ಸಮಗ್ರ ಸುದ್ದಿ

ಪಶು ಸಂಗೋಪನೆ ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬು-ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

Share

ಬೀದರ್: ಗ್ರಾಮೀಣ ಭಾರತವು ಸಂಪೂರ್ಣ ಕೃಷಿ ಆಧಾರಿತವಾಗಿದ್ದು, ಪಶು ಸಂಗೋಪನೆಯೇ ಗ್ರಾಮೀಣ ಆರ್ಥಿಕ ಅಭಿವೃದ್ಧಿಗೆ ಬೆನ್ನೆಲುಬು ಆಗಿದೆ ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ತಿಳಿಸಿದರು. 

ಅವರು ಇಂದು ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರನ 15ನೇ ಘಟಿಕೋತ್ಸವ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ಪದಕ, ಪದವಿ ಪ್ರಧಾನ ಮಾಡಿ ಮಾತನಾಡಿದರು. ಕೃಷಿ ಉತ್ಪಾದನೆ, ಹಾಲು ಉತ್ಪಾದನೆ, ಡೈರಿ ಉತ್ಪಾದನೆಗಳು ಮೀನು ಉತ್ಪಾದನೆ ರೈತರ ಆರ್ಥಿಕ ಅಭಿವೃದ್ಧಿಗೆ ಕಾರಣವಾಗಿವೆ. ಭಾರತವು ಹಾಲು ಹಾಗೂ ಮೀನು ಉತ್ಪಾದನೆಯಲ್ಲಿ ಮುಂಚೂಣಿ ಸ್ಥಾನದಲ್ಲಿದೆ. ವಿಶ್ವವಿದ್ಯಾಲಯದ ವಿಜ್ಞಾನಿಗಳು ಮಾನವ, ಪ್ರಾಣಿ ಮತ್ತು ಪರಿಸರವನ್ನು ಒಳಗೊಂಡAತೆ ಸಮಗ್ರ ದೃಷ್ಠಿಕೋನದಲ್ಲಿ ಒಂದು ಆರೋಗ್ಯ ದೃಷ್ಠಿಕೋನದಲ್ಲಿ ಕಾರ್ಯನಿರ್ವಹಿಸಬೇಕೆಂದರು. 

ಆಧುನಿಕ ವಿಜ್ಞಾನ, ತಂತ್ರಜ್ಞಾನ ಮೂಲಿಕ ಕೃಷಿ, ಕೃಷಿಯೇತರ, ಪಶು ಸಂಗೋಪನೆ ಉತ್ಪಾದನೆಯನ್ನು ಹೆಚ್ಚಿಸುವ, ವೃದ್ಧಿಸುವ ಕಾರ್ಯ ಆಗಬೇಕು. ವಿವಿಧ ರೀತಿಯ ರೋಗಗಳ ನಿಯಂತ್ರಣವು ಸಹ ದೊಡ್ಡ ಸವಾಲಾಗಿದ್ದು, ವಿಜ್ಞಾನಿಗಳು ಸತತ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು. ವಿಜ್ಞಾನಿಗಳು ಯಶಸ್ಸು, ಪರಿಶ್ರಮ ಹಾಗೂ ಸೇವಾಭಾವನೆಯಿಂದ ಜೀವನ ನಡೆಸಬೇಕು. ಜ್ಞಾನ ನೈತಿಕ ಮೌಲ್ಯಗಳ ಆಚರಣೆ ಜೊತೆ ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಪಶುಗಳ ಬಗ್ಗೆ ಕರುಣೆಯಿಂದ ರೈತರಿಗೆ ಸೇವೆ ನೀಡುವಂತಾಗಲಿ ಹಾಗೂ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಹಿತ ನುಡಿಗಳನ್ನು ಆಡಿದರು. 

ಪಶು ಸಂಗೋಪನೆ ಸಚಿವರಾದ ಕೆ.ವೆಂಕಟೇಶ ಅವರು ಮಾತನಾಡಿ, ರಾಜ್ಯದಲ್ಲಿ 2.9 ಕೋಟಿ ಜಾನುವಾರುಗಳಿವೆ. ಹಾಲು ಉತ್ಪಾದನೆಯಲ್ಲಿ ರಾಜ್ಯ 2ನೇ ಸ್ಥಾನದಲ್ಲಿದೆ. ಕಳೆದ ವರ್ಷ ಪ್ರತಿದಿನ 1 ಕೋಟಿ ಲೀಟರ ಹಾಲು ಉತ್ಪಾದನೆಯಾಗುತ್ತದೆ ಎಂದರು.

