ಸಮಗ್ರ ಸುದ್ದಿ

ದಿಕ್ಕು ದೆಸೆ ಇಲ್ಲದ ಅಭಿವೃದ್ಧಿ ಶೂನ್ಯ ಬಜೆಟ್: ಬಸವರಾಜ ಬೊಮ್ಮಾಯಿ

Share

ಹಾವೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಣಕಾಸಿನ ವಿಚಾರದಲ್ಲಿ ರಾಜ್ಯದ ಜನತೆಗೆ ಸುಳ್ಳು ಹೇಳಿ ದಾರಿ ತಪ್ಪಿಸುತ್ತಿದ್ದಾರೆ. ಬಜೆಟ್ ನಲ್ಲಿ ಆರ್ಥಿಕ ಶಿಸ್ತಿನ ಒಳಗಡೆಯೇ ಸಾಲ ಪಡೆದಿದ್ದೇನೆ ಅಂತ ಹೇಳಿದ್ದಾರೆ‌. ಆದರೆ, ವಿತ್ತೀಯ ಕೊರತೆ ಶೇ. 3% ರಷ್ಟು ದಾಟುತ್ತಿದೆ. ಇದನ್ನು ಮರೆಮಾಚಲು ಹೊಂದಾಣಿಕೆ ಮಾಡುತ್ತಾರೆ. ಈ ಬಜೆಟ್ ಕರ್ನಾಟಕದ ಮಟ್ಟಿಗೆ ಅಭಿವೃದ್ಧಿ ಶೂನ್ಯ, ಸಾಲದ ಹೊರೆ ಹೊರೆಸಿರುವಂತ ದಿಕ್ಕು ದೆಸೆ ಇಲ್ಲದ ಬಜೆಟ್ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇಷ್ಟು ಸಾಲ ಮಾಡಿ, ಇಷ್ಟು ತೆರಿಗೆ ಹೆಚ್ಚಳ ಮಾಡಿ, ಮತ್ತೂ ಕೊರೆತೆ ಬಜೆಟ್ ಮಾಡುತ್ತೀರೆಂದರೆ ಯಾವ ಪುರುಷಾರ್ಥಕ್ಕಾಗಿ ? ಮುಖ್ಯಮಂತ್ರಿಗಳು ಕೆಲವು ಸಾಲಗಳನ್ನು ಬಜೆಟ್ ವ್ಯಾಪ್ತಿಗೆ ತಂದಿಲ್ಲ. ವಿತ್ತೀಯ ಕೊರತೆ ಜಿಎಸ್ ಡಿಪಿಯ ಶೇ 25% ರ ಒಳಗೆ ಇರಬೇಕು ಅಂತ ಇದೆ. ಅದನ್ನು 24.94 % ಅಂತ ತೋರಿಸಿದ್ದಾರೆ. ಅಂದರೆ 0.6% ಮಾತ್ರ ಅವಕಾಶ ಇದೆ ಅಂತ ತೋರಿಸಿದ್ದಾರೆ. ವಾಸ್ತವವಾಗಿ ಕಳೆದ ವರ್ಷವೇ ಶೇ 25% ರ ಮಿತಿ ದಾಟಿದೆ. ಈ ವರ್ಷವೂ ದಾಟಿದೆ.

