ಸಮಗ್ರ ಸುದ್ದಿ

‘ತಾಯಿಯೊಬ್ಬಳು, ಮಾತೃಭಾಷೆ ಹಲವು’ ಪ್ರದರ್ಶನ ಭಾರತ–ಇಟಲಿ ಸಾಂಸ್ಕೃತಿಕ ಬಾಂಧವ್ಯದ ಪ್ರತೀಕ: ಸಚಿವ ಕೆ.ಜೆ. ಜಾರ್ಜ್‌

Share

ಬೆಂಗಳೂರು: ತಾಯಿ ಮತ್ತು ಮಗುವಿನ ನಡುವಿನ ಸಾರ್ವತ್ರಿಕ ಮಮತೆ ಹಾಗೂ ಕಾಳಜಿಯ ಭಾವನೆಯನ್ನು ಕೇಂದ್ರವಾಗಿಟ್ಟುಕೊಂಡು ಭಾರತ ಮತ್ತು ಇಟಲಿಯ ಕಲಾ ಪರಂಪರೆಯನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ‘ತಾಯಿಯೊಬ್ಬಳು, ಮಾತೃಭಾಷೆ ಹಲವು’ ವಿಶೇಷ ಕಲಾ ಪ್ರದರ್ಶನವು ದೇಶಗಳ ನಡುವಿನ ಸಾಂಸ್ಕೃತಿಕ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಇಂಧನ ಹಾಗೂ ಪ್ರವಾಸೋದ್ಯಮ ಸಚಿವರಾದ ಕೆ.ಜೆ. ಜಾರ್ಜ್‌ ಹೇಳಿದರು.

ಬೆಂಗಳೂರಿನ ನ್ಯಾಷನಲ್‌ ಗ್ಯಾಲರಿ ಆಫ್‌ ಮಾಡರ್ನ್‌ ಆರ್ಟ್‌ (NGMA)ನಲ್ಲಿ ಆಯೋಜಿಸಲಾಗಿರುವ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ವಿಭಿನ್ನ ಭಾಷೆ, ಭೌಗೋಳಿಕತೆ ಮತ್ತು ಕಾಲಘಟ್ಟಗಳ ಕಲಾ ಪರಂಪರೆಗಳನ್ನು ಒಟ್ಟುಗೂಡಿಸಿರುವುದು ಈ ಪ್ರದರ್ಶನದ ವಿಶೇಷತೆ ಎಂದರು.

ಪ್ರದರ್ಶನದಲ್ಲಿ ಇಟಲಿಯ ಪ್ರಸಿದ್ಧ ಪುನರುಜ್ಜೀವನ ಕಾಲದ ಕಲಾವಿದ ಸ್ಯಾಂಡ್ರೊ ಬೊಟಿಚೆಲ್ಲಿ ಅವರ ಮೂಲ ‘ಮಡೊನ್ನಾ ಅಂಡ್‌ ಚೈಲ್ಡ್‌’ ಕಲಾಕೃತಿಯ ಜೊತೆಗೆ ಪ್ರಾಚೀನ ಎಟ್ರಸ್ಕನ್‌ ಶಿಲ್ಪಗಳು, ಕುಷಾಣ ಕಾಲದ ‘ಹಾರಿತಿ’ ಶಿಲ್ಪಗಳು ಹಾಗೂ ರಾಜಸ್ಥಾನದ ‘ಸ್ಕಂದಮಾತಾ’ ಶಿಲ್ಪಗಳು ಸೇರಿದಂತೆ ಅಪರೂಪದ ಭಾರತೀಯ ಕಲಾ ಸಂಪತ್ತನ್ನು ಪ್ರದರ್ಶಿಸಲಾಗುತ್ತಿದೆ.

ಬೆಂಗಳೂರಿಗೆ ಜಾಗತಿಕ ಸಾಂಸ್ಕೃತಿಕ ಪ್ರವಾಸೋದ್ಯಮದ ಸ್ಥಾನಮಾನ

“ಬೆಂಗಳೂರು ತಂತ್ರಜ್ಞಾನ ಮತ್ತು ನವೋದ್ಯಮದ ಕೇಂದ್ರ ಮಾತ್ರವಲ್ಲ; ಕಲೆ, ಪರಂಪರೆ ಮತ್ತು ಸಾಂಸ್ಕೃತಿಕ ಸಂವಾದಕ್ಕೂ ಪ್ರಮುಖ ಕೇಂದ್ರವಾಗಿ ಬೆಳೆಯುತ್ತಿದೆ. ಇಂತಹ ಅಂತರರಾಷ್ಟ್ರೀಯ ಪ್ರದರ್ಶನಗಳು ಬೆಂಗಳೂರಿನ ಜಾಗತಿಕ ಸಾಂಸ್ಕೃತಿಕ ಪ್ರವಾಸೋದ್ಯಮದ ಸ್ಥಾನಮಾನವನ್ನು ಮತ್ತಷ್ಟು ಬಲಪಡಿಸುತ್ತವೆ,” ಎಂದು ಸಚಿವರು ಹೇಳಿದರು.

ಕರ್ನಾಟಕವು 500ಕ್ಕೂ ಹೆಚ್ಚು ಕೇಂದ್ರ ಸಂರಕ್ಷಿತ ಸ್ಮಾರಕಗಳು ಹಾಗೂ ನಾಲ್ಕು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳನ್ನು ಹೊಂದಿದ್ದು, ರಾಜ್ಯದ ಶ್ರೀಮಂತ ಪರಂಪರೆಯನ್ನು ಸಾಂಸ್ಕೃತಿಕ ಪ್ರವಾಸೋದ್ಯಮದೊಂದಿಗೆ ಮತ್ತಷ್ಟು ಪರಿಣಾಮಕಾರಿಯಾಗಿ ಜೋಡಿಸುವ ಅಗತ್ಯವಿದೆ ಎಂದು ಅವರು ಹೇಳಿದರು.

2027ರ ಭಾರತ–ಇಟಲಿ ಸಾಂಸ್ಕೃತಿಕ ವರ್ಷಕ್ಕೆ ಮುನ್ನುಡಿ

2027ರ ಭಾರತ–ಇಟಲಿ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ವರ್ಷದ ಪೂರ್ವಭಾವಿಯಾಗಿ ಈ ಪ್ರದರ್ಶನ ವಿಶೇಷ ಮಹತ್ವ ಹೊಂದಿದೆ ಎಂದು ಸಚಿವರು ತಿಳಿಸಿದರು.

ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆ, ಇಟಲಿಯ ಕಾನ್ಸುಲೇಟ್‌ ಜನರಲ್‌, ನ್ಯಾಷನಲ್‌ ಗ್ಯಾಲರಿ ಆಫ್‌ ಮಾಡರ್ನ್‌ ಆರ್ಟ್‌ ಹಾಗೂ ಇತರ ಸಹಭಾಗಿಗಳ ಸಹಕಾರದಿಂದ ಆಯೋಜಿಸಿರುವ ಈ ಪ್ರದರ್ಶನವು ಕರ್ನಾಟಕ ಹಾಗೂ ದಕ್ಷಿಣ ಭಾರತದ ಜನರಿಗೆ ವಿಶ್ವಮಟ್ಟದ ಕಲಾ ಅನುಭವವನ್ನು ಪರಿಚಯಿಸುವ ಅವಕಾಶವಾಗಿದೆ ಎಂದರು.

“ಸಾಂಸ್ಕೃತಿಕ ಪ್ರವಾಸೋದ್ಯಮವು ದೇಶಗಳು ಮತ್ತು ಸಮಾಜಗಳ ನಡುವೆ ಸೇತುವೆ ನಿರ್ಮಿಸುತ್ತದೆ. ವಿಭಿನ್ನ ಸಂಸ್ಕೃತಿಗಳ ಕಲಾಕೃತಿಗಳ ಮೂಲಕ ಒಂದೇ ಮಾನವೀಯ ಭಾವನೆಗಳನ್ನು ಅನುಭವಿಸಲು ಈ ಪ್ರದರ್ಶನ ಅವಕಾಶ ನೀಡುತ್ತದೆ. ಕರ್ನಾಟಕದಲ್ಲಿ ಇಂತಹ ಅಂತರರಾಷ್ಟ್ರೀಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮತ್ತಷ್ಟು ಉತ್ತೇಜನ ನೀಡಲಾಗುವುದು,” ಎಂದು ಸಚಿವ ಕೆ.ಜೆ. ಜಾರ್ಜ್‌ ಹೇಳಿದರು.

ಸೆಪ್ಟೆಂಬರ್‌ 20ರವರೆಗೆ ಪ್ರದರ್ಶನ ನಡೆಯಲಿದ್ದು, ಕಲಾಭಿಮಾನಿಗಳು, ವಿದ್ಯಾರ್ಥಿಗಳು, ಕುಟುಂಬಗಳು ಹಾಗೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವಂತೆ ಸಚಿವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಇಟಲಿಯ ಬೆಂಗಳೂರಿನ ಕಾನ್ಸುಲ್‌ ಜನರಲ್‌ ಜಿಯಾಂಡೊಮೆನಿಕೊ ಮಿಲಾನೊ, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿಗಳಾದ ಡಾ. ರಾಮ್ ಪ್ರಸಾತ್ ಮನೋಹರ್, ಪ್ರೆಸ್ಟ್ರಿಜ್ ಗ್ರೂಪ್ ನ ರಿಜ್ವಾನ್ ರಜಾಕ್, ಎನ್ ಜಿ ಎಂ ಎ ನಿರ್ದೇಶಕರಾದ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಕ್ಯುರೇಟರ್‌ಗಳಾದ ಪ್ರೊ. ನಾಮನ್‌ ಅಹುಜಾ ಮತ್ತು ಆಂಡ್ರಿಯಾ ಅನಸ್ತಾಸಿಯೊ ಉಪಸ್ಥಿತರಿದ್ದರು.


Share

You cannot copy content of this page