ಗ್ರಾಮೀಣ ಜನರ ಆರ್ಥಿಕತೆಯಲ್ಲಿ ಪಶು ಸಂಗೋಪನೆ ಅತೀ ಮಹತ್ವದ ಪಾತ್ರ ವಹಿಸುತ್ತಿದೆ. ಸರಕಾರವು ವಿವಿಧ ಯೋಜೆನಗಳ ಮೂಲಕ ಪಶು ಸಂಗೋಪನೆಯನ್ನು ಬಲಪಡಿಸುತ್ತಿದೆಯೆಂದರು. ನುರಿತ ತಜ್ಞರು, ವಿಜ್ಞಾನಿಗಳು ಪಶು ಸಂಗೋಪನೆ ಉತ್ಪಾದನೆ ಹೆಚ್ಚಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ಅನುಗ್ರಹ ಯೋಜನೆಯಡಿ ಜಾನುವಾರು ಸಾವಿಗೆ ಪರಿಹಾರ ನೀಡಲಾಗುತ್ತಿದೆ. ಮಹಿಳೆಯರಿಗೆ, ಸ್ತ್ರೀ ಶಕ್ತಿ ಗುಂಪುಗಳಿಗೆ ಜಾನುವಾರುಗಳನ್ನು ವಿತರಿಸಲಾಗುತ್ತಿದೆ. ಘಟಿಕೋತ್ಸವ ಕಾರ್ಯಕ್ರಮವನ್ನು ಇನ್ನು ಮುಂದೆ ಕನ್ನಡದಲ್ಲೇ ಮಾಡುವಂತೆ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ಇಕ್ರಿಸ್ಯಾಟ್ ಸಂಸ್ಥೆಯ ಮಹಾನಿರ್ದೇಶಕರಾದ ಹಿಮಾಂಶು ಪಾಠಕ್ ಅವರು ಕರ್ನಾಟಕ ರಾಜ್ಯದ ಅಭಿವೃದ್ಧಿಯನ್ನು ಹೊಗಳಿದರು. ಕರ್ನಾಟಕ ರಾಜ್ಯವು ಕೃಷಿ ಹಾಗೂ ಶಿಕ್ಷಣ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ. ದೇಶದ ವಿವಿಧೆಡೆ ರಾಜ್ಯದ ವಿಜ್ಞಾನಿಗಳಿದ್ದಾರೆ ಎಂದರು.

2025 ರಲ್ಲಿ ದೇಶವು 217 ಮಿಲಿಯನ್ ಲೀಟರ ಹಾಲು ಉತ್ಪಾದನೆಯಾಗುತ್ತಿದೆ. ದೇಶವು ಕೃಷಿಯಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದುತ್ತಿದೆ. ಪಶುಪಾಲನೆ ಹಾಗೂ ಮೀನುಗಾರಿಕೆ ಮಹತ್ತರ ಪಾತ್ರ ವಹಿಸುತ್ತಿವೆ. ಆಧುನಿಕ ವಿಜ್ಞಾನ ತಂತ್ರಜ್ಞಾನದಿಂದ ಅನೇಕ ನೂನ್ಯತೆಗಳನ್ನು ಬಗೆಹರಿಸಲಾಗುತ್ತಿದೆ. ಸವಾಲುಗಳು ಸಾಕಷ್ಟಿವೆ. ವಿದ್ಯಾರ್ಥಿಗಳು ಶಿಕ್ಷಣದ ಮಹತ್ವವನ್ನು ಅರಿಯಬೇಕು. ಶಾಂತಿ, ನೆಮ್ಮದಿ, ಆರ್ಥಿಕ ಅಭಿವೃದ್ಧಿಗೆ ಶಿಕ್ಷಣವೇ ಅಗತ್ಯ. ಈ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯಗಳು ಮಹತ್ತರ ಪಾತ್ರ ವಹಿಸುತ್ತದೆ ಎಂದರು. 

ಬೀದರನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಸಿ.ವೀರಣ್ಣ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. 

ಘಟಿಕೋತ್ಸವದಲ್ಲಿ 34 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರಧಾನ ಮಾಡಲಾಯಿತು.

ಉಡುಪಿ ಮೂಲದ ವಿದ್ಯಾರ್ಥಿನಿ ಖುಷಿ ಮೆಂಡನ್ 16 ಚಿನ್ನದ ಪದಕಗಳನ್ನು ಪಡೆದರು. 

ಈ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ, ಪಶುವೈದ್ಯಕೀಯ, ಬೀದರ್ ನ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಸಚಿವರಾದ ಪಿ.ಟಿ.ರಮೇಶ ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು.


Share

You cannot copy content of this page