ಬೆಂಗಳೂರು: ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಮುಂಬರುವ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ, ದಕ್ಷಿಣ ನಗರ ಪಾಲಿಕೆಯ ಆಯುಕ್ತರು ಹಾಗೂ ಅಪರ ಜಿಲ್ಲಾ ಚುನಾವಣಾಧಿಕಾರಿಗಳು ಬೆಂಗಳೂರು ದಕ್ಷಿಣ ಆದ ಕೆ.ಎನ್. ರಮೇಶ್ ಅವರು ಎಲ್ಲಾ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಮಹತ್ವದ ಸಮಾಲೋಚನಾ ಸಭೆ ನಡೆಸಿದರು.
ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ, ಪಾರದರ್ಶಕ ಮತ್ತು ದೋಷಮುಕ್ತ ಚುನಾವಣೆಯನ್ನು ನಡೆಸುವ ನಿಟ್ಟಿನಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ ಎಂದು ತಿಳಿಸಿದರು.
ಮತದಾರರ ಪಟ್ಟಿ ಪ್ರಕಟಣೆಯ ಪ್ರಮುಖ ಹಂತಗಳು:
ಮಾರ್ಚ್ 09 ರಂದು ಕರಡು ಮತದಾರರ ಪಟ್ಟಿ ಪ್ರಕಟಣೆ,
ಆಕ್ಷೇಪಣೆಗಳನ್ನು ಸಲ್ಲಿಸಲು ಮತ್ತು ತಿದ್ದುಪಡಿಗಳಿಗೆ ಮಾರ್ಚ್ 17 ಕೊನೆಯ ದಿನಾಂಕವಾಗಿದೆ. ಏಪ್ರಿಲ್ 06 ರಂದು
ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು.
ಮೃತ ಮತದಾರರ ಹೆಸರು ತೆಗೆದುಹಾಕುವುದು:
2023 ಮತ್ತು 2024ರ ಚುನಾವಣೆಗಳಲ್ಲಿ ಕಂಡುಬಂದಿದ್ದ ಮೃತ ಮತದಾರರ ಹೆಸರುಗಳು ಇನ್ನೂ ಪಟ್ಟಿಯಲ್ಲಿದ್ದು, ಅವುಗಳನ್ನು ಕಟ್ಟುನಿಟ್ಟಾಗಿ ತೆಗೆದುಹಾಕಲು ಕ್ರಮ ಕೈಗೊಳ್ಳುವುದು.
ಮತಗಟ್ಟೆಗಳ ಮರುಹಂಚಿಕೆ:
ಇಬ್ಬಲೂರು ವಾರ್ಡ್‌ನ ಸನ್ ಸಿಟಿ ಅಪಾರ್ಟ್‌ಮೆಂಟ್ ಆವರಣದಲ್ಲಿ ಪ್ರಸ್ತಾವಿಸಲಾಗಿದ್ದ ಮತಗಟ್ಟೆಯ ಬಗ್ಗೆ ಆಕ್ಷೇಪಣೆ ಕೇಳಿಬಂದಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ಅದನ್ನು ಸೂಕ್ತ ಸ್ಥಳಕ್ಕೆ ಬದಲಾಯಿಸಲು ಕ್ರಮ ಕೈಗೊಳ್ಳುವುದು.
