ಸಮಗ್ರ ಸುದ್ದಿ

ಆದ್ಧೂರಿ ಗಣರಾಜ್ಯೋತ್ಸವ ದಿನಾಚರಣೆಗೆ ಬೆಂಗಳೂರು ಸಿದ್ಧ: ಮಹೇಶ್ವರ್ ರಾವ್

Share

ಬೆಂಗಳೂರು: ಈ ಬಾರಿ  ಗಣರಾಜ್ಯೋತ್ಸವ ದಿನಾಚರಣೆಯನ್ನು ಆದ್ದೂರಿಯಾಗಿ ಆಚರಿಸಲಾಗುತ್ತಿದೆ. ಗಣರಾಜ್ಯೋತ್ಸವ ದಿನಾಚರಣೆಯ ರಾಜ್ಯಮಟ್ಟದ  ಸಮಾರಂಭಕ್ಕೆ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನ ಸಜ್ಜಾಗಿದ್ದು ಗಣರಾಜ್ಯೋತ್ಸವ ದಿನಾಚರಣೆಗೆ ಸಕಲ ಸಿದ್ಧೆತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಾದ  ಮಹೇಶ್ವರ್ ರಾವ್.ಎಂ   ಅವರು  ಹೇಳಿದರು.

ಇಂದು ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಗಣರಾಜ್ಯೋತ್ಸವ ದಿನಾಚರಣೆಯ ರಾಜ್ಯಮಟ್ಟದ ಸಮಾರಂಭದ ಸಿದ್ಧತೆಗಳ ಕುರಿತು ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಜನವರಿ 26 ರಂದು ಬೆಳಗ್ಗೆ  8.58 ಕ್ಕೆ ರಾಜ್ಯಪಾಲರು ಮೈದಾನದಕ್ಕೆ ಆಗಮಿಸಲಿದ್ದು, 9.00 ಗಂಟೆಗೆ ರಾಷ್ಟ್ರ ಧ್ವಜಾರೋಹಣ ಮಾಡಲಿದ್ದಾರೆ. ಧ್ವಜಾರೋಣದ ನಂತರ ರಾಜ್ಯಪಾಲರು ತೆರೆದ  ಜೀಪಿನಲ್ಲಿ  ಪೆರೇಡ್  ಪರಿವೀಕ್ಷಣೆ ಮತ್ತು ಗೌರವ  ವಂದನೆ ಸ್ವೀಕರಿಸಿ  ನಾಡಿನ ಜನತೆಗೆ   ಗಣರಾಜ್ಯೋತ್ಸವದ ಸಂದೇಶವನ್ನು  ನೀಡಲಿದ್ದಾರೆ ಎಂದು ತಿಳಿಸಿದರು.

ಪಂಥಸಂಚಲನದಲ್ಲಿ  ಆರ್ಮಿ, ಏರಪೋರ್ಸ್, ಸಿ.ಆರ್.ಪಿ.ಎಫ್ ಮಹಿಳಾ , ವಿಷೇಶವಾಗಿ  ಹೊರ ರಾಜ್ಯದ  ತಮಿಳುನಾಡು ರಾಜ್ಯ ಪೊಲೀಸ್,  ಸ್ಕೌಟ್ಸ್, ಗೈಡ್ಸ್, ಎನ್.ಸಿ.ಸಿ, ಸೇವಾದಳ ಹಾಗೂ ವಿವಿಧ ಶಾಲೆಗಳ ಮಕ್ಕಳನ್ನೊಳಗೊಂಡಂತೆ ಕವಾಯತು ಮತ್ತು ಬ್ಯಾಂಡ್ ನ ಒಟ್ಟು 37 ತುಕಡಿಗಳಲ್ಲಿ ಸುಮಾರು 1,100 ಮಂದಿ  ಭಾಗವಹಿಸಲಿದ್ದಾರೆ.

ಶಾಲಾ ಮಕ್ಕಳಿಂದ ಒಟ್ಟು 2 ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸುಮಾರು 1400 ಮಕ್ಕಳು ಭಾಗವಹಿಸುವುದು ವಿಶೇಷವಾಗಿದೆ. ಪೊಲೀಸ್ ಇಲಾಖೆಯಿಂದ   ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ನಂತರ ಮಾನ್ಯ ರಾಜ್ಯಪಾಲರಿಂದ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ ಎಂದರು.

