್ಧ ಪ್ರತಿ ವಾರ ನಿಯಮಿತವಾಗಿ ಇದೇ ರೀತಿಯ ವಿಶೇಷ ಕಾರ್ಯಾಚರಣೆಯನ್ನು ಮುಂದುವರಿಸಲಾಗುವುದು. ಅನುಮತಿ ಪಡೆಯದೇ ಜಾಹೀರಾತು ಫಲಕಗಳನ್ನು ಅಳವಡಿಸುವುದು ಕಾನೂನುಬಾಹಿರವಾಗಿದ್ದು, ಇಂತಹ ಅಕ್ರಮ ಚಟುವಟಿಕೆಗಳ ವಿರುದ್ಧ ಬೆಂಗಳೂರು ಪೂರ್ವ ನಗರ ಪಾಲಿಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ತೆರವು ಕಾರ್ಯಾಚರಣೆ ಜೊತೆಗೆ ದಂಡನಾತ್ಮಕ ಕ್ರಮಗಳನ್ನೂ ಕೈಗೊಳ್ಳಲಾಗುವುದು ಎಂದು ಆಯುಕ್ತರು ಎಚ್ಚರಿಸಿದರು.
ವಾಣಿಜ್ಯ ಮಳಿಗೆದಾರರಲ್ಲಿ ಮನವಿ:
ಪೂರ್ವ ನಗರ ಪಾಲಿಕೆ ವ್ಯಾಪಿಯಲ್ಲಿ ಎಲ್ಲಾ ವಾಣಿಜ್ಯ ಮಳಿಗೆದಾರರು ತಮ್ಮ ಮಳಿಗೆಗಳ ಮುಂಭಾಗದಲ್ಲಿ ಒಂದಕ್ಕಿಂತ ಹೆಚ್ಚಿನ ಸಂಖ್ಯೆಯ ಜಾಹೀರಾತು ಫಲಕವನ್ನು ಅಳವಡಿಸುವಂತಿಲ್ಲ. ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಹೊಸದಾಗಿ ಜಾರಿ ತಂದಿರುವ ಜಾಹೀರಾತು ನಿಯಮಾವಳಿಯಂತೆ ಅನುಮತಿ ಪಡೆಯದೇ ಅಳವಡಿಸುವ ಎಲ್ಲಾ ಜಾಹೀರಾತುಗಳು ಅನಧಿಕೃತವಾಗಿದ್ದು ಈ ಕೂಡಲೇ ವಾಣಿಜ್ಯ ಮಳಿಗೆ ಮಾಲೀಕರು ಸ್ವಯಂ ಆಗಿ ಎಲ್ಲಾ ರೀತಿಯ ಅನಧಿಕೃತ ಜಾಹೀರಾತು ಫಲಕಗಳನ್ನು ತೆರವು ಮಾಡಬೇಕೆಂದು ಆಯುಕ್ತರು ಮನವಿ ಮಾಡಿದರು.
ಕಾರ್ಯಾಚರಣೆಯಲ್ಲಿ ಡಾ: ವಿಶ್ವೇಶರಯ್ಯ-ಆರೋಗ್ಯ ವೈದ್ಯಾಧಿಕಾರಿ , ವೈ.ಆರ್. ರಮೇಶ್ – ಕಾರ್ಯಪಾಲಕ ಅಭಿಯಂತರರು, ಡಾ: ಬಸವರಾಜ್ ಮಗಿ-ಕಂದಾಯ ಅಧಿಕಾರಿ, ಕೆ.ಆರ್.ಪುರ ವಲಯದ ಇಂಜಿನಿಯರಿಂಗ್, ಕಂದಾಯ, ವಿದ್ಯುತ್ ಮತ್ತು ಆರೋಗ್ಯ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.
