ಸಮಗ್ರ ಸುದ್ದಿ

ನಿರಂತರ ಸಾಮೂಹಿಕ ಸ್ವಚ್ಛತೆ ಕಾರ್ಯದಿಂದ ನಗರ ನೈರ್ಮಲ್ಯ ಹಾಗೂ ಸುಂದರತೆ ಸಾಧ್ಯ: ರಾಜೇಂದ್ರ ಚೋಳನ್ |ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಮಗ್ರ ಸ್ವಚ್ಛತಾ ಕಾರ್ಯಾಚರಣೆ

Share

ಬೆಂಗಳೂರು: ನಗರವನ್ನು ಸ್ವಚ್ಛ ಹಾಗೂ ಆರೋಗ್ಯಕರವಾಗಿಡುವ ಉದ್ದೇಶದಿಂದ ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಆರು ವಿಧಾನಸಭಾ ಕ್ಷೇತ್ರಗಳ ವಿವಿಧ ಪ್ರಮುಖ ಸ್ಥಳಗಳಲ್ಲಿ ವಿಶೇಷ ಸ್ವಚ್ಛತಾ ಅಭಿಯಾನ ಹಾಗೂ ಬ್ಲ್ಯಾಕ್ ಸ್ಪಾಟ್ ತೆರವು ಕಾರ್ಯಾಚರಣೆಗಳನ್ನು ಕೈಗೊಳ್ಳಲಾಗಿದೆ ಹಾಗೂ ನಿರಂತರ ಸಾಮೂಹಿಕ ಸ್ವಚ್ಛತೆ ಕಾರ್ಯದಿಂದ ನಗರದ ನೈರ್ಮಲ್ಯ ಕಾಪಾಡಲು ಹಾಗೂ ಸುಂದರಗೊಳಿಸಲು ಸಾಧ್ಯ ಎಂದು *ಕೇಂದ್ರ ನಗರ ಪಾಲಿಕೆ ಆಯುಕ್ತರಾದ ರಾಜೇಂದ್ರ ಚೋಳನ್ ತಿಳಿಸಿದರು.

ಬ್ಲ್ಯಾಕ್ ಸ್ಪಾಟ್ ತೆರವು:

ನಗರದ ಹಲವು ಪ್ರದೇಶಗಳಲ್ಲಿ ಬ್ಲ್ಯಾಕ್ ಸ್ಪಾಟ್ ಸ್ಥಳಗಳನ್ನು ಗುರುತಿಸಿ ಅವುಗಳನ್ನು ಸಂಪೂರ್ಣವಾಗಿ ತೆರವುಗೊಳಿಸಲು ನಿಯಮಿತ ಸ್ವಚ್ಛತಾ ಕಾರ್ಯಗಳ ಜೊತೆಗೆ ವಿಶೇಷ ಸ್ವಚ್ಛತಾ ಕಾರ್ಯಾಚರಣೆಗಳನ್ನು ಯೋಜಿತ ರೀತಿಯಲ್ಲಿ ನಡೆಸಲಾಗುತ್ತಿದೆ. ಈ ಮೂಲಕ ನಾಗರಿಕರಿಗೆ ಸ್ವಚ್ಛ ಮತ್ತು ಆರೋಗ್ಯಕರ ಪರಿಸರ ಒದಗಿಸುವುದು ನಗರ ಪಾಲಿಕೆಯ ಪ್ರಮುಖ ಗುರಿಯಾಗಿದೆ ಎಂದು ಅವರು ತಿಳಿಸಿದರು.

ನಗರ ಪಾಲಿಕೆ ವ್ಯಾಪ್ತಿಯಲ್ಲಿನ ಬ್ಲ್ಯಾಕ್ ಸ್ಪಾಟ್ ಗಳನ್ನು ಶಾಶ್ವತವಾಗಿ ನಿರ್ಮೂಲನೆ ಮಾಡುವ ಉದ್ದೇಶದಿಂದ ‘ಬ್ಲ್ಯಾಕ್ ಸ್ಪಾಟ್ ನಿರ್ಮೂಲನಾ ಅಭಿಯಾನ ’ವನ್ನು ಮತ್ತಷ್ಟು ಬಲಪಡಿಸಲಾಗಿದೆ. ಸಾರ್ವಜನಿಕರು ಸಹ ರಸ್ತೆ ಬದಿಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದನ್ನು ತಪ್ಪಿಸಿ, ನಿಗದಿತ ಸ್ಥಳಗಳಲ್ಲಿ ಮಾತ್ರ ತ್ಯಾಜ್ಯ ವಿಸರ್ಜಿಸುವ ಮೂಲಕ ಸ್ವಚ್ಛ ಬೆಂಗಳೂರು ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.

ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಸಂಗಮ್ ಸರ್ಕಲ್ ನಿಂದ ಪಾದರಾಯನಪುರ ಸಿರ್ಸಿ ಸರ್ಕಲ್ ಮೂಲಕ ಪೈಪ್ಲೈನ್ ರಸ್ತೆಯವರೆಗೆ ಸಮಗ್ರ ಸ್ವಚ್ಛತಾ ಕಾರ್ಯಾಚರಣೆ ನಡೆಸಲಾಯಿತು.

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ವಾರ್ಡ್ ಸಂಖ್ಯೆ 119 ರ ಓ.ಟಿ.ಸಿ ರಸ್ತೆ, ಕುಂಬಾರಪೇಟೆ ಮುಖ್ಯ ರಸ್ತೆ, ಎಸ್.ಜೆ.ಪಿ ರಸ್ತೆ ಮತ್ತು ಎನ್.ಆರ್ ರಸ್ತೆ ಭಾಗಗಳಲ್ಲಿ, ಜೊತೆಗೆ ಧರ್ಮರಾಯಸ್ವಾಮಿ ದೇವಸ್ಥಾನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿಶೇಷ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.

ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ವಾರ್ಡ್ ಸಂಖ್ಯೆ 94ರ ಗಾಂಧಿನಗರ ಗೂಡ್ ಶೆಡ್ ರಸ್ತೆ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯಗಳನ್ನು ಮಾಡಲಾಗಿದೆ.

ಶಾಂತಿನಗರ ವಿಧಾನಸಭಾ ಕ್ಷೇತ್ರದಲ್ಲಿ ವಾರ್ಡ್ ಸಂಖ್ಯೆ 117ರ ಶಾಂತಿನಗರ ವ್ಯಾಪ್ತಿಯ ಬರ್ಲಿ ಸ್ಟ್ರೀಟ್ ಅಡ್ಡ ರಸ್ತೆ ಹಾಗೂ ಸಮೀಪದ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಮಣಿಪಾಲ್ ಸಿಗ್ನಲ್ ನಿಂದ ಡಿಸ್ಪೆನ್ಸರಿ ರಸ್ತೆ ಹಾಗೂ ಶಿವಾನಂದ ವೃತ್ತದವರೆಗೆ, ಜೊತೆಗೆ ಚಾಲುಕ್ಯ ಸರ್ಕಲ್ ನಿಂದ ಕರ್ನಾಟಕ ಹೈಕೋರ್ಟ್ ವರೆಗೆ ಸ್ವಚ್ಛತಾ ಕಾರ್ಯಾಚರಣೆ ನಡೆಯಿತು.

ಸಿ.ವಿ. ರಾಮನ್ ನಗರ ವಿಧಾನಸಭಾ ಕ್ಷೇತ್ರದಲ್ಲಿ
ವಾರ್ಡ್ ಸಂಖ್ಯೆ 113 ರ ಹೊಯ್ಸಳನಗರ ಪ್ರದೇಶದಲ್ಲಿ ಸಿಎಂಎಚ್ ರಸ್ತೆ ಆದರ್ಶ ಥಿಯೇಟರ್ ಜಂಕ್ಷನ್ನಿಂದ 80 ಅಡಿ ಮುಖ್ಯ ರಸ್ತೆಯವರೆಗೆ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ.

ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಅಭಿವೃದ್ಧಿ ಅಪರ ಆಯುಕ್ತರಾದ ದಲ್ಜಿತ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ನಡೆದ ಈ ಸ್ವಚ್ಛತೆ ಕಾರ್ಯ ಪರಿಣಾಮಕಾರಿಯಾಗಿ ನಡೆಸಲಾಯಿತು. ಒಟ್ಟು 8.45 ಕಿ.ಮೀ ವ್ಯಾಪ್ತಿಯಲ್ಲಿ ನಡೆದ ಈ ಅಭಿಯಾನದಲ್ಲಿ 8 ಜೆಸಿಬಿಗಳು ಹಾಗೂ 40 ಟ್ರ್ಯಾಕ್ಟರ್ ಗಳ ಸಹಾಯದಿಂದ ರಸ್ತೆ ಬದಿಗಳಲ್ಲಿ ಸಂಗ್ರಹವಾಗಿದ್ದ 51 ಲೋಡ್ ತ್ಯಾಜ್ಯವನ್ನು ತೆರವುಗೊಳಿಸಲಾಯಿತು. ಇದರ ಫಲವಾಗಿ ನಗರದ ವಿವಿಧ ಭಾಗಗಳಲ್ಲಿ ಗುರುತಿಸಲ್ಪಟ್ಟಿದ್ದ 21 ಬ್ಲ್ಯಾಕ್ ಸ್ಪಾಟ್ ಗಳನ್ನು ಸಂಪೂರ್ಣವಾಗಿ ನಿವಾರಣೆ ಮಾಡಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಒಟ್ಟು 203 ಪೌರಕಾರ್ಮಿಕರು ಮತ್ತು ಸ್ವಚ್ಛತಾ ಸಿಬ್ಬಂದಿ ಸಕ್ರಿಯವಾಗಿ ಭಾಗವಹಿಸಿದ್ದು, ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಅಭಿಯಾನ ಯಶಸ್ವಿಯಾಗಿ ಪೂರ್ಣಗೊಂಡಿದೆ.

ಸಾಮೂಹಿಕ ಸ್ವಚ್ಛತಾ ಹಾಗೂ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಸಂಬಂಧಿತ ವಿಭಾಗಗಳ ಕಾರ್ಯಪಾಲಕ ಅಭಿಯಂತರರು, ಡಿಜಿಎಂಗಳು, ಎಜಿಎಂಗಳು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಅರಣ್ಯ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ಇತರೆ ವಿಭಾಗಗಳ ಅಧಿಕಾರಿಗಳು ಭಾಗವಹಿಸಿದ್ದರು.


Share

You cannot copy content of this page