ಸಮಗ್ರ ಸುದ್ದಿ

ಅಭಿವೃದ್ಧಿ ಕಾಮಗಾರಿ ಕೈಗೊಂಡಿರುವ ಸ್ಥಳಗಳಲ್ಲಿ ಕಾಮಗಾರಿಯ ಪೂರ್ಣ ವಿವರವುಳ್ಳ ಫಲಕವನ್ನು ಅಳವಡಿಸಿ– ಡಿ.ಎಸ್.ರಮೇಶ್

Share

ಬೆಂಗಳೂರು: ಬೆಂಗಳೂರು ಪೂರ್ವ ನಗರ ಪಾಲಿಕೆಯ  ಹೊರಮಾವು ಅಗರ, ಬಂಜಾರ ಬಡಾವಣೆ, ಕಲ್ಕೆರೆ ಬಡಾವಣೆ, ಬಾಬುಸಾಪಾಳ್ಯ ಹಾಗೂ ಚಳ್ಳಕೆರೆ ಸುತ್ತಮುತ್ತಲಿನ ಪ್ರದೇಶದ ರಸ್ತೆ ಮತ್ತು ಮೂಲಸೌಕರ್ಯ ಅಭಿವೃದ್ಧಿ, ರೈಲ್ವೆ ಅಂಡರ್‌ ಪಾಸ್  ಕಾಮಗಾರಿ, ಕೆರೆಗಳ ಅಭಿವೃದ್ಧಿ, ಕಸ ವಿಲೇವಾರಿ ಹಾಗೂ ಪಾದಚಾರಿ ಮಾರ್ಗ ಒತ್ತುವರಿ ವಿಷಯಗಳಿಗೆ ಸಂಬಂಧಿಸಿದಂತೆ ಪೂರ್ವ ನಗರ ಪಾಲಿಕೆ ಆಯುಕ್ತರಾದ ಡಿ.ಎಸ್.ರಮೇಶ್ ರವರು ಸ್ಥಳ ಪರಿಶೀಲನೆ ನಡೆಸಿದರು.

ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪ್ರತಿನಿಧಿಗಳು ಹಾಗೂ ನಿವಾಸಿಗಳೊಂದಿಗೆ ಚರ್ಚೆ ನಡೆಸಿದ ಆಯುಕ್ತರು, ಸಮಸ್ಯೆಗಳ ತ್ವರಿತ ಪರಿಹಾರಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ  
ನಿರ್ದೇಶಿಸಿದರು.

ಬಾಬುಸಾಪಾಳ್ಯ ರೈಲ್ವೆ ಅಂಡರ್‌ಪಾಸ್ ಪರಿಶೀಲನೆ

ಬಾಬುಸಾಪಾಳ್ಯ ರೈಲ್ವೆ ಅಂಡರ್‌ಪಾಸ್ ಕಾಮಗಾರಿಯು ಖಾಸಗಿ  ಹಾಗೂ ರೈಲ್ವೆ ಇಲಾಖೆಯ ನಡುವಿನ ಭೂ ವಿವಾದ ಕಾರಣದಿಂದ ವಿಳಂಬವಾಗಿದ್ದು, ಕಾಮಗಾರಿಗೆ ಯಾವುದೇ ತಡೆಯಾಜ್ಞೆ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಕೂಡಲೇ ಕಾಮಗಾರಿಯನ್ನು ಆರಂಭಿಸಿ ಬಾಕಿ ಇರುವ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಹೊರಮಾವು ಅಗರ ಕೆರೆ

ಹೊರಮಾವು ಅಗರ ಕೆರೆಯಲ್ಲಿ ನಿರ್ವಹಣೆ ಕಾಮಗಾರಿಗಳಿಗಾಗಿ ಈಗಾಗಲೇ ಟೆಂಡರ್ ಆಹ್ವಾನಿಸಲಾಗಿದ್ದು, ಕೆರೆಯ ಸ್ವಚ್ಛತೆ ಮತ್ತು ನಿರ್ವಹಣೆ ಕಾರ್ಯಗಳನ್ನು ಶೀಘ್ರದಲ್ಲಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸ್ಥಳೀಯ ನಿವಾಸಿಗಳು ಶೌಚಾಲಯ, ಬೆಂಚ್‌ಗಳು, ವಾಕ್‌ವೇ, ಲಾನ್ ಹಾಗೂ ಇತರೆ ಸೌಲಭ್ಯಗಳ ಅಭಿವೃದ್ಧಿಗೆ ಬೇಡಿಕೆ ಇಟ್ಟಿದ್ದು, ಸಂಬಂಧಿತ ಕಾಮಗಾರಿಗಳನ್ನು ಕೈಗೊಳ್ಳಲು ಅಂದಾಜು ಪಟ್ಟಿ ತಯಾರಿಸಲು ಹಾಗೂ ಮುಂದಿನ ಬಜೆಟ್‌ನಲ್ಲಿ ಅವಶ್ಯಕ ಅನುದಾನ ಮೀಸಲಿಡಲು ಅಧಿಕಾರಿಗಳಿಗೆ  ಸೂಚಿಸಿದರು.

ಅಗರ ಕೆರೆ ರಸ್ತೆ ಪರಿಶೀಲನೆ

ಅಗರ ಕೆರೆ ರಸ್ತೆಯು ತಗ್ಗು ಪ್ರದೇಶದಲ್ಲಿದ್ದು, ಪ್ರತಿ ವರ್ಷವೂ ಮಳೆಯಿಂದಾಗಿ ನೀರು ನಿಂತು  ಸಮಸ್ಯೆಯಾಗುತ್ತಿದ್ದು, ಈ ಸಮಸ್ಯೆಯನ್ನು ನಿವಾರಿಸಲು ರಸ್ತೆ ಮಟ್ಟವನ್ನು ಏರಿಸುವ  ಸುಧಾರಣೆ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಬಿಟುಮನ್ ಕೊರತೆಯಿಂದ ಡಾಂಬರೀಕರಣ ಕಾಮಗಾರಿ ವಿಳಂಬವಾಗಿದ್ದು, ಹಾಟ್ ಮಿಕ್ಸ್ ಪೂರೈಕೆಯಾದ ಕೂಡಲೇ ಡಾಂಬರೀಕರಣ ಕಾಮಗಾರಿಯನ್ನು ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ಆಯುಕ್ತರು ತಿಳಿಸಿದರು.

ಬಂಜಾರ ಲೇಔಟ್ ಮುಖ್ಯ ರಸ್ತೆ

ಬಂಜಾರ ಲೇಔಟ್ ಮುಖ್ಯರಸ್ತೆ ಅಸಮತೋಲನದಿಂದಾಗಿ ಮತ್ತು ಚರಂಡಿಗಳಲ್ಲಿ ಮಣ್ಣು ತುಂಬಿಕೊಂಡಿರುವುದರಿಂದ ಮಳೆಗಾಲದಲ್ಲಿ ನೀರು ಸರಿಯಾಗಿ ಚರಂಡಿಗೆ ಹೋಗದೆ ರಸ್ತೆಯಲ್ಲಿ ನಿಲ್ಲುವಂತಾಗಿದ್ದು, ಕೂಡಲೇ ಸೈಡ್ ಡ್ರೈನ್ ಡಿಸಿಲ್ಟ್ ಕಾರ್ಯವನ್ನು ಕೈಗೊಳ್ಳುವಂತೆ ತಿಳಿಸಿದರು. ಇದಲ್ಲದೆ, ಸುಮಾರು 500 ಮೀಟರ್ ಉದ್ದದ ಚರಂಡಿ ನಿರ್ಮಾಣ ಕಾಮಗಾರಿಯನ್ನು ಯೋಜಿಸಲಾಗಿದ್ದು, ರಸ್ತೆಯ ಇನ್ನೊಂದು ಬದಿಯಲ್ಲಿ ಚರಂಡಿ ನಿರ್ಮಿಸಲು ತಿಳಿಸಿದರು. ಬಂಜಾರಾ ಲೇಔಟ್ ಮುಖ್ಯ ರಸ್ತೆಯಲ್ಲಿ ಪಾದಚಾರಿ ಮಾರ್ಗದ ಮೇಲಿನ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆಯನ್ನು ತಕ್ಷಣ ಕೈಗೊಳ್ಳಲು ಸೂಚಿಸಿದರು.

ಕಲ್ಕೆರೆ ಕೆರೆ ಅಭಿವೃದ್ಧಿ

ಕಲ್ಕೆರೆ ಕೆರೆಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಲಾಗಿದ್ದು, ಗುತ್ತಿಗೆ ಅವಧಿ ಮುಗಿದರೂ ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರರ ಮೇಲೆ ಕ್ರಮವಹಿಸಲು ಹಾಗೂ ಕೆರೆ ಪ್ರವೇಶದ ಬಳಿ ಚಾಲ್ತಿಯಲ್ಲಿರುವ ಕಾಮಗಾರಿಯ ಮಾಹಿತಿ ಫಲಕವನ್ನು ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಬೆಂಗಳೂರು ಜಲಮಂಡಳಿಯ ಒಳಚರಂಡಿ ಪೈಪ್‌ ಲೈನ್‌ ನಿಂದ ಉಂಟಾದ ಹಾನಿಯಿಂದ ಕೆರೆಯಲ್ಲಿನ ಕೆಲವು ಸೌಲಭ್ಯಗಳು ಹಾನಿಗೊಳಗಾಗಿರುವುದನ್ನು ಗಮನಿಸಿ, ಅದನ್ನು ಸರಿಪಡಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಯಾಂತ್ರಿಕ ಸ್ವಚ್ಛತಾ ಯಂತ್ರ ಪರಿಶೀಲನೆ

ಹೊರಮಾವು ಅಂಡರ್‌ಪಾಸ್ ಬಳಿ ಯಾಂತ್ರಿಕ ಸ್ವಚ್ಛತಾ ಯಂತ್ರಗಳ ಕಾರ್ಯವೈಖರಿ ಪರಿಶೀಲಿಸಿದ ಆಯುಕ್ತರು, ಮುಂದಿನ ಮೂರು ವರ್ಷಗಳಿಗೆ ಒಪ್ಪಂದದಡಿ ಯಾಂತ್ರಿಕ ಸ್ವಚ್ಛತಾ ಯಂತ್ರಗಳನ್ನು ನಿಯೋಜಿಸಿಕೊಳ್ಳಲು ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಸಮಗ್ರ ಅಭಿವೃದ್ಧಿಗೆ ಆದ್ಯತೆ

ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಯೋಜಿತ ಹಾಗೂ ಶಾಶ್ವತ ಮೂಲಸೌಕರ್ಯ ಅಭಿವೃದ್ಧಿಯ ಮೂಲಕ ಕೆರೆಗಳ ಅಭಿವೃದ್ಧಿ, ರಸ್ತೆ ಮೂಲಸೌಕರ್ಯ ಸುಧಾರಣೆ, ಚರಂಡಿ ವ್ಯವಸ್ಥೆಯ ಬಲಪಡಿಸುವುದು ಹಾಗೂ ಸಾರ್ವಜನಿಕ ಸೌಲಭ್ಯಗಳ ಸುಧಾರಣೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಆಯುಕ್ತರು ಈ ಸಂದರ್ಭದಲ್ಲಿ ತಿಳಿಸಿದರು.

ಪರಿಶೀಲನೆ ವೇಳೆಯಲ್ಲಿ ಮುಖ್ಯ ಅಭಿಯಂತರರಾದ ಕೃಷ್ಣಮೂರ್ತಿ, ಕಾರ್ಯಪಾಲಕ ಅಭಿಯಂತರರು, ಡಿಜಿಎಂ ಮತ್ತು ಎಜಿಎಂ ಘನತ್ಯಾಜ್ಯ ನಿರ್ವಹಣೆ, ಸಹಾಯಕ ಕಾರ್ಯಪಾಲಕ ಅಭಿಯಂತರರು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ರೈಲ್ವೆ ಇಲಾಖೆ ಹಾಗೂ ಇನ್ನಿತರೆ ಅಧಿಕಾರಿಗಳು ಹಾಜರಿದ್ದರು.


Share

You cannot copy content of this page