ಬೆಂಗಳೂರು: ಆ್ಯನಿಮೇಷನ್, ವಿಷುಯಲ್ ಎಫೆಕ್ಟ್, ಗೇಮಿಂಗ್ ಕ್ಷೇತ್ರಗಳು ಈಗ ಕೇವಲ ಮನರಂಜನೆಯ ಉದ್ಯಮವಾಗಿ ಉಳಿಯದೆ, ಡಿಜಿಟಲ್, ಸೃಜನಶೀಲತೆ ಹಾಗೂ ಕೃತಕ ಬುದ್ಧಿಮತ್ತೆಯ ಆರ್ಥಿಕತೆಯನ್ನು ಮರು ರೂಪಿಸುತ್ತಿವೆ ಎಂದು ಐಟಿ – ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಣ್ಣಿಸಿದ್ದಾರೆ.
ಬೆಂಗಳೂರಿನಲ್ಲಿ ಮೂರು ದಿನಗಳಿಂದ ನಡೆದ ಬೆಂಗಳೂರು ಜಿಎಎಫ್‌ಎಕ್ಸ್ 7ನೆ ಆವೃತ್ತಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಸೃಜನಶೀಲತೆಯ ಈ ವಲಯಗಳು ಬೌದ್ಧಿಕ ಆಸ್ತಿ, ನಾವೀನ್ಯತೆಯ ಹೊಸ ʼಆರೇಂಜ್ ಇಕಾನಮಿʼಯು (ಕಿತ್ತಳೆ ಆರ್ಥಿಕತೆ) ಬೆಳವಣಿಗೆ ಸಾಧಿಸಲು ಮಹತ್ವದ ಕೊಡುಗೆ ನೀಡುತ್ತಿವೆ. ಈ ಆರ್ಥಿಕತೆಯು ಭಾರಿ ಬದಲಾವಣೆ ತರುತ್ತಿದೆ. ಹೊಸ ಉದ್ಯೋಗ ಅವಕಾಶ ಸೃಷ್ಟಿಸುವ, ಸೃಜನಶೀಲತೆಯ ಹೊಸ ಸಂಸ್ಕೃತಿ ಬೆಳೆಯಲು ನೆರವಾಗುತ್ತಿದೆʼ ಎಂದರು.
ಕಾಂತಾರ-ಚಾಪ್ಟರ್ 1 ಚಿತ್ರದ ಅಭೂತಪೂರ್ವ ಯಶಸ್ಸನ್ನು ಪ್ರಸ್ತಾಪಿಸಿದ ಖರ್ಗೆ ಅವರು, ತಂತ್ರಜ್ಞಾನದ ಸಂಗಮದ ಫಲವಾಗಿ ಸ್ಥಳೀಯ ಕತೆಯು ಜಾಗತಿಕ ಮನ್ನಣೆಗೆ ಪಾತ್ರವಾಗಿದೆ ಎಂದರು.
ಇಡೀ ದೇಶದಲ್ಲಿ ಮೊದಲ ಬಾರಿಗೆ ಎವಿಜಿಸಿ ನೀತಿ ರೂಪಿಸಿದ ಹೆಗ್ಗಳಿಗೆ ಕರ್ನಾಟಕದ್ದು ಆಗಿದೆ. ಸದ್ಯಕ್ಕೆ ಕೃತಕ ಬುದ್ಧಿಮತ್ತೆಯನ್ನು (ಎಐ) ಪ್ರತಿಯೊಬ್ಬರೂ ಅತ್ಯಂತ ಸುಲಭವಾಗಿ ಅಳವಡಿಸಿಕೊಳ್ಳಬಹುದಾಗಿದೆ. ಮಾಹಿತಿ / ವಿಷಯ ಸೃಷ್ಟಿಸಲು ʼಎಐʼಯನ್ನು ಬೆಂಗಳೂರಿನ ಆಚೆಗೂ ಹಿಂದುಳಿದ ಪ್ರದೇಶಗಳಲ್ಲಿಯೂ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಇದರಿಂದ ಉದ್ಯೋಗ ಅವಕಾಶಗಳು ಸೃಷ್ಟಿಯಾಗುತ್ತಿವೆ.