ರಿಸರ್ವ್ ಬ್ಯಾಂಕಿನ ಹಲವಾರು ಸಾಲಗಳನ್ನು ಇಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳದೇ ಸುಮಾರು 10 ಸಾವಿರ ಕೋಟಿ ಲೆಕ್ಕಕ್ಕೆ ತೆಗೆದುಕೊಳ್ಳದೆ ಹೊಂದಾಣಿಕೆ ಮಾಡಿದ್ದಾರೆ. ಇದು ಜನರನ್ನು ದಾರಿ ತಪ್ಪಿಸುತ್ತಿದೆ. ಆರ್ಥಿಕ ಸ್ಥಿತಿ ಬಹಳ ಕೆಟ್ಟದಾಗಿದೆ. 4.49 ಲಕ್ಷ ಕೋಟಿ ಒಟ್ಟು ಬಜೆಟ್ ಇದೆ. ಅದರಲ್ಲಿ 3ಲಕ್ಷ 40 ಸಾವಿರ ಕೋಟಿ ಬದ್ದತಾ ವೆಚ್ಚ ಇದೆ. ಅಂದರೆ, ಸಂಬಳ, ಪಿಂಚಣಿ, ಬಡ್ಡಿಗೆ, ಸಬ್ಸಿಡಿಗೆ, ಆಡಳಿತಾತ್ಮಕ ವೆಚ್ಚ ಇವೆಲ್ಲ ಸೇರಿದರೆ 3 ಲಕ್ಷ 50 ಸಾವಿರ ಕೋಟಿ ಬದ್ದತಾ ವೆಚ್ಚಕ್ಕೆ ಖರ್ಚಾಗುತ್ತದೆ. ಉಳಿದಿರುವುದರಲ್ಲಿ 64 ಸಾವಿರ ಕೋಟಿ ರೂ. ಗ್ಯಾರೆಂಟಿ ಯೋಜನೆಗಳಿಗೆ ಹೋಗುತ್ತದೆ. ಸುಮಾರು 4 ಲಕ್ಷ ಕೋಟಿಯಷ್ಟು ಹಣ ಬದ್ದತಾ ವೆಚ್ಚಕ್ಕೆ ಹೋದರೆ ಅಭಿವೃದ್ಧಿ ಗೆ ಹಣ ಎಲ್ಲಿ ಉಳಿಯುತ್ತದೆ. ಬಜೆಟ್ ನಲ್ಲಿ 74 ಸಾವಿರ ಕೋಟಿ ಬಂಡವಾಳ ವೆಚ್ಚ ಮಾಡುವುದಾಗಿ ಹೇಳಿದ್ದಾರೆ.

ಆದರೆ ಕಳೆದ ವರ್ಷ ಅವರು 47 ಸಾವಿರ ಕೋಟಿ ಬಂಡವಾಳ ವೆಚ್ಚ ಮಾಡುವುದಾಗಿ ಹೇಳಿದ್ದರು. ಅದನ್ನು ಮಾಡಿಲ್ಲ. ಈ ವರ್ಷ 74 ಸಾವಿರ ಕೋಟಿ ಮಾಡುತ್ತೇನೆ ಅಂತ ಸುಳ್ಳು ಹೇಳಿದ್ದಾರೆ. ಅದನ್ನು ಮಾಡಲು ಸಾಧ್ಯವಿಲ್ಲ. ಮತ್ತು ಕಳೆದ ವರ್ಷ ಅವರು ಮೊಟಾರ ವಾಹನ ತೆರಿಗೆ ಹೆಚ್ಚಿಗೆ ಮಾಡಿದ್ದರು, ಸ್ಟ್ಯಾಂಪ್ ಡ್ಯೂಟಿ ಹೆಚ್ಚಿಗೆ ಮಾಡಿದ್ದರು. ಪೆಟ್ರೊಲ್ ಮೇಲೆ ಸೆಸ್ ಹೆಚ್ಚಿಗೆ ಮಾಡಿದ್ದರು, ಸಾರಾಯಿ ಮೇಲೆ ತೆರಿಗೆ ಹೆಚ್ಚಿಸಿದ್ದರು. ಲೋಕಲ್ ತೆರಿಗೆ, ಸೆಸ್ ಹೆಚ್ಚಳ ಮಾಡಿದ್ದರು. ಬಜೆಟ್ ನಲ್ಲಿ ತೆರಿಗೆ ಹೆಚ್ಚಳ ಮಾಡದಿದ್ದರೂ ವರ್ಷ ವಿಡೀ ತೆರಿಗೆ ಹೆಚ್ಚಿಸುತ್ತ ಬಂದಿದ್ದಾರೆ. ವಿದ್ಯುತ್ ದರ ಹೆಚ್ಚಳ ಮಾಡಿದ್ದಾರೆ. ಹೀಗಾಗಿ ಈ ಬಜೆಟ್ ಗೂ ಅದರಲ್ಲಿರುವ ಅಂಕಿ ಅಂಶಗಳಿಗೂ ಯಾವದೇ ರೀತಿಯ ಕಿಮ್ಮತ್ತಿಲ್ಲ. ಯಾಕೇಂದರೆ ವರ್ಷವಿಡಿ ತೆರಿಗೆ ಹೆಚ್ಚಳ ಮಾಡಿದರೆ ಬಜೆಟ್ ನ ಪಾವಿತ್ರ್ಯತೆ ಏನು ಉಳಿಯಿತು. ಆದ್ದರಿಂದ ಈ ಅಂಕಿ ಅಂಶಗಳಿಗೆ ಯಾವುದೇ ಮಹತ್ವ ಇಲ್ಲ. ಅಭಿವೃದ್ಧಿಗೆ ಹಣದ ಕೊರತೆ ಆಗುತ್ತದೆ ಎಂದು ಹೇಳಿದರು.

