ಸಮಗ್ರ ಸುದ್ದಿ

ಎಲೆಕೊಡಿಗೇಹಳ್ಳಿಯಲ್ಲಿ ಇತಿಹಾಸ ಪ್ರಸಿದ್ಧ ಶ್ರೀನಂದಿಬಸವೇಶ್ವರ | ಶ್ರೀಪಂಚಮುಖ ಶಿವಲಿಂಗೇಶ್ವರಸ್ವಾಮಿ ನೂತನ ದೇವಾಲಯ ಲೋಕಾರ್ಪಣೆ

Share

ಬೆಂಗಳೂರು: ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಬೆಂಗಳೂರು ಉತ್ತರ ತಾಲ್ಲೂಕಿನ ಯಶವಂತಪುರ ಹೋಬಳಿ ಎಲೆಕೊಡಿಗೇಹಳ್ಳಿಯಲ್ಲಿ ಆನಾದಿಕಾಲದಿಂದ ನೆಲೆಗೊಂಡಿರುವ ಇತಿಹಾಸ ಪ್ರಸಿದ್ಧ `ಶ್ರೀನಂದಿಬಸವೇಶ್ವರಸ್ವಾಮಿ’ಯ ನೂತನ ದೇವಾಲಯ ಭವ್ಯವಾಗಿ ನಿರ್ಮಾಣಗೊಂಡಿದ್ದು, ಮಾರ್ಚ್ 8ರಂದು ಲೋಕಾರ್ಪಣೆಗೊಳ್ಳಲಿದೆ.

ಜೋಳರ ಕಾಲದ ಪುಟ್ಟಗುಡಿಯಲ್ಲಿ ನೆಲೆಸಿದ್ದ ಶ್ರೀನಂದಿಬಸವೇಶ್ವರ ಸ್ವಾಮಿಯು ಎಲೆಕೊಡಿಗೇಹಳ್ಳಿ ಮತ್ತು ಸುತ್ತಮುತ್ತಲ ಗ್ರಾಮಗಳ ಆದಿದೇವತೆ ಎನಿಸಿದೆ. ಏನೇ ಕಷ್ಟ ಬಂದರೂ ಸ್ವಾಮಿ ಶ್ರೀನಂದಿಬಸವೇಶ್ವರರ ಪಾದಗಳಿಗೆ ಎರಗಿದರೆ ಎಲ್ಲವೂ ಮಯ ಎನ್ನುವುದು ಇಲ್ಲಿನ ಜನರ ನಂಬಿಕೆ ಆಗಿದೆ. ಈ ಭಕ್ತಿ ಮತ್ತು ಶಕ್ತಿಯೂ ತಲಾತಲಾಂತರದಿಂದಲೂ ಉಳಿದುಕೊಂಡಿದ್ದು, ವಿಶೇಷವಾಗಿ ರೈತಾಪಿಗಳ ಆರಾಧ್ಯ ದೈವವಾಗಿದೆ.

ರಾಜ- ಮಹಾರಾಜರು ದೇಗುಲಕ್ಕೆ ಭೇಟಿ

ಈ ಪುರಾಣ ಪ್ರಸಿದ್ಧ ಸ್ವಾಮಿಯ ದರ್ಶನಕ್ಕೆ ಬರುವ ಸದ್ಭಕ್ತರ ಸಂಖ್ಯೆಯಂತೂ ಹೇಳತೀರದು. ಮೈಸೂರು ಸಂಸ್ಥಾನದ ನಾಲ್ವಡಿ ಜಯಚಾಮರಾಜೇಂದ್ರ ಒಡೆಯರು, ಬಾಳೆಹೊನ್ನೂರಿನ ರಂಭಾಪುರಿಪೀಠ ಸೇರಿ ಪಂಚಪೀಠಗಳ ಜಗದ್ಗುರುಗಳು, ನಾಡಿನ ವಿವಿಧ ಮಠಾಧೀಶರು ಭಕ್ತಿಯಿಂದ ಬಂದು ಶ್ರೀನಂದಿಬಸವೇಶ್ವರ ಸ್ವಾಮಿಯ ದರ್ಶನ ಪಡೆದಿದ್ದಾರೆ. ವರನಟ ಡಾ. ರಾಜ್ಕುಮಾರ್, ಅಭಿನೇತ್ರಿ ಭಾರತೀ ವಿಷ್ಣುವರ್ಧನ್, ಪುನೀತ್ ರಾಜ್ಕುಮಾರ್ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರೂ ದೇವಾಲಯಕ್ಕೆ ಭೇಟಿ ನೀಡಿ, ಸ್ವಾಮಿಯ ದರ್ಶನ ಪಡೆದಿರುವುದು ವಿಶೇಷ.

