ಸಮಗ್ರ ಸುದ್ದಿ

ಹಿಂದುಳಿದ, ದಲಿತ ಸಮುದಾಯಗಳ 24 ಮಠಗಳಿಗೆ ಯಲಹಂಕ ಕ್ಷೇತ್ರದಲ್ಲಿ ಭೂಮಿ| ಸ್ವಾಮೀಜಿಗಳಿಂದ ಎಸ್.ಆರ್.ವಿಶ್ವನಾಥ್ ಅವರಿಗೆ ಕೃಪಾಶೀರ್ವಾದ

Share

ಯಲಹಂಕ: ಯಲಹಂಕ ಕ್ಷೇತ್ರದ ದಾಸನಪುರ ಹೋಬಳಿಯ ರಾವುತ್ತನಹಳ್ಳಿ ಗ್ರಾಮದಲ್ಲಿ 24 ಹಿಂದುಳಿದ ಹಾಗೂ ದಲಿತ ಸಮುದಾಯಗಳ ಮಠಗಳಿಗೆ ಭೂಮಿ ನೀಡಿರುವ ಹಿನ್ನೆಲೆಯಲ್ಲಿ ಸೋಮವಾರ ಬೆಳಿಗ್ಗೆ ಭೂಮಿ ಪಡೆದ 24 ಮಠಾಧೀಶರು ಶಾಸಕ ಎಸ್.ಆರ್.ವಿಶ್ವನಾಥ್ ಅವರ ಮನೆಗೆ ಆಗಮಿಸಿ ವಿಶ್ವನಾಥ್ ಹಾಗೂ ಅವರ ಕುಟುಂಬ ವರ್ಗಕ್ಕೆ ಆಶೀರ್ವದಿಸಿದರು.

ಸ್ವಾಮೀಜಿಗಳ ಆಶೀರ್ವಾದ ಪಡೆದ ನಂತರ ಎಸ್.ಆರ್.ವಿಶ್ವನಾಥ್ ಅವರು ಮಾತನಾಡಿ, ಇದೊಂದು ಸುಯೋಗದ ದಿನವೆಂದು ಭಾವಿಸುತ್ತೇನೆ. ರಾಜ್ಯದ ಹಿಂದುಳಿದ ಹಾಗೂ ದಲಿತ ಸಮುದಾಯಗಳ ಸುಮಾರು 24 ಮಠಾಧೀಶರಿಗೆ ಯಲಹಂಕ ಕ್ಷೇತ್ರದಲ್ಲಿ ಒಂದೇ ಕಡೆಯಲ್ಲಿ ಜಾಗ ನೀಡಿರುವುದು ಸಂತೋಷ ಉಂಟು ಮಾಡಿದ್ದು, ಈ ಎಲ್ಲಾ ಮಠಾಧೀಶರ ಆಶೀರ್ವಾದ ಹರಕೆ ನಮ್ಮ ಕ್ಷೇತ್ರದ ಮೇಲಿರಲಿ ಎಂದರು.

ಮಠ ಮಾನ್ಯಗಳ ಸೇವೆಯಿಂದಲೇ ನಮ್ಮ ರಾಜ್ಯದಲ್ಲಿ ಶೈಕ್ಷಣಿಕ ಮತ್ತು ಹಲವು ಸಾಮಾಜಿಕ ಚಟುವಟಿಕೆಗಳಾಗಿವೆ. ವಿಶೇಷವಾಗಿ ಶೈಕ್ಷಣಿಕ ಕ್ಷೇತ್ರದ ಪ್ರಗತಿಯಲ್ಲಿ ಮಠಮಾನ್ಯಗಳ ಕೊಡುಗೆ ಪ್ರಸಂಶಾರ್ಹವಾದುದು. ಧರ್ಮದ ಜೊತೆಗೆ ಶಿಕ್ಷಣದ ಬೆಳವಣಿಗೆಗೆ ಪೂರಕವಾಗಿ ಶ್ರಮಿಸುತ್ತಿರುವ ಹಿಂದುಳಿದ ಹಾಗೂ ದಲಿತ ಸಮುದಾಯಗಳ 24 ಮಠಗಳಿಗೆ ಯಲಹಂಕ ಕ್ಷೇತ್ರದಲ್ಲಿ ಭೂಮಿ ನೀಡಿರುವುದು ಹೆಮ್ಮೆಯ ವಿಷಯವಾಗಿದೆ. ಧರ್ಮದ ಬೆಳವಣಿಗೆ, ಸಂಸ್ಕøತಿ, ಪರಂಪರೆಯ ಪ್ರಗತಿಗೆ ಈ ಎಲ್ಲಾ ಮಠಾಧೀಶರು ಹೆಚ್ಚಿನ ರೀತಿಯಲ್ಲಿ ಶ್ರಮಿಸುವಂತಾಗಲಿ, ತನ್ಮೂಲಕ ನಮ್ಮ ದೇಶ ನಮ್ಮ ಸಮಾಜಕ್ಕೆ ಒಳಿತಾಗಲಿ’ ಎಂದರು.

ಚಿತ್ರದುರ್ಗದ ಮಾದರ ಚೆನ್ನಯ್ಯ ಗುರುಪೀಠದ ಮಾದಾರ ಚೆನ್ನಯ್ಯ ಸ್ವಾಮೀಜಿ ಮಾತನಾಡಿ, ಧರ್ಮ ಸಂರಕ್ಷಣೆ, ಸಾಮಾಜಿಕ ಪ್ರಗತಿಗಾಗಿ, ಯಲಹಂಕ ಕ್ಷೇತ್ರದಲ್ಲಿ ಒಂದೇ ಕಡೆ ರಾಜ್ಯದ 24 ದಲಿತ ಹಾಗೂ ಹಿಂದುಳಿದ ಮಠಗಳಿಗೆ ಭೂಮಿ ನೀಡಿರುವುದು ರಾಜ್ಯದಲ್ಲಿ ಇದೇ ಪ್ರಥಮ, ಇಂಥ ಅನುಪಮ ಕೊಡುಗೆ ನೀಡುವ ಮೂಲಕ ಧರ್ಮಕಾರ್ಯಕ್ಕೆ ಸಹಕರಿಸಿರುವ ಶಾಸಕ ಎಸ್.ಆರ್. ವಿಶ್ವನಾಥ್ ಅವರಿಗೆ ದೇವರು ಒಳ್ಳೆಯ ಆಯಸ್ಸು, ಆರೋಗ್ಯ, ಐಶ್ವರ್ಯ, ಅಧಿಕಾರ ಪ್ರಾಪ್ತಿಯ ಸೌಭಾಗ್ಯವನ್ನು ಕರುಣಿಸಲಿ ಎಂದು ಹರಸಿದರು.

ಎಸ್.ಆರ್.ವಿಶ್ವನಾಥ್ ಅವರ ಕುಟುಂಬದ ವತಿಯಿಂದ ಎಲ್ಲಾ 24 ಮಠಾಧೀಶರಿಗೆ ಗುರುವಂದನೆ ಸಲ್ಲಿಸಿ ಅಭಿನಂದಿಸಲಾಯಿತು.


Share

You cannot copy content of this page