ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಚುನಾಯಿತ ಸರ್ಕಾರದ ಸುದೀರ್ಘ ಕಾಲದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುವ ಮೂಲಕ ದೇಶದ ರಾಜಕೀಯ ವಲಯದಲ್ಲಿ ಹೊಸ ಐತಿಹಾಸಿಕ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಚುನಾಯಿತ ಸರ್ಕಾರಗಳ ನಾಯಕರಾಗಿ ಅತಿ ಹೆಚ್ಚು ಅವಧಿಗೆ ಕಾರ್ಯನಿರ್ವಹಿಸಿದ ವಿನೂತನ ಸಾಧನೆಯನ್ನು ಮಾಡಿದ್ದಾರೆ. ಸಿಕ್ಕಿಂನ ಮುಖ್ಯಮಂತ್ರಿಯಾಗಿ 8 ಸಾವಿರದ 930 ದಿನಗಳ ಕಾಲ ಅಧಿಕಾರದಲ್ಲಿದ್ದ ಪವನ್ ಕುಮಾರ್ ಚಾಮ್ಲಿಂಗ್ ಅವರನ್ನು ಹಿಂದಿಕ್ಕಿರುವ ಅವರು, ಈಗ 9 ಸಾವಿರದ 931 ದಿನಗಳ ಕಾಲ ಸರ್ಕಾರದ ಮುಖ್ಯಸ್ಥರಾಗಿ ಅಧಿಕಾರ ನಿಭಾಯಿಸಿ ಮುನ್ನಡೆದಿದ್ದಾರೆ.
ಗುಜರಾತ್ ಮುಖ್ಯಮಂತ್ರಿಯಾಗಿ ಮತ್ತು ದೇಶದ ಪ್ರಧಾನಿಯಾಗಿ ತಮ್ಮ ಅಧಿಕಾರಾವಧಿಯನ್ನು ಒಟ್ಟುಗೂಡಿಸಿ, ಸರ್ಕಾರದ ಮುಖ್ಯಸ್ಥರಾಗಿ ಸತತ 25ನೇ ವರ್ಷದಲ್ಲಿ ಮುಂದುವರಿದಿದ್ದಾರೆ. ಇದು ಅಪರೂಪದ ಸಾಧನೆಯಾಗಿದ್ದು, ದಶಕಗಳ ಕಾಲ ನಿರಂತರ ಸಾರ್ವಜನಿಕ ಸೇವೆ ಮತ್ತು ಉನ್ನತ ಮಟ್ಟದಲ್ಲಿ ನಾಯಕತ್ವವನ್ನು ಸಮರ್ಥವಾಗಿ ನಿರ್ವಹಿಸಿರುವ ಅವರ ವೃತ್ತಿ ಜೀವನದ ಮಹತ್ವದ ಘಟನೆಯಾಗಿದೆ.
ನರೇಂದ್ರ ಮೋದಿ ಅವರು ಗುಜರಾತ್ ನ ಸುದೀರ್ಘ ಅವಧಿಯ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಬಳಿಕ, ಪ್ರಧಾನಿಯಾಗಿ ಸತತ 3ನೇ ಅವಧಿಗೆ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮುಖ್ಯಮಂತ್ರಿಯಾಗಿ ದೀರ್ಘ ಅನುಭವ ಹೊಂದಿರುವ ಪ್ರಧಾನಿ, ಸ್ವಾತಂತ್ರ್ಯಾ ನಂತರ ಜನಿಸಿದ ಭಾರತದ ಮೊದಲ ಪ್ರಧಾನಿ, 2014, 2019 ಮತ್ತು 2024ರಲ್ಲಿ ಸತತ ಮೂರು ಬಾರಿ ಲೋಕಸಭಾ ಚುನಾವಣೆಗಳಲ್ಲಿ ಗೆಲುವು ಸಾಧಿಸಿದ ದಾಖಲೆಯನ್ನು ಅವರು ಮಾಡಿದ್ದಾರೆ.
2021ರ ಅಕ್ಟೋಬರ್ 7ರಂದು ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಅವರು, ಮೇ 21, 2014ರ ವರೆಗೆ ಆ ಸ್ಥಾನದಲ್ಲಿ ಮುಂದುವರಿದು, 13 ವರ್ಷಗಳಿಗೂ ಹೆಚ್ಚು ಕಾಲ ರಾಜ್ಯವನ್ನು ಮುನ್ನಡೆಸಿದರು. ಬಳಿಕ ಮೇ 26, 2014ರಂದು ದೇಶದ 14ನೇ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಲೋಕಸಭೆಯಲ್ಲಿ ಪೂರ್ಣ ಬಹುಮತ ಪಡೆದ ಮೊದಲ ಕಾಂಗ್ರೆಸ್ಸೇತರ ನಾಯಕರಾದರು. ನಂತರ ಅವರು ಎರಡು ಪೂರ್ಣ ಅವಧಿಗಳನ್ನು ಯಶಸ್ವಿಯಾಗಿ ಪೂರೈಸಿ, ಮೂರನೇ ಅವಧಿಗೆ ಅಧಿಕಾರಕ್ಕೆ ಮರಳಿದ ಮೊದಲ ಕಾಂಗ್ರೆಸ್ಸೇತರ ಪ್ರಧಾನಿ ಎನಿಸಿದ್ದಾರೆ.
ಈ ಮೈಲಿಗಲ್ಲಿನ ಜತೆಗೆ ಪ್ರಧಾನಿ ಈ ವರ್ಷ ಹಲವು ಮಹತ್ವದ ದಾಖಲೆಗಳನ್ನು ನಿರ್ಮಿಸಿದ್ದು, ಡಿಜಿಟಲ್ ಡೊಮೈನ್ ನಸ್ಸಿ ಗಮನ ಸೆಳೆದಿದ್ದಾರೆ. ಯೂಟ್ಯೂಬ್ ಚಾನಲ್ ನಲ್ಲಿ 30 ಮಿಲಿಯನ್ ಚಂದಾದಾರರನ್ನು ತಲುಪಿರುವ ಅವರು, ಈ ವೇದಿಕೆಯಲ್ಲಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಜಾಗತಿಕ ನಾಯಕರಲ್ಲಿ ಒಬ್ಬರಾಗಿದ್ದಾರೆ. ಇತರ ಪ್ರಮುಖ ಅಂತಾರಾಷ್ಟ್ರೀಯ ರಾಜಕೀಯ ವ್ಯಕ್ತಿಗಳಿಗಿಂತ ಸಾಕಷ್ಟು ಮುಂಚೂಣಿಯಲ್ಲಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇನ್ಸ್ಟಾಗ್ರಾಮ್ ನಲ್ಲಿ 100 ಮಿಲಿಯನ್ ಅನುಯಾಯಿಗಳನ್ನು ದಾಟಿದ್ದಾರೆ. ಈ ಮೈಲಿಗಲ್ಲು ಸಾಧಿಸಿದ ಮೊದಲ ಜಾಗತಿಕ ನಾಯಕ ಹಾಗೂ ರಾಜಕಾರಣಿ ಅವರಾಗಿದ್ದಾರೆ. ಪ್ರಸ್ತುತ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ 101 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಅವರು, ಎಕ್ಸ್ ಮಾಧ್ಯಮದಲ್ಲಿ 106.4 ಮಿಲಿಯನ್ ಅನುಯಾಯಿಗಳನ್ನು ಪಡೆದಿದ್ದಾರೆ.
ಪ್ರಧಾನಿ ಅವರ ಈ ಐತಿಹಾಸಿಕ ಸಾಧನೆಯ ಕುರಿತು ಹಲವು ಕೇಂದ್ರ ಸಚಿವರು ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್ ನಲ್ಲಿ ವಿಚಾರವನ್ನು ಹಂಚಿಕೊಂಡಿದ್ದು, ದೇಶದ ರಾಜಕೀಯ ಇತಿಹಾಸದಲ್ಲಿ ಇದೊಂದು ಅವಿಸ್ಮರಣೀಯ ಕ್ಷಣ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸುದೀರ್ಘ ಅವಧಿಯ ಸರ್ಕಾರದ ಮುಖ್ಯಸ್ಥರಾಗಿ ಹೊಸ ದಾಖಲೆ ನಿರ್ಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ಈ ಸಾಧನೆಯು ದಶಕಗಳ ಕಾಲದ ಅವರ ಅಚಲ ಸಾರ್ವಜನಿಕ ಸೇವೆಯನ್ನು ಪ್ರತಿಬಿಂಬಿಸುತ್ತದೆ. ಈ ಮೈಲಿಗಲ್ಲು ಅವರ ಮೇಲಿರುವ ಜನರ ಅಗಾಧ ವಿಶ್ವಾಸಕ್ಕೆ ಸಾಕ್ಷಿಯಾಗಿದೆ. ದೂರದೃಷ್ಟಿ, ಅಪಾರ ಅನುಭವ ಮತ್ತು ಅಚಲ ಬದ್ಧತೆಯೊಂದಿಗೆ ಭಾರತದ ಭವಿಷ್ಯವನ್ನು ರೂಪಿಸುತ್ತಿರುವ ಅವರ ಈ ಪಯಣ ದೇಶಕ್ಕೆ ಸ್ಫೂರ್ತಿದಾಯಕವಾಗಿದೆ ಎಂದು ತಿಳಿಸಿದ್ದಾರೆ.
