ಸಮಗ್ರ ಸುದ್ದಿ

ನಾಗರಿಕ ಸೇವೆಗಳ ಸುಧಾರಣೆಗಾಗಿ ಆಯುಕ್ತರಿಂದ ನಿರಂತರ ಫೋನ್–ಇನ್ ಕಾರ್ಯಕ್ರಮ

Share

ಬೆಂಗಳೂರು: ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿನ ಸಾರ್ವಜನಿಕ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಲ್ಪಿಸುವ ಉದ್ದೇಶದಿಂದ, ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರು ಇಂದು ಬೆಳಿಗ್ಗೆ 7.00 ಗಂಟೆಗೆ ಅಮೃತಹಳ್ಳಿ ಮುಖ್ಯರಸ್ತೆಯಲ್ಲಿರುವ ಬ್ಯಾಟರಾಯನಪುರದ ತಮ್ಮ ಕಚೇರಿಯಲ್ಲಿ ಫೋನ್–ಇನ್ ಕಾರ್ಯಕ್ರಮವನ್ನು ಆಯೋಜಿಸಿ, ನಾಗರಿಕರಿಂದ ನೇರವಾಗಿ ಅಹವಾಲುಗಳನ್ನು ಸ್ವೀಕರಿಸಿದರು.

ಈ ಕಾರ್ಯಕ್ರಮದ ವೇಳೆ ವಿವಿಧ ವಾರ್ಡ್‌ಗಳಿಂದ ಬಂದ ಹಲವು ದೂರಗಳನ್ನು ಆಲಿಸಿ, ಅವುಗಳ ತ್ವರಿತ ಪರಿಹಾರಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಿದರು.

ಫೋನ್–ಇನ್ ಕಾರ್ಯಕ್ರಮದ ಪ್ರಗತಿ:

ಸೆಪ್ಟೆಂಬರ್ 26ರಿಂದ ಆರಂಭಗೊಂಡ ಈ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮದ ಮೂಲಕ ಕಳೆದ 17 ವಾರಗಳಲ್ಲಿ ಒಟ್ಟು 940 ಅಹವಾಲುಗಳು ದಾಖಲಾಗಿದ್ದು, ಅವುಗಳಲ್ಲಿ 677 ಅಹವಾಲುಗಳಿಗೆ ಈಗಾಗಲೇ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಉತ್ತರ ನಗರ ಪಾಲಿಕೆ ವ್ಯಾಪ್ತಿಗೆ ಸೇರದ 55 ಅಹವಾಲುಗಳನ್ನು ಸಂಬಂಧಪಟ್ಟ ಇತರೆ ನಗರ ಪಾಲಿಕೆಗಳು ಹಾಗೂ ಇಲಾಖೆಗಳಿಗೂ ವರ್ಗಾಯಿಸಲಾಗಿದ್ದು, ಉಳಿದ 176 ಅಹವಾಲುಗಳ ಕುರಿತು ತ್ವರಿತ ಕ್ರಮ ಜರುಗಿಸುವಂತೆ ಆಯುಕ್ತರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

55 ಅಹವಾಲುಗಳು ದಾಖಲು:

ಇಂದು ನಡೆದ ಫೋನ್–ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ 44 ಕರೆಗಳು ಬಂದಿದ್ದು, ಅವುಗಳ ಮೂಲಕ ಒಟ್ಟು 55 ಅಹವಾಲುಗಳು ದಾಖಲಾಗಿವೆ. ಎಲ್ಲಾ ಅಹವಾಲುಗಳನ್ನು ಪರಿಶೀಲಿಸಿ, ತಕ್ಷಣ ಸ್ಪಂದಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ರಸ್ತೆಗಳ ಸಮರ್ಪಕ ನಿರ್ವಹಣೆಗೆ ಆದ್ಯತೆ:

ರಸ್ತೆ ನಿರ್ವಹಣೆಗೆ ಸಂಬಂಧಿಸಿದಂತೆ 21 ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ದುರಸ್ತಿ ಕಾರ್ಯಗಳಲ್ಲಿ ಗುಣಮಟ್ಟ ಕಾಪಾಡಿಕೊಂಡು, ಆದ್ಯತೆಯ ಆಧಾರದಲ್ಲಿ ಕೆಲಸಗಳನ್ನು ವೇಗಗೊಳಿಸಿ ಸಾರ್ವಜನಿಕರಿಗೆ ಸುರಕ್ಷಿತ ಸಂಚಾರ ವ್ಯವಸ್ಥೆ ಒದಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ತ್ಯಾಜ್ಯ ನಿರ್ವಹಣೆಗೆ ಒತ್ತು:

ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ಹಾಗೂ ಉದ್ದಿಮೆ ಪರವಾನಿಗೆಗೆ ಸಂಬಂಧಿಸಿದಂತೆ ತಲಾ 8 ಅಹವಾಲುಗಳು ದಾಖಲಾಗಿದ್ದು, ಎಲ್ಲಾ ವಾರ್ಡ್‌ಗಳಲ್ಲಿ ಸಮಯಪಾಲನೆಯೊಂದಿಗೆ ತ್ಯಾಜ್ಯ ಸಂಗ್ರಹಣೆ ನಡೆಯುವಂತೆ ವೈಜ್ಞಾನಿಕ ವಿಲೇವಾರಿ ವ್ಯವಸ್ಥೆ ಜಾರಿಗೊಳಿಸಬೇಕು ಮತ್ತು ಉದ್ದಿಮೆ ಪರವಾನಿಗೆಗಳಿಗೆ ಸಂಬಂಧಿಸಿದಂತೆ ಬಂದ ಅಹವಾಲುಗಳಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಪಟ್ಟ ವಿಭಾಗಗಳಿಗೆ ಸೂಚಿಸಿದರು.

ಬೀದಿ ನಾಯಿಗಳ ದೂರುಗಳಿಗೆ ತ್ವರಿತವಾಗಿ ಸ್ಪಂದಿಸಿ:

ಬೀದಿ ನಾಯಿಗಳ ಕುರಿತು 06 ದೂರುಗಳು ಇಂದಿನ ಫೋನ್ ಇನ್ ಕಾರ್ಯಕ್ರಮದಲ್ಲಿ ದಾಖಲಾಗಿದ್ದು, ಇದಕ್ಕೆ ತ್ವರಿತವಾಗಿ ಸ್ಪಂದಿಸುವಂತೆ ಸಂಬಂಧಪಟ್ಟ ಪಶುಪಾಲನಾ ವಿಭಾಗದ ಅಧಿಕಾರಿಗಳಿಗೆ ಆಯುಕ್ತರು ಸೂಚನೆ ನೀಡಿದರು.

ಪ್ರತಿ ಶುಕ್ರವಾರ ಫೋನ್–ಇನ್ ಕಾರ್ಯಕ್ರಮ:

ನಾಗರಿಕರ ಸಮಸ್ಯೆಗಳಿಗೆ ನೇರ ಪರಿಹಾರ ಒದಗಿಸುವ ಹಾಗೂ ಅಭಿವೃದ್ಧಿ ಕಾಮಗಾರಿಗಳ ಸ್ಥಿತಿಗತಿಯನ್ನು ಪರಿಶೀಲಿಸುವ ಉದ್ದೇಶದಿಂದ, ಆಯುಕ್ತರ ಫೋನ್–ಇನ್ ಕಾರ್ಯಕ್ರಮವು ಪ್ರತಿ ಶುಕ್ರವಾರವೂ ನಿಯಮಿತವಾಗಿ ನಡೆಯಲಿದೆ.


Share

You cannot copy content of this page