ಬೆಂಗಳೂರು: ಕುಸುಮ್-ಬಿ ಯೋಜನೆಯಡಿ ಮಂಜೂರಾಗಿ ಅಳವಡಿಸಲು ಬಾಕಿ ಇರುವ ಸೌರ ಪಂಪ್‌ಸೆಟ್‌ಗಳನ್ನು ಸೆಪ್ಟೆಂಬರ್ 30ರೊಳಗೆ ಅಳವಡಿಸುವಂತೆ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ವ್ಯವಸ್ಥಾಪಕ ನಿರ್ದೇಶಕಿ ದಿವ್ಯಾ ಪ್ರಭು ಜಿ.ಆರ್.ಜೆ. ಅವರು ಕ್ರೆಡಲ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ರೈತರಿಗೆ ಸೌರ ಚಾಲಿತ ಪಂಪ್‌ಸೆಟ್‌ಗಳ ಮೂಲಕ ಸುಸ್ಥಿರ ನೀರಾವರಿ ಸೌಲಭ್ಯ ಒದಗಿಸುವ ಪಿಎಂ-ಕುಸುಮ್ ಬಿ ಯೋಜನೆಯ ಕುರಿತು ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ಮಾರ್ಗದರ್ಶನದ ಮೇರೆಗೆ ಕ್ರೆಡಲ್ ಕಚೇರಿಯಲ್ಲಿ ಶುಕ್ರವಾರ ಅವರು ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಜಿಲ್ಲಾವಾರು ಪ್ರಗತಿಯನ್ನು ಪರಿಶೀಲಿಸಿದ ದಿವ್ಯಾ ಪ್ರಭು ಅವರು, “ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲಿ ಇದುವರೆಗೆ 27,663 ಸೌರ ಪಂಪ್‌ಸೆಟ್‌ಗಳನ್ನು ಯಶಸ್ವಿಯಾಗಿ ಅಳವಡಿಸಲಾಗಿದೆ,” ಎಂದು ತಿಳಿಸಿದರು.
“ಯೋಜನೆಯಡಿ ಈವರೆಗೆ ಸುಮಾರು 1.05 ಲಕ್ಷ ರೈತರು ನೋಂದಣಿ ಮಾಡಿಕೊಂಡಿದ್ದು, ಅವರಲ್ಲಿ 40,000 ಫಲಾನುಭವಿಗಳನ್ನು ಆಯ್ಕೆ ಮಾಡಿ ಪಂಪ್‌ಸೆಟ್‌ಗಳನ್ನು ಮಂಜೂರು ಮಾಡಲಾಗಿದೆ. ಅವರಿಗೆ 2026ರ ಸೆಪ್ಟೆಂಬರ್ 30ರೊಳಗೆ ಬಾಕಿ ಸೌರ ಪಂಪ್‌ಸೆಟ್‌ಗಳ ಅಳವಡಿಸುವಂತೆ ಸೂಚನೆ ನೀಡಲಾಗಿದೆ,” ಎಂದರು.
ರೈತರಿಗೆ ಹಗಲಿನ ವೇಳೆಯಲ್ಲೇ ಗುಣಮಟ್ಟದ ವಿದ್ಯುತ್ ಪೂರೈಸುವ ಮೂಲಕ ಸಾಂಪ್ರದಾಯಿಕ ಇಂಧನದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಯೋಜನೆ ಇದಾಗಿದ್ದು, ಸಕಾಲಿಕ ಅನುಷ್ಠಾನದಿಂದ ರೈತರಿಗೆ ಯಾವುದೇ ವಿಳಂಬವಿಲ್ಲದೆ ತಲುಪಲಿದೆ. ಎಲ್ಲಾ ಪಾಲುದಾರರು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ ನಿಗದಿತ ಅವಧಿಯೊಳಗೆ ಗುರಿ ಸಾಧಿಸಬೇಕು ಎಂದು ಅಧಿಕಾರಿಗಳಿಗೆ ಅವರು ಸೂಚಿಸಿದ್ದಾರೆ.
