ಬೆಂಗಳೂರು:ಬೆಳೆವಿಮೆ ಯೋಜನೆ ಜಾರಿಯಲ್ಲಿ ಕರ್ನಾಟಕ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ರೈತ ಕೇವಲ ಬೆಳೆಗಾರನಾಗಿ ಉಳಿಯಬಾರದು, ಆತ ಒಬ್ಬ ಉದ್ಯಮಿಯಾಗಬೇಕು ಎಂದು ತಿಳಿಸಿದರು.
ಇಂದು ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಕೃಷಿ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾದ ಎರಡು ದಿನಗಳ ಅಂತರರಾಷ್ಟ್ರೀಯ ವಾಣಿಜ್ಯ ಮೇಳ -2026 ಉತ್ಪದಾನೋತ್ತರ ಕೃಷಿ – ರೈತರ ಸಬಲೀಕರಣ ಹಾಗೂ ರಾಜ್ಯಮಟ್ಟದ ಕೃಷಿ ಪಂಡಿತ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಾ,, “ಬೆಂಗಳೂರನ್ನು ವಿಶ್ವದ ಸಿರಿಧಾನ್ಯಗಳ ಹಬ್ (Global Hub for Millets) ಎಂದು ಗುರುತಿಸಲಾಗಿದೆ. ಹವಾಮಾನ ಬದಲಾವಣೆಯ ಈ ಕಾಲದಲ್ಲಿ ಸಿರಿಧಾನ್ಯಗಳು ‘ಭವಿಷ್ಯದ ಆಹಾರ’. ಇದನ್ನು ಪ್ರೋತ್ಸಾಹಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮನೆರೇಗಾ ರದ್ದುಪಡಿಸಿ ವಿಬಿಜಿ ರಾಮ್ ಜಿ ಕಾಯ್ದೆ ಜಾರಿಗೊಳಿಸಿದ ಕೇಂದ್ರಸರ್ಕಾರದ ಕುತಂತ್ರವನ್ನು ರಾಜ್ಯದ ರೈತರು ಒಕ್ಕೊರಲಿನಿಂದ ವಿರೋಧಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಮಹಿಳಾ ಕೃಷಿಕರ ಸಾಧನೆ ಸ್ಪೂರ್ತಿದಾಯಕ:ನಮ್ಮ ಸರ್ಕಾರ ಕೃಷಿ ಕ್ಷೇತ್ರಕ್ಕೆ ಎಂದಿಗೂ ಬೆಂಬಲವಾಗಿ ನಿಂತಿದೆ. ಕೃಷಿ ಲಾಭದಾಯಕವಾಗಿಸಲು ಹಾಗೂ ಕೃಷಿಕರ ಸಬಲೀಕರಣವನ್ನು ಸಾಧಿಸಲು ಸರ್ಕಾರ ಹೆಚ್ಚಿನ ಒತ್ತು ನೀಡುತ್ತದೆ. ಕೃಷಿ ಹಾಗೂ ಉತ್ಪಾದನೋತ್ತರ ಚಟುವಟಿಕೆಗಳಲ್ಲಿ ರೈತರು ತೊಡಗಿಕೊಳ್ಳುವ ಮೂಲಕ ಕೃಷಿಯನ್ನು ಲಾಭದಾಯಕಗೊಳಿಸಬಹುದಾಗಿದೆ.
ರೈತರು ಉದ್ಯಮಿಗಳಾಗಬೇಕು. ಉತ್ಪನ್ನಗಳನ್ನು ಬೆಳೆಯುವ ಜೊತೆಗೆ, ಸಂಗ್ರಹಣೆ, ಸಂಸ್ಕರಣೆ, ಪ್ಯಾಕೇಜಿಂಗ್, ಮಾರುಕಟ್ಟೆ, ಉಪಉತ್ಪನ್ನಗಳ ಅಭಿವೃದ್ಧಿಯಲ್ಲಿ ರೈತರು ನಿರತರಾಗಬೇಕಿದೆ. ಕೃಷಿಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ತೊಡಗಿಕೊಳ್ಳುವುದು ಅಗತ್ಯ. ಇಂದಿನ ಪ್ರಶಸ್ತಿಗೆ ಭಾಜನರಾದ ಮಹಿಳಾ ಕೃಷಿಕರ ಸಾಧನೆ ಸ್ಪೂರ್ತಿದಾಯಕವಾಗಿದೆ ಎಂದರು.