ಇದು ಒಳ್ಳೆಯ ಬಜೆಟ್ ಅಂತ ಸಾಬೀತಾಗಬೇಕಾದರೆ ಒಂದು ವರ್ಷ ಕಾಯಬೇಕು. ಇದನ್ನು ಓದಿ ಒಳ್ಳೆಯ ಬಜೆಟ್ ಅಂತ ಹೇಳಲು ಆಗುವುದಿಲ್ಲ. ಇದರ ಒಟ್ಟು ಖರ್ಚು ಎಷ್ಟಾಗುತ್ತದೆ. ಸದುಪಯೋಗ ಎಷ್ಟಾಗುತ್ತದೆ. ಎಷ್ಟು ಮೂಲ ಸೌಕರ್ಯ ಅಭಿವೃದ್ಧಿ ಆಗುತ್ತದೆ. ಎಷ್ಟು ಸಾಮಾಜಿಕ ವಲಯದಲ್ಲಿ ಜನರಿಗೆ ಅನುಕೂಲ ಆಗುತ್ತದೆ. ಎನ್ನುವುದನ್ನು ನೋಡಿದಾಗ ಈ ಬಜೆಟ್ ನ ಬಗ್ಗೆ ಹೇಳಬಹುದು.

ಕಳೆದ ಎರಡು ವರ್ಷಗಳ ಬಜೆಟ್ ನ್ನು ನೋಡಿದಾಗ ಅವರು ಮಾತನಾಡಿರುವುದಕ್ಕೂ ಕಾರ್ಯಕ್ರಮ ಅನುಷ್ಠಾನ ಮಾಡಿರುವುದಕ್ಕೂ ಒಂದಕ್ಕೊಂದು ಸಂಬಂಧ ಇಲ್ಲ. ಹೀಗಾಗಿ ಈ ಬಜೆಟ್ ನಲ್ಲಿ ಬೇರೆ ಬೇರೆ ಇಲಾಖೆಗಳಿಗೆ ಮೀಸಲಿಟ್ಟಿರುವ ಹಣ ಯಾವುದನ್ನೂ ಪೂರ್ಣ ಪ್ರಮಾಣದಲ್ಲಿ ಕೊಡುವುದಿಲ್ಲ. ಇದು ಬರಿ ಬಜೆಟ್ ಪುಸ್ತಕದಲ್ಲಿ ಮಾತ್ರ ಇರಲಿದೆ. ಎರಡನೇಯದಾಗಿ ಇಷ್ಟು ಸಾಲ ಮಾಡಿ, ಇಷ್ಟು ತೆರಿಗೆ ಹೆಚ್ಚಳ ಮಾಡಿ, ಮತ್ತೂ ಕೊರೆತೆ ಬಜೆಟ್ ಮಾಡುತ್ತೀರೆಂದರೆ ಯಾವ ಪುರುಷಾರ್ಥಕ್ಕಾಗಿ ಮತ್ರೂ 22,957 ಕೋಟಿ ರೂ. ಕೊರತೆ ಬಜೆಟ್ ಮಂಡನೆ ಮಾಡಿದ್ದೀರಿ ಯಾವ ಪುರುಷಾರ್ಥಕ್ಕಾಗಿ ಎಂದು ಪ್ರಶ್ನಿಸಿದರು.