ಅನುಷ್ಠಾನದ ವೇಳೆ ಕ್ಷೇತ್ರ ಮಟ್ಟದಲ್ಲಿ ಎದುರಾಗುವ ಯಾವುದೇ ಸಮಸ್ಯೆಗಳನ್ನು ತಕ್ಷಣವೇ ಕ್ರೆಡಲ್ ಗಮನಕ್ಕೆ ತರಬೇಕು. ಅವುಗಳ ಶೀಘ್ರ ಪರಿಹಾರಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಹಾಗೂ ಸಂಸ್ಥೆಯ ಪ್ರತಿನಿಧಿಗಳಿಗೆ ಅವರು ಸೂಚಿಸಿದರು.
“ಯೋಜನೆಯ ಮೇಲ್ವಿಚಾರಣೆ ಮಾಡಲು ಹಾಗೂ ಗಡುವಿನೊಳಗೆ ಕಾಮಗಾರಿ ಪೂರ್ಣಗೊಳಿಸಲು ಸಭೆಯಲ್ಲಿ ಪ್ರತಿಯೊಂದು ಸಂಸ್ಥೆಗೆ ಮಾಸಿಕ ಗುರಿಗಳನ್ನು ನಿಗದಿಪಡಿಸಲಾಗಿದೆ,” ಎಂದು ದಿವ್ಯಾ ಪ್ರಭು ತಿಳಿಸಿದರು.
“ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಕ್ರೆಡಲ್ ವತಿಯಿಂದ 13 ವೆಂಡರ್‌ಗಳನ್ನು ನೋಂದಾಯಿಸಲಾಗಿದೆ. ಸೌರ ಪಂಪ್ ಸೆಟ್ ಅಳವಡಿಕೆಗೆ ಬಳಕೆಯಾಗುವ ಸಾಮಗ್ರಿಗಳು ಹಾಗೂ ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು. ಕಾಮಗಾರಿ ಸಕಾಲದಲ್ಲಿ ಪೂರ್ಣಗೊಳ್ಳುವುದು ಎಷ್ಟು ಮುಖ್ಯವೋ, ಗುಣಮಟ್ಟ ಕಾಯ್ದುಕೊಳ್ಳುವುದು ಅಷ್ಟೇ ಮುಖ್ಯ. ಖುದ್ದು ಕ್ಷೇತ್ರ ಪರಿಶೀಲನೆ ನಡೆಸಿ, ಗುಣಮಟ್ಟವನ್ನು ಪರಿಶೀಲಿಸುತ್ತೇನೆ,” ಎಂದು ಅವರು ತಿಳಿಸಿದರು.
ಸಬ್ಸಿಡಿ ವಿವರ:
ಯೋಜನೆಗೆ ರಾಜ್ಯ ಸರ್ಕಾರದಿಂದ ಶೇ.50ರಷ್ಟು ಸಬ್ಸಿಡಿ ದೊರೆತರೆ ಕೇಂದ್ರ ಸರ್ಕಾರದಿಂದ ಶೇ.30ರಷ್ಟು ಸಬ್ಸಿಡಿ ದೊರೆಯಲಿದ್ದು ಫಲಾನುಭವಿ ರೈತರಿಂದ ಶೇ.20ರಷ್ಟು ಮೊತ್ತವನ್ನು ಭರಿಸಬೇಕಿದೆ.
ಸಭೆಯಲ್ಲಿ ಕೆಆರ್‌ಇಡಿಎಲ್ ತಾಂತ್ರಿಕ ಮಹಾಪ್ರಬಂಧಕರಾದ ದಿವಾಕರ್, ತಾಂತ್ರಿಕ ಸಲಹೆಗಾರರಾದ ಜಗದೀಶ್ ಬೆಳಗಲಿ, ಉಪ ಮಹಾಪ್ರಬಂಧಕರಾದ ವಿದ್ಯಾವತಿ ಶೆಟ್ಟರ್, ಕೆಆರ್‌ಇಡಿಎಲ್‌ನ ಹಿರಿಯ ಅಧಿಕಾರಿಗಳು ಹಾಗೂ ನೋಂದಾಯಿತ 13 ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
