ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರನ್ನು ನಿರ್ವಹಿಸುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತವು (ಬಿಐಎಎಲ್) ದಕ್ಷಿಣ ಭಾರತ ಮತ್ತು ಯುರೋಪ್ ನಡುವಿನ ಸರಕು ಸಾಗಣೆ ಸಂಪರ್ಕವನ್ನು ಬಲಪಡಿಸುವ ಉದ್ದೇಶದಿಂದ ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣದ (FRA) ಜೊತೆಗೆ ತಿಳುವಳಿಕಾ ಪತ್ರಕ್ಕೆ (MoU) ಸಹಿ ಹಾಕಿದೆ.
‘ಏರ್ ಕಾರ್ಗೋ ಇಂಡಿಯಾ’ ಸಮಾವೇಶದ ಸಂದರ್ಭದಲ್ಲಿ ಈ ಮಹತ್ವದ ಒಪ್ಪಂದ ಏರ್ಪಟ್ಟಿದೆ. ಈ ಸಹಭಾಗಿತ್ವವು ಪ್ರಮುಖ ಸರಕು ಸಾಗಣೆ ಹೆಬ್ಬಾಗಿಲುಗಳಾದ; ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಉತ್ಪಾದನಾ ಮತ್ತು ರಫ್ತು ವಲಯದ ಕೇಂದ್ರವಾಗಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಹಾಗೂ ಯುರೋಪ್‌ನ ಅತ್ಯಂತ ಸಕ್ರಿಯ ಕಾರ್ಗೋ ಹಬ್‌ಗಳಲ್ಲಿ ಒಂದಾದ ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣಗಳನ್ನು(FRA) ಒಂದುಗೂಡಿಸಿದೆ.
ಈ ಒಪ್ಪಂದದ ಅನ್ವಯ, ಎರಡೂ ವಿಮಾನ ನಿಲ್ದಾಣಗಳು ಜಂಟಿ ವಾಣಿಜ್ಯ ಮಾರ್ಗಗಳ ವಿಶ್ಲೇಷಣೆ, ಡಿಜಿಟಲ್ ಕಾರಿಡಾರ್ ಅಭಿವೃದ್ಧಿ, ಔಷಧ ಉತ್ಪನ್ನಗಳ ಸಾಗಣೆಯ ಸುರಕ್ಷತಾ ಮಾನದಂಡಗಳು ಮತ್ತು ಜ್ಞಾನ ವಿನಿಮಯದ ಮೇಲೆ ಕೇಂದ್ರೀಕೃತವಾದ ವ್ಯವಸ್ಥಿತ ಚೌಕಟ್ಟನ್ನು ರೂಪಿಸುವ ಗುರಿ ಹೊಂದಿವೆ. ಈ ಮೂಲಕ ಸರಕು ಸಾಗಣೆಯ ಪಾರದರ್ಶಕತೆಯನ್ನು ಹೆಚ್ಚಿಸುವುದು, ವಿಮಾನ ನಿಲ್ದಾಣದಲ್ಲಿ ಸರಕು ಉಳಿಯುವ ಅವಧಿಯನ್ನು ಕಡಿಮೆ ಮಾಡುವುದು ಮತ್ತು ಹೂಡಿಕೆದಾರರಿಗೆ ಹಾಗೂ ಸಂಬಂಧಪಟ್ಟ ಸಂಸ್ಥೆಗಳಿಗೆ ಹೆಚ್ಚು ನಂಬಿಕಾರ್ಹ ಸೇವೆಯನ್ನು ಒದಗಿಸುವುದು ಈ ಮೈತ್ರಿಯ ಆಶಯವಾಗಿದೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಶ್ರೀ ಗಿರೀಶ್ ನಾಯರ್ ಅವರು ಮಾತನಾಡಿ,”ಈ ಸಹಭಾಗಿತ್ವವು ಭಾರತ ಮತ್ತು ಯುರೋಪ್ ನಡುವೆ ಹೆಚ್ಚು ಸಮನ್ವಯದ ಹಾಗೂ ದತ್ತಾಂಶ ಆಧಾರಿತ ಸರಕು ಸಾಗಣೆ ಕಾರಿಡಾರ್‌ಗಳನ್ನು ನಿರ್ಮಿಸುವತ್ತ ಸಾಗಿರುವ ಕಾರ್ಯತಂತ್ರದ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಕಾರ್ಗೋ ಮೂಲಸೌಕರ್ಯ, ತಂತ್ರಜ್ಞಾನ ಮತ್ತು ಸಾಮರ್ಥ್ಯ ವೃದ್ಧಿಯಲ್ಲಿ ನಿರಂತರವಾಗಿ ಹೂಡಿಕೆ ಮಾಡುತ್ತಿದೆ. ಇಂತಹ ಸಹಭಾಗಿತ್ವಗಳು ಆ ಹೂಡಿಕೆಗಳನ್ನು ಅತ್ಯಂತ ದಕ್ಷ ಹಾಗೂ ವಿಸ್ತರಿಸಬಹುದಾದ ವಾಣಿಜ್ಯ ಮಾರ್ಗಗಳನ್ನಾಗಿ ಪರಿವರ್ತಿಸಲು ಸಹಕಾರಿಯಾಗಲಿವೆ.
ಪ್ರಮುಖವಾಗಿ ಹೆಚ್ಚಿನ ಮೌಲ್ಯದ ಮತ್ತು ಸಮಯದ ಮಿತಿಯಿರುವ ಸರಕುಗಳ ಸಾಗಣೆಗೆ ಬೆಂಬಲ ನೀಡಲಿದೆ. ಬದಲಾಗುತ್ತಿರುವ ವ್ಯಾಪಾರ ಚಲನಶೀಲತೆ ಮತ್ತು ನಿಯಂತ್ರಕ ಮಾನದಂಡಗಳಿಗೆ ಹೊಂದಿಕೊಳ್ಳುವಂತಹ, ಭವಿಷ್ಯಕ್ಕೆ ಸನ್ನದ್ಧವಾದ ಹಾಗೂ ಸ್ಥಿತಿಸ್ಥಾಪಕತ್ವವುಳ್ಳ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವುದು ನಮ್ಮ ಮುಖ್ಯ ಗುರಿಯಾಗಿದೆ. ಇದು ವಿಮಾನಯಾನ ಸಂಸ್ಥೆಗಳು, ಸರಕು ರವಾನೆದಾರರು ಮತ್ತು ವಾಣಿಜ್ಯ ಸಹಭಾಗಿ ಸಂಸ್ಥೆಗಳಿಗೆ ದೀರ್ಘಾವಧಿಯ ಮೌಲ್ಯವನ್ನು ಸೃಷ್ಟಿಸಲಿದೆ” ಎಂದು ತಿಳಿಸಿದರು.
ಫ್ರಾಪೋರ್ಟ್‌ನ ಹಿರಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಅಲೆಕ್ಸಾಂಡರ್ ಲೌಕೆನ್‌ಮನ್ ಅವರು ಮಾತನಾಡಿ, “ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನ ಜೊತೆಗಿನ ಈ ಸಹಭಾಗಿತ್ವವು ಎರಡು ಪ್ರಮುಖ ಕಾರ್ಗೋ ಮತ್ತು ಆರ್ಥಿಕ ಕೇಂದ್ರಗಳ ನಡುವೆ ಭದ್ರವಾದ ಕೊಂಡಿಯನ್ನು ನಿರ್ಮಿಸಲಿದೆ. ಇದು ಉದ್ಯಮಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುವುದಲ್ಲದೆ, ಅಂತಾರಾಷ್ಟ್ರೀಯ ಸರಕು ಸಾಗಣೆಯ ಭವಿಷ್ಯಕ್ಕೆ ಪ್ರಮುಖ ಪ್ರೇರಕ ಶಕ್ತಿಯಾಗಲಿದೆ.
‘ಸರಕು ಸಾಗಣೆಯ ಭವಿಷ್ಯವನ್ನು ಒಟ್ಟಾಗಿ ರೂಪಿಸೋಣ’ ಎಂಬ ಧ್ಯೇಯವಾಕ್ಯಕ್ಕೆ ಅನುಗುಣವಾಗಿ, ನಾವು ಸಹಭಾಗಿತ್ವ ಆಧಾರಿತ ನಾವೀನ್ಯತೆಯ ಮೇಲೆ ಗಮನ ಹರಿಸುತ್ತಿದ್ದೇವೆ. ನಮ್ಮ ಗ್ರಾಹಕರಿಗೆ ಮತ್ತು ಸಂಪೂರ್ಣ ಕಾರ್ಗೋ ಸಮುದಾಯಕ್ಕೆ ಅತ್ಯುತ್ತಮ ವಾತಾವರಣವನ್ನು ನಿರ್ಮಿಸುವುದು ನಮ್ಮ ಗುರಿಯಾಗಿದೆ. ಈ ಮೈತ್ರಿಯು ನಮ್ಮ ‘ಫ್ರಾಂಕ್‌ಫರ್ಟ್ ಕಾರ್ಗೋಹಬ್ ಮಾಸ್ಟರ್‌ಪ್ಲಾನ್’ನ ಪ್ರಮುಖ ಆಧಾರ ಸ್ತಂಭವಾಗಿದ್ದು, ಅಂತಾರಾಷ್ಟ್ರೀಯ ವೈಮಾನಿಕ ಸರಕು ಸಾಗಣೆಗೆ ಹೊಸ ರೂಪ ನೀಡುವ ನಮ್ಮ ಮಹತ್ವಾಕಾಂಕ್ಷೆಯನ್ನು ಒತ್ತಿಹೇಳುತ್ತದೆ.” ಎಂದು ತಿಳಿಸಿದರು.
ಇತ್ತೀಚೆಗಷ್ಟೇ ಅಂತಿಮಗೊಂಡ ಭಾರತ-ಯುರೋಪ್ ಒಕ್ಕೂಟದ ಮುಕ್ತ ವ್ಯಾಪಾರ ಒಪ್ಪಂದವು (FTA), ದ್ವಿಪಕ್ಷೀಯ ವಾಣಿಜ್ಯ ಮತ್ತು ವೈಮಾನಿಕ ಸರಕು ಸಾಗಣೆಗೆ ಹೊಸ ವೇಗವನ್ನು ನೀಡಲಿದೆ ಎಂದು ನಿರೀಕ್ಷಿಸಲಾಗುತ್ತಿರುವ ಬೆನ್ನಲ್ಲೇ ಈ ಮಹತ್ವದ ಮೈತ್ರಿ ಏರ್ಪಟ್ಟಿದೆ. ಭಾರತ ಮತ್ತು ಯುರೋಪ್ ನಡುವಿನ ವಾಣಿಜ್ಯ ವಹಿವಾಟಿನ ಪ್ರಮಾಣವು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ಮಾರುಕಟ್ಟೆಗೆ ವೇಗವಾಗಿ ಪ್ರವೇಶ ಪಡೆಯಲು ಮತ್ತು ಪೂರೈಕೆ ಸರಪಳಿಯ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸಲು ದಕ್ಷ ಹಾಗೂ ನಂಬಿಕಾರ್ಹ ಸರಕು ಸಾಗಣೆ ಕಾರಿಡಾರ್‌ಗಳು ನಿರ್ಣಾಯಕ ಪಾತ್ರ ವಹಿಸಲಿವೆ.