ಕೇಂದ್ರದಿಂದ 63 ಸಾವಿರ ಕೋಟಿ:

ಕೇಂದ್ರ ಸರ್ಕಾರ ಈ ವರ್ಷ 63 ಸಾವಿರ ಕೋಟಿ ರೂ. ಕೊಡುತ್ತಿದೆ. ಕಳೆದ ಬಾರಿ 43 ಸಾವಿರ ಕೋಟಿ ಅನುದಾನ ನೀಡಿತ್ತು. ರೈಲ್ವೆ, ಹೆದ್ದಾರಿ ಸೇರಿದಂತೆ ಬೇರೆ ಬೇರೆ ಯೋಜನೆಗಳಿಗೆ ಹಣ ಕೊಡುತ್ತಿದೆ. ಕಿಸಾನ್ ಸಮ್ಮಾನ್ ಯೋಜನೆ, ಆಯುಷ್ಮಾನ್ ಭಾರತ ಯೋಜನೆಯಲ್ಲಿ, ದೊಡ್ಡ ಪ್ರಮಾಣದಲ್ಲಿ ಹಣ ರಾಜ್ಯಕ್ಕೆ ಬರುತ್ತಿದೆ. ಅದನ್ನು ಸದುಪಯೋಗ ಮಾಡಿಕೊಳ್ಳುತ್ತಿಲ್ಲ. ಉದಾಹರಣೆಗೆ 60 ವರ್ಷ ಮೇಲ್ಪಟ್ಟವರಿಗೆ ಆಯುಷ್ಮಾನ್ ಭಾರತದಡಿ ಒಂದು ಹೊಸ ಯೋಜನೆ ಆಗಿದೆ ಕೂಡಲೆ ಅವರಿಗೆ ಚಿಕಿತ್ಸೆ ಕೊಡಬೇಕು. ಹೆಚ್ಚುವರಿ ಕೊಡಬೇಕು ಅಂತ‌ ಅದರಲ್ಲಿ ಕೇಂದ್ರ ಮತ್ತು ರಾಜ್ಯದ ಪಾಲಿದೆ. ರಾಜ್ಯದ ಪಾಲು ಕೊಡಲು ಅಗದೇ ವಯಸ್ಸಾದ ರಾಜ್ಯದ ಜನರ ಆರೋಗ್ಯ ಕಾಪಾಡಿಕೊಳ್ಳುವ ಹೊಣೆಗಾರಿಕೆಯಿಂದ ಇವರು ನುಣುಚಿಕೊಳ್ಳುತ್ತಿದ್ದಾರೆ.

ಆದ್ದರಿಂದ ಈ ಬಜೆಟ್ ಕರ್ನಾಟಕದ ಮಟ್ಟಿಗೆ ಅಭಿವೃದ್ಧಿ ಶೂನ್ಯ, ಸಾಲದ ಹೊರೆ ಹೊರೆಸಿರುವಂತ ಅಭಿವೃದ್ಧಿಯ ದಿಕ್ಕು ದೆಸೆ ಇಲ್ಲದ ಬರುವಂತಹ ದಿನಗಳಲ್ಲಿ ಸರ್ಕಾರ, ಸಂಬಳ, ಪಿಂಚಣಿ ಮತ್ತು ಸಾಲ ತೀರಿಸಲು ಜನರ ದುಡಿಮೆಯ ದುಡ್ಡನ್ನು ಖರ್ಚು ಮಾಡಲು ಮಾತ್ರ ಆಗುತ್ತಿದೆ‌. ಈ ದುಸ್ಥಿತಿಗೆ 17 ನೇ ಸಾರಿ ಬಜೆಟ್ ಮಂಡನೆ ಮಾಡಿರುವ ಸಿದ್ದರಾಮಯ್ಯ ಅವರಿಂದ ನಿರೀಕ್ಷೆ ಮಾಡಿರಲಿಲ್ಲ ಎಂದು ಹೇಳಿದರು.

ಗ್ಯಾರೆಂಟಿಗಳಿಗೂ ಪೂರ್ಣ ಪ್ರಮಾಣದ ಹಣ ಇಟ್ಟಿಲ್ಲ. ಗೃಹ ಲಕ್ಷ್ಮಿಗೆ ಪೂರ್ಣ ಪ್ರಮಾಣದ ಹಣ ಇಟ್ಟಿಲ್ಲ. ಶಕ್ತಿ ಯೋಜನೆ 7500 ಕೋಟಿ ದಾಟುತ್ತಿದೆ. ಇವರು 5000 ಕೋಟಿ ಮಾತ್ರ ಇಟ್ಟಿದ್ದಾರೆ. ಯುವ ನಿಧಿಗೆ ನಯಾ ಪೈಸೆ ಇಟ್ಟಿಲ್ಲ. ಯುವಕರನ್ನು ಕೈಬಿಟ್ಟಿರುವ ಬಜೆಟ್ ಎಂದು ಹೇಳಿದರು.