ಬೌದ್ಧಿಕ ಆಸ್ತಿಗೆ ಸಂಬಂಧಿಸಿದ ಸಂದಿಗ್ಧತೆಗಳನ್ನು ನಿವಾರಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ʼನಿಪುಣ ಕಾರ್ಯಕ್ರಮʼದ ನೆರವಿನಿಂದ ಎವಿಜಿಸಿ ಕ್ಷೇತ್ರದಲ್ಲಿ ಕೌಶಲ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಡೀಪ್‌ಫೇಕ್ ದುರ್ಬಳಕೆ ನಿಯಂತ್ರಿಸಲು ಉದ್ದೇಶಿಸಲಾಗಿದೆ. ಆಡಳಿತದಲ್ಲಿ ಕೃತಕ ಬುದ್ಧಿಮತ್ತೆಯನ್ನು ಸಮರ್ಪಕವಾಗಿ ಬಳಸುವ ಬಗ್ಗೆ ರಾಜ್ಯ ಸರ್ಕಾರ ವಿವಿಧ ಸಮಿತಿಗಳನ್ನು ರಚಿಸಿದೆ. ದೇಶದಲ್ಲಿಯೇ ಮೊದಲ ಬಾರಿಗೆ ಎವಿಜಿಸಿಯ ಶ್ರೇಷ್ಠತಾ ಕೇಂದ್ರವನ್ನು ರಾಜ್ಯದಲ್ಲಿ ಸ್ಥಾಪಿಸಲಾಗಿದೆ. ಆಕ್ಸೆಂಚರ್ ಸೇರಿದಂತೆ ವಿವಿಧ ಕಂಪನಿಗಳ ಸಹಯೋಗದಲ್ಲಿ ತಂತ್ರಜ್ಞಾನ ಕೌಶಲ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗಿದೆ.
ಮೂಲ ಬೌದ್ಧಿಕ ಆಸ್ತಿ (ಐಪಿ) ) ಅಭಿವೃದ್ಧಿಪಡಿಸುವವರಿಗೆ ರಾಜ್ಯ ಸರ್ಕಾರವು ₹ 50 ಲಕ್ಷ ಅನುದಾನ ನೀಡುತ್ತಿದೆ. ರಾಜ್ಯದಾದ್ಯಂತ ಕ್ರಿಯೆಟೀವ್ ಕ್ಲಸ್ಟರ್ ನಿರ್ಮಿಸಲು ಉದ್ದೇಶಿಸಿದೆ. ಇದು ಒಟ್ಟಾರೆ ಸೃಜನಶೀಲತೆಗೆ ಉತ್ತೇಜನ ನೀಡಲಿದೆ ಎಂದರು.
ಉನ್ನತ ಶಿಕ್ಷಣ ಸಚಿವ ಡಾ. ಎಂ. ಸಿ. ಸುಧಾಕರ್ ಅವರು ಮಾತನಾಡಿದರು. ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ಪ್ರಶಸ್ತಿ ವಿತರಿಸಿದರು.
ಕೃತಕ ಬುದ್ಧಿಮತ್ತೆಯು (ಎಐ) ಉದ್ಯೋಗ ಅವಕಾಶಗಳನ್ನು ಕಸಿದುಕೊಳ್ಳುತ್ತಿರುವ ತೀವ್ರ ಆತಂಕದ ಮಧ್ಯೆಯೇ ನಡೆದ ಮೂರು ದಿನಗಳ ಸಮಾವೇಶವು ಈ ಆತಂಕ ದೂರ ಮಾಡಲು ನೆರವಾಗಿದೆ. ಸಮಾರೋಪ ಸಮಾರಂಭದಲ್ಲಿ 7 ಸ್ಟುಡಿಯೊಗಳ 10 ಬೌದ್ಧಿಕ ಆಸ್ತಿ (ಐಪಿ) ಗಳನ್ನು ಅನಾವರಣ ಮಾಡಲಾಯಿತು.
ಸಮಾರಂಭದಲ್ಲಿ ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಬಿಟಿ ಮತ್ತು ಎಸ್ & ಟಿ ಇಲಾಖೆಯ ಕಾರ್ಯದರ್ಶಿ ಡಾ. ಮಂಜುಳಾ ಎನ್. ಮತ್ತು ಕರ್ನಾಟಕ ಇನ್ನೋವೇಶನ್ ಮತ್ತು ಟೆಕ್ನಾಲಜಿ ಸೊಸೈಟಿ (ಕೆಐಟಿಎಸ್) ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಶರಣಪ್ಪ ಸಂಕನೂರ ಹಾಗೂ ಉದ್ಯಮದ ದಿಗ್ಗಜರು ಭಾಗವಹಿಸಿದ್ದರು.
