ಸಮಗ್ರ ಸುದ್ದಿ

ಎಲೆಕೊಡಿಗೇಹಳ್ಳಿಯಲ್ಲಿ ಇತಿಹಾಸ ಪ್ರಸಿದ್ಧ ಶ್ರೀನಂದಿಬಸವೇಶ್ವರ ದೇಗುಲ ಲೋಕಾರ್ಪಣೆ | ಧರ್ಮ ಉಳಿದರೆ ಮಾತ್ರ ಸಂಸ್ಕೃತಿ ಉಳಿಯಲು ಸಾಧ್ಯ-ಮೈಸೂರು ಮಹಾರಾಜ ಯದುವೀರ ಒಡೆಯರ್ ಆಶಯ

Share

ಬೆಂಗಳೂರು: ಧರ್ಮ, ಸಂಸ್ಕೃತಿಗಳು ಜೀವನದ ಅವಿಭಾಜ್ಯ ಅಂಗಗಳು; ಇತ್ತೀಚೆಗೆ ಸಮಾಜದಲ್ಲಿ ಧರ್ಮವನ್ನು ಮರೆಯುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಧರ್ಮ ಉಳಿದರೆ ಮಾತ್ರ ಸಂಸ್ಕೃತಿ ಉಳಿಯಲು ಸಾಧ್ಯ ಎಂಬುವುದನ್ನು ಪ್ರತಿಯೊಬ್ಬರೂ ಮನಗಾಣಬೇಕು ಎಂದು ಮೈಸೂರು ಮಹಾರಾಜರು ಹಾಗೂ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಎಂದು ಹೇಳಿದ್ದಾರೆ.

ನಗರದ ಮಾಗಡಿ ರಸ್ತೆಯ ನೈಸ್ ರೋಡ್ ಸಮೀಪದ ಎಲೆಕೊಡಿಗೇಹಳ್ಳಿಯಲ್ಲಿ ಯಜಮಾನರು ಡಾ. ಎನ್. ನಂಜುಂಡೇಶ್ವರ ಅವರ ನೇತೃತ್ವದಲ್ಲಿ ನಿರ್ಮಾಣಗೊಂಡಿರುವ ಚೋಳರ ಕಾಲದ ಇತಿಹಾಸ ಪ್ರಸಿದ್ಧ `ಶ್ರೀನಂದಿಬಸವೇಶ್ವರಸ್ವಾಮಿ, ಪಂಚಮುಖ ಶಂಭುಲಿಂಗೇಶ್ವರ, ಮಹಾಗಣಪತಿ ನೂತನ ದೇವಾಲಯದ ಲೋಕಾರ್ಪಣೆ ಮತ್ತು ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಕೃತಿಗಿಂತ ಯಾರೂ ದೊಡ್ಡವರಲ್ಲ

ನಮ್ಮ ಆಚಾರ, ವಿಚಾರ ಸಂಸ್ಕೃತಿ ಉಳಿಯಬೇಕಾದರೆ, ನಾವು ನಮ್ಮ ಧರ್ಮವನ್ನು ಗೌರವಿಸಬೇಕು. ಸಂಸ್ಕೃತಿ ಉಳಿವಿಗೆ ಮಠಾಧಿಪತಿಗಳ ಮಾರ್ಗದರ್ಶನ ಅಗತ್ಯ. ಸಮಾಜದಲ್ಲಿ ಅನಾಹುತಗಳು ಎದುರಾದಾಗ, ಶಾಂತಿ ಸಾಮರಸ್ಯಕ್ಕೆ ಚ್ಯುತಿ ಬಂದಾಗ, ಧರ್ಮದ ಉಳಿವಿಗೆ ಮಠಾಧೀಶರು ಇನ್ನೂ ಹೆಚ್ಚಿನ ಗಮನ ಹರಿಸಬೇಕು. ಪ್ರಕೃತಿಯ ಮುಂದೆ ಇಂದು ಯಾರೂ ದೊಡ್ಡವರಲ್ಲ. ಪ್ರಕೃತಿಯನ್ನು ಪೂಜಿಸಿದರೆ ಮಾತ್ರ ಮನುಕುಲ ಉಳಿಯಲು ಸಾಧ್ಯ ಎಂದು ಹೇಳಿದರು.

ನಮ್ಮ ಜೀವನದ ತಳಪಾಯವಾಗಿರುವ ಸಂಸ್ಕೃತಿ ಉಳಿಯಬೇಕಾದರೆ ಅದರ ಮೂಲವಾಗಿರುವ ಧರ್ಮ ಉಳಿಯಬೇಕು. ಧಾರ್ಮಿಕ ಆಚರಣೆಗಳತ್ತ ಮಾನವ ವಿಕಸಿತನಾಗಬೇಕು. ಧಾರ್ಮಿಕ ನೆಲೆಗಟ್ಟಿನಲ್ಲಿ ಸಮಾಜ ನಿರ್ಮಾಣವಾಗಬೇಕು. ಹಾಗಾದಾಗ ಮಾತ್ರ ಸುಖ ಶಾಂತಿ ಸಮದ್ಧಿಯ ಸಮಾಜ ನಿರ್ಮಾಣವಾಗುತ್ತದೆ. ಪರಸ್ಪರ ದ್ವೇಷಾಸೂಯೆಯನ್ನು ಮರೆತು ಸಹಬಾಳ್ವೆಯ ಸಮಾಜದ ನಿರ್ಮಾಣದಲ್ಲಿ ದೇವಾಲಯಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದರು.

ಎಲೆಕೊಡಿಗೇಹಳ್ಳಿಯ ನಂಜುಂಡೇಶ ದೇಗುಲದ ಪುನರುತ್ಥಾರಕರು

ಪುರಾತನ ದೇವಾಲಯಗಳು ಪುನರುತ್ಥಾನವಾಗಬೇಕು; ಇದೊಂದು ಅತ್ಯಂತ ಪುಣ್ಯದ ಕೆಲಸ. ಎಲೆಕೊಡಿಗೇಹಳ್ಳಿಯ ಯಜಮಾನರಾದ ಡಾ. ಎನ್. ನಂಜುಂಡೇಶ ಅವರ ಮುಂದಾಳತ್ವದಲ್ಲಿ ಗ್ರಾಮಸ್ಥರೆಲ್ಲರೂ ಸೇರಿಕೊಂಡು ಪುನರ್ ನಿರ್ಮಾಣ ಮಾಡಿರುವುದು ಹರ್ಷದ ಸಂಗತಿ. ನಂಜುಂಡೇಶರಂತಹ ಅನೇಕರು ಇಂತಹ ಧರ್ಮ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಮೈಸೂರು ಒಡೆಯರು ಬಹಳ ಹಿಂದಿನಿಂದಲೂ ಎಲೆಕೊಡಿಗೇಹಳ್ಳಿಗೆ ಬಂದು ದೇವರ ದರ್ಶನ ಪಡೆದಿರುವುದು ನಮ್ಮೆಲ್ಲರಿಗೂ ಮತ್ತಷ್ಟು ಭಕ್ತಿ ಹೆಚ್ಚುವಂತೆ ಮಾಡಿದೆ ಎಂದರು.

ʻಹುಟ್ಟು-ಸಾವಿನ ಮಧ್ಯೆ ಒಳ್ಳೆಯ ಕೆಲಸ ಮಾಡಿʼ

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಮಾತನಾಡಿ, ಯಶವಂತಪುರ ವಿಧಾನಸಭಾ ಕ್ಷೇತ್ರದ ಎಲೆಕೊಡಿಗೇಹಳ್ಳಿಯು ಬಹಳ ಇತಿಹಾಸ ಪ್ರಸಿದ್ಧವಾಗಿದೆ. ಇಂತಹ ಸ್ಥಳದಲ್ಲೀಗ ಶ್ರೀನಂದಿಬಸವೇಶ್ವರ ದೇವಾಲಯ ಪುನರುತ್ಥಾನಗೊಂಡಿರುವುದು ಅನೇಕ ಸದ್ಭಕ್ತರಿಗೆ ಮತ್ತಷ್ಟು ಶಕ್ತಿ ತುಂಬಿದಂತಾಗಿದೆ. ಮನುಷ್ಯ ಹುಟ್ಟು-ಸಾವಿನ ಮಧ್ಯೆ ಏನಾದರೂ ಒಳ್ಳೆಯ ಕೆಲಸ ಮಾಡಬೇಕು; ಇದನ್ನು ಡಾ. ನಂಜುಂಡೇಶ್ ಮಾಡಿತೋರಿಸಿದ್ದಾರೆ. ಇವರು ವೀರಶೈವರಲ್ಲೇ ಪುಣ್ಯದ ಕೆಲಸ ಮಾಡಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಧರ್ಮದಲ್ಲಿ ನಿಷ್ಠೆ ಹೊಂದಿ- ರಂಭಾಪುರಿಶ್ರೀಗಳು

ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಬಾಳೆಹೊನ್ನೂರಿನ ಶ್ರೀರಂಭಾಪುರಿ ಪೀಠದ ಜಗದ್ಗುರು ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದಕರು, ವೀರಶೈವ ಧರ್ಮದಲ್ಲಿ ಜನಿಸಿದ ನಾವೆಲ್ಲರೂ ಪುಣ್ಯವಂತರು. ಈ ಧರ್ಮ ಉಳಿಸಿ, ಬೆಳೆಸುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ಈ ನಿಟ್ಟಿನಲ್ಲಿ ಎಲ್ಲೆಡೆ ಪಂಚಪೀಠಗಳು ನಿರಂತರವಾಗಿ ಶ್ರಮವಹಿಸುತ್ತಿವೆ. ಧರ್ಮದಲ್ಲಿ ನಿಷ್ಠೆಯನ್ನಿಟ್ಟು ದೇಶ ಪ್ರೇಮವನ್ನು ಮೈಗೂಡಿಸಿಕೊಳ್ಳಬೇಕು. ನಮ್ಮ ವಿಚಾರಧಾರೆ, ತತ್ವ-ಸಿದ್ದಾಂತಗಳು ಏನೇ ಇದ್ದರು ಧರ್ಮ ಚಿಂತನೆ ಅತ್ಯವಶ್ಯ ಎಂದು ಪ್ರತಿಪಾದಿಸಿದರು.

ಆಧ್ಯಾತ್ಮಿಕ ಭಾವ ಸದಾ ಉಳಿಯಬೇಕು

ಉಜ್ಜಯಿನಿ ಮಹಾಸಂಸ್ಥಾನದ ಶ್ರೀ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದಕರು ಆಶೀರ್ಚನ ನೀಡಿ, ಸಮಾಜದಲ್ಲಿ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಭಾವ ಸದಾ ಉಳಿಯಬೇಕು. ವೈಜ್ಞಾನಿಕ ಯುಗದಲ್ಲಿ ನೂತನ ಆವಿಷ್ಕಾರಗಳಿಂದ ಜೀವನದ ಆಯಾಮಗಳು ಬದಲಾಗುತ್ತವೆಯೇ ಹೊರತು ಆಂತರಿಕವಾಗಿ ಮಾನವ ಪರಿಪಕ್ವವಾಗಲು ಆಧ್ಯಾತ್ಮಿಕತೆಬೇಕು. ಕ್ಷಣಿಕ ಸುಖದ ಮೊರೆಹೋಗಿರುವ ನಾವುಗಳು ಎಲ್ಲವೂ ಇದ್ದು ಏನೂ ಇಲ್ಲದಂತೆಯೇ ಬದುಕುತ್ತಿದ್ದೇವೆ. ಇಂಥ ಪರಿಸ್ಥಿತಿ ಬದಲಾಗಬೇಕು ಎಂದು ನುಡಿದರು.