ಹಾವೇರಿಗೆ ಶೂನ್ಯ ಕೊಡುಗೆ
ಹಾವೇರಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಅಂತ ನಾವು ಬೇಡಿಕೆ ಇಟ್ಟಿದ್ದೇವು, ಜಿಲ್ಲಾ ಉಸ್ತುವಾರಿ ಸಚಿವರೂ ಹೇಳಿದ್ದರು. ಸಿಎಂ ಸಿದ್ದರಾಮಯ್ಯ ಹಾವೇರಿಗೆ ಬಂದಾಗ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡುತ್ತೇವೆ ಎಂದು ಹೇಳಿದ್ದರು‌ ಆದರೆ ,ಘೋಷಣೆ ಮಾಡಲಿಲ್ಲ. ಹಾವೇರಿ ಜಿಲ್ಲೆಗೆ ಕೊಡುಗೆ ಶೂನ್ಯ. ಶಿಶುನಾಳ ಶರೀಫರ ಹೆಸರಿನಲ್ಲಿ ಬೇರೆ ಜಿಲ್ಲೆಗಳಲ್ಲಿ ಶಾಲೆ ಮಾಡುತ್ತಾರೆ ಆದರೆ, ಹಾವೇರಿ ಜಿಲ್ಲೆಗೆ ಏನಿದೆ ಎಂದು ಪ್ರಶ್ನಿಸಿದರು.

ವರದಾ ಬೆಡ್ತಿ ಯೋಜನೆ ಬಗ್ಗೆ ಬಜೆಟ್ ನಲ್ಲಿ ಮಾತನಾಡಿಲ್ಲ. ಮೇಕೆದಾಟು ಯೋಜನೆ ಬಗ್ಗೆ ಮಾತನಾಡಿದ್ದಾರೆ. ವರದಾ ಬೆಡ್ತಿ ಯೋಜನೆಗೆ ಡಿಪಿಆರ್ ಗೆ ಅನುಮತಿ ಕೊಟ್ಟಿದ್ದಾರೆ. ಆ ಕೆಲಸ ಕೂಡಲೇ ಆಗಬೇಕು, ಅದಕ್ಕೆ ಏಜೆನ್ಸಿ ನಿಗದಿ ಮಾಡಬೇಕು. ಅದನ್ನು ಬಜೆಟ್ ನಲ್ಲಿ ಘೋಷಣೆ ಮಾಡಬೇಕಿತ್ತು. ಅದು ಇಲ್ಲದಿರುವುದು ಹಾವೇರಿ ಜಿಲ್ಲೆಯ ರೈತರಿಗೆ ಆಘಾತ ತಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಯುಕೆಪಿಗೆ ನಯಾ ಪೈಸೆ ಇಲ್ಲ
ಇನ್ನೊಂದು ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆ ಬಹಳ ದೊಡ್ಡ ಪ್ರಮಾಣದಲ್ಲಿ ಹೇಳಿದರು. ಮೂರು ವರ್ಷದಲ್ಲಿ 70 ಸಾವಿರ ಕೋಟಿ ಖರ್ಚು ಮಾಡಿ, ಯಕೆಪಿಯ ಗೇಟ್ ಎತ್ತರಿಸಲು ಆರ್ ಆಂಡ್ ಆರ್ ಗೆ 70 ಸಾವಿರ ಕೋಟಿ ಕೊಡುತ್ತೇವೆ ಎಂದು ಹೇಳಿದ್ದರು. ಈ ವರ್ಷ 25 ಸಾವಿರ ಕೋಟಿ ರೂ. ಮೀಸಲಿಡಬೇಕಿತ್ತು. ಯಾಕಿಟ್ಟಲ್ಲಾ, ನಯಾಪೈಸೆ ಇಟ್ಟಿಲ್ಲ‌. ನೀರಾವರಿ ಇಲಾಖೆಯಲ್ಲಿ ಸಣ್ಣ ನೀರಾವರಿ ಬೃಹತ್ ನೀರಾವರಿ ಯೋಜನೆಗಳು, ಅಲ್ಲಿರುವ ಸಾಲ ತೀರಿಸಲು, ಬಾಕಿ ಬಿಲ್ ತೀರಿಸಲು ಸಾಕಾಗುವುದಿಲ್ಲ. ಯೋಜನೆಗಳಿಗೆ ನಯಾ ಪೈಸಾ ದುಡ್ಡು ಕೊಟ್ಟಿಲ್ಲ ಎಂದು ವಾಗ್ದಾಳಿ ನಡೆಸಿದರು‌.

