ಸಮಗ್ರ ಸುದ್ದಿ

ತಿಂಗಳಿಗೆ ಒಂದು ಸಿಲಿಂಡರ್ ಪೂರೈಕೆ; ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ – ಸಚಿವ ಕೆ.ಹೆಚ್. ಮುನಿಯಪ್ಪ

Share

ಬೆಂಗಳೂರು: ಪ್ರತಿ ಕುಟುಂಬಕ್ಕೆ ತಿಂಗಳಿಗೆ ಒಂದು ಸಿಲಿಂಡರ್ ನ್ನು ಪೂರೈಸಲಾಗುವುದು. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಹೆಚ್.ಮುನಿಯಪ್ಪ ಅವರು ತಿಳಿಸಿದರು.

ಇಂದು ವಿಧಾನಸಭಾ ಕಲಾಪದ ಶೂನ್ಯವೇಳೆಯಲ್ಲಿ ಕುಣಿಗಲ್ ಶಾಸಕ ಡಾ:ರಂಗನಾಥ್ ಅವರು ಸಿಲಿಂಡರ್ ಗಳು ಸಾರ್ವಜನಿಕರಿಗೆ ಲಭ್ಯವಾಗುತ್ತಿಲ್ಲ. ಅಲ್ಲದೇ ಕೇಂದ್ರ ಸರ್ಕಾರ ಎಸ್ಮಾ ಜಾರಿ ಮಾಡಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಅಲ್ಲದೇ, ಹೋಟೆಲ್ ಉದ್ಯಮಗಳು ಅಡುಗೆ ಅನಿಲ ಸಿಗದೇ ಹೋಟೆಲ್ ಗಳನ್ನು ಮುಚ್ಚುವ ಪರಿಸ್ಥಿತಿ ಬಂದಿದೆ. ಹಲವು ಹೋಟೆಲ್ ಗಳು ಈಗಾಗಲೇ ಮುಚ್ಚಲ್ಪಟ್ಟಿವೆ ಎಂದು ಸದನದಲ್ಲಿ ಪ್ರಸ್ತಾಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ಕುರಿತು ಇಂದು ತೈಲ ಕಂಪೆನಿಗಳ ಜೊತೆ ಸಭೆ ನಡೆಸಿ ಶೇಕಡ 20ರಿಂದ 30ರಷ್ಟು ತೈಲ ಉತ್ಪಾದನೆಯು ಭಾರತದಲ್ಲೇ ಆಗುವುದರಿಂದ ಬಾಕಿ ಶೇಕಡ 70 ರಷ್ಟು ಹೊರದೇಶಗಳಲ್ಲಿ ತೈಲ ಉತ್ಪಾದನೆ ಆಗುತ್ತದೆ. ಯುದ್ದದ ನಿಮಿತ್ತ ಹಡಗುಗಳನ್ನು ರದ್ದು ಮಾಡಿರುವುದರಿಂದ ತೈಲವನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಹಡಗುಗಳು ರದ್ದಾಗಿವೆ. ತೈಲ ಕಂಪೆನಿಗಳ ಜೊತೆ ಚರ್ಚಿಸಲಾಗಿದೆ. ಪ್ರತಿ ಕುಟುಂಬಕ್ಕೆ ಒಂದು ಸಿಲಿಂಡರ್ ನ್ನು ಪೂರೈಸುವುದಕ್ಕೆ ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸಲಾಗುವುದು ಎಂದು ತೈಲ ಕಂಪೆನಿಗಳು ಭರವಸೆ ನೀಡಿವೆ ಎಂದರು.

ಸಾರ್ವಜನಿಕರು ಅಡುಗೆ ಅನಿಲವನ್ನು ಮಿತವ್ಯಯದಲ್ಲಿ ಬಳಸಬೇಕು. ಪ್ರತಿ ತಿಂಗಳಿಗೆ ಒಂದು ಸಿಲಿಂಡರ್ ಪೂರೈಕೆ ಆಗುವುದರಿಂದ ಸಾರ್ವಜನಿಕರು ಸಹ ಸಹಕರಿಸಬೇಕು ಎಂದು ಸದನದ ಮೂಲಕವೇ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಅಲ್ಲದೇ ಕಮರ್ಷಿಯಲ್ ಸಿಲಿಂಡರ್ ವಿತರಣೆ ಬಗ್ಗೆಯೂ ಚರ್ಚಿಸಲಾಗಿದೆ. ತೈಲ ಕಂಪೆನಿಗಳವರು ಪ್ರತಿ ವಾರ ಚರ್ಚಿಸಿ ತೈಲ ಲಭ್ಯತೆಯ ವರದಿ ನೀಡುವಂತೆ ಸೂಚಿಸಲಾಗಿದೆ ಎಂದರು.


Share

You cannot copy content of this page