ಪ್ರಚಾರಕ್ಕೆ ಮುಕ್ತ ಪ್ರವೇಶಕ್ಕೆ ಸೂಚನೆ:
ಆಡುಗೋಡಿ ಪೊಲೀಸ್ ಕ್ವಾರ್ಟರ್ಸ್ ಸೇರಿದಂತೆ ಎಲ್ಲಾ ಸರ್ಕಾರಿ ವಸತಿಗೃಹಗಳು ಮತ್ತು ಖಾಸಗಿ ಅಪಾರ್ಟ್‌ಮೆಂಟ್‌ಗಳಲ್ಲಿ ಚುನಾವಣಾ ಪ್ರಚಾರ ಹಾಗೂ ಅಧಿಕೃತ ಚುನಾವಣಾ ಕಾರ್ಯಗಳಿಗೆ ರಾಜಕೀಯ ಪಕ್ಷಗಳಿಗೆ ಕಾನೂನುಬದ್ಧವಾಗಿ ಅವಕಾಶ ನೀಡಬೇಕು. ಈ ನಿಟ್ಟಿನಲ್ಲಿ ಅಡ್ಡಿಪಡಿಸದಂತೆ ಸಂಬಂಧಪಟ್ಟ ಇಲಾಖೆಗಳಿಗೆ ಮತ್ತು ಸಂಘ-ಸಂಸ್ಥೆಗಳಿಗೆ ಆಡಳಿತ ಮಂಡಳಿಯಿಂದ ಪತ್ರ ಬರೆದು ಅಗತ್ಯ ಕ್ರಮ ಕೈಗೊಳ್ಳುವುದು.
ಪ್ರತಿ ಮತಗಟ್ಟೆಗೆ ಮತದಾರರ ಮಿತಿ:
ಮುಂಬರುವ ಚುನಾವಣೆಯು ಮತಪತ್ರ (Ballot Paper) ಮೂಲಕ ನಡೆಯುತ್ತಿರುವುದರಿಂದ, ಪ್ರಕ್ರಿಯೆಯನ್ನು ಸುಲಭಗೊಳಿಸಲು ಪ್ರತಿ ಮತಗಟ್ಟೆಯಲ್ಲಿ ಗರಿಷ್ಠ 1,000 ಮತದಾರರಿಗೆ ಮಾತ್ರ ಸೀಮಿತಗೊಳಿಸುವುದು.
ಸಾರ್ವಜನಿಕ ಜಾಗೃತಿ:
ಮತಪತ್ರದ ಮೂಲಕ ಮತ ಚಲಾಯಿಸುವ ವಿಧಾನದ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲ ನಿವಾರಿಸಲು ಮತ್ತು ಹೆಚ್ಚಿನ ಜಾಗೃತಿ ಮೂಡಿಸಲು ಪಾಲಿಕೆಯ ವತಿಯಿಂದ ವಾರ್ಡ್ ಮಟ್ಟದಲ್ಲಿ ಅಭಿಯಾನಗಳನ್ನು ನಡೆಸುವುದು.
ರಾಜಕೀಯ ಪಕ್ಷಗಳ ಸಲಹೆಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ಚುನಾವಣಾ ಆಯೋಗದ ನಿರ್ದೇಶನುಸಾರ ಕ್ರಮ ಕೈಗೊಳ್ಳಲಾಗುವುದು ಹಾಗೂ ಸರ್ಕಾರಿ ವಸತಿ ಸಮುಚ್ಚಯ ಆಗಲಿ ಖಾಸಗಿ ವಸತಿ ಸಮುಚ್ಚಯ ಆಗಲಿ ಸಂವಿಧಾನದ ಆಶಯದ ವಿರುದ್ಧವಾಗಿ ನಡೆಯಲು ಸಾಧ್ಯವಿಲ್ಲ. ಈ ಸಂಬಂಧ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗುವುದು ಎಂದು ತಿಳಿಸಿದರು.
ಯಾವುದೇ ಮತಗಟ್ಟೆ ಆಗಲಿ ಸಾರ್ವಜನಿಕರು ಭೇಟಿ ನೀಡಲು ಮುಕ್ತ ಅವಕಾಶ ಇರುವಂತಹ ಮತಗಟ್ಟೆಗಳನ್ನು ಆಯ್ಕೆ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಾರ್ವಜನಿಕರು ಮತದಾರರ ಕರಡು ಪಟ್ಟಿಯನ್ನು ಪರಿಶೀಲಿಸಿ, ಯಾವುದೇ ತಿದ್ದುಪಡಿಗಳಿದ್ದಲ್ಲಿ ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸುವಂತೆ ತಿಳಿಸಿದರು.
