ಸಮಗ್ರ ಸುದ್ದಿ

ತೆಂಗಿನ ಬೆಳೆಗೆ ಬಿಳಿ ನೊಣ ಹಾಗೂ ಕೀಟಗಳ ನಿಯಂತ್ರಣಕ್ಕೆ ಕ್ರಮ-ಸಚಿವ ಎಸ್.ಎಸ್. ಮಲ್ಲಿಕಾರ್ಜುನ್

Share

ಬೆಂಗಳೂರು : ತೆಂಗು ಬೆಳೆಯಲ್ಲಿ ಕಂಡು ಬರುವ ಕಪ್ಪು ತಲೆಹುಳು ಹಾಗೂ ಬಿಳಿನೊಣ ಕೀಟಗಳ ನಿಯಂತ್ರಣಕ್ಕಾಗಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 23 ಪ್ರಯೋಗ ಶಾಲೆಗಳಲ್ಲಿ ಗೋನಿಯೋಜಸ್ ಎಂಬ ಪರೋಪಜೀವಿಗಳು ಹಾಗೂ ಐಸಿರಿಯಾ ಜೈವಿಕ ಕೀಟನಾಶಕವನ್ನು ಉತ್ಪಾದನೆ ಮಾಡಿ ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.

ಇಂದು ವಿಧಾನಸಭೆಯ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ರಮೇಶ್ ಬಂಡಿಸಿದ್ದೇಗೌಡ ಎ.ಬಿ ಇವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರಸಕ್ತ ಸಾಲಿನಲ್ಲಿ ಒಟ್ಟು ರೂ. 140 ಲಕ್ಷಗಳ ಅನುದಾನ ನಿಗದಿಯಾಗಿದ್ದು, ಮಂಡ್ಯ ಜಿಲ್ಲೆಗೆ 18 ಲಕ್ಷಗಳನ್ನು ನೀಡಲಾಗಿದ್ದು ಈವರೆಗೂ 588 ರೈತರಿಗೆ ರೂ. 12.13ಲಕ್ಷಗಳಲ್ಲಿ 23.62 ಲಕ್ಷ ಸಂಖ್ಯೆ ಪರೋಪ ಜೀವಿಗಳನ್ನು ಉತ್ಪಾದಿಸಿ ವಿತರಿಸಲಾಗಿದೆ.

ತೆಂಗಿನ ಇಳುವರಿ ಕಡಿಮೆ ಆದ ಪರಿಣಾಮ ರೈತರು ಸಂಕಷ್ಟಕ್ಕೆ ಒಳಗಾಗಿದ್ದು, ತೆಂಗಿನ ತೋಟಗಳಲ್ಲಿ ಪ್ರಾತ್ಯಕ್ಷಿಕೆ ಹಾಗೂ ನಿರ್ವಹಣೆಯಿಂದ ತೆಂಗಿನ ಮರಗಳು ಸದೃಡಗೊಂಡು ರೋಗ/ಕೀಟ ನಿರೋಧಕ ಶಕ್ತಿ ಬೆಳೆಸಿಕೊಳ್ಳುತ್ತವೆ. ಆದ್ದರಿಂದ ಈ ಚಟುವಟಿಕೆಗಳಿಗಾಗಿ ಪ್ರತಿ ಫಲಾನುಭವಿಗೆ ಒಂದು ಹೆಕ್ಟೇರ್ ಗೆ ರೂ,35,000 ಗಳಂತೆ 2 ವರ್ಷಗಳ ಅವಧಿಗೆ ಮೊದಲನೇ ವರ್ಷ ರೂ. 17,500ಗಳು ಮತ್ತು ಎರಡನೇ ವರ್ಷದಲ್ಲಿ ರೂ.17,500ಗಳಂತೆ ಸಹಾಯ ಧನ ನೀಡಲಾಗುತ್ತಿದೆ. ರೋಗ ಮತ್ತು ಕೀಟಬಾಧಿತ ತಾಕುಗಳನ್ನು ಕ್ಲಸ್ಟರ್ಸ್ ಗಳಾಗಿ ಆಯ್ಕೆ ಮಾಡಿ ಸಹಾಯಧನ ನೀಡಲಾಗಿರುತ್ತದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ ಕಪ್ಪು ತಲೆ ಹುಳುವಿನ ನಿಯಂತ್ರಣಕ್ಕಾಗಿ ಪರೋಪ ಜೀವಿಗಳನ್ನು ಉತ್ಪಾದಿಸಿ ವಿತರಣೆಗಾಗಿ ಹೊಸದಾಗಿ ಪ್ರಯೋಗ ಶಾಲೆ ಸ್ಥಾಪಿಸುವುದು ಸೇರಿದಂತೆ ಪ್ರಧಾನ ಮಂತ್ರಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ವಿಸ್ತ್ರತ ಯೋಜನಾ ವರದಿ (PM-RKYY DPR) ಯೋಜನೆಯಡಿ ಅನುದಾನ ಕೋರಿ ಕೇಂದ್ರ ಸರ್ಕಾರಕ್ಕೆ 2026-27ನೇ ಸಾಲಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಚಿವರು ತಿಳಿಸಿದರು.


Share

You cannot copy content of this page