ಸಮಗ್ರ ಸುದ್ದಿ

ತೋಟಗಾರಿಕೆ ಬೆಳೆಗಳನ್ನು ಪುನಶ್ಚೇತನಗೊಳಿಸಲು ಸಾವಯವ ಕೃಷಿಯನ್ನು ಪ್ರೋತ್ಸಾಹಿಸಲಾಗುತ್ತಿದೆ : ಎಸ್.ಎಸ್.ಮಲ್ಲಿಕಾರ್ಜುನ್

Share

ಬೆಂಗಳೂರು:ತೆಂಗಿನ ತೋಟಗಳು ಸೇರಿದಂತೆ ತೋಟಗಾರಿಕೆ ಬೆಳೆಗಳನ್ನು ಪುನಶ್ಚೇತನಗೊಳಿಸಲು ವೈಜ್ಞಾನಿಕವಾಗಿ ಸಾವಯವ ಕೃಷಿಯನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ತಿಳಿಸಿದರು.

ವಿಧಾನಪರಿಷತ್ತಿನ ಕಲಾಪದ ವೇಳೆಯಲ್ಲಿ ಸದಸ್ಯರಾದ ರಮೇಶ್ ಬಾಬು ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ತೆಂಗಿನ ತೋಟಗಳಲ್ಲಿ ವೈಜ್ಞಾನಿಕವಾಗಿ ಸಾವಯವ ಕೃಷಿಯನ್ನು ಅಳವಡಿಸಲು ಮೊದಲನೇ ಹಂತದಲ್ಲಿ ತುಮಕೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಎರಡು ಗುಚ್ಚಗಳನ್ನು ಗುರುತಿಸಲಾಗಿದೆ. ಎರಡನೇ ಹಂತದಲ್ಲಿ ತುಮಕೂರು, ಹಾಸನ, ಮಂಡ್ಯ, ಮೈಸೂರು, ಚಾಮರಾಜನಗರ, ಚಿತ್ರದುರ್ಗ ಜಿಲ್ಲೆಗಳಲ್ಲಿ 10 ಗುಚ್ಚಗಳನ್ನು ಗುರುತಿಸಲಾಗುವುದು ಎಂದರು.

ತೋಟಗಾರಿಕೆಯಲ್ಲಿ ಸಾವಯವ ಕೃಷಿಯನ್ನು ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಗುಚ್ಚ ಮಾದರಿಯಲ್ಲಿ 640 ಹೆಕ್ಟೇರ್ ಪ್ರದೇಶದಲ್ಲಿ ಒಟ್ಟು 2 ಗ್ರಾಮ ಪಂಚಾಯಿತಿಯಲ್ಲಿ ಪರಂಪರಾಗತ ಕೃಷಿ ವಿಕಾಸ ಯೋಜನೆಯಡಿ ಅಳವಡಿಸಿಕೊಳ್ಳಲಾಗಿದೆ ಎಂದರು.


Share

You cannot copy content of this page