ಬೆಂಗಳೂರು: ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ 184 ಗ್ರಾಮಗಳಿಗೆ ಮಾರ್ಕಂಡಯ್ಯ ಜಲಾಶಯದಿಂದ ನೀರು ಸರಬರಾಜು ಮಾಡುವ ಯೋಜನೆಯನ್ನು ಶೀಘ್ರದಲ್ಲಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ವಿಧಾನಸೌಧದ ತಮ್ಮ ಕಚೇರಿಯಲ್ಲಿ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಕಾಮಗಾರಿಯ ಸ್ಥಿತಿಗತಿಗಳನ್ನು ಅವಲೋಕಿಸಿದರು.
2008ರಲ್ಲೇ ಆರಂಭವಾದ ಈ ಯೋಜನೆಯು ವಿವಿಧ ಕಾರಣಗಳಿಂದಾಗಿ ನೆನೆಗುದಿಗೆ ಬಿದ್ದಿತ್ತು, ರಾಜ್ಯದ ಗ್ರಾಮಗಳಿಗೆ ಸುಸ್ಥಿರ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದು ನಮ್ಮ ಮುಖ್ಯ ಧ್ಯೇಯವಾಗಿದೆ. ಈ ಹಿನ್ನೆಲೆಯಲ್ಲಿ ಈ ಯೋಜನೆಗೆ ಎದುರಾಗಿರುವ ಸವಾಲುಗಳು ಪರಿಹರಿಸಿ ಅನುಷ್ಠಾನ ಮಾಡುವುದು ನಮ್ಮ ಆದ್ಯತೆಯಾಗಿದೆ ಎಂದು ಹೇಳಿದ ಸಚಿವರು ಮುಂದಿನ ಸಭೆಯೊಳಗೆ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳು ಮತ್ತು ಪರಿಹಾರಗಳ ಕುರಿತು ಸಮಗ್ರ ವರದಿ ತಯಾರಿಸಿ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳಾದ ಸಮೀರ್ ಶುಕ್ಲ, ರಣದೀಪ್ ಡಿ, ಡಾ.ಅರುಂಧತಿದೇವಿ ಇನ್ನಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.