ಸಮಾರಂಭದಲ್ಲಿ ಎಲೆಕೊಡಿಗೇಹಳ್ಳಿಯ ಯಜಮಾನರಾದ ಡಾ. ಎನ್. ನಂಜುಂಡೇಶ್, ಶೆಟ್ಟರಾದ ಎ. ಶಿವಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿನೋದ ಮೂರ್ತಿ, ನೈಸ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ, ಮಾಜಿ ಶಾಸಕ ಅಶೋಕ್ ಖೇಣಿ, ಹಿರಿಯ ಚಿತ್ರನಟಿ ಭವ್ಯ, ನಿವೃತ್ತ ಐಎಎಸ್ ಅಧಿಕಾರಿ ಡಾ. ಸಿ. ಸೋಮಶೇಖರ್, ಕೆ.ಆರ್. ಐ.ಡಿ.ಎಲ್. ಮಾಜಿ ಅಧ್ಯಕ್ಷ ಎಂ. ರುದ್ರೇಶ್ ಸೇರಿದಂತೆ ವಿವಿಧ ಮಠಾಧೀಶರು, ಚುನಾಯಿತ ಜನಪತ್ರಿನಿಧಿಗಳು, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

ಮಹಿಳಾ ದಿನಾಚರಣೆ; ಸಾಧಕ ಮಹಿಳೆಯರಿಗೆ ಗೌರವ

ಇದೇ ವೇಳೆ ದೇವಾಲಯ ನಿರ್ಮಾಣಕ್ಕೆ ಸಹಕಾರ ನೀಡಿದ ಮಹನೀಯರನ್ನು ಅಭಿನಂದಿಸಲಾಯಿತು. ನಂತರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕನ್ನಡದ ಚಿತ್ರನಟಿ ಭವ್ಯ ಸೇರಿದಂತೆ ಸಾಧಕ ಮಹಿಳೆಯರನ್ನು ಶ್ರೀಗಳಿಂದ ಅಭಿನಂದಿಸಲಾಯಿತು.

ಮೆರಗು ನೀಡಿದ ಜಾನಪದ ಉತ್ಸವ

ಇದೇ ಸಂದರ್ಭದಲ್ಲಿ ಎಲೆಕೊಡಿಗೇಹಳ್ಳಿಯ ಗ್ರಾಮದೇವತೆಗಳು ಸೇರಿ ಸುತ್ತಮುತ್ತಲ ಗ್ರಾಮಗಳ ದೇವರುಗಳ ಉತ್ಸವವೂ ನಡೆಯಿತು. ವಿಶೇಷವಾಗಿ ಜಾನಪದ ಉತ್ಸವವೂ ಮೇಳೈಯಿಸಿತು. ವೀರಗಾಸೆ, ಕರಡಿ ವಾದ್ಯ, ತಮಟೆ, ಗಾರುಡಿಗೊಂಬೆ, ಪೂಜಾ ಕುಣಿತ, ಕೀಲುಕುದುರೆ, ಪಟ್ಟದ ಕುಣಿತ ಮೊದಲಾದ ಜಾನಪದ ಕಲಾತಂಡಗಳ ಮೆರವಣಿಗೆಯಲ್ಲಿ ಮೆರಗು ನೀಡಿದವು.

ವಿದ್ವಾನ್ ಜಾವಗಲ್ ಹೊನ್ನಾಪ್ಪಾಜಿ ನೇತೃತ್ವದಲ್ಲಿ ಹೋಮ-ಹವನ

ಎಲೆಕೊಡಿಗೇಹಳ್ಳಿ ಶ್ರೀನಂದಿಬಸವೇಶ್ವರ ನೂತನ ದೇವಾಲಯದ ಆವರಣದಲ್ಲಿ ಕಳೆದ ಮೂರು ದಿನಗಳಿಂದ ಪ್ರಸಿದ್ದ ವಿದ್ವಾನ್ ಜಾವಗಲ್ ಶ್ರೀ ಹೊನ್ನಾಪ್ಪಾಜಿ, ಎಲೆಕೊಡಿಗೇಹಳ್ಳಿಯ ವಿದ್ವಾನ್ ಪರಮೇಶ್ವರ ಆರಾಧ್ಯ, ಕೆಂಚನಪುರದ ವೇದಮೂರ್ತಿ ಪ್ರಸಾದ್ ಆರಾಧ್ಯ ಅವರ ನೇತೃತ್ವದಲ್ಲಿ ಪ್ರಾಣ ಪ್ರತಿಸ್ಥಾಪನಾ, ವಿಮಾನ ಗೋಪುರ ಶಿಖರ ಕಳಸಾಭಿಷೇಕ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು, ಹೋಮ ಹವನಗಳು, ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.


Share

You cannot copy content of this page