ರೈತರ ಸಮಸ್ಯೆಗೆ ಓಗೊಟ್ಟ ಸ್ಪಂದನಾಶೀಲ ಸರ್ಕಾರ:ರೈತರಿಗೆ ಉತ್ತಮವಾದ ಬಿತ್ತನೆ ಬೀಜ, ಗೊಬ್ಬರ, ಔಷದಿ, ಸರ್ಕಾರ ಒದಗಿಸುತ್ತಿದ್ದು, ಯಂತ್ರೋಪಕರಣಗಳ ಖರೀದಿಗೆ 1,500 ಕೋಟಿ ಸಹಾಯಧನವನ್ನು ನೀಡಲಾಗುತ್ತಿದೆ. ಬೆಳೆವಿಮೆ ಯೋಜನೆ ಜಾರಿಯಲ್ಲಿ ಕರ್ನಾಟಕ, ದೇಶದಲ್ಲಿ ನಂ.1 ರಾಜ್ಯವಾಗಿದ್ದು, ಈವರೆಗೆ 6000 ಕೋಟಿ ರೂ.ಗಳ ವಿಮೆಪರಿಹಾರವನ್ನು ರೈತರಿಗೆ ವಿತರಿಸಲಾಗಿದೆ.
ಕಬ್ಬು, ರಾಗಿ ಸೇರಿದಂತೆ ಹಲವು ಬೆಳೆಗಳನ್ನು ಬೆಳೆಸುವುದಕ್ಕೆ ರೈತರು ಸೀಮಿತವಾಗುತ್ತಿದ್ದಾರೆ. ಆದರೆ ಬೆಳೆ ತೆಗೆದ ನಂತರ ಚಟುವಟಿಕೆಗಳಲ್ಲಿ ರೈತರು ಕೈಗೊಳ್ಳಬೇಕು. ಕಬ್ಬು ಬೆಳೆ ರೈತರೊಂದಿಗೆ ಚರ್ಚಿಸಿ ಸಂಧಾನ ನಡೆಸಿ ಕಬ್ಬು ಬೆಳೆಗೆ ಬೆಲೆ ನಿಗಧಿ ಪಡಿಸಲಾಯಿತು. ಅಂತೆಯೇ ತೊಗರಿ ಬೆಳೆಗೆ ಖರೀದಿ ಕೇಂದ್ರವನ್ನು ಒಂದು ತಿಂಗಳ ಮುಂಚೆಯೇ ತೆರೆದು ರೈತರಿಗೆ ಅನುಕೂಲ ಕಲ್ಪಿಸಲಾಯಿತು. ಮೆಕ್ಕೆ ಜೋಳ ಹೆಚ್ಚುವರಿ ಇಳುವರಿ ಬಂದು 54 ಲಕ್ಷ ಮೆ.ಟನ್ ಉತ್ಪಾದನೆಯಾಗಬಹುದಾಗಿದೆ. ಆದ್ದರಿಂದ ಕೇಂದ್ರ ಕ್ವಿಂಟಾಲ್ ಗೆ 2400 ರೂ. ನಿಗದಿಪಡಿಸಿದ್ದು, ಮೆಕ್ಕೆಜೋಳ ಬಳಸುವ ಕಾರ್ಖಾನೆಗಳು, ಎಥನಾಲ್ ತಯಾರಕರೊಂದಿಗೆ ಚರ್ಚೆ ನಡೆಸಿ, 40 ಲಕ್ಷ ಮೆ.ಟನ್ ಮೆಕ್ಕೆಜೋಳ ಖರೀದಿಗೆ ಅನುವು ಮಾಡಿಕೊಡಲಾಯಿತು ಎಂದರು.
ಯುವಜನರು ಕೃಷಿಯಲ್ಲಿ ತೊಡಗಿಕೊಳ್ಳಬೇಕು:ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಕೃಷಿಯಲ್ಲಿ ತೊಡಗಿಕೊಳ್ಳಬೇಕು. ಸ್ವಾತಂತ್ರ್ಯಪೂರ್ವದಲ್ಲಿ ಶೇ.80 ರಷ್ಟು ಜನ ಕೃಷಿಯನ್ನು ಅವಲಂಬಿಸಿದ್ದರು. ಈಗ ಈ ಪ್ರತಿಶತ ಶೇ. 62 ಕ್ಕೆ ಇಳಿದಿದೆ. ಕೃಷಿಯಲ್ಲಿ ಉತ್ಪಾದನೋತ್ತರ ಕಾರ್ಯಗಳನ್ನು ಕೈಗೊಂಡಾಗ ಮಾತ್ರ ಕೃಷಿ ಲಾಭದಾಯಕವಾಗುತ್ತದೆ ಎಂದರು.