ಗೀತಾ ಭತ್ತದ್ ಮತ್ತು ತಂಡದಿಂದ ನಾಡಗೀತೆ ಮತ್ತು ರೈತಗೀತೆಯೊಂದಿಗೆ ಕಾರ್ಯಕ್ರಮ  ಆರಂಭವಾಗಲಿದೆ, ಬೆಂಗಳೂರು ಪಶ್ಚಿಮ ನಗರ ಪಾಲಿಕೆ, ಹೇರೋಹಳ್ಳಿಯ  ಸಂಯುಕ್ತ ಪದವಿ ಪೂರ್ವ ಕಾಲೇಜಿನ ಒಟ್ಟು 650 ಮಕ್ಕಳು “ಸಂಕ್ರಾಂತಿ ಸಂಭ್ರಮ”. ಬೆಂಗಳೂರು ಉತ್ತರ ವಲಯ-4 ಬಾಗಲಕುಂಟೆ  ಸರ್ಕಾರಿ ಪ್ರೌಢ ಶಾಲೆಯ ಒಟ್ಟು 750 ಮಕ್ಕಳಿಂದ  “ಭಾರತದ ಏಕೀರಕಣ ಮತ್ತು ನವಭಾರತ”  ಕುರಿತು ನೃತ್ಯ ಪ್ರದರ್ಶನ ಹಾಗೂ ಪೊಲೀಸ್ ಇಲಾಖೆ ವತಿಯಿಂದ “ಕರ್ನಾಟಕ ಪೊಲೀಸ್ ಸಾಮೂಹಿಕ ವಾದ್ಯ ಮೇಳ”  ವನ್ನು ಪ್ರದರ್ಶಿಸಲಿದ್ದಾರೆ ಎಂದರು.

ಗಣರಾಜ್ಯೋತ್ಸವ ದಿನಾಚರಣೆಯ ಕಾರ್ಯಕ್ರಮ  ವೀಕ್ಷಿಸಲು ಆಗಮಿಸುವ ಅತಿಗಣ್ಯ, ಗಣ್ಯ, ಇತರೆ ಸಾರ್ವಜನಿಕರಿಗೆ ಆಸನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಯಾವುದೇ ಆಕಸ್ಮಿಕ ವಿಪತ್ತು ಸಂಭವಿಸಿದಲ್ಲಿ ಅಗತ್ಯವಿರುವಷ್ಟು ಆಂಬುಲೆನ್ಸ್, ವೈದ್ಯಕೀಯ ಹಾಗೂ ವೈದ್ಯಕೀಯೇತರ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಹಾಗೂ ನಗರದ ಹಲವು ಆಸ್ಪತ್ರೆಗಳನ್ನು ಗುರುತಿಸಿ ಸಾಕಷ್ಟು ಸಂಖ್ಯೆಯಲ್ಲಿ ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ ಎಂದರು.
 
ಸಾರ್ವಜನಿಕರಿಗೆ ಗಣರಾಜ್ಯೋತ್ಸವ ದಿನಾಚರಣೆ ವೀಕ್ಷಿಸಲು ಆನ್‌ ಲೈನ್ ಮೂಲಕ 2000 ಇ-ಪಾಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿರುತ್ತದೆ. ಆಸಕ್ತರು ಸೇವಾ ಸಿಂಧು ವೆಬ್‍ ಸೈಟ್‍  www.sevasindhu.karnataka.gov.in  ಇ-ಪಾಸ್ ಅನ್ನು  ಪಡೆಯಬಹುದಾಗಿರುತ್ತದೆ. ಜನವರಿ 24 ರವರೆಗೆ  ಇ-ಪಾಸ್‍  ವ್ಯವಸ್ಥೆಗೆ ಅವಕಾಶ ಕಲ್ಪಿಸಲಾಗಿರುತ್ತದೆ.

ಈ ಕಾರ್ಯಕ್ರಮಕ್ಕೆ ಆಗಮಿಸುವವರು ಪ್ರವೇಶ  ದ್ವಾರ  05ರಲ್ಲಿ ಆಹ್ವಾನ ಪತ್ರಿಕೆಯೊಂದಿಗೆ ಕಡ್ಡಾಯವಾಗಿ ಅರ್ಹ ಗುರುತಿನ ಚೀಟಿಯೊಂದಿಗೆ ಬೆಳಿಗ್ಗೆ 08.00 ಗಂಟೆಯೊಳಗೆ ಹಾಜರಾಗಬೇಕು ಎಂದು ಹೇಳಿದರು.

