ಬೆಂಗಳೂರು: ನಿವೃತ್ತ ಮಾಜಿ ಸೈನಿಕರಿಗೆ ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಬಹುಮಹಡಿ ಕಟ್ಟಡ ನಿರ್ಮಿಸಿ ಹಂಚಿಕೆ ಮಾಡಲು ಸಲಹೆ ನೀಡಬಹುದಷ್ಟೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ವಿಧಾನಪರಿಷತ್‍ನ ಅಧಿವೇಶನದಲ್ಲಿಂದು ಸದಸ್ಯರಾದ ಡಿ.ಟಿ.ಶ್ರೀನಿವಾಸ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲ್ಲೂಕು, ಯಲಹಂಕ ಹೋಬಳಿ ಗಂಟಿಗಾನಹಳ್ಳಿ ಗ್ರಾಮದ ವಿವಿಧ ಸರ್ವೆ ನಂಬರುಗಳಲ್ಲಿ 38 ಎಕರೆ 33 ಗುಂಟೆ ಜಮೀನನ್ನು ಆಶ್ರಯ ಯೋಜನೆಯಡಿ ಮನೆಗಳ ನಿರ್ಮಾಣ ಮಾಡಿ ಫಲಾನುಭವಿಗಳಿಗೆ ಹಂಚಿಕೆ ಮಾಡಲು ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಹಸ್ತಾಂತರಿಸಲಾಗಿತ್ತು. ಜಿಲ್ಲಾಧಿಕಾರಿಗಳಿಗೆ ಅಧಿಕಾರ ಇಲ್ಲದಿದ್ದರೂ ವಸತಿ ಉದ್ದೇಶಕ್ಕೆ ಜಮೀನನ್ನು ಕಾಯ್ದಿರಿಸಲಾಗಿತ್ತು ಎಂದರು.
ರಾಜೀವ್ ಗಾಂಧಿ ವಸತಿ ನಿಗಮವು ಈಗಾಗಲೇ ಮಾಜಿ ಸೈನಿಕರಿಗೆ ಹಂಚಿಕೆ ಮಾಡಲು ಮಂಜೂರಾಗಿದ್ದ 15 ಎಕರೆ 15 ಗುಂಟೆ ಜಮೀನಿನಲ್ಲಿ ಗುಂಪು ಮನೆ ನಿರ್ಮಾಣ ಮಾಡಿ ಹಸ್ತಾಂತರಿಸಿದೆ. ಅಲ್ಲಿ ಸ್ಮಶಾನಗಳಿವೆ. 4.4 ಎಕರೆ 18 ಗುಂಟೆ ಜಮೀನು ಮಾತ್ರ ಉಳಿದಿದ್ದು, ಇದರಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಬಹುಮಹಡಿ ಕಟ್ಟಡ ನಿರ್ಮಿಸಿ ಹಂಚಿಕೆ ಮಾಡಲು ಸಲಹೆ ಮಾಡಬಹುದು ಎಂದರು.
ಬೆಂಗಳೂರು ನಗರ ಜಿಲ್ಲೆಯಲ್ಲಿ ಮಾಜಿ ಸೈನಿಕರ ಕುಟುಂಬಗಳಿಗೆ ನಿವೇಶನ ಮಂಜೂರು ಮಾಡಲು ಅವಕಾಶವಿಲ್ಲ. ಆದರೆ ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಿವೇಶನಗಳನ್ನು ನೀಡಲು ಅವಕಾಶವಿದೆ ಎಂದು ಸದನದಲ್ಲಿ ತಿಳಿಸಿದರು.