ಡಾ. ಎನ್. ನಂಜುಂಡೇಶ, ಎ.ಶಿವಣ್ಣ ನೇತೃತ್ವದಲ್ಲಿ ನಿರ್ಮಾಣ

ಪುರಾಣ ಪ್ರಸಿದ್ದ ಶ್ರೀನಂದಿಬಸವೇಶ್ವರ ಸ್ವಾಮಿಯ ದೇವಾಲಯವು ಈಗ ಪುನರುತ್ಥಾನಗೊಂಡಿದೆ. ಸ್ವಾಮಿಯ ಅಪ್ಪಣೆಯಂತೆ ಮತ್ತು ಸದ್ಭಕ್ತರ ಆಶಯದಂತೆ ಶಿಥಿಲಗೊಂಡ ದೇಗುಲವು ಭವ್ಯವಾಗಿ ಪುನರ್ ನಿರ್ಮಾಣಗೊಂಡಿದೆ. ಈ ಘನ ಕಾರ್ಯವನ್ನು ಎಲೆಕೊಡಿಗೇಹಳ್ಳಿಯ ಯಜಮಾನರು ಮತ್ತು ಶೆಟ್ಟರಾದ ಡಾ. ಎನ್. ನಂಜುಂಡೇಶ ಮತ್ತು ಎ.ಶಿವಣ್ಣ ಅವರ ನೇತೃತ್ವದಲ್ಲಿ ನೆರವೇರಿದೆ. ಜೊತೆಗೆ ಶ್ರೀಬಸವೇಶ್ವರಸ್ವಾಮಿ ದೇವರ ಸೇವಾ ಅಭಿವೃದ್ಧಿ ಟ್ರಸ್ಟ್ ಮೂಲಕ ಗ್ರಾಮಸ್ಥರೂ ಕೈಗೂಡಿದ್ದಾರೆ.

ಶ್ರೀನಂದಿಬಸವೇಶ್ವರ ಸ್ವಾಮಿ ದೇವಾಲಯದ ಜೊತೆಗೆ ಶ್ರೀಮಹಾಗಣಪತಿ, ಶ್ರೀಪಂಚಮುಖ ಶಿವಲಿಂಗೇಶ್ವರಸ್ವಾಮಿಯ ಮಂದಿರಗಳೂ ನಿರ್ಮಾಣಗೊಂಡಿವೆ. ಮಾರ್ಚ್ 8ರಂದು ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ನೂತನ ದೇವಾಲಯಗಳ ಲೋಕಾರ್ಪಣೆ, ಪ್ರಾಣ ಪ್ರತಿಷ್ಠಾಪನೆ, ವಿಮಾನಗೋಪುರ, ಶಿಖರ ಕಳಸಾಭೀಷೇಕ ಮತ್ತು ಪೂಜಾ ಮಹೋತ್ಸವ ಕಾರ್ಯಕ್ರಮಗಳು ನೆರವೇರಲಿವೆ ಎಂದು ಎಲೆಕೋಡಿಗೇಹಳ್ಳಿಯ ಯಜಮಾನರು ಮತ್ತು ಶೆಟ್ಟರಾದ ಡಾ. ಎನ್. ನಂಜುಂಡೇಶ ಮತ್ತು ಎ. ಶಿವಣ್ಣ ತಿಳಿಸಿದ್ದಾರೆ.

ರಂಭಾಪುರಿ ಜಗದ್ಗುರುಗಳ ಸಾನಿಧ್ಯ

ಕಲಶಾರೋಹಣ ಶುಭಾ ಸಮಾರಂಭದ ಸಾನಿಧ್ಯವನ್ನು ಶ್ರೀರಂಭಾಪುರಿ ಪೀಠದ ಜಗದ್ಗುರು ಶ್ರೀ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹಾಗೂ ಉಜ್ಜಯನಿ ಮಹಾಸಂಸ್ಥಾನದ ಶ್ರೀ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ಭಗವತ್ಪಾದರು ಸೇರಿದಂತೆ ನಾಡಿನ ಸಾಧುಸಂತರು, ಜಗದ್ಗುರುಗಳು, ಮಠಾಧೀಶರು ವಹಿಸಲಿದ್ದಾರೆ.

ಸಮಾರಂಭದ ಉದ್ಘಾಟನೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ನೆರವೇರಿಸಲಿದ್ದಾರೆ. ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಕೇಂದ್ರ ಸಚಿವೆ ಶೋಭಾ ಕರದ್ಲಾಂಜೆ, ಮೈಸೂರು ಮಹಾರಾಜರು ಹಾಗೂ ಸಂಸದ ಯದುವೀರಕೃಷ್ಣದತ್ತ ಚಾಮರಾಜ ಒಡೆಯರ್, ಅರಣ್ಯ ಸಚಿವ ಈಶ್ವರ ಖಂಡ್ರೆ, ನೈಸ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಅಶೋಕ ಖೇಣಿ ಮತ್ತಿತರ ಗಣ್ಯರು ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ. ಎಂದು ಅವರು ತಿಳಿಸಿದ್ದಾರೆ.

ಜಾನಪದ ಉತ್ಸವ ಅನಾವರಣ

ಕಾರ್ಯಕ್ರಮದಲ್ಲಿ ವಿವಿಧ ಗ್ರಾಮಗಳ ದೇವರುಗಳ ಉತ್ಸವವೂ ರಾಜಬೀದಿಗಳಲ್ಲಿ ನಡೆಯುತ್ತದೆ. ವಿಶೇಷವಾಗಿ ವಿವಿಧ ಜಾನಪದ ಕಲಾತಂಡಗಳೊಂದಿಗೆ ವೀರಗಾಸೆ, ಕರಡಿ ವಾದ್ಯ, ತಮಟೆ, ಗಾರುಡಿಗೊಂಬೆ, ಪೂಜಾ ಕುಣಿತ, ಕೀಲುಕುದುರೆ, ಪಟ್ಟದ ಕುಣಿತ ಮೊದಲಾದ ಜಾನಪದ ಉತ್ಸವವೂ ನಡೆಯಲಿದೆ ಎಂದು ಹೇಳಿದ್ದಾರೆ.


Share

You cannot copy content of this page