ಬೆಂಗಳೂರು ನಗರದ ಪೊಲೀಸ್  ಆಯುಕ್ತರಾದ  ಸೀಮಂತ್ ಕುಮಾರ್ ಸಿಂಗ್ ಮಾತನಾಡಿ,  ಗಣರಾಜ್ಯೋತ್ಸವ ದಿನಾಚರಣೆಗಾಗಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಕ್ರಮವಹಿಸಲಾಗಿದ್ದು, ಬೆಂಗಳೂರು ನಗರದ ಎಲ್ಲಾ ವಿಭಾಗಗಳಿಂದ  ಸುಮಾರು 2000 ಕ್ಕೂ ಹೆಚ್ಚು ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ತಿಳಿಸಿದರು.

ಗಣರಾಜ್ಯೋತ್ಸವ ದಿನಾಚರಣೆಯ ಕಾರ್ಯಕ್ರಮದ ಪ್ರಯುಕ್ತ ಮೈದಾನಕ್ಕೆ ಸೂಕ್ತ ಬಂದೋಬಸ್ತ್  ವ್ಯವಸ್ಥೆ, ಮೈದಾನದಲ್ಲಿ ಭದ್ರತೆ & ಸುರಕ್ಷತೆಗಾಗಿ 100 ಸಿ.ಸಿ. ಕ್ಯಾಮೆರಾ ವ್ಯವಸ್ಥೆ ಹಾಗೂ 04 ಬ್ಯಾಗೇಜ್ ಸ್ಕ್ಯಾನರ್ ಮತ್ತು ವ್ಯವಸ್ಥಿತ ಸಂಚಾರ ನಿಯಂತ್ರಣ ವ್ಯವಸ್ಥೆಗಳನ್ನು ಮಾಡಲಾಗಿರುತ್ತದೆ ಎಂದು ಹೇಳಿದರು.

ಕಾರ್ಯಕ್ರಮಕ್ಕೆ ಆಗಮಿಸುವ ಪ್ರತಿಯೊಬ್ಬರು ಪಾಸು ಮತ್ತು ಗುರುತಿನ ಚೀಟಿಯನ್ನು  ಹೊಂದಿರಬೇಕು.  ಪರ್ಸ್ ಮತ್ತು ಮೊಬೈಲ್ ಹೊರೆತುಪಡಿಸಿ ಬೇರೆ ಯಾವುದೇ ವಸ್ತುಗಳನ್ನು  ಕಾರ್ಯಕ್ರಮಕ್ಕೆ ತರದಂತೆ ನಿಷೇಧಿಸಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಜನರು ಪೊಲೀಸರ ಭದ್ರತಾ ತಪಾಸಣೆಗೆ ಸಹಕರಿಸಬೇಕೆಂದು ಮನವಿ ಮಾಡಿದರು.

ಜನವರಿ 26 ರಂದು ಬೆಳಗ್ಗೆ 08.30 ಗಂಟೆಯಿಂದ ಬೆಳಗ್ಗೆ 10-30 ರ ವರೆಗೆ ಕಬ್ಬನ್ ರಸ್ತೆಯಲ್ಲಿ ಬಿ.ಆರ್.ವಿ ಜಂಕ್ಷನ್ ನಿಂದ 
ಕಾಮರಾಜರಸ್ತೆ ಜಂಕ್ಷನ್‌ವರೆಗೆ ಎರಡೂ ದಿಕ್ಕುಗಳಲ್ಲಿನ ಸಂಚಾರವನ್ನು ನಿರ್ಬಂಧಿಸಿ,  ಪರ್ಯಾಯ ಮಾರ್ಗದಲ್ಲಿ ಸಂಚರಿಸುವ ವ್ಯವಸ್ಥೆಯನ್ನು  ಮಾಡಲಾಗಿದೆ.

ಇನ್‌ ಫೆಂಟ್ರಿ ರಸ್ತೆಯಲ್ಲಿ ಮಣಿಪಾಲ್ ಸೆಂಟರ್‌ ಕಡೆಗೆ ಸಂಚರಿಸುವ ವಾಹನಗಳು ನೇರವಾಗಿ ಇನ್‌ಫೆಂಟ್ರಿರಸ್ತೆ ಸಫೀನಾ ಪ್ಲಾಜಾ – ಎಡತಿರುವು ಪಡೆದು ಮೈನ್‌ಗಾರ್ಡ್‌ ರಸ್ತೆ- ಆಲೀಸ್ ಸರ್ಕಲ್- ಡಿಸ್ಪೆನ್ಸರಿ ರಸ್ತೆ-ಕಾಮರಾಜರಸ್ತೆ ಮತ್ತು ಡಿಕನ್ಸನ್‌ ರಸ್ತೆ ಜಂಕ್ಷನ್ ಬಲಕ್ಕೆ ತಿರುವು ಪಡೆದು ಕಾಮರಾಜ ರಸ್ತೆ- ಕಬ್ಬನ್‌ ರಸ್ತೆ ಮತ್ತು ಕಾಮರಾಜ ರಸ್ತೆ ಜಂಕ್ಷನ್‌ನಲ್ಲಿ ಎಡಕ್ಕೆ ತಿರುವು ಪಡೆದು, ಕಬ್ಬನ್ ರಸ್ತೆ ಮುಖಾಂತರ ಮಣಿಪಾಲ್ ಸೆಂಟರ್‌ ಕಡೆಗೆ ಸಾಗಬಹುದಾಗಿದೆ.

ಕಬ್ಬನ್‌ರಸ್ತೆಯಲ್ಲಿ, ಮಣಿಪಾಲ್ ಸೆಂಟರ್ ಜಂಕ್ಷನ್‌ ನಿಂದ ಬಿ.ಆರ್.ವಿ. ಜಂಕ್ಷನ್ ಕಡೆಗೆ ಬರುವ ವಾಹನಗಳ ಸಂಚಾರವನ್ನು ಮಣಿಪಾಲ್ ಸೆಂಟರ್  ಬಳಿ ನಿರ್ಬಂಧಿಸಿದ್ದು, ಸದರಿ ವಾಹನಗಳು ವೆಬ್ ಜಂಕನ್ಸ್ ಬಳಿಬಲ ತಿರುವು ಪಡೆದು ಎಂ.ಜಿ. ರಸ್ತೆಯ ಮೂಲಕ ಮೆಯೋ ಹಾಲ್, ಕಾವೇರಿ ಎಂಪೋರಿಯಂ, ಅನಿಲ್‌ ಕುಂಬ್ಳೆ ವೃತ್ತದಲ್ಲಿ ಬಲ ತಿರುವು ಪಡೆದು ಮುಂದೆ ಸಾಗಬಹುದು

ಅನಿಲ್‌ ಕುಂಬ್ಳೆ ವೃತ್ತದಿಂದ ಕಬ್ಬನ್‌ ರಸ್ತೆ ಕಡೆಗೆ ಬರುವ ವಾಹನಗಳು ನೇರವಾಗಿ ಸೆಂಟ್ರಲ್  ಸ್ಟ್ರೀಟ್‌ ನಲ್ಲಿ ಸಾಗಿ, ಬಲಕ್ಕೆ ತಿರುವು ಪಡೆದು- ಇನ್‌ಫೆಂಟ್ರಿ ರಸ್ತೆ- ಸಫೀನಾ  ಪ್ಲಾಜಾ-ಎಡಕ್ಕೆ ತಿರುವು ಪಡೆದು ಮೈನ್ ಗಾರ್ಡ್‌ ರಸ್ತೆ-ಆಲಿ ಸರ್ಕಲ್- ಡಿಸ್ಪೆನ್ಸರಿ ರಸ್ತೆ ಕಾಮರಾಜ ರಸ್ತೆ ಮತ್ತು ಡಿಕನ್ಸನ್‌ ರಸ್ತೆ ಜಂಕ್ಷನ್‌-ಬಲಕ್ಕೆ ತಿರುವು ಪಡೆದು ಕಾಮರಾಜ ರಸ್ತೆ- ಕಬ್ಬನ್‌ರಸ್ತೆ ಮತ್ತು ಕಾಮರಾಜ ರಸ್ತೆ ಜಂಕ್ಷನ್ ನಲ್ಲಿ ಎಡಕ್ಕೆ ತಿರುವು ಪಡೆದು, ಕಬ್ಬನ್‌ರಸ್ತೆ ಮುಖಾಂತರ ಮಣಿಪಾಲ್ ಸೆಂಟರ್‌ ಕಡೆಗೆ ಸಾಗಬಹುದಾಗಿದೆ ಎಂದು ಹೇಳಿದರು.
 
ಭದ್ರತಾ ದೃಷ್ಟಿಯಿಂದ: ಪೆರೇಡ್‌ ಗೆ ಬರುವ ಎಲ್ಲಾ ಆಹ್ವಾನಿತರು ಹಾಗೂ ಸಾರ್ವಜನಿಕರು ಮೊಬೈಲ್ ಫೋನ್, ಹೆಲ್ಮೆಟ್, ಕ್ಯಾಮೆರಾ, ರೇಡಿಯೋ, ಕೊಡೆ ಮುಂತಾದ  ವಸ್ತುಗಳನ್ನು  ಜೊತೆಯಲ್ಲಿ ತೆಗೆದುಕೊಂಡು  ಹೋಗಬಾರದು. ಇಂತಹ ವಸ್ತುಗಳನ್ನು ಹೊಂದಿರುವವರನ್ನು ಒಳಗೆ ಬಿಡಲಾಗುವುದಿಲ್ಲ. ಎಲ್ಲರೂ ಬೆಳಗ್ಗೆ 08.00 ಗಂಟೆಯ ಒಳಗೆ ಮೈದಾನದಲ್ಲಿ ಆಸೀನರಾಗುವಂತೆ ಅವರು ಕೋರಿದರು.

ವಾಹನ ನಿಲುಗಡೆ ನಿಷಿದ್ದ ರಸ್ತೆಗಳು:ಸೆಂಟ್ರಲ್ ಸ್ಟ್ರೀಟ್, ಅನಿಲ್ ಕುಂಬ್ಳೆ ವೃತ್ತದಿಂದ ಶಿವಾಜಿನಗರ ಬಸ್ ನಿಲ್ದಾಣದವರೆಗೆ.
ಕಬ್ಬನ್ ರಸ್ತೆ, ಸಿ.ಟಿ.ಓ. ವತ್ತ ದಿಂದಕೆ.ಆರ್.ರಸ್ತೆ & ಕಬ್ಬನ್‌ ರಸ್ತೆ ಜಂಕ್ಷನ್‌  ವರೆಗೆ, ಎಂ.ಜಿ.ರಸ್ತೆ, ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್  ವೃತ್ತದವರೆಗೆ.

ವಿಶೇಷ ಸೂಚನೆಗಳು :

ಮಾಣಿಕ್‌  ಷಾ ಪೆರೇಡ್‌ ಮೈದಾನ ಹಾಗೂ ಸುತ್ತಮುತ್ತ ವಾಹನಗಳ ನಿಲುಗಡೆಗೆ ಸ್ಥಳಾವಕಾಶ ಕೊರತೆ ಇರುವುದರಿಂದ ಹಾಗೂ ಸಂಚಾರ ದಟ್ಟಣೆಯನ್ನ ಕಡಿಮೆ ಮಾಡಲು ಸಾರ್ವಜನಿಕರು, ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮತ್ತು ಮೆಟ್ರೋ ಸೇವೆಯನ್ನು ಬಳಸಲು ಕೋರಲಾಗಿದೆ.

 ಯಾವುದೇ ಸಹಾಯಕ್ಕಾಗಿ ಪೊಲೀಸರು ಸದಾ ನಿಮ್ಮೊಂದಿಗಿರುತ್ತಾರೆ. ದಯವಿಟ್ಟು ಸ್ಥಳದಲ್ಲಿರುವ ಪೊಲೀಸರನ್ನು ಸಂಪರ್ಕಿಸಿ ಅಥವಾ ಪೊಲೀಸ್ ಸಹಾಯವಾಣಿ ಸಂಖ್ಯೆ 112 ಗೆ ಕರೆ ಮಾಡಬಹುದಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ ಜಗದೀಶ.ಜಿ, ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾದ ಕಾರ್ತಿಕ್ ರೆಡ್ಡಿ,  ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.


Share

You cannot copy content of this page