ಸಮಗ್ರ ಸುದ್ದಿ

ರಾಜ್ಯದಲ್ಲಿನ ಸೇತುವೆಗಳ ಪುನರ್ ನಿರ್ಮಾಣಕ್ಕೆ 2 ಸಾವಿರ ಕೋಟಿ ರೂ.ಗಳಿಗೆ ಅನುಮೋದನೆ : ಸಚಿವ ಸತೀಶ ಜಾರಕಿಹೊಳಿ

Share

ಬೆಂಗಳೂರು:ರಾಜ್ಯದಲ್ಲಿ ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬರುವ ಸೇತುವೆಗಳ ಪುನರ್ ನಿರ್ಮಾಣ ಹಾಗೂ ಪುನಶ್ಚೇತನ, ಕಾಲುಸಂಕ ಕಾಮಗಾರಿಗಳನ್ನು ರೂ. 2 ಸಾವಿರ ಕೋಟಿ ಅಂದಾಜು ಮೊತ್ತದಲ್ಲಿ ಕೈಗೆತ್ತಿಕೊಳ್ಳಲು ತಾತ್ವಿಕ ಅನುಮೋದನೆ ನೀಡಲಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.

ವಿಧಾನಪರಿಷತ್‍ನ ಅಧಿವೇಶನದಲ್ಲಿಂದು ಸದಸ್ಯರಾದ ಐವನ್ ಡಿಸೋಜಾ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕರಾವಳಿ ಭಾಗದಲ್ಲಿ ಲೋಕೋಪಯೋಗಿ ಇಲಾಖೆಯ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ಲಘುವಾಹನ ಸಂಚಾರಕ್ಕೆ ಮಾತ್ರ ಯೋಗ್ಯವಾಗಿರುವ 15 ಸೇತುವೆಗಳನ್ನು ಗುರುತಿಸಲಾಗಿದೆ. ಕರಾವಳಿ ಭಾಗದಲ್ಲಿ ಸೇತುವೆ ಕೆಳಭಾಗದಲ್ಲಿ ಮರಳನ್ನು ತೆಗೆಯುತ್ತಿರುವ ಪ್ರಕರಣಗಳ ಬಗ್ಗೆ ಜಿಲ್ಲಾಧಿಕಾರಿಗಳ ಮಾಹಿತಿ ಪಡೆದು, ಅವರ ಸಮನ್ವಯದೊಂದಿಗೆ ಕ್ರಮವಹಿಸಲಾಗುವುದು ಎಂದರು.

ಕರಾವಳಿ ಭಾಗದ ಸೇತುವೆಗಳ ಪುನರ್ ನಿರ್ಮಾಣ ಹಾಗೂ ಪುನಶ್ಚೇತನಕ್ಕಾಗಿ ರೂ.561.12 ಕೋಟಿ ಅಂದಾಜು ಮೊತ್ತದ 28 ಕಾಮಗಾರಿಗಳು ಅನುಮೋದನೆಗೊಂಡಿರುತ್ತದೆ.   ಹಾಗೂ ರೂ.129 ಕೋಟಿ ಅಂದಾಜು ಮೊತ್ತದ 4 ಕಾಲುಸಂಕ ಮತ್ತು 3 ಸೇತುವೆ ಪುನರ್ ಕಾಮಗಾರಿಗಳ ಪ್ರಸ್ತಾವನೆ ಇದೆ ಎಂದು ಸಚಿವರು ತಿಳಿಸಿದರು.


Share

You cannot copy content of this page