ಇಂದು ಮಹಾ ಶಿವರಾತ್ರಿ. ದೇಶಾದ್ಯಂತ ಜನರು ಬೆಳಗಿನಿಂದಲೇ ಶ್ರದ್ಧಾಭಕ್ತಿಗಳಿಂದ ಶಿವಪೂಜೆ ಕೈಗೊಂಡಿದ್ದಾರೆ.
ನದಿಗಳಲ್ಲಿ ಪುಣ್ಯ ಸ್ನಾನ ಕೈಗೊಂಡು ಶಿವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ಶಿವರಾತ್ರಿ ಹಿನ್ನೆಲೆಯಲ್ಲಿ ದೇಶಾದ್ಯಂತ ಇರುವ ಎಲ್ಲ ಶಿವಾಲಯಗಳಲ್ಲಿ ಇಂದು ಬೆಳಗಿನಿಂದಲೇ ಅಭಿಷೇಕ, ವಿಶೇಷ ಪೂಜೆಗಳು ನಡೆಯುತ್ತಿವೆ. 12 ಜ್ಯೋತಿರ್ಲಿಂಗಗಳ ತೀರ್ಥಕ್ಷೇತ್ರಗಳಿಗೆ ಹೆಚ್ಚಿನ ಸಂಖ್ಯೆಯ ಭಕ್ತರು ಭೇಟಿ ನೀಡುತ್ತಿದ್ದಾರೆ.
ಶಿವರಾತ್ರಿ ಹಿನ್ನೆಲೆಯಲ್ಲಿ ಜಾಗರಣೆ, ಉಪವಾಸಗಳನ್ನು ಸಹ ಕೈಗೊಳ್ಳಲಾಗುತ್ತಿದ್ದು, ರಾತ್ರಿಯೀಡಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಕೋಲಾರ ಜಿಲ್ಲೆಯ ಪ್ರಮುಖ ಧಾರ್ಮಿಕ ಕೇಂದ್ರವಾದ ಕೋಟಿಲಿಂಗೇಶ್ವರ ದೇವಾಲಯದಲ್ಲಿ ಪ್ರತಿಷ್ಠಾಪಿಸಿರುವ 108 ಅಡಿ ಎತ್ತರದ ಶಿವಲಿಂಗಕ್ಕೆ ದೀಪಾಲಂಕಾರ ಮಾಡಲಾಗಿದ್ದು, ವಿವಿಧ ಬಗೆಯ ಹೂಗಳಿಂದ ಶೃಂಗರಿಸಲಾಗಿದೆ. ಶಿವನ ಎದುರು 35 ಅಡಿ ಎತ್ತರದ ನಂದಿ ವಿಗ್ರಹ ವಿಶೇಷವಾಗಿದೆ. ಬೆಳಿಗ್ಗೆಯಿಂದಲೇ ವಿವಿದೆಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುತ್ತಿದ್ದು, ಕೋಟಿ ಶಿವಲಿಂಗಗಳ ದರ್ಶನ ಪಡೆಯುತ್ತಿದ್ದಾರೆ.