ಮಹಾನಗರ ಪಾಲಿಕೆಗಳಿಗೆ ದುಡ್ಡು ಕೊಟ್ಟಿದ್ದಾರೆ. ನಗರಸಭೆ, ಪುರಸಭೆಗಳಿಗೆ ದುಡ್ಡು ಕೊಟ್ಟಿಲ್ಲ. ರಾಜ್ಯದ ಜನರ ಮೇಲೆ ತೆರಿಗೆ ಹೊರೆ ಹಾಕಿ 25000 ಕೋಟಿ ರೂ. ಹೆಚ್ಚುವರೊ ತೆರಿಗೆಯನ್ನು ಬೇರೆ ಬೇರೆ ರೂಪದಲ್ಲಿ ಹಾಕಿದ್ದಾರೆ. 1 ಲಕ್ಷ 32 ಸಾವಿರ ಕೋಟಿ ಸಾಲ ಮಾಡಿದ್ದಾರೆ. ಇಷ್ಟೆಲ್ಲಾ ಮಾಡಿದರೂ ಕೊರತೆ ಬಜೆಟ್ ಮಂಡಿಸಿದ್ದಾರೆ‌. ಈ ಕೊರತೆಯನ್ನು ನೀಗಿಸಲು ಸಾಧ್ಯವಿಲ್ಲ. ಒಂದು ರೀತಿಯಲ್ಲಿ ರಾಜ್ಯವನ್ನು ಹಣಕಾಸಿನ ಅಧೋಗತಿಗೆ ತೆಗೆದುಕೊಂಡು ಹೋಗುವ ಬಜೆಟ್ ಇದಾಗಿದೆ ಎಂದರು.

ಒಂದು ಸಮುದಾಯವನ್ನು ಓಲೈಕೆ ಮಾಡುವ ಬಜೆಟ್ ಆಗಿದಿಯಾ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, ಅವರಿಗೆ ಎಷ್ಟಾದರೂ ಕೊಡಲಿ, ಕಿತ್ತೂರು ರಾಣಿ ಚನ್ನಮ್ಮ ಶಾಲೆ ಇದೆ. ಅಂಬೇಡ್ಕರ್ ವಸತಿ ಶಾಲೆ ಇದೆ. ಅವುಗಳಿಗೂ ಪ್ರತಿ ವರ್ಷ ಹಣ ಕೊಡಬೇಕಲ್ಲಾ ದೊಡ್ಡ ಜನಸಂಖ್ಯೆ ಇರುವ ಸಮುದಾಯಗಳ ಅಭಿವೃದ್ಧಿ ಗೆ ಈ ಶಾಲೆಗಳನ್ನು ಹಿಂದಿನ ಸರ್ಕಾರಗಳು ನಿರ್ಮಾಣ ಮಾಡಿವೆ. ಅವುಗಳ ಪರಿಸ್ಥಿತಿ ದುಸ್ಥಿತಿ ಇದೆ. ಶಾಲೆಗಳಿಗೆ ಹಣ ಕೊಡುತ್ತಾರೆ, ಬೆಂಚ್ ಇಲ್ಲ, ಹಾಸಿಗೆ ಇಲ್ಲ. ಒಳ್ಳೆಯ ಅಡುಗೆ ಕೋಣೆ ವ್ಯವಸ್ಥೆ ಇಲ್ಲ. ಮೊದಲು ಇವರ ಬಳಿ ಹಣ ಇಲ್ಲ. ಮತ್ತು ಪ್ರಾಮಾಣಿಕತೆ ಇಲ್ಲ. ಆದ್ದರಿಂದ ಹೀಗಾಗುತ್ತಿದೆ ಎಂದು ಹೇಳಿದರು.


Share

You cannot copy content of this page