ಬೆಂಗಳೂರು:ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಹಾಸುಹೊಕ್ಕಾಗಿರುವ ಸಾಂಪ್ರದಾಯಿಕ ಕುಲ ಕಸುಬುಗಳನ್ನು ನಂಬಿ ಬದುಕುತ್ತಿರುವ ಹಿಂದುಳಿದ ವರ್ಗಗಳ ಕುಟುಂಬಗಳ ಏಳಿಗೆಗಾಗಿ ರಾಜ್ಯ ಸರ್ಕಾರವು ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಹಲವಾರು ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶಿವರಾಜ ಎಸ್. ತಂಗಡಗಿ ಅವರು ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಕಲಾಪದ ವೇಳೆ ವಿಧಾನ ಪರಿಷತ್ತಿನ ಸದಸ್ಯರಾದ ಡಾ. ತಳವಾರ್ ಸಾಬಣ್ಣ ಅವರು ನಿಯಮ 330ರ ಅಡಿಯಲ್ಲಿ ಮಂಡಿಸಿದ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಸಚಿವರು, ಆಧುನಿಕ ಮಾರುಕಟ್ಟೆಯ ಸವಾಲುಗಳ ನಡುವೆಯೂ ಕುಲ ಕಸುಬುಗಳನ್ನು ಜೀವಂತವಾಗಿರಿಸಲು ಸರ್ಕಾರ ನೀಡುತ್ತಿರುವ ಬೆಂಬಲವನ್ನು ವಿವರಿಸಿದರು.
ಕುಲ ಕಸುಬುಗಳ ಸವಾಲು:
ತಾಂತ್ರಿಕತೆ ಬೆಳೆದಂತೆ ಮಾರುಕಟ್ಟೆಯಲ್ಲಿನ ಬದಲಾವಣೆಗಳಿಂದಾಗಿ ಸಾಂಪ್ರದಾಯಿಕ ಕುಲ ಕಸುಬುಗಳ ಉತ್ಪನ್ನಗಳಿಗೆ ಬೇಡಿಕೆ ಕುಸಿದಿದೆ. ಇದರಿಂದಾಗಿ ಆರ್ಥಿಕ ಸಂಕಷ್ಟಕ್ಕೊಳಗಾದ ಹಿಂದುಳಿದ ವರ್ಗಗಳ ಕುಟುಂಬಗಳಿಗೆ ನೆರವಾಗಲು ಸರ್ಕಾರ ವಿಶೇಷ ಒತ್ತು ನೀಡುತ್ತಿದೆ.
ವಿವಿಧ ನಿಗಮಗಳ ಮೂಲಕ ಯೋಜನೆಗಳು:
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ವಿವಿಧ ಅಭಿವೃದ್ಧಿ ನಿಗಮಗಳ ಮೂಲಕ ವೃತ್ತಿಯಾಧಾರಿತ ಕುಲಕಸುಬುಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ,
ವಿಶ್ವಕರ್ಮ ಜನಾಂಗ: ಪಂಚವೃತ್ತಿ ಯೋಜನೆ, ಮರಾಠ ಜನಾಂಗ: ಮಿಲಿಟರಿ ಹೋಟೆಲ್ ಸ್ಥಾಪನೆಗೆ ನೆರವು, ಲಿಂಗಾಯತ ಜನಾಂಗ : ವಿಭೂತಿ ಘಟಕ ನಿರ್ಮಾಣಕ್ಕಾಗಿ ಪ್ರತ್ಯೇಕ ಯೋಜನೆ, ಮಡಿವಾಳ ಜನಾಂಗ: ಧೋಬಿ ವೃತ್ತಿ ಅಭಿವೃದ್ಧಿ, ಸವಿತಾ ಸಮಾಜ: ಕ್ಷೌರಿಕ ವೃತ್ತಿ, ಬ್ಯೂಟಿಷಿಯನ್ ಮತ್ತು ನಾದಸ್ವರ ವೃತ್ತಿಗಳಿಗೆ ಪ್ರೋತ್ಸಾಹ, ಬೆಸ್ತ ಸಮುದಾಯ: ಮೀನುಗಾರಿಕೆ ವೃತ್ತಿ ಅಭಿವೃದ್ಧಿ, ಕುರುಬ ಸಮುದಾಯ: ಕುರಿ ಸಾಕಾಣಿಕೆ ಮತ್ತು ಕಂಬಳಿ ನೇಯ್ಗೆಗೆ ಬೆಂಬಲ, ದೇವಾಂಗ ಸಮುದಾಯ: ನೇಯ್ಗೆ ವೃತ್ತಿಯಲ್ಲಿ ಸ್ವಯಂ ಉದ್ಯೋಗಕ್ಕಾಗಿ ಸಾಲ ಸೌಲಭ್ಯ, ಗಂಗಾ ಕಲ್ಯಾಣ ಯೋಜನೆ: ಹಿಂದುಳಿದ ವರ್ಗಗಳಿಗೆ ಸೇರಿದ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸಲು ಎಲ್ಲಾ ನಿಗಮಗಳ ವತಿಯಿಂದ ‘ಗಂಗಾ ಕಲ್ಯಾಣ’ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಇದು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ರೈತರಿಗೆ ಹೆಚ್ಚಿನ ಉತ್ತೇಜನ ನೀಡುತ್ತಿದೆ.
ಸರ್ಕಾರದ ಈ ಎಲ್ಲಾ ಯೋಜನೆಗಳ ಮುಖ್ಯ ಉದ್ದೇಶ ಹಿಂದುಳಿದ ವರ್ಗಗಳ ಜನರು ತಮ್ಮ ಸಾಂಪ್ರದಾಯಿಕ ವೃತ್ತಿಗಳನ್ನು ಗೌರವಯುತವಾಗಿ ಮುಂದುವರಿಸಲು ಮತ್ತು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಅವಕಾಶ ಕಲ್ಪಿಸಿಕೊಡುವುದಾಗಿದೆ ಎಂದು ಸಚಿವರು ತಿಳಿಸಿದರು.
