ಕೋಲಾರ: ಸಾರ್ವಜನಿಕರು ಮಾಹಿತಿ ಕೋರಿ ಸಲ್ಲಿಸಿದ ಅರ್ಜಿಗಳಿಗೆ ಸಕಾಲದಲ್ಲಿ ಮಾಹಿತಿ ನೀಡದ ಮಾಲೂರು ತಾಲೂಕು ತಹಸೀಲ್ದಾರರಾದ ರೂಪ ಅವರಿಗೆ ಕರ್ನಾಟಕ ಮಾಹಿತಿ ಆಯೋಗದ ಪೀಠ ಸಂಖ್ಯೆ-5 ರಲ್ಲಿ ಪ್ರತ್ಯೇಕ ಮೂರು ಪ್ರಕರಣಗಳಿಂದ ಒಟ್ಟು 60 ಸಾವಿರ ರೂ.ಗಳ ದಂಡ ವಿಧಿಸಲಾಗಿದೆ.
ಎರಡು ಪ್ರಕರಣಗಳಲ್ಲಿ ತಲಾ 25 ಸಾವಿರ ರೂ. ಹಾಗೂ ಒಂದು ಪ್ರಕರಣದಲ್ಲಿ 10 ಸಾವಿರ ರೂ.ಗಳ ದಂಡ ವಿಧಿಸಿ ಕರ್ನಾಟಕ ಮಾಹಿತಿ ಆಯೋಗದ ಪೀಠ -5 ರ ರಾಜ್ಯ ಮಾಹಿತಿ ಆಯುಕ್ತರಾದ ರಾಜಶೇಖರ ಎಸ್ ಅವರು ಆದೇಶ ಮಾಡಿದ್ದಾರೆ.
ಮಾಹಿತಿ ಆಯೋಗದ ಆದೇಶ ಇದ್ದರೂ ಸಹ ಮಾಹಿತಿ ನೀಡದೇ ನಿರ್ಲಕ್ಷ್ಯ ತೋರಿಸಿರುವುದು ಹಾಗೂ ವಿಚಾರಣೆಗೆ ಗೈರು ಹಾಜರಾಗಿದ್ದರಿಂದ ದಂಡ ವಿಧಿಸಿದ್ದು, ವೇತನದಲ್ಲಿ ಒಂದೇ ಬಾರಿಗೆ ಕಟಾವು ಮಾಡಿ ಆಯೋಗದ ಖಾತೆಗೆ ತುಂಬುವಂತೆ ಕೋಲಾರ ಸಹಾಯಕ ಆಯುಕ್ತರು ಹಾಗೂ ಕೋಲಾರ ಜಿಲ್ಲಾಧಿಕಾರಿ ಅವರಿಗೆ ನಿರ್ದೇಶನ ನೀಡಿದ್ದಾರೆ.
ಮಾಲೂರು ತಾಲೂಕಿನ ಭೈರತ್ನಹಳ್ಳಿಯ ವಿಜಯಕುಮಾರ್ ಬಿಎಂ ಅವರು ಬ್ಯಾಟರಾಯನಹಳ್ಳಿ ಗ್ರಾಮದ ಸರ್ವೆ ನಂ 5 ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಕೋರಿದ್ದರು. ಆದರೆ ಮಾಲೂರು ತಹಸೀಲ್ದಾರ್ ರೂಪ ಅವರು ಯಾವುದೇ ದಾಖಲೆಗಳನ್ನು ನೀಡದೇ ಆಯೋಗದ ಆದೇಶವನ್ನು ಗಾಳಿಗೆ ತೂರಿದ್ದರಿಂದ 25 ಸಾವಿರ ರೂ. ದಂಡ ಹಾಕಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಮಾಲೂರು ತಾಲೂಕಿನ ಪುರುಷನಹಳ್ಳಿ ಗ್ರಾಮದ ರಮೇಶ್ ಕೆ. ಅವರು ತಮ್ಮ ಜಮೀನು ಸರ್ವೇ ನಂ.78 ಪೋಡಿ ಆಗಿದ್ದು ಹೊಸ ಸರ್ವೇ ನಂಬರ್ ಪ್ರಕಾರ ಆಕಾರ್ ಬಂದ್, ಹಿಸ್ಸಾ ಟಿಪ್ಪಣ್ಣಿ ಹಾಗೂ ಇತರೆ ದಾಖಲೆಗಳನ್ನು ಕೋರಿದ್ದರು. ಆದರೆ ಯಾವುದೇ ಮಾಹಿತಿ ನೀಡಿರಲಿಲ್ಲ. ಆಯೋಗದಿಂದ ಕಾರಣ ಕೇಳಿ ನೋಟಿಸ್ ಜಾರಿಯಾಗಿದ್ದರೂ ಮೂರು ವಿಚಾರಣೆಗೆ ಸತತ ಗೈರು ಹಾಜರಾಗಿದ್ದರು. ಆದ್ದರಿಂದ ಈ ಪ್ರಕರಣದಲ್ಲಿ 25 ಸಾವಿರ ರೂ. ದಂಡ ವಿಧಿಸಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಬೆಂಗಳೂರು ಕಾಮಾಕ್ಷಿಪಾಳ್ಯದ ಮಂಜುನಾಥ್ ಟಿ. ನಾಯಕ್ ಅವರು ಮಾಲೂರು ತಾಲೂಕಿನ ಚನ್ನಿಗರಾಯಪುರದ ಸರ್ವೇ ನಂ 6 ರ ಸಾಗುವಳಿ ಚೀಟಿ ಹಾಕು ಇತರೆ ದಾಖಲೆ ಕೋರಿದ್ದರು. ಈ ಪ್ರಕರಣದಲ್ಲಿಯೂ ಯಾವುದೇ ದಾಖಲೆ ನೀಡದೆ ವಿಚಾರಣೆಗೂ ಗೈರು ಹಾಜರಾಗಿದ್ದರಿಂದ 10 ಸಾವಿರ ರೂ. ದಂಡ ವಿಧಿಸಿ ಆದೇಶ ಮಾಡಲಾಗಿದೆ.