ಕೃಷಿಭಾಗ್ಯ ಯೋಜನೆ ಮರುಸ್ಥಾಪನೆ:
ಭಾರತ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳಲ್ಲಿ ಬಹಳಷ್ಟು ಈಡೇರಿಸಲಾಗಿದ್ದು, ಅವುಗಳಲ್ಲಿ ಜಾರಿಯಾಗಿರುವ ಕೃಷಿ ಭಾಗ್ಯ ಯೋಜನೆ ಪ್ರಮುಖವಾಗಿದೆ. ಬಿಜೆಪಿ ತನ್ ಅಧಿಕಾರಾವಧಿಯಲ್ಲಿ ಈ ಯೋಜನೆಯನ್ನು ಸ್ಥಗಿತಗೊಳಿಸಿತ್ತು. ನಮ್ಮ ಸರ್ಕಾರ ಮತ್ತೊಮ್ಮೆ ಕೃಷಿ ಭಾಗ್ಯ ಯೋಜನೆಯನ್ನು ಮರುಸ್ಥಾಪಿಸಿದೆ. ಸುಮಾರು 200 ಕೋಟಿ ಅನುದಾನವನ್ನು ಇದಕ್ಕಾಗಿ ನೀಡಲಾಗಿದೆ. ನಮ್ಮ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳಲ್ಲಿ ಮಹಿಳೆಯರಿಗಾಗಿ ಮಾಡಿದ ಶಕ್ತಿ, ಗೃಹಜ್ಯೋತಿ ಹಾಗೂ ಗೃಹಲಕ್ಷ್ಮಿ ಯೋಜನೆಗಳು ಅತ್ಯಂತ ಪ್ರಮುಖವೆನಿಸಿವೆ. ಅಲ್ಲದೇ ಅನ್ನಭಾಗ್ಯ ಯೋಜನೆಗಳಿಂದ ಬಡವರು ಉಳಿತಾಯದಲ್ಲಿ ಹೂಡಿಕೆ ಮಾಡಬಹುದಾಗಿದೆ. ಎಲ್ಲರಿಗೂ ಸಮಾನ ಅವಕಾಶವನ್ನು ನೀಡುವ ಉದ್ದೇಶದಿಂದ ಈ ಜನಪರ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದರು.
ರಾಜ್ಯಗಳ ಸಮ್ಮತಿಯಿಲ್ಲದ ವಿಬಿಜಿರಾಮ್ ಜಿ ಕಾಯ್ದೆ:
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸರ್ಕಾರ ಈ ಹಿಂದೆ ಮನರೇಗಾ ಯೋಜನೆಯನ್ನು ಜಾರಿಗೊಳಿಸಿತ್ತು. ಇದರಡಿ ಮಹಿಳೆಯರು, ಅದಿವಾಸಿಗಳು, ಕಾರ್ಮಿಕರಿಗೆ ಉದ್ಯೋಗ ನೀಡುವ ಉತ್ತಮ ಯೋಜನೆಯಾಗಿದ್ದು, ಗ್ರಾಮಸಭೆಗಳಲ್ಲಿ ಕಾಮಗಾರಿಗಳು ನಿರ್ಧಾರವಾಗುತ್ತಿತ್ತು. ಆದರೆ ಈ ಅಧಿಕಾರವು ಈಗ ಕೇಂದ್ರ ಸರ್ಕಾರದ ಕೈಯಲ್ಲಿದ್ದು, ಅವರ ನಿರ್ಧರಿಸಿದಂತೆ ಕಾಮಗಾರಿ, ಅನುದಾನ ನೀಡಲಾಗುತ್ತದೆ. ರಾಜ್ಯದ ರೈತರೆಲ್ಲರೂ ಮನರೇಗಾ ಯೋಜನೆಯನ್ನು ಮರುಸ್ಥಾಪಿಸಿ, ವಿಬಿ ಜಿ ರಾಮ್ ಜಿ ಯೋಜನೆಯನ್ನು ತಿರಸ್ಕರಿಸಬೇಕು ಎಂದು ಮನವಿ ಮಾಡಿದರು.
