ಸಮಗ್ರ ಸುದ್ದಿ

ಕೃಷಿ ಕಲ್ಪ ಪ್ರತಿಷ್ಠಾನದ ಜೊತೆಗಿನ ತಿಳಿವಳಿಕೆ (ಎಂಒಯು) ಪತ್ರಕ್ಕೆ ರಾಜ್ಯ ಸರ್ಕಾರ ಅಂಕಿತ | ಕಲಬುರಗಿಯಲ್ಲಿ ಕೃಷಿ ಶ್ರೇಷ್ಠತಾ ಕೇಂದ್ರ ಸ್ಥಾಪಿಸಲು ಒಪ್ಪಂದ | ಕೃಷಿ ತಂತ್ರಜ್ಞಾನ, ನವೋದ್ಯಮಗಳು ಮತ್ತು ಉದ್ಯಮಶೀಲತೆ ಬಲಪಡಿಸುವಿಕೆ

Share

ಬೆಂಗಳೂರು: ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಗ್ರಾಮೀಣ ನಾವೀನ್ಯತೆ ಮತ್ತು ಉದ್ಯಮಶೀಲತೆ ಬಲಪಡಿಸಲು ಕಲಬುರಗಿಯಲ್ಲಿ ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳ ನಾವೀನ್ಯತೆಗೆ ಸಂಬಂಧಿಸಿದಂತೆ ಶ್ರೇಷ್ಠತೆಯ ಕೇಂದ್ರ (ಸಿಒಇ) ಸ್ಥಾಪಿಸಲು ರಾಜ್ಯ ಸರ್ಕಾರವು ಕೃಷಿ ಕಲ್ಪ ಫೌಂಡೇಷನ್‌ ಜೊತೆಗೆ ತಿಳಿವಳಿಕೆ ಒಪ್ಪಂದ (ಎಂಒಯು) ಪತ್ರಕ್ಕೆ ಸಹಿ ಹಾಕಿದೆ.

ರಾಜ್ಯ ಸರ್ಕಾರದ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ (ಕೆಐಟಿಎಸ್) ಮೂಲಕ ಈ ಒಪ್ಪಂದಕ್ಕೆ ಸಹಿ ಹಾಕಿದೆ.
ರಾಜ್ಯ ಸರ್ಕಾರದ ಪರವಾಗಿ ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ (ಕೆಐಟಿಎಸ್) ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಶರಣಪ್ಪ ಸಂಕನೂರ ಮತ್ತು ಈ ಉಪಕ್ರಮದ ಅನುಷ್ಠಾನ ಪಾಲುದಾರಿಕೆ ಸಂಸ್ಥೆಯಾಗಿ ಕಾರ್ಯ ನಿರ್ವಹಿಸಲಿರುವ ಕೃಷಿ ಕಲ್ಪ ಫೌಂಡೇಷನ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಎಂ. ಪಾಟೀಲ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದರು.

ಬೆಂಗಳೂರಿನ ಕೆಐಟಿಎಸ್ ಕಚೇರಿಯಲ್ಲಿ ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ, ಜೈವಿಕ ತಂತ್ರಜ್ಞಾನ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರ ಸಮ್ಮುಖದಲ್ಲಿ ಈ ʼ ಎಂಒಯುʼಗೆ ಸಹಿ ಹಾಕಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, “ಕಲ್ಯಾಣ ಕರ್ನಾಟಕವು ಕೃಷಿ ಮತ್ತು ಗ್ರಾಮೀಣ ಉದ್ಯಮದಲ್ಲಿ ನಾವೀನ್ಯತೆ ಕೇಂದ್ರವಾಗಿ ಹೊರಹೊಮ್ಮಲು ಅಪಾರ ಸಾಮರ್ಥ್ಯ ಹೊಂದಿದೆ. ಸ್ಥಳೀಯ ಆರ್ಥಿಕತೆಯ ವೇಗವರ್ಧಕ ಕಾರ್ಯಕ್ರಮದಡಿ (ಎಲ್‌ಇಎಪಿ- ಲೀಪ್‌), ಕರ್ನಾಟಕ ಸರ್ಕಾರವು ಬೆಂಗಳೂರಿನಾಚೆಗೆ ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ಉದ್ಯಮ ಅವಕಾಶಗಳನ್ನು ಸ್ಥಳೀಯ ಸಮುದಾಯಗಳಿಗೆ ಹತ್ತಿರ ತರಲು ಬದ್ಧವಾಗಿದೆ.

