ಬೆಂಗಳೂರು : ಐಐಎಸ್‌ಸಿ ಸಹಯೋಗದಲ್ಲಿ ಎಐ ತಂತ್ರಜ್ಞಾನದ ಮೂಲಕ ಬೆಂಗಳೂರು ನಗರದ ಅಂತರ್ಜಲ ದತ್ತಾಂಶಗಳನ್ನು ವಿಶ್ಲೇಷಿಸಿದ್ದು, 65 ವಾರ್ಡ್‌ಗಳಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ನೀಡಿರುವ ಅವರು, ದೇಶದಲ್ಲೇ ಮೊದಲ ಬಾರಿಗೆ ಎಐ ಆಧಾರಿತ ತಂತ್ರಜ್ಞಾನದ ಮೂಲಕ ಬರಬಹುದಾದ ನೀರಿನ ಕೊರತೆಯನ್ನು ಸಮರ್ಪಕವಾಗಿ ನಿಭಾಯಿಸುವ ಯೋಜನೆಯನ್ನು ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಐಐಎಸ್ಸ್‌ಸಿ ನೇತೃತ್ವದ ತಂಡ ಐಓಟಿ ತಂತ್ರಜ್ಞಾನದಿಂದ ಲಭ್ಯವಾಗಿರುವಂತಹ ದತ್ತಾಂಶಗಳನ್ನು ಎಐ ಆಧಾರಿತವಾಗಿ ವಿಶ್ಲೇಷಿಸಿದೆ. ಈ ವಿಶ್ಲೇಷಣೆಯ ನಂತರ ಬೆಂಗಳೂರು ನಗರದಲ್ಲಿ 65 ವಾರ್ಡ್‌ಗಳಲ್ಲಿ ನೀರಿನ ಕೊರತೆ ಕಾಣುವ ಸಾಧ್ಯತೆಯನ್ನು ತೋರಿಸಲಾಗಿದೆ. ಇದನ್ನು ಸಮರ್ಥವಾಗಿ ನಿಭಾಯಿಸಲು ಬೆಂಗಳೂರು ಜಲಮಂಡಳಿ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದೆ.
ಇದಲ್ಲದೇ, ನಗರದಾದ್ಯಂತ ನೀರಿನ ಸಮರ್ಪಕ ಬಳಕೆ ಹಾಗೂ ನಿರ್ವಹಣೆಗಾಗಿ ಹಲವಾರು ಕ್ರಮಗಳನ್ನು ಅಳವಡಿಸಿಕೊಳ್ಳಲು ಸೂಚನೆ ನೀಡಲಾಗಿದೆ. ನೀರಿನ ಉಳಿತಾಯ ಹಾಗೂ ಕಟ್ಟುನಿಟ್ಟಿನ ದಂಡ: ಕುಡಿಯುವ ನೀರನ್ನು ಅನ್ಯ ಬಳಕೆಗಳಿಗೆ ಅಂದರೆ ವಾಹನ ಶುದ್ಧೀಕರಣ, ತೋಟಗಾರಿಕೆ ಹಾಗೂ ಮನೆ ಅಂಗಳ ತೊಳೆಯಲು ಬಳಸಿದ್ದಲ್ಲಿ ದಂಡ ವಿಧಿಸಲಾಗುವುದು. ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಕಡ್ಡಾಯವಾಗಿ ಸಂಸ್ಕರಿಸಿದ ನೀರನ್ನೇ (Treated water) ಬಳಸುವಂತೆ ಆದೇಶಿಸಲಾಗಿದೆ.
ನೀರಿನ ಸಂಪರ್ಕಗಳ ಮಂಜೂರಾತಿ: ಬೇಸಿಗೆಯ ದೃಷ್ಟಿಯಿಂದ 65 ವಾರ್ಡ್‌ಗಳಲ್ಲಿ ನೀರಿನ ಸಂಪರ್ಕ ಪಡೆದಿಲ್ಲದವರನ್ನು ಗುರುತಿಸಿ ಕೂಡಲೇ ಸಂಪರ್ಕ ಒದಗಿಸುವುದು ಹಾಗೂ ಈ ವಾರ್ಡ್‌ಗಳ ವ್ಯಾಪ್ತಿಯಲ್ಲಿರುವ ಅಪಾರ್ಟ್‌ಮೆಂಟ್‌ಗಳಿಗೆ ತ್ವರಿತಗತಿಯಲ್ಲಿ ಸಂಪರ್ಕ ನೀಡಲು ಸೂಚಿಸಲಾಗಿದೆ.
ಕೆರೆಗಳಿಗೆ ಸಂಸ್ಕರಿಸಿದ ನೀರು: ಅಂತರ್ಜಲ ಮಟ್ಟವನ್ನು ವೃದ್ಧಿಸುವ ಉದ್ದೇಶದಿಂದ ಈ 65 ವಾರ್ಡ್‌ಗಳ ವ್ಯಾಪ್ತಿಯಲ್ಲಿರುವ ಕೆರೆಗಳಿಗೆ ಸಂಸ್ಕರಿಸಿದ ನೀರನ್ನು ತುಂಬಿಸಲು ಕ್ರಮ ವಹಿಸಲಾಗುತ್ತಿದೆ.
ಕೊಳಚೆಗೇರಿಗಳಿಗೆ ಸಿಂಟೆಕ್ಸ್ ಟ್ಯಾಂಕ್: ನೀರಿನ ಸಮಸ್ಯೆ ಇರುವ ಕೊಳಚೆಗೇರಿ ಪ್ರದೇಶಗಳನ್ನು ಹಾಗೂ ಹೆಚ್ಚು ಜನಸಾಂದ್ರತೆ ಇರುವ ಸ್ಥಳಗಳನ್ನು ಗುರುತಿಸಿ, ಅಲ್ಲಿ ‘ಸಿಂಟೆಕ್ಸ್ ಟ್ಯಾಂಕ್’ (Sintex Tank) ಮತ್ತು ತಾತ್ಕಾಲಿಕ ನೀರು ವಿತರಣಾ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಅತ್ಯಗತ್ಯವಿರುವ ಕಡೆ ನೀರಿನ ಟ್ಯಾಂಕರ್‌ಗಳನ್ನು ಒದಗಿಸಲು ಸೂಚಿಸಲಾಗಿದೆ.
65 ವಾರ್ಡ್‌ಗಳಲ್ಲಿ ಕೊಳವೆ ಬಾವಿಗಳು ತೊಂದರೆಯಾಗದಂತೆ ಹಾಗೂ ಆರ್.ಓ ಪ್ಲಾಂಟ್‌ಗಳು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಣೆಯಾಗುವಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.
“ಬೆಂಗಳೂರು ನಗರದ ಎಲ್ಲಾ ಪ್ರದೇಶಗಳಿಗೂ ಸಮರ್ಪಕ ರೀತಿಯಲ್ಲಿ ನೀರು ವಿತರಣೆಯಾಗಬೇಕು. ನೀರಿನ ಉಳಿತಾಯಕ್ಕಾಗಿ ಏರಿಯೇಟರ್‌ಗಳ (Aerators) ಅಳವಡಿಕೆಗೆ ಹೆಚ್ಚಿನ ಗಮನ ಹರಿಸಬೇಕು,” ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