ಮನರೇಗಾ ಅಡಿಯಲ್ಲಿ ಕಾರ್ಮಿಕರ ವೇತನ ಪೂರ್ತಿಯಾಗಿ ಕೇಂದ್ರವೇ ನೀಡುತ್ತಿತ್ತು. ಆದರೆ ಈಗ ಕೇಂದ್ರ ಕೇವಲ 60% ಅನುದಾನ ನೀಡುತ್ತಿದ್ದು, ಶೇ.40 ರಷ್ಟನ್ನು ರಾಜ್ಯ ಭರಿಸಬೇಕಾಗಿದೆ. ಹಿಂದೆ 100 ದಿನ ಕೆಲಸದ ದಿನಗಳನ್ನು ಖಾತ್ರಿಪಡಿಸುತ್ತಿತ್ತು. ರಾಜ್ಯ ಸರ್ಕಾರಗಳ ಅಂಗೀಕಾರವಿಲ್ಲದೇ, ಮನರೇಗಾ ವನ್ನು ರದ್ದುಪಡಿಸಿ ವಿಬಿಜಿರಾಮ್ ಜಿ ಯೋಜನೆಯನ್ನು ಜಾರಿಗೊಳಿಸಿದ್ದು, ಅದರಲ್ಲಿನ ಮಹಾತ್ಮಾಗಾಂಧಿ ಹೆಸರನ್ನು ತೆಗೆಯಲಾಗಿದೆ ಎಂದರು.
ರೈತರ ಆದಾಯ ಹೆಚ್ಚಳ ಮತ್ತು ಕೃಷಿಯಲ್ಲಿ ಮೌಲ್ಯವರ್ಧನೆಯ ವಿಶೇಷ ಒತ್ತು – ಕೃಷಿ ಸಚಿವ ಎನ್.ಚಲುವರಾಯಸ್ವಾಮಿ
ರೈತರ ಆದಾಯ ಹೆಚ್ಚಳ ಮತ್ತು ಕೃಷಿಯಲ್ಲಿ ಮೌಲ್ಯವರ್ಧನೆಯ ಅಗತ್ಯದ ಬಗ್ಗೆ ವಿಶೇಷವಾಗಿ ಒತ್ತು ನೀಡಲಾಗಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.ನಮ್ಮ ದೇಶ ಅಕ್ಕಿ ಮತ್ತು ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿದೆ. ಆದರೆ ರೈತರ ಸಂಕಷ್ಟಗಳು ಇನ್ನೂ ಮುಗಿದಿಲ್ಲ. ಇದಕ್ಕೆ ಕಾರಣ ನಾವು ಕೇವಲ ಉತ್ಪಾದನೆಗೆ ಸೀಮಿತವಾಗಿರುವುದು. ಈ ಮೇಳದ ಮೂಲಕ ನಾವು ರೈತರಿಗೆ ಸಂಸ್ಕರಣೆ, ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆ ಕೌಶಲ್ಯಗಳನ್ನು ಪರಿಚಯಿಸುತ್ತಿದ್ದೇವೆ ಎಂದು ಹೇಳಿದರು.
ರೈತನೇ ಉದ್ಯಮಿ:
ರೈತರು ಕೇವಲ ಬೆಳೆಗಾರರಾಗಿ ಉಳಿಯಬಾರದು, ಅವರು ಕೃಷಿ ಉದ್ಯಮಿಗಳಾಗಬೇಕು. ಕೃಷಿ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮಾಡಿದರೆ ರೈತರು 4 ರಿಂದ 5 ಪಟ್ಟು ಹೆಚ್ಚಿನ ಲಾಭ ಗಳಿಸಲು ಸಾಧ್ಯವಿದೆ. ಇದಕ್ಕಾಗಿ ಸರ್ಕಾರವು ರೈತ ಉತ್ಪಾದಕ ಸಂಸ್ಥೆಗಳಿಗೆ ಸಂಪೂರ್ಣ ಬೆಂಬಲ ನೀಡುತ್ತಿದೆ.ಸಾವಯವ ಮತ್ತು ಸಿರಿಧಾನ್ಯದ ಕ್ರಾಂತಿ:ಕರ್ನಾಟಕವು ಸಿರಿಧಾನ್ಯಗಳ ರಾಜಧಾನಿಯಾಗಿ ಹೊರಹೊಮ್ಮಿದೆ.
ರಾಜ್ಯದಲ್ಲಿ ಸಾವಯವ ಕೃಷಿಯನ್ನು 55 ಸಾವಿರ ಹೆಕ್ಟೇರ್‍ನಿಂದ 1.25 ಲಕ್ಷ ಹೆಕ್ಟೇರ್ ಗೆ ವಿಸ್ತರಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಇದಕ್ಕಾಗಿ ಪ್ರತಿ ಹೆಕ್ಟೇರ್‍ಗೆ ರೂ.10,000 ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದರು.ಯುವಜನತೆ ಮತ್ತು ತಂತ್ರಜ್ಞಾನ:ಕೃಷಿಯಲ್ಲಿ ಸುಧಾರಿತ ತಂತ್ರಜ್ಞಾನ ಬಳಕೆಯಾಗಬೇಕು. ವಿದ್ಯಾವಂತ ಯುವಕರು ಕೃಷಿಯತ್ತ ಆಕರ್ಷಿತರಾಗಲು ಇದು ಸಕಾಲ. ಆಧುನಿಕ ಯಂತ್ರೋಪಕರಣಗಳು ಮತ್ತು ಡಿಜಿಟಲ್ ಮಾರುಕಟ್ಟೆ ರೈತರ ಬದುಕನ್ನು ಬದಲಿಸಬಲ್ಲವು.
ಸಾಧಕರಿಗೆ ಗೌರವ:
ಈ ಮೇಳದಲ್ಲಿ ನಾವು ಕೇವಲ ವ್ಯಾಪಾರವನ್ನಷ್ಟೇ ಮಾಡುತ್ತಿಲ್ಲ, ಮಣ್ಣಿನ ಮಕ್ಕಳ ಸಾಧನೆಯನ್ನು ಗುರುತಿಸುತ್ತಿದ್ದೇವೆ. ಈ ಬಾರಿ 122 ರೈತರಿಗೆ ‘ಕೃಷಿ ಪಂಡಿತ’ ಮತ್ತು ‘ಕೃಷಿ ಪ್ರಶಸ್ತಿ’ ನೀಡಿ ಗೌರವಿಸುತ್ತಿರುವುದು ನಮಗೆ ಹೆಮ್ಮೆಯ ವಿಷಯ. ಮಾರುಕಟ್ಟೆ ಸಂಪರ್ಕ:ಕಳೆದ ವರ್ಷದ ಮೇಳದಲ್ಲಿ ರೂ.185 ಕೋಟಿ ಮೊತ್ತದ ಒಪ್ಪಂದಗಳು ನಡೆದಿದ್ದವು. ಈ ವರ್ಷ ದೇಶ-ವಿದೇಶಗಳ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದು, ರೈತರಿಗೆ ಅಂತರಾಷ್ಟ್ರೀಯ ಮಟ್ಟದ ಮಾರುಕಟ್ಟೆ ಸಿಗಲಿದೆ ಎಂಬ ವಿಶ್ವಾಸ ನನಗಿದೆ ಎಂದು ತಿಳಿಸಿದರು.
ಸಚಿವರ ಪ್ರಮುಖ ಘೋಷಣೆ:
ರೈತರ ಆದಾಯ ಹೆಚ್ಚಿಸಲು ಸರ್ಕಾರವು ‘ದ್ವಿತೀಯ ಕೃಷಿ ನಿರ್ದೇಶನಾಲಯ’ದ ಮೂಲಕ ಹೆಚ್ಚಿನ ಸವಲತ್ತುಗಳನ್ನು ನೀಡುತ್ತಿದ್ದು, ಈ ಮೇಳವು ರೈತರು ಮತ್ತು ಗ್ರಾಹಕರ ನಡುವಿನ ಕೊಂಡಿಯಾಗಲಿದೆ ಎಂದು ಅವರು ತಿಳಿಸಿದರು.
ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಮಾತನಾಡುತ್ತಾ, ಕೃಷಿ ಕೇವಲ ಆಹಾರ ಬೆಳೆಯುವುದಕ್ಕೆ ಸೀಮಿತವಾಗಬಾರದು. ರೈತರು ಬೆಳೆದ ಬೆಳೆಗೆ ಯೋಗ್ಯ ಬೆಲೆ ಸಿಗಬೇಕಾದರೆ, ಅವರು ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಮೌಲ್ಯವರ್ಧನೆ ಮಾಡಬೇಕು. ಈ ಮೇಳವು ರೈತರು ಮತ್ತು ಅಂತರಾಷ್ಟ್ರೀಯ ಖರೀದಿದಾರರ ನಡುವೆ ನೇರ ಕೊಂಡಿಯಾಗಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.
ಸಿರಿಧಾನ್ಯಗಳ ಜಾಗತಿಕ ಮಾರುಕಟ್ಟೆ:
ಕರ್ನಾಟಕವು ‘ಸಿರಿಧಾನ್ಯಗಳ ಹಬ್’ ಆಗಿ ಬೆಳೆದಿದೆ. ಇಂದು ವಿಶ್ವದಾದ್ಯಂತ ಆರೋಗ್ಯದ ಬಗ್ಗೆ ಅರಿವು ಹೆಚ್ಚುತ್ತಿದೆ, ಈ ಸಂದರ್ಭದಲ್ಲಿ ನಮ್ಮ ರಾಜ್ಯದ ಸಿರಿಧಾನ್ಯಗಳಿಗೆ ಜಾಗತಿಕ ಮಟ್ಟದಲ್ಲಿ ದೊಡ್ಡ ಬೇಡಿಕೆಯಿದೆ. ಇದನ್ನು ಬಳಸಿಕೊಂಡು ನಮ್ಮ ರೈತರು ರಫ್ತುದಾರರಾಗಬೇಕು ಎಂಬುದು ಸರ್ಕಾರದ ಆಶಯ ಎಂದರು.
ತಂತ್ರಜ್ಞಾನ ಮತ್ತು ನಾವೀನ್ಯತೆ: ಇಂದಿನ ಯುಗದಲ್ಲಿ ಕೃಷಿಯು ಡಿಜಿಟಲ್ ತಂತ್ರಜ್ಞಾನದೊಂದಿಗೆ ಬೆರೆಯಬೇಕು. ಕೃಷಿ ಉದ್ಯಮಗಳಲ್ಲಿ ಸ್ಟಾರ್ಟ್‍ಅಪ್‍ಗಳ ಪಾತ್ರ ದೊಡ್ಡದಿದೆ. ಯುವ ಸಮೂಹವು ಕೃಷಿ ತಂತ್ರಜ್ಞಾನದಲ್ಲಿ ನಾವೀನ್ಯತೆಯನ್ನು ತರುವ ಮೂಲಕ ರೈತರ ಶ್ರಮವನ್ನು ಕಡಿಮೆ ಮಾಡಬೇಕು ಮತ್ತು ಉತ್ಪಾದಕತೆಯನ್ನು ಹೆಚ್ಚಿಸಬೇಕು.ಆಡಳಿತಾತ್ಮಕ ಬೆಂಬಲ:ರೈತರು ಉದ್ಯಮಿಗಳಾಗಿ ಬದಲಾಗಲು ಬೇಕಾದ ಪೂರಕ ವಾತಾವರಣವನ್ನು ಸರ್ಕಾರ ಸೃಷ್ಟಿಸುತ್ತಿದೆ. ಪರವಾನಗಿ, ಪ್ರಮಾಣೀಕರಣ ಮತ್ತು ಆರ್ಥಿಕ ನೆರವು ಸುಲಭವಾಗಿ ಸಿಗುವಂತೆ ಆಡಳಿತ ವ್ಯವಸ್ಥೆಯನ್ನು ಸರಳಗೊಳಿಸಲಾಗುತ್ತಿದೆ. ರೈತ ಉತ್ಪಾದಕ ಸಂಸ್ಥೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.
ಪರಿಸರ ಪೂರಕ ಕೃಷಿ: ಸಾವಯವ ಕೃಷಿಯು ಕೇವಲ ಲಾಭಕ್ಕಾಗಿ ಮಾತ್ರವಲ್ಲ, ನಮ್ಮ ಮಣ್ಣಿನ ಆರೋಗ್ಯ ಮತ್ತು ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದಲೂ ಅನಿವಾರ್ಯವಾಗಿದೆ. ಸುಸ್ಥಿರ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ನಾವು ಪರಿಸರ ಸಮತೋಲನವನ್ನು ಕಾಯ್ದುಕೊಳ್ಳಬೇಕಿದೆ ಎಂದು ತಿಳಿಸಿದರು.