ಕಲಬುರಗಿಯಲ್ಲಿ ಸ್ಥಾಪನೆಗೊಳ್ಳಲಿರುವ ಶ್ರೇಷ್ಠತಾ ಕೇಂದ್ರವು ರೈತರು, ನವೋದ್ಯಮಗಳು, ಸಂಶೋಧಕರು ಮತ್ತು ಯುವ ನಾವೀನ್ಯಕಾರರು ಅತ್ಯಾಧುನಿಕ ಕೃಷಿ-ತಂತ್ರಜ್ಞಾನ ಪರಿಹಾರಗಳ ಜೊತೆ ಕಾರ್ಯನಿರ್ವಹಿಸಲು, ಜೀವನೋಪಾಯ ಬಲಪಡಿಸಿಕೊಳ್ಳಲು ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆ ಉತ್ತೇಜಿಸಲು ಸದೃಢ ವೇದಿಕೆಯನ್ನು ನಿರ್ಮಾಣ ಮಾಡಲಿದೆ’ ಎಂದು ಹೇಳಿದ್ದಾರೆ.

ಒಪ್ಪಂದದ ಪ್ರಮುಖ ಅಂಶಗಳು:

ಕೃಷಿ ಮತ್ತು ಸಂಬಂಧಿತ ವಲಯಗಳಿಗೆ ಗ್ರಾಮೀಣ ನಾವೀನ್ಯತೆ ಮತ್ತು ತಂತ್ರಜ್ಞಾನ-ನೇತೃತ್ವದ ಪರಿಹಾರಗಳ ಮೇಲೆ ಗಮನ ಕೇಂದ್ರೀಕರಿಸಿದ ಕೃಷಿ ಮತ್ತು ಸಂಬಂಧಿತ ನಾವೀನ್ಯತೆಯ ಶ್ರೇಷ್ಠತಾ ಕೇಂದ್ರದ ಸ್ಥಾಪನೆ.

ಬೆಂಗಳೂರಿನ ಆಚೆಗೆ ಪ್ರಾದೇಶಿಕ ನಾವೀನ್ಯತೆ ವ್ಯವಸ್ಥೆ ಬಲಪಡಿಸಲು ಐದು ವರ್ಷಗಳಲ್ಲಿ ₹ 1,000 ಕೋಟಿ ವೆಚ್ಚದ ʼಲೀಪ್ʼ ಕಾರ್ಯಕ್ರಮದ ಅಡಿಯಲ್ಲಿ ಅನುಷ್ಠಾನ. ಐದು ವರ್ಷಗಳಲ್ಲಿ ₹ 90 ಕೋಟಿ ವೆಚ್ಚದಲ್ಲಿ ರಾಜ್ಯದಾದ್ಯಂತ ಆರು ಶ್ರೇಷ್ಠತಾ ಕೇಂದ್ರಗಳನ್ನು ಸ್ಥಾಪಿಸುವ ವಿಶಾಲ ಉಪಕ್ರಮದ ಭಾಗ.

ಕೃಷಿ ಕಲ್ಪ ಫೌಂಡೇಷನ್ ಅನುಷ್ಠಾನ ಪಾಲುದಾರರಾಗಿ ಕಾರ್ಯನಿರ್ವಹಣೆ. ಶ್ರೇಷ್ಠತಾ ಕೇಂದ್ರದಲ್ಲಿ ಸಂಶೋಧನೆ, ನಾವೀನ್ಯತೆ ಮತ್ತು ಉದ್ಯಮಶೀಲತಾ ಕಾರ್ಯಕ್ರಮಗಳನ್ನು ನಿರ್ವಹಿಸುವ ಜವಾಬ್ದಾರಿ ಹೊಂದಿದೆ.

ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ (ಕೆಐಟಿಎಸ್) ಐದು ವರ್ಷಗಳ ಅವಧಿಯಲ್ಲಿ ₹16.5 ಕೋಟಿ ನೆರವಿನ ಮೂಲಕ ಈ ಉಪಕ್ರಮವನ್ನು ಬೆಂಬಲಿಸಲಿದೆ. ಇದರಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ (ಕೆಕೆಆರ್‌ಡಿಬಿ) ಮೂಲ ಸೌಕರ್ಯ ಅಭಿವೃದ್ಧಿಯ ₹4.5 ಕೋಟಿ ನೆರವು ಸೇರಿದೆ.

ಅತ್ಯಾಧುನಿಕ ನಾವೀನ್ಯತಾ ಮೂಲಸೌಕರ್ಯಗಳ ಅಭಿವೃದ್ಧಿಯಡಿ ಅತ್ಯಾಧುನಿಕ ಕೃಷಿ ನಾವೀನ್ಯತೆ ಪ್ರಯೋಗಾಲಯಗಳು, 3ಡಿ ಮುದ್ರಣ ಮತ್ತು ಮೂಲಮಾದರಿ ಸೌಲಭ್ಯಗಳು, ತಯಾರಕರ ಪ್ರಯೋಗಾಲಯ, ಮಾಧ್ಯಮ ಮತ್ತು ವಿಷಯ ಪ್ರಯೋಗಾಲಯ, ಕೃಷಿ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ (ಎಐ) ನೆರವಿನ ಕೃಷಿ, ಕೃಷಿಗಾಗಿ ಐಒಟಿ, ರೋಬೊಟಿಕ್ಸ್, ಡಿಜಿಟಲ್ ಕೃಷಿ ವೇದಿಕೆಗಳು ಮತ್ತು ದತ್ತಾಂಶ-ಆಧಾರಿತ ಕೃಷಿ ತಂತ್ರಜ್ಞಾನಗಳು ಸೇರಿದಂತೆ ಕೃಷಿ ಮತ್ತು ಸಂಬಂಧಿತ ವಲಯಗಳಲ್ಲಿ ಸಂಶೋಧನೆ, ನಾವೀನ್ಯತೆ ಮತ್ತು ಕೌಶಲ್ಯ ಅಭಿವೃದ್ಧಿಯ ಮೇಲೆ ಗಮನ ಕೇಂದ್ರೀಕರಣ, ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ತಂತ್ರಜ್ಞಾನ ಅಳವಡಿಕೆ ಮತ್ತು ಉದ್ಯಮ ಅಭಿವೃದ್ಧಿ ಕಾರ್ಯಗತಗೊಳಿಸುವ ನವೋದ್ಯಮಗಳು, ರೈತ ಉತ್ಪಾದಕ ಸಂಸ್ಥೆಗಳು (ಎಫ್‌ಪಿಒ), ಸ್ವ-ಸಹಾಯ ಗುಂಪುಗಳು (ಎಸ್‌ಎಚ್‌ಜಿ) ಮತ್ತು ಗ್ರಾಮೀಣ ನಾವೀನ್ಯಕಾರರಿಗೆ ಬೆಂಬಲ.

ಮಾರ್ಗದರ್ಶನ ಮತ್ತು ಅನುಷ್ಠಾನದ ಮೇಲ್ವಿಚಾರಣೆ ಮಾಡಲು ಆಡಳಿತ ಮಂಡಳಿ ಮತ್ತು ಮೇಲ್ವಿಚಾರಣಾ ಸಮಿತಿಯ ರಚನೆ, ಕಲ್ಯಾಣ ಕರ್ನಾಟಕ ಪ್ರದೇಶದಾದ್ಯಂತ ಉತ್ಪನ್ನ ಸ್ಟಾರ್ಟ್‌ಅಪ್‌ಗಳು, ನಾವೀನ್ಯಕಾರರು ಮತ್ತು ಗ್ರಾಮೀಣ ಉದ್ಯಮಿಗಳಿಗೆ ಈ ಶ್ರೇಷ್ಠತಾ ಕೇಂದ್ರವು ವೇಗವರ್ಧಕವಾಗಿ ಕಾರ್ಯನಿರ್ವಹಿಸಲಿದೆ.

ಕೃಷಿ ಮೌಲ್ಯ ಸರಪಳಿಯಾದ್ಯಂತ ಸವಾಲುಗಳನ್ನು ಎದುರಿಸುವ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ನೆರವಾಗಲಿದೆ. ಕೃಷಿ ಕಲ್ಪ ಪ್ರತಿಷ್ಠಾನವು ಈ ಕೇಂದ್ರವನ್ನು ಕಾರ್ಯಗತಗೊಳಿಸಲಿದೆ.


Share

You cannot copy